ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಜೆಟ್: ರಸ್ತೆ, ಚರಂಡಿಗೆ ಆದ್ಯತೆ

ತಿಪಟೂರು ನಗರಸಭೆ ಬಜೆಟ್ ಮಂಡನೆ
Last Updated 17 ಏಪ್ರಿಲ್ 2021, 8:56 IST
ಅಕ್ಷರ ಗಾತ್ರ

ತಿಪಟೂರು: ನಗರಸಭೆಯ ಪ್ರಸಕ್ತ ಸಾಲಿನ ಬಜೆಟ್ ಶುಕ್ರವಾರ ಮಂಡನೆಯಾಗಿದ್ದು, ರಸ್ತೆ, ಚರಂಡಿ, ಬೀದಿ ದೀಪಗಳಿಗೆ ಆದ್ಯತೆ ನೀಡಲಾಯಿತು. ರಾಜಕಾಲುವೆ ಒತ್ತುವರಿ ತೆರವು, ನಗರಸಭೆಯ ಆಸ್ತಿಗಳ ಸಂರಕ್ಷಣೆ ಜೊತೆಗೆ ನಗರಸಭೆ ಆದಾಯ ವೃದ್ಧಿಗೂ ಒತ್ತು ನೀಡಲಾಗಿದೆ.

ನಗರಸಭೆಯ ಅಧ್ಯಕ್ಷ ಪಿ.ಜೆ.ರಾಮಮೋಹನ್ ಬಜೆಟ್‍ ಮಂಡಿಸಿದರು.

ಸಾರ್ವಜನಿಕ ಸ್ಥಳಗಳಲ್ಲಿ ಸುಲಭ ಶೌಚಾಲಯದ ಮಾದರಿಯಲ್ಲಿ 6ಸಾರ್ವಜನಿಕ ಶೌಚಾಲಯಗಳ ನಿರ್ವಹಣೆಯನ್ನು ಖಾಸಗಿಯವರಿಗೆ ನೀಡಲಾಗಿದೆ. ಎಸ್‌ಎಫ್‌ಸಿ ವಿಶೇಷ ಅನುದಾನದ ಅಡಿ ರಸ್ತೆ, ಚರಂಡಿ ಮತ್ತು ಇತರೆ ಅಭಿವೃದ್ಧಿ ಕಾರ್ಯಗಳಿಗೆ ₹3.67 ಲಕ್ಷ, ಸ್ವಚ್ಛ ಭಾರತ್ ಮಿಷನ್ ಅನುದಾನದಡಿ ₹38.86 ಲಕ್ಷ, ವಿದ್ಯುತ್ ಅನುದಾನದಿಂದ ಬೀದಿದೀಪ, ನೀರು ಸರಬರಾಜು ವಿದ್ಯುತ್ ಶುಲ್ಕ ಪಾವತಿಗೆ ₹5.29ಲಕ್ಷ, ಹೊರಗುತ್ತಿಗೆ ಬೀದಿ ದೀಪಗಳ ನಿರ್ವಹಣೆ, ದುರಸ್ತಿ, ಖರೀದಿಗೆ ₹57 ಲಕ್ಷ, ಅಡ್ಡರಸ್ತೆಗಳಿಗೆ ನಾಮಫಲಕ, ವಾಹನಗಳ ನಿಲ್ದಾಣ, ತಂಗುದಾಣ ನಿರ್ಮಾಣಕ್ಕೆ ₹95 ಲಕ್ಷ, ನೀರುಸರಬರಾಜು, ಪೈಪ್‌ಲೈನ್ ದುರಸ್ತಿ, ನಿರ್ವಹಣೆಗೆ ₹19.2 ಲಕ್ಷ ಒದಗಿಸಲಾಗಿದೆ.

ನಗರದಲ್ಲಿ ಕಲ್ಲು ಹಾಸು, ಪಾದಚಾರಿ ರಸ್ತೆ ನಿರ್ಮಾಣಕ್ಕೆ ₹1.3 ಕೋಟಿ, ರಸ್ತೆ ಬದಿಯ ಚರಂಡಿಗಳ ನಿರ್ಮಾಣಕ್ಕೆ ₹2 ಕೋಟಿ, ಮಳೆ ನೀರು ಚರಂಡಿ, ತೆರೆದ ಚರಂಡಿ ನಿರ್ಮಾಣಕ್ಕೆ ₹2.5 ಕೋಟಿ ಕಾಯ್ದಿರಿಸಲಾಗಿದೆ. ನಗರದಲ್ಲಿನ ಉದ್ಯಾನಗಳಿಗೆ ₹1.25 ಕೋಟಿ ಕಾಯ್ದಿರಿಸಲಾಗಿದೆ.

ನಗರಸಭೆಯ ಆಸ್ತಿ ಸಂರಕ್ಷಣೆಗೆ ಆದ್ಯತೆ: ನಗರದಾದ್ಯಂತ ಕೋಟ್ಯಂತರ ರೂಪಾಯಿ ಬೆಲೆಬಾಳುವ ಆಸ್ತಿ ಹೊಂದಿದ್ದು, ಕೆಲವರು ಒತ್ತುವರಿ ಮಾಡಿಕೊಂಡಿದ್ದು, ಇನ್ನೂ ಕೆಲವು ಗಿಡಗೆಂಟೆಗಳಿಂದ ತುಂಬಿಕೊಂಡಿವೆ. ಅವುಗಳನ್ನು ಸ್ವಚ್ಛಗೊಳಿಸಿ ತಮ್ಮ ವಶಕ್ಕೆ ಪಡೆಯುವುದು. ನಗರದಲ್ಲಿ ಇರುವಂತಹ ರಾಜಕಾಲುವೆಗಳು ಸಂಪೂರ್ಣವಾಗಿ ಒತ್ತುವರಿಯಾಗಿದ್ದು ಅವುಗಳ ತೆರವಿಗೆ ₹10 ಕೋಟಿ ಕಾಯ್ದಿರಿಸಲಾಗಿದೆ.

ತಾರತಮ್ಯ ಆರೋಪ: ನಗರದಾದ್ಯಂತ ಹಲವು ವಾರ್ಡ್‍ಗಳಲ್ಲಿ ಅನೇಕ ಸಮಸ್ಯೆಗಳಿದ್ದು, ಅವುಗಳನ್ನು ಬಗೆಹರಿಸಲು ಅಧ್ಯಕ್ಷರಾಗಲಿ, ಪೌರಾಯುಕ್ತರಾಗಲಿ ಮುಂದಾಗಿಲ್ಲ. ತಾರತಮ್ಯ ಮಾಡುತ್ತಿದ್ದಾರೆ ಎಂದು ಆರೋಪಿಸಿ ವಿರೋಧಪಕ್ಷದ ಹಲವು ಸದಸ್ಯರು ಪ್ರತಿಭಟನೆಗೆ ಮುಂದಾದರು. ಪ್ರತಿಭಟನೆ ನಡುವೆಯೇ ಅರ್ಧ ಬಜೆಟ್ ಮಂಡನೆಯಾಯಿತು. ನಂತರ ತಿಳಿಹೇಳಲು ಪ್ರಯತ್ನಿಸಿದರೂ ಒಪ್ಪದ ಸ್ಥಿತಿ ನಿರ್ಮಾಣವಾಗಿ ಕೆಲ ಕಾಲ ಉದ್ವಿಗ್ನ ಸ್ಥಿತಿ ನಿರ್ಮಾಣವಾಯಿತು. ಅಲ್ಲದೇ ಶಾಸಕರು ಹಾಗೂ ಕೆಲಸದಸ್ಯರ ನಡುವೆ ಮಾತಿನ ಚಕಮಕಿ ನಡೆಯಿತು.

ಶಾಸಕ ಬಿ.ಸಿ.ನಾಗೇಶ್, ಉಪಾಧ್ಯಕ್ಷ ಗಣೇಶ್, ಪೌರಾಯುಕ್ತ ಉಮಾಕಾಂತ್, ಎಇಇ ನಾಗೇಶ್, ನಗರಸಭೆಯ ಸಿಬ್ಬಂದಿ ಆಶಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT