ನಗರದಲ್ಲಿ ಇರುವ ಎಲ್ಲ ಕೆರೆಗಳಲ್ಲಿ ತ್ಯಾಜ್ಯ ನೀರು ತುಂಬಿಕೊಂಡಿದೆ. ಮರಳೂರು ಕೆರೆ ಈಗಾಗಲೇ ಸಂಪೂರ್ಣವಾಗಿ ಕಲುಷಿತಗೊಂಡಿದೆ. ಉಳಿದ ಕೆರೆಗಳಿಗೆ ಹೋಲಿಸಿದರೆ ಅಮಾನಿಕೆರೆ ಪರವಾಗಿಲ್ಲ ಎಂಬಂತಿದೆ. ತಕ್ಷಣಕ್ಕೆ ಎಚ್ಚೆತ್ತುಕೊಂಡು ರಕ್ಷಣೆಗೆ ಮುಂದಾಗದಿದ್ದರೆ ಇದು ಸಹ ಮತ್ತೊಂದು ಹಾಳಾದ ಕೆರೆಯ ಸಾಲಿಗೆ ಸೇರಲಿದೆ. ‘ಜನಪ್ರತಿನಿಧಿ ಮತ್ತು ಅಧಿಕಾರಿಗಳಿಗೆ ಬೇಸಿಗೆ ಸಮಯದಲ್ಲಷ್ಟೇ ನೀರಿನ ಮೂಲಗಳು ನೆನಪಾಗುತ್ತವೆ. ಗಡ್ಡಕ್ಕೆ ಬೆಂಕಿ ಹತ್ತಿಕೊಂಡಾಗ ಬಾವಿ ತೋಡಲು ಹೋಗುತ್ತಾರೆ. ಜಿಲ್ಲಾಧಿಕಾರಿ ಕಚೇರಿಯ ಕೂಗಳತೆ ದೂರದಲ್ಲಿ ಇರುವ ಕೆರೆ ಅಧ್ವಾನ ಆಗುತ್ತಿದೆ. ಪ್ಲಾಸ್ಟಿಕ್ ಬಾಟಲಿಗಳನ್ನು ಕೆರೆಗೆ ಎಸೆಯಲಾಗುತ್ತಿದೆ. ಜಿಲ್ಲಾಧಿಕಾರಿಗೆ ಗ್ರಾಮೀಣ ಪ್ರದೇಶಕ್ಕೆ ಹೋಗಲು ಆಗದಿದ್ದರೂ ಪರವಾಗಿಲ್ಲ ಕನಿಷ್ಠ ಕಚೇರಿಯಿಂದ ಹೊರ ಬಂದು ಕೆರೆಯ ಪರಿಸ್ಥಿತಿ ನೋಡಲಿ’ ಎಂದು ಅಣೆತೋಟ ಪ್ರದೇಶದ ಪರಶುರಾಮ್ ಒತ್ತಾಯಿಸಿದರು.