ಶುಕ್ರವಾರ, 2 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಹಿತ್ಯಾಸಕ್ತರಿಗೆ ಓದಿನ ‘ದಾರಿ’ ತೋರಿಸಿದ ವೈ.ಎ.ದಂತಿ

58 ವರ್ಷಗಳ ಹಿಂದೆಯೇ ಗ್ರಂಥಾಲಯ ತೆರೆದ ಸಾಹಸಿ
Last Updated 28 ಜನವರಿ 2023, 6:41 IST
ಅಕ್ಷರ ಗಾತ್ರ

ಸಾಗರ: ಪ್ರತಿ ಗುರುವಾರ ಸಂಜೆ ಹಾಗೂ ಭಾನುವಾರದ ಮಧ್ಯಾಹ್ನ ಸಾಗರ ನಗರದ ಹೃದಯ ಭಾಗದಲ್ಲಿರುವ ಚಾಮರಾಜ ಪೇಟೆ ಬಡಾವಣೆಯಲ್ಲಿ 58 ವರ್ಷಗಳಿಂದ ಪುಸ್ತಕದ ‘ಪರಿಮಳ’ ಪಸರಿಸುತ್ತಿದೆ.

ಕತೆ, ಕಾದಂಬರಿ, ಪತ್ರಿಕೆ, ವೃತ್ತ ಪತ್ರಿಕೆ ಓದುವ ಆಸಕ್ತಿಯುಳ್ಳ ವಿವಿಧ ವಯೋಮಾನದವರು ಇಲ್ಲಿನ ರವೀಂದ್ರ ಪುಸ್ತಕಾಲಯ ಇರುವ ಕಟ್ಟಡದ ಮಹಡಿ ಹತ್ತುವುದನ್ನು ಅಭ್ಯಾಸ ಮಾಡಿಕೊಂಡಿದ್ದಾರೆ.

ಇದಕ್ಕೆ ಕಾರಣರಾದವರು ವೈ.ಎ.ದಂತಿ ಎಂದೇ ಪರಿಚಿತರಾಗಿರುವ ಯಲ್ಲಣ್ಣ ಅಪ್ಪಾರಾವ್ ದಂತಿ. ಮೂಲತಃ ಅಥಣಿಯವರಾದ ದಂತಿ ಕಾರ್ಗಲ್‌ನ ಕೆಪಿಸಿಯಲ್ಲಿ ಉದ್ಯೋಗಿಯಾಗಿ 1958ರಲ್ಲಿ ಈ ಭಾಗಕ್ಕೆ ಬಂದರು. ಆರಂಭದಲ್ಲಿ ಕಾರ್ಗಲ್‌ನಲ್ಲಿ ಖಾಸಗಿ ಗ್ರಂಥಾಲಯದ ತೆರೆದಿದ್ದ ಅವರು 1965ರಲ್ಲಿ ಸಾಗರದಲ್ಲಿ ರವೀಂದ್ರ ಪುಸ್ತಕಾಲಯವನ್ನು ಆರಂಭಿಸಿದರು.

ಅಂದಿನಿಂದ ಇಂದಿನವರೆಗೂ ನಿರಂತರವಾಗಿ ಈ ಪುಸ್ತಕಾಲಯ ಓದುಗರ ಓದಿನ ಹಸಿವನ್ನು ತಣಿಸುವ ಕೆಲಸ ಮಾಡುತ್ತಿದೆ. ಕೆಲವೇ ಪುಸ್ತಕಗಳಿಂದ ಆರಂಭವಾದ ಈ ಗ್ರಂಥಾಲಯದಲ್ಲಿ ಈಗ 18 ಸಾವಿರ ಗ್ರಂಥಗಳ ಸಂಗ್ರಹವಿದೆ. ಕನ್ನಡದ ಖ್ಯಾತ ಸಾಹಿತಿಗಳ ಪುಸ್ತಕಗಳನ್ನು ಪ್ರಕಾಶಕರಾಗಿ ಪ್ರಕಟಿಸುವ ಕೆಲಸಕ್ಕೂ ದಂತಿ ಮುಂದಾಗಿದ್ದಾರೆ. ಶಿವರಾಮ ಕಾರಂತ, ಎಸ್.ಎಲ್.ಭೈರಪ್ಪ, ಎಂ.ಕೆ.ಇಂದಿರಾ, ಪಿ.ಲಂಕೇಶ್, ಸಾಯಿಸುತೆ, ನಾ.ಡಿಸೋಜ, ಟಿ.ಸುನಂದಮ್ಮ ಮೊದಲಾದ ಕನ್ನಡದ ಹಲವು ಪ್ರಮುಖ ಲೇಖಕರ ಪುಸ್ತಕಗಳನ್ನು ಪ್ರಕಟಿಸಿರುವುದು ದಂತಿಯವರ ಹೆಗ್ಗಳಿಕೆ.

ಪುಸ್ತಕಾಲಯ, ಪುಸ್ತಕ ಪ್ರಕಟಣೆಯ ಜೊತೆಗೆ ಸಾಹಿತ್ಯ, ಸಂಸ್ಕೃತಿ, ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸುವುದರಲ್ಲೂ ದಂತಿ ಸಕ್ರಿಯರು. ತೆಲುಗಿನ ಲೇಖಕ ಯಂಡಮೂರಿ ವೀರೇಂದ್ರನಾಥ್ ಅವರನ್ನು ಹಲವು ಬಾರಿ ಈ ಭಾಗಕ್ಕೆ ಕರೆಸಿ ವ್ಯಕ್ತಿತ್ವ ವಿಕಸನ ಕಾರ್ಯಕ್ರಮವನ್ನು ಸಂಘಟಿಸಿದ್ದಾರೆ.

ಸುಮನ್ ಚಿಪ್ಳೂಣ್ ಕರ್‌ ಮುದ್ರಾ ವಿಜ್ಞಾನ ಕುರಿತ ಉಪನ್ಯಾಸ, ಕೆ.ಎಸ್. ನಾರಾಯಣಾಚಾರ್ಯ ಮಹಾಭಾರತ ಕುರಿತ ಉಪನ್ಯಾಸ, ಪಾವಗಡ ಪ್ರಕಾಶ್ ಅವರ ರಾಮಾಯಣ ಕುರಿತ ಉಪನ್ಯಾಸವನ್ನು ಆಯೋಜಿಸುವಲ್ಲೂ ದಂತಿ ಮುಂಚೂಣಿಯಲ್ಲಿದ್ದಾರೆ.

ಅನೇಕ ಪ್ರಸಿದ್ಧ ಸಾಹಿತಿಗಳನ್ನು ಸಾಗರಕ್ಕೆ ಕರೆಸಿ ಅವರಿಂದ ಉಪನ್ಯಾಸ ಏರ್ಪಡಿಸುವಲ್ಲೂ ದಂತಿ ಅವರ ಪಾತ್ರ ಪ್ರಮುಖ. ಇಲ್ಲಿನ ಹಲವು ದೇವಸ್ಥಾನ, ಧಾರ್ಮಿಕ ಸಂಸ್ಥೆಗಳಿಗೆ ದಾನ ಮಾಡುವ ಮೂಲಕ ಸಾಮಾಜಿಕ ಸೇವಾ ಚಟುವಟಿಕೆಗಳಲ್ಲೂ ಅವರು ತೊಡಗಿದ್ದಾರೆ. ಶಂಕರಮಠದ ಶ್ರೀ ಶಾರದಾ ಪ್ರಸಾದಮ್ ಪುರಸ್ಕಾರ, ಹೊಸಬಾಳೆಯ ಮಹಾಲಕ್ಷ್ಮಿ ಅನಂತಪ್ಪ ಸೇವಾ ಪ್ರತಿಷ್ಠಾನದ ಪುರಸ್ಕಾರ, ಶಿವರಾಮ ಕಾರಂತ ಪ್ರಶಸ್ತಿ ಸೇರಿದಂತೆ ಹಲವು ಪುರಸ್ಕಾರಗಳು ದಂತಿ ಅವರನ್ನು ಅರಸಿ ಬಂದಿವೆ.

ಇಂದು ದಂತಿ ದಂಪತಿಗೆ ಅಭಿನಂದನೆ

85ನೇ ವರ್ಷಕ್ಕೆ ಕಾಲಿಡುತ್ತಿರುವ ಹಾಗೂ 50ನೇ ವರ್ಷದ ವಿವಾಹ ಮಹೋತ್ಸವ ಆಚರಿಸಿಕೊಳ್ಳುತ್ತಿರುವ ದಂತಿ ದಂಪತಿಗೆ ಜ.28ರಂದು ಅವರ ಅಭಿಮಾನಿ ಬಳಗ ಇಲ್ಲಿನ ಶಂಕರ ಮಠದಲ್ಲಿ ಬೆಳಿಗ್ಗೆ 9ಕ್ಕೆ ನಡೆಯಲಿರುವ ಕಾರ್ಯಕ್ರಮದಲ್ಲಿ ಅಭಿನಂದನಾ ಸಮಾರಂಭ ಹಮ್ಮಿಕೊಂಡಿದೆ.

ಡಾ.ಪಾವಗಡ ಪ್ರಕಾಶ್ ರಾವ್, ಡಾ.ಗುರುರಾಜ ಕರಜಗಿ ಸೇರಿದಂತೆ ಹಲವು ಪ್ರಮುಖರು ಪಾಲ್ಗೊಳ್ಳುತ್ತಿದ್ದು, ದಂತಿ ಅವರ ಕುರಿತ ಅಭಿನಂದನಾ ಗ್ರಂಥ ಬಿಡುಗಡೆಯಾಗಲಿದೆ.

***

ದಂತಿ ಅವರ ಪುಸ್ತಕ ಪ್ರೀತಿ ಅಗಾಧ. ಕಾರ್ಗಲ್‌ನಲ್ಲಿ ಅವರು ಮಕ್ಕಳಿಗೆ ಹಿಂದಿ ಕಲಿಸುತ್ತಿದ್ದರು. ಪರೀಕ್ಷೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಂದ ಪುಸ್ತಕಗಳನ್ನು ಗುರು ಕಾಣಿಕೆಯಾಗಿ ಪಡೆಯುತ್ತಿದ್ದರು. ಹೀಗೆ ಪಡೆದ ಪುಸ್ತಕಗಳೇ ಪುಸ್ತಕಾಲಯವಾಗಿ ಪರಿವರ್ತನೆಗೊಂಡಿತು.

–ನಾ.ಡಿಸೋಜ, ಸಾಹಿತಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT