ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕುಣಿಗಲ್: ವಿದ್ಯಾರ್ಥಿಗಳ ಆರೋಗ್ಯದಲ್ಲಿ ಮತ್ತೆ ವ್ಯತ್ಯಯ

ಆಸ್ಪತ್ರೆಗೆ ದಾಖಲಾದ 30 ಮಕ್ಕಳು: ದೋಷಪೂರಿತ ಆಹಾರ ಸೇವನೆ ಶಂಕೆ
Published 9 ಫೆಬ್ರುವರಿ 2024, 13:24 IST
Last Updated 9 ಫೆಬ್ರುವರಿ 2024, 13:24 IST
ಅಕ್ಷರ ಗಾತ್ರ

ಕುಣಿಗಲ್: ದೋಷಪೂರಿತ ಆಹಾರ ಸೇವನೆಯಿಂದಾಗಿ ಅಸ್ವಸ್ಥಗೊಂಡ ತಾಲ್ಲೂಕಿನ ಸೀನಪ್ಪನಹಳ್ಳಿ ಅಂಭಾಭವಾನಿ ಪ್ರೌಢಶಾಲೆಯ 40ಕ್ಕೂ ಹೆಚ್ಚು ವಿದ್ಯಾರ್ಥಿಗಳು ಗುರುವಾರ ತಾಲ್ಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮನೆಗೆ ತೆರಳಿದ ಬಳಿಕ ಮತ್ತೆ ಆರೋಗ್ಯದಲ್ಲಿ ವ್ಯತ್ಯಯ ಕಂಡುಬಂದಿದೆ. ಗುರುವಾರ ರಾತ್ರಿ ಮತ್ತು ಶುಕ್ರವಾರ ಬೆಳಿಗ್ಗೆ ಮತ್ತೆ 30 ವಿದ್ಯಾರ್ಥಿಗಳು ಆಸ್ಪತ್ರೆಗೆ ದಾಖಲಾಗಿದ್ದಾರೆ.

ಬುಧವಾರ ಮಧ್ಯಾಹ್ನ ಶಾಲೆಯಲ್ಲಿ ಊಟ ಮಾಡಿದ ನಂತರ ವಿದ್ಯಾರ್ಥಿಗಳು ಹಾಗೂ ಶಿಕ್ಷಕರಿಗೆ ವಾಂತಿ, ಭೇದಿ, ತಲೆಸುತ್ತು ಕಾಣಿಸಿಕೊಂಡಿತ್ತು. ಗುರುವಾರ ಶಾಲೆಗೆ ಬಂದ ಮತ್ತಷ್ಟು ವಿದ್ಯಾರ್ಥಿಗಳಿಗೆ ಹೊಟ್ಟೆ ನೋವು, ವಾಂತಿ, ಭೇದಿ ಕಾಣಿಸಿಕೊಂಡಿತ್ತು.

ತಹಶೀಲ್ದಾರ್ ವಿಶ್ವನಾಥ್ ಭೇಟಿ ನೀಡಿ ವೈದ್ಯರು, ವಿದ್ಯಾರ್ಥಿಗಳು ಮತ್ತು ಪೋಷಕರೊಂದಿಗೆ ಚರ್ಚಿಸಿ ಮಾಹಿತಿ ಪಡೆದರು. ಗುರುವಾರ ಆಸ್ಪತ್ರೆಗೆ ದಾಖಲಾದ ವಿದ್ಯಾರ್ಥಿಗಳಿಗೆ ಚಿಕಿತ್ಸೆ ನೀಡಿದ ಬಳಿಕ 24 ಗಂಟೆ ನಿಗಾ ಘಟಕದಲ್ಲಿರಿಸಿ ಆರೋಗ್ಯ ಸ್ಥಿತಿಗತಿ ಅವಲೋಕಿಸದೆ ಮನೆಗಳಿಗೆ ಕಳುಹಿಸಿದ ವೈದ್ಯರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

ವಿದ್ಯಾರ್ಥಿಗಳಿಗೆ ಕುಡಿಯಲು ನೀಡುವ ಹಾಲಿನ ಪುಡಿ ಬಳಸಿ ಮೊಸರು ಮಾಡಿ, ಅದರಿಂದ ತಯಾರಿಸಿದ ಸಾರನ್ನು ಬಿಸಿಯೂಟಕ್ಕೆ ಬಳಸಿದ ಬಗ್ಗೆ ಶಿಕ್ಷಕರನ್ನು ತೀವ್ರ ತರಾಟೆಗೆ ತೆಗೆದುಕೊಂಡರು. ಈಗಾಗಲೇ ಮಾದರಿ ಸಂಗ್ರಹಿಸಲಾಗಿದ್ದು, ವರದಿ ಬಂದ ನಂತರ ಕ್ರಮ ತೆಗೆದುಕೊಳ್ಳುವುದಾಗಿ ತಿಳಿಸಿದರು.

ಜಿಲ್ಲಾ ಆರೋಗ್ಯಾಧಿಕಾರಿ ಡಾ. ಮಂಜುನಾಥ್, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ರಾಮೇಗೌಡ ಮಾತನಾಡಿ, ಶಾಲೆಯಲ್ಲಿ ಬಿಸಿಯೂಟಕ್ಕೆ ತರಕಾರಿ, ಸೊಪ್ಪು ಬೇಳೆ ಬಳಸದೆ, ಮೆನುವಿನಲ್ಲಿ ಇಲ್ಲದ ಮೊಸರು ಸಾರು ಮಾಡಿ ಮಕ್ಕಳಿಗೆ ನೀಡಿದ್ದರಿಂದ ಸಮಸ್ಯೆಯಾಗಿದೆ. ಅವರು ಮಾಡಿರುವ ತಪ್ಪು ಮುಚ್ಚಿ ಹಾಕ್ಕಲು ಪಕ್ಕದ ಮಾವಿನ ತೋಟಕ್ಕೆ ಸಿಂಪಡಿಸಿದರುವ ಔಷಧಿ ಕಾರಣ ಎಂದು ತಪ್ಪು ಅಭಿಪ್ರಾಯ ಮೂಡಿಸುತ್ತಿದ್ದಾರೆ ಎಂದರು.

ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಗಣೇಶ್ ಬಾಬು, ವೈದ್ಯರಾದ ನವೀನ್, ಮಂಜುನಾಥ್ ಸ್ಮರಣ್, ಸುಮಾ, ಕ್ಷೇತ್ರ ಶಿಕ್ಷಣಾಧಿಕಾರಿ ಬೋರೇಗೌಡ ಇದ್ದರು.

ಸ್ವಯಂ ಪ್ರೇರಿತ ದೂರು ದಾಖಲು

ಅಂಭಾ ಭವಾನಿ ಶಾಲೆಯ ಬಿಸಿಯೂಟ ಸೇವಿಸಿ ಮಕ್ಕಳು ಅಸ್ವಸ್ಥಗೊಂಡಿರುವ ಪ್ರಕರಣವು ರಾಜ್ಯ ಮಕ್ಕಳ ಹಕ್ಕುಗಳ ಆಯೋಗದ ಗಮನಕ್ಕೆ ಬಂದಿದ್ದು, ಸ್ವಯಂ ಪ್ರೇರಿತ ದೂರು ದಾಖಲಿಸಿ ಕ್ರಮ ತೆಗೆದುಕೊಳ್ಳುವುದಾಗಿ ಆಯೋಗದ ಸದಸ್ಯ ತಿಪ್ಪೆಸ್ವಾಮಿ ತಿಳಿಸಿದ್ದಾರೆ.

ಘಟನೆಗೆ ಸಂಬಂದಿಸಿದಂತೆ, ಆಸ್ಪತ್ರೆಗೆ ತೆರಳಿ ಸಮಗ್ರ ವರದಿ ನೀಡುವಂತೆ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗೆ ಸೂಚನೆ ನೀಡಲಾಗಿದೆ. ಮಕ್ಕಳ ಆರೋಗ್ಯದ ಬಗ್ಗೆ ತಾಲ್ಲೂಕು ಆಡಳಿತ ಹಾಗೂ ಅರೋಗ್ಯ ಇಲಾಖೆಗೆ ನಿಗಾವಹಿಸುವಂತೆ ಸೂಚಿಸಲಾಗಿದೆ. ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡು ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮಕ್ಕೆ ಶಿಫಾರಸು ಮಾಡಲಾಗುವುದು. ಬಿಸಿಯೂಟ ಸಿದ್ಧಗೊಳಿಸುವಾಗ ಅನುಸರಿಸಬೇಕಾದ ವಿಧಾನಗಳ ಬಗ್ಗೆ ಸಿಬ್ಬಂದಿಗೆ ತರಬೇತಿಯಾಗಬೇಕು. ಅದರ ಮೇಲ್ವಿಚಾರಣೆ ನಡೆಸಬೇಕು. ಇದು ಸರಿಯಾಗಿ ಆಗದಿದ್ದಲ್ಲಿ ಇಂತಹ ಪ್ರಕರಣ ಮತ್ತೆ, ಮತ್ತೆ ನಡೆಯುತ್ತವೆ ಎಂದು ಎಚ್ಚರಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT