ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಡಿತರಕ್ಕೆ ಬಯೊಮೆಟ್ರಿಕ್: ರದ್ದತಿಗೆ ಮನವಿ

Last Updated 18 ಆಗಸ್ಟ್ 2021, 3:55 IST
ಅಕ್ಷರ ಗಾತ್ರ

ತುಮಕೂರು: ಬಿಪಿಎಲ್ ಕುಟುಂಬಗಳಿಗೆ ಪಡಿತರ ನೀಡಲು ಬೆರಳಚ್ಚ ಪಡೆಯುತ್ತಿರುವುದನ್ನು ರದ್ದುಗೊಳಿಸಬೇಕು. ಆಹಾರ ಇಲಾಖೆಯು ಪಡಿತರ ಚೀಟಿಗೆ ನಿಗದಿಗೊಳಿಸಿರುವ ಮಾನದಂಡಗಳನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿ ಜಿಲ್ಲಾ ಕೊಳಗೇರಿ ನಿವಾಸಿಗಳ ಹಿತರಕ್ಷಣಾ ಸಮಿತಿ ಸದಸ್ಯರು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ರಾಜ್ಯದಲ್ಲಿ ವಿದ್ಯುತ್ ತಿದ್ದುಪಡಿ ಕಾಯ್ದೆ ಜಾರಿ ವಿರೊಧಿಸಿ ಸ್ಲಂ ಜನಾಂದೋಲನ ಹಮ್ಮಿಕೊಂಡಿದ್ದ ಪ್ರತಿಭಟನೆ ಅಂಗವಾಗಿ ಜಿಲ್ಲಾ ಕೊಳಗೇರಿ ನಿವಾಸಿಗಳ ಹಿತರಕ್ಷಣಾ ಸಮಿತಿ ಪ್ರತಿಭಟನೆ ನಡೆಸಿತು.

ದೇಶದ ಎಲ್ಲ ಸೇವಾ ವಲಯಗಳನ್ನು ಖಾಸಗೀಕರಣಗೊಳಿಸುವ ಮೂಲಕ ಬಡವರು, ರೈತರು ಮತ್ತು ಕೂಲಿ ಕಾರ್ಮಿಕರಿಗೆ ಅನ್ಯಾಯ ಮಾಡಲಾಗುತ್ತಿದೆ. ಕೇಂದ್ರ ಸರ್ಕಾರ ಬಡವರ ವಿರೋಧಿ ಕಾಯ್ದೆ ಜಾರಿಗೆ ತರುವ ಮೂಲಕ ಕಾರ್ಪೊರೇಟ್ ಕಂಪನಿಗಳ ಕೈಗೊಂಬೆಯಾಗಿದೆ ಎಂದು ಪ್ರತಿಭಟನಕಾರರು ಆರೋಪಿಸಿದರು.

ಸ್ಲಂ ಜನಾಂದೋಲನ ಕರ್ನಾಟಕದ ಸಂಚಾಲಕ ಎ.ನರಸಿಂಹಮೂರ್ತಿ ಮಾತನಾಡಿ, ಬಿಪಿಎಲ್ ಪಡಿತರ ಕುಟುಂಬಗಳು ತಮ್ಮ ಬೆರಳಚ್ಚು ನೀಡಿ ಪಡಿತರ ಪಡೆಯುವುದನ್ನು ಕಡ್ಡಾಯಗೊಳಿಸಿರುವುದರಿಂದ ಬಿಪಿಎಲ್ ಕುಟುಂಬಗಳು ಆಹಾರ ಪದಾರ್ಥ ಪಡೆಯಲು ಹರಸಾಹಸ ಪಡುವಂತಾಗಿದೆ. ಇದರು ಆಹಾರ ಹಕ್ಕು ಕಾಯ್ದೆ ಹಾಗೂ ಸಂವಿಧಾನ ವಿರೋಧಿಯಾಗಿದೆ ಎಂದರು.

ಗೌರವಧ್ಯಕ್ಷೆ ದೀಪಿಕಾ ಮಾತನಾಡಿ, ಕೇಂದ್ರ ಸರ್ಕಾರ ವಿದ್ಯುತ್ ಕಾಯ್ದೆಗೆ ತಿದ್ದುಪಡಿ ತಂದಿದ್ದು, ಈ ಕಾಯ್ದೆಯ ಪ್ರಕಾರ ವಿದ್ಯುತ್ ಸೌಲಭ್ಯ ಬಂಡವಾಳಶಾಹಿಗಳ ಅಧೀನಕ್ಕೆ ಒಳಪಟ್ಟು ಅವರು ನಿಗದಿಪಡಿಸುವ ದರವನ್ನೇ ದೇಶದ ಜನರು ಒಪ್ಪಿಕೊಳ್ಳುವುದು ಅನಿವಾರ್ಯವಾಗಲಿದೆ. ರೈತರಿಗೆ ಹಾಗೂ ಬಡವರಿಗೆ ನೀಡುತ್ತಿರುವ ಭಾಗ್ಯಜೋತಿ ಉಚಿತ ವಿದ್ಯುತ್ ಸ್ಥಗಿತಗೊಳ್ಳಲಿದೆ. ವಿದ್ಯುತ್ ದರ ಏರಿಕೆಯಿಂದ ದೇಶದ ಜನ ತತ್ತರಿಸಲಿದ್ದು, ಈ ಉದ್ಯೋಗವನ್ನೇ ನಂಬಿರುವ ಲಕ್ಷಾಂತರ ನೌಕರರು ನಿರುದ್ಯೋಗಿಗಳಾಗುವ ಆತಂಕ ಎದುರಾಗಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT