ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ಯಾಡಗಿ ಮೆಣಸಿನಕಾಯಿ ಕೆ.ಜಿ ₹600! ಇನ್ನೂ ಏರಿಕೆ ಸಾಧ್ಯತೆ

ತೊಗರಿ ಬೇಳೆ ಮತ್ತಷ್ಟು ದುಬಾರಿ
Last Updated 26 ಮಾರ್ಚ್ 2023, 5:59 IST
ಅಕ್ಷರ ಗಾತ್ರ

ತುಮಕೂರು: ಕಳೆದ ಕೆಲ ವಾರಗಳಿಂದ ಏರಿಕೆಯತ್ತ ಮುಖ ಮಾಡಿರುವ ಬ್ಯಾಡಗಿ ಮೆಣಸಿನ ಕಾಯಿ ದರ ಈ ವಾರವೂ ಮತ್ತಷ್ಟು ದುಬಾರಿಯಾಗಿದ್ದರೆ, ಸ್ವಲ್ಪ ಮಟ್ಟಿಗೆ ನಿಯಂತ್ರಣಕ್ಕೆ ಬಂದಿದ್ದ ತೊಗರಿ ಬೇಳೆ ಬೆಲೆ ಮತ್ತೆ ಹೆಚ್ಚಳವಾಗಿದೆ. ಒಣ ಹಣ್ಣುಗಳು ಸಾಮಾನ್ಯರ ಕೈಗೆಟುಕದಂತಾಗಿವೆ.

ತರಕಾರಿ ಬೆಲೆ ಕುಸಿತದಿಂದಾಗಿ ರೈತರಿಗೆ ಹೆಚ್ಚಿನ ಲಾಭವಾಗುತ್ತಿಲ್ಲ. ಧಾರಣೆ ಹೆಚ್ಚಳವಾಗಬಹುದು ಎಂದು ಎದುರು ನೋಡುತ್ತಿದ್ದವರಿಗೆ ಅಂತಹ ವಾತಾವರಣವೇ ಕಾಣಿಸುತ್ತಿಲ್ಲ. ಟೊಮೆಟೊ ದರ ತೀವ್ರವಾಗಿ ಇಳಿಕೆಯಾಗಿದ್ದು, ಬೆಳೆಗಾರರು ಆತಂಕಕ್ಕೆ ಒಳಗಾಗಿದ್ದಾರೆ. ಆದರೆ ಶುಂಠಿ ಬೆಲೆ ಬಹುತೇಕ ದುಪ್ಪಟ್ಟಾಗಿದ್ದು, ಫಾರಂ ಶುಂಠಿ ಕೆ.ಜಿ ₹50, ನಾಟಿ ₹80ಕ್ಕೆ ಏರಿಕೆಯಾಗಿದೆ.

ಕ್ಯಾರೇಟ್, ಬೀಟ್ರೂಟ್, ಗೆಡ್ಡೆಕೋಸು ಕೆ.ಜಿಗೆ ತಲಾ ₹5 ಹೆಚ್ಚಳವಾಗಿದ್ದರೆ, ಬದನೆಕಾಯಿ, ಎಲೆಕೋಸು, ತೊಂಡೆಕಾಯಿ, ಹಾಗಲ ಕಾಯಿ ಇಳಿಕೆಯಾಗಿದೆ. ಕ್ಯಾಪ್ಸಿಕಂ ಕೆ.ಜಿಗೆ ₹10 ಕಡಿಮೆಯಾಗಿದೆ.

ಕೊತ್ತಂಬರಿ ಅಗ್ಗ: ಕೆಲ ವಾರಗಳಿಂದ ಅಲ್ಪ ಏರಿಕೆ ಕಂಡಿದ್ದ ಸೊಪ್ಪು, ಈ ವಾರ ಇಳಿಕೆಯಾಗಿದೆ. ಕೊತ್ತಂಬರಿ, ಮೆಂತ್ಯ ಸೊಪ್ಪು ಮತ್ತಷ್ಟು ಅಗ್ಗವಾಗಿದೆ. ಕೊತ್ತಂಬರಿ ಸೊಪ್ಪು ಕೆ.ಜಿ ₹25–30, ಸಬ್ಬಕ್ಕಿ ಕೆ.ಜಿ ₹30–35, ಮೆಂತ್ಯ ಸೊಪ್ಪು ಕೆ.ಜಿ ₹20–25, ಪಾಲಕ್ ಸೊಪ್ಪು (ಕಟ್ಟು) ₹30ಕ್ಕೆ ಮಾರಾಟವಾಗುತ್ತಿದೆ.

ಪಪ್ಪಾಯ ಹೆಚ್ಚಳ: ಯುಗಾದಿ ಹಬ್ಬದ ಸಮಯದಲ್ಲಿ ಸ್ವಲ್ಪ ದುಬಾರಿಯಾಗಿದ್ದ ಹಣ್ಣುಗಳ ಧಾರಣೆ ಮತ್ತೆ ಯಥಾಸ್ಥಿತಿಗೆ ಮರಳಿದೆ. ದಾಳಿಂಬೆ ಬೆಲೆ ಅಲ್ಪ ಕಡಿಮೆಯಾಗಿದ್ದರೆ, ಕಿತ್ತಳೆ ಹಣ್ಣು ಏರಿಕೆ ಕಂಡಿದೆ. ಪಪ್ಪಾಯ ಕೆ.ಜಿ ₹45ಕ್ಕೆ ತಲುಪಿದ್ದು, ಹಿಂದಿನ ದಿನಗಳಲ್ಲಿ ಇಷ್ಟೊಂದು ಬೆಲೆ ಏರಿಕೆಯಾಗಿರಲಿಲ್ಲ.

ತೊಗರಿ ಬೇಳೆ ದುಬಾರಿ: ಏರಿಕೆಯತ್ತ ಮುಖ ಮಾಡಿದ್ದ ತೊಗರಿ ಬೇಳೆ ಎರಡು ವಾರದಿಂದ ಸ್ವಲ್ಪ ಮಟ್ಟಿಗೆ ನಿಯಂತ್ರಣಕ್ಕೆ ಬಂದಿತ್ತು. ಆದರೆ ಈಗ ಮತ್ತೆ ಹೆಚ್ಚಳವಾಗುತ್ತಿದ್ದು, ಕೆ.ಜಿ ₹110–130ಕ್ಕೆ ಜಿಗಿದಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ದುಬಾರಿಯಾಗಬಹುದು ಎಂದು ಹೇಳಲಾಗುತ್ತಿದೆ. ಉದ್ದಿನ ಬೇಳೆ, ಹೆಸರು ಬೇಳೆ, ಹೆಸರು ಕಾಳು, ಬಟಾಣಿ ದರ ಕೊಂಚ ಏರಿಕೆಯಾಗಿದೆ.

ಎಣ್ಣೆ ಯಥಾಸ್ಥಿತಿ: ಅಡುಗೆ ಎಣ್ಣೆ ಧಾರಣೆಯಲ್ಲಿ ಹೆಚ್ಚಿನ ವ್ಯತ್ಯಾಸವಾಗಿಲ್ಲ. ಪಾಮಾಯಿಲ್ ಅಲ್ಪ ಕಡಿಮೆಯಾಗಿದೆ. ಸನ್‌ಫ್ಲವರ್ ಕೆ.ಜಿ ₹128–130, ಪಾಮಾಯಿಲ್ ಕೆ.ಜಿ ₹95–97, ಕಡಲೆಕಾಯಿ ಎಣ್ಣೆ ಕೆ.ಜಿ ₹155–160ಕ್ಕೆ ಮಾರಾಟವಾಗುತ್ತಿದೆ.

ಮೆಣಸಿನಕಾಯಿ ದುಬಾರಿ: ದುಬಾರಿಯಾಗುತ್ತಲೇ ಸಾಗಿರುವ ಬ್ಯಾಡಗಿ ಮೆಣಸಿನ ಕಾಯಿ ದರ ಮತ್ತೆ ಗಗನಮುಖಿಯಾಗಿದೆ. ಎರಡು ವಾರದ ಹಿಂದೆ ಕೆ.ಜಿ ₹400–450 ಇದ್ದದ್ದು, ಈಗ ಕೆ.ಜಿ ₹600–650ಕ್ಕೆ ಜಿಗಿದಿದೆ. ಎರಡು ವಾರದ ಅಂತರದಲ್ಲಿ ಕೆ.ಜಿಗೆ ₹200 ಹೆಚ್ಚಳವಾದಂತಾಗಿದೆ. ಕಳಪೆ ಗುಣಮಟ್ಟದ ಮೆಣಸಿನಕಾಯಿ ಕಡಿಮೆ ಬೆಲೆಗೂ ಸಿಗುತ್ತಿದೆ. ಆದರೆ ಗುಣಮಟ್ಟದ ಕಾಯಿಗೆ ಬೆಲೆ ಏರಿಕೆಯಾಗಿದೆ. ಒಣ ಹಣ್ಣುಗಳು ದುಬಾರಿಯಾಗಿದ್ದು, ಬಾದಾಮಿ, ಗೋಡಂಬಿ ಬೆಲೆ ಹೆಚ್ಚಳವಾಗಿದೆ. ದುಬಾರಿಯಾಗಿದ್ದ ಲವಂಗದ ದರ ಯಥಾಸ್ಥಿತಿ ಕಾಯ್ದುಕೊಂಡಿದೆ.

ಧನ್ಯ ಕೆ.ಜಿ ₹110–160, ಬ್ಯಾಡಗಿ ಮೆಣಸಿನಕಾಯಿ ಕೆ.ಜಿ ₹600–650, ಗೌರಿಬಿದನೂರು ಖಾರದ ಮೆಣಸಿನಕಾಯಿ ಕೆ.ಜಿ ₹250–260, ಹುಣಸೆಹಣ್ಣು ₹80–160 ಕರಿಮೆಣಸು ಕೆ.ಜಿ ₹550–570, ಜೀರಿಗೆ ಕೆ.ಜಿ ₹360–380, ಸಾಸಿವೆ ಕೆ.ಜಿ ₹80–85, ಮೆಂತ್ಯ ಕೆ.ಜಿ ₹90–95, ಚಕ್ಕೆ ಕೆ.ಜಿ ₹280–290, ಲವಂಗ ಕೆ.ಜಿ ₹800–820, ಗುಣಮಟ್ಟದ ಗಸಗಸೆ ಕೆ.ಜಿ ₹1,400–1450, ಬಾದಾಮಿ ಕೆ.ಜಿ ₹630–670, ಗೋಡಂಬಿ ಕೆ.ಜಿ ₹700–720, ದ್ರಾಕ್ಷಿ ಕೆ.ಜಿ ₹220–240ಕ್ಕೆ ಮಂಡಿಪೇಟೆ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿದೆ.

ಕೋಳಿ ಮತ್ತೆ ಏರಿಕೆ: ಯುಗಾದಿ ಹಬ್ಬದ ಸಮಯದಲ್ಲಿ ಕೋಳಿ ಮಾಂಸದ ಬೆಲೆ ಹೆಚ್ಚಳ ಕಂಡಿದೆ. ಬ್ರಾಯ್ಲರ್ ಕೋಳಿ ಕೆ.ಜಿ ₹120, ರೆಡಿ ಚಿಕನ್ ಕೆ.ಜಿ ₹200, ಸ್ಕಿನ್‌ಲೆಸ್ ಕೆ.ಜಿ ₹220, ಮೊಟ್ಟೆ ಕೋಳಿ (ಫಾರಂ) ಕೆ.ಜಿ ₹90ಕ್ಕೆ ಮಾರಾಟವಾಗುತ್ತಿದೆ.

ಮೀನು ಯಥಾಸ್ಥಿತಿ: ಈ ವಾರ ಮೀನಿನ ದರದಲ್ಲಿ ಹೆಚ್ಚಿನ ವ್ಯತ್ಯಾಸವಾಗಿಲ್ಲ. ಬಂಗುಡೆ ಕೆ.ಜಿ ₹180, ಬೂತಾಯಿ ಕೆ.ಜಿ ₹130, ಅಂಜಲ್ ಕೆ.ಜಿ ₹990, ಬೊಳಿಂಜರ್ ಕೆ.ಜಿ ₹210, ಬಿಳಿಮಾಂಜಿ ಕೆ.ಜಿ ₹1,140, ಕಪ್ಪುಮಾಂಜಿ ಕೆ.ಜಿ ₹650, ಸೀಗಡಿ ಕೆ.ಜಿ ₹550, ಏಡಿ ₹340ಕ್ಕೆ ನಗರದ ಮತ್ಸ್ಯದರ್ಶಿನಿಯಲ್ಲಿ ಮಾರಾಟವಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT