ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುಮಕೂರು |ಮಕ್ಕಳ ಸಂಬಾಳಿಸುವುದೇ ಸವಾಲು, ಆತ್ಮಸ್ಥೈರ್ಯ ತುಂಬುತ್ತಿರುವ ಮನೋವೈದ್ಯರು

Last Updated 20 ಮೇ 2020, 9:59 IST
ಅಕ್ಷರ ಗಾತ್ರ

ತುಮಕೂರು: ಕೋವಿಡ್‌–19 ದೃಢಪಟ್ಟ ವ್ಯಕ್ತಿಯ ಪ್ರಾಥಮಿಕ ಸಂಪರ್ಕದಿಂದ ದಂಪತಿ ಕ್ವಾರಂಟೈನ್‌ನಲ್ಲಿ ಇರಬೇಕಾಯಿತು. ಆ ದಂಪತಿಯ ಮೂರು ವರ್ಷದ ಬಾಲಕಿಗೂ ಕ್ವಾರಂಟೈನ್‌ ಶಿಕ್ಷೆ. ಮಗು ಪೋಷಕರ ಬಿಟ್ಟು ಹೋಗಲೊಲ್ಲದು. ಕೊರೊನಾ ಭೀತಿ ಜತೆಗೆ ಮಗುವಿನ ಆಕ್ರಂದನ ತಂದೆ– ತಾಯಿಯ ಸಂಕಟ ಇಮ್ಮಡಿಗೊಳಿಸಿತ್ತು.

ಮಗುವನ್ನು ಸಂಬಾಳಿಸುವುದೇ ವೈದ್ಯರಿಗೆ ದೊಡ್ಡ ಸವಾಲಾಯಿತು. ಈ ಸಮಯದಲ್ಲಿ ನೆರವಿಗೆ ಬಂದದ್ದು ಮನೋರೋಗ ತಜ್ಞರು. ಆ ಮಗುವಿಗೆ ಕೋವಿಡ್‌ ಬಗ್ಗೆ ಮಗುವಿನ ಭಾಷೆಯಲ್ಲೇ ಅರಿಕೆ ಮಾಡಿ ಪೋಷಕರನ್ನೂ ಸಮಾಧಾನಪಡಿಸಿದರು. ಈಗ ಮೂವರೂ 14 ದಿನಗಳ ಕ್ವಾರಂಟೈನ್‌ ಮುಗಿಸಿ ಮನೆಗೆ ತೆರಳಿದ್ದಾರೆ.

‘ಕೋವಿಡ್‌ ದೃಢಪಟ್ಟ ವ್ಯಕ್ತಿಯ ದ್ವಿತೀಯ ಸಂಪರ್ಕದ ಹಿನ್ನೆಲೆಯಲ್ಲಿ ತಾಯಿಯನ್ನು ಕ್ವಾರಂಟೈನ್‌ ಮಾಡ ಲಾಗಿತ್ತು. ಅವಧಿ ಮುಗಿದರೂ ಮಾನಸಿಕ ಖಿನ್ನತೆಯಿಂದ ಹೊರ ಬಂದಿಲ್ಲ. ಯಾವಾಗಲೂ ಮಂಕಾಗಿ ಕುಳಿತಿರುತ್ತಾರೆ. ಏನು ಹೇಳಿದರೂ ಕೋಪ ಮಾಡಿಕೊಳ್ಳುತ್ತಾರೆ’ ಇದು ಇನ್ನೊಬ್ಬ ಮಗಳ ಸಮಸ್ಯೆ.

ಕೊರೊನಾ ಸೋಂಕು ಹರಡುವ ಭೀತಿ ಜನರನ್ನು ಇನ್ನಿಲ್ಲದಂತೆ ಆವರಿಸಿದೆ. ಅದರಲ್ಲೂ ಕೋವಿಡ್‌– 19 ದೃಢಪಟ್ಟ ವ್ಯಕ್ತಿಯ ಪ್ರಾಥಮಿಕ, ದ್ವಿತಿಯ ಸಂಪರ್ಕ ಹೊಂದಿದವರಲ್ಲಿ ಈ ಆತಂಕ ಇಮ್ಮಡಿಗೊಂಡಿರುತ್ತದೆ. ತಪಾಸಣಾ ವರದಿ ನೆಗೆಟಿವ್‌ ಎಂದು ಬಂದರೂ ಆ ಭೀತಿಯಿಂದ ಹೊರಬರಲಾಗದೆ ಮಾನಸಿಕ ಖಿನ್ನತೆಗೆ ಒಳಗಾಗುತ್ತಿದ್ದಾರೆ. ಅವರೆಲ್ಲರಿಗೂ ಮನೋರೋಗ ತಜ್ಞರು ಆತ್ಮಸ್ಥೈರ್ಯ ತುಂಬುತ್ತಿದ್ದಾರೆ. ಅಲ್ಲದೇ ಕೋವಿಡ್‌–19 ರೋಗಿಗಳಿಗೆ ಚಿಕಿತ್ಸೆ ನೀಡುತ್ತಿರುವ ನರ್ಸ್‌, ವೈದ್ಯರಿಗೂ ಕೌನ್ಸೆಲಿಂಗ್‌ ನಡೆಸಿ ಧೈರ್ಯ ತುಂಬುತ್ತಿದ್ದಾರೆ.

ಕೊರೊನಾ ಸೋಂಕು ಶಂಕೆ ಕಾರಣಕ್ಕೆ ಆಸ್ಪತ್ರೆಯಲ್ಲಿ ದಾಖಲಾದ ರೋಗಿಗಳ ಹಾಗೂ ಕ್ವಾರಂಟೈನ್‌ ನಲ್ಲಿಟ್ಟಿರುವವರ ಮೊಬೈಲ್‌ ನಂಬರ್‌ ಪಡೆದು ಮನೋವೈದ್ಯರೇ ಅವರನ್ನು ಸಂಪರ್ಕಿಸಿ ಸಮಸ್ಯೆಗಳನ್ನು ಆಲಿಸುತ್ತಿದ್ದಾರೆ. ತಿಂಗಳಿಂದ ಈ ಕಾರ್ಯದಲ್ಲಿ ನಿರತರಾಗಿದ್ದು, ರೋಗಿಗಳ ಸಮಸ್ಯೆಗಳಿಗೆ ಕಿವಿಯಾಗಿದ್ದಾರೆ.

‘ಆಸ್ಪತ್ರೆಯಲ್ಲಿ ದಾಖಲಾದ ತಕ್ಷಣ ಮೂಗಿಗೆ ಪೈಪ್‌ ಹಾಕುತ್ತಾರೆ, ಏಳಲು, ಕೂರಲು ಬಿಡುವುದಿಲ್ಲ, ಏನಾದರು ತೊಂದರೆ ಆದರೆ ಯಾರೂ ಬರುವುದಿಲ್ಲ. ವಯಸ್ಸಾದವರಿಗೆ ಕೊರೊನಾ ಸೋಂಕು ಬಂದರೆ ವಾಸಿಯಾಗುವುದಿಲ್ಲ’ ಈ ರೀತಿಯ ಪೂರ್ವಗ್ರಹಗಳನ್ನು ಬಹುತೇಕರು ಹೊಂದಿದ್ದರು. ಕೌನ್ಸೆಲಿಂಗ್‌ ಮೂಲಕ ಅವರ ಆತಂಕ ದೂರಮಾಡಿದ್ದೇವೆ ಎನ್ನುತ್ತಾರೆ ವೈದ್ಯರು.

‘ಮನೆಯಲ್ಲೇ ಕ್ವಾರಂಟೈನ್‌ ನಲ್ಲಿರುವುದು ಕಷ್ಟ. ನಾವು ಕ್ಯಾರಂಟೈನ್‌ನಲ್ಲಿದ್ದರೆ ಮಕ್ಕಳು ಊಟ ಮಾಡಲ್ಲ. ಭಯ ಬೀಳುತ್ತವೆ. ವಯಸ್ಸಾದವರನ್ನು ಕ್ವಾರಂಟೈನ್‌ನಲ್ಲಿ ಇಟ್ಟರೆ ನೋಡಿಕೊಳ್ಳುವುದು ಕಷ್ಟ’ ಹೀಗೆ ಅನೇಕ ಸಮಸ್ಯೆಗಳನ್ನು ರೋಗಿಗಳು, ಅವರ ಪಾಲಕರು ಹೇಳಿಕೊಂಡಿದ್ದಾರೆ.

‘ತಮ್ಮ ಕಷ್ಟಗಳನ್ನು ಕೇಳಲು ಒಂದು ಕಿವಿ ಇದೆ ಎಂಬುದೇ ಎಷ್ಟೋ ಜನರಿಗೆ ಸಮಾಧಾನ ತರುತ್ತದೆ. ಅವರ ಸಮಸ್ಯೆಗಳಿಗೆ ನಾವು ಕಿವಿಯಾಗಬೇಕಷ್ಟೇ. ಆಗ ರೋಗಿಯ ಅರ್ಧ ಸಮಸ್ಯೆ ಪರಿಹಾರವಾದಂತೆ’ ಎನ್ನುತ್ತಾರೆ ಮನೋವೈದ್ಯೆ ರಾಜೇಶ್ವರಿ.

‘ನಾವು ಎಜುಕೇಟೆಡ್‌, ಇಲ್ಲಿ ಯಾಕೆ ಇಟ್ಟಿದ್ದೀರಾ?’
ಇನ್ನು ಕೆಲವರು ‘ನಾವು ಎಜುಕೇಟೆಡ್‌, ಇಲ್ಲಿ ಯಾಕೆ ಇಟ್ಟಿದ್ದೀರ. ನಮ್ಮ ಪಾಡಿಗೆ ನಮ್ಮನ್ನು ಬಿಟ್ಟುಬಿಡಿ. ನಮ್ಮ ಆರೋಗ್ಯ ನಾವು ನೋಡಿಕೊಳ್ಳುತ್ತೇವೆ. ಮನೆಯಲ್ಲೇ ಕ್ವಾರಂಟೈನ್‌ ಮಾಡಿಕೊಳ್ಳುತ್ತೇವೆ. ಇಲ್ಲಿರಲು ಭಯ ಆಗುತ್ತದೆ’ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಅಂತವರಿಗೆಲ್ಲ ಕ್ವಾರಂಟೈನ್‌ ಯಾಕೆ ಬೇಕು, ಹೇಗೆ ಮಾಡಬೇಕು, ಸಾಂಸ್ಥಿಕ ಕ್ವಾರಂಟೈನ್‌ನಲ್ಲಿದ್ದರೆ ಕುಟುಂಬದ ಸುರಕ್ಷತೆ ಎಷ್ಟಿರುತ್ತದೆ ಎಂಬ ಬಗ್ಗೆ ಅರಿಕೆ ಮಾಡಿದ್ದಾರೆ ವೈದ್ಯರು.

**
ಔಷಧಿಗೆ ತೊಂದರೆ ಆಗಿಲ್ಲ
ಕೊರೊನಾ ಲಾಕ್‌ಡೌನ್‌ಗೂ ಮುಂಚೆ ಪ್ರತಿದಿನ ಸುಮಾರು 40ರಿಂದ 60 ಮನೋರೋಗಿಗಳು ಜಿಲ್ಲಾಸ್ಪತ್ರೆಗೆ ಭೇಟಿ ಕೊಡುತ್ತಿದ್ದರು. ತಾತ್ಕಾಲಿಕವಾಗಿ ಶ್ರೀದೇವಿ ಆಸ್ಪತ್ರೆಯಲ್ಲಿ ಈ ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಮನೋರೋಗಿಗಳ ಔಷಧಿಗೆ ಯಾವುದೇ
ತೊಂದರೆ ಆಗಿಲ್ಲ. ಅಲ್ಲಿನ ವೈದ್ಯರೇ ಉಚಿತವಾಗಿ ಚಿಕಿತ್ಸೆ ನೀಡುತ್ತಿದ್ದಾರೆ.
–ಡಾ.ಮಾಲಿನಿ ಗೋವಿಂದನ್‌, ಮನೋವೈದ್ಯರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT