ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ವ ಅಪ್ಪಂದಿರ ದಿನ: ಅಯ್ಯೋ! ಅಪ್ಪ ಇಲ್ಲವಲ್ಲ...

Last Updated 20 ಜೂನ್ 2021, 2:12 IST
ಅಕ್ಷರ ಗಾತ್ರ

ತುಮಕೂರು: ‘ಅಯ್ಯೋ... ಅಪ್ಪ ಇಲ್ಲವಲ್ಲ ಎಂಬ ಕೊರಗು ಸದಾ ನೆನಪಿನಲ್ಲಿ ಕಾಡುತ್ತಿದೆ. ವಿಧಿಯಾಟ, ಕೋವಿಡ್ ನಮ್ಮ ತಂದೆಯನ್ನು ಬಲಿಪಡೆಯಿತು’ ಎಂದು ಹೇಳುತ್ತಲೇ ಮೇಘನ ಮಾತು ನಿಲ್ಲಿಸಿದರು.

ತುಮಕೂರು ತಾಲ್ಲೂಕಿನ ಮಲ್ಲಸಂದ್ರ ಸಮೀಪದ ಹಬ್ಬತ್ತನಹಳ್ಳಿಯ ಈ ಬಾಲಕಿಯ ಕಣ್ಣೀರು ತಂದೆ, ತಾಯಿಗಳನ್ನು ಕಳೆದುಕೊಂಡ ಹಲವರ ಕಣ್ಣೀರ ಕಥೆಯಾಗಿದೆ. ಗಂಗರಾಜು ಅವರಿಗೆ ಇನ್ನೂ 45 ವರ್ಷ. ದುಡಿಯುವ ವಯಸ್ಸು, ಬದುಕುವ ಛಲ. ಪತ್ನಿ ಚೂಡಾವಣೆ, ಇಬ್ಬರು ಹೆಣ್ಣು ಮಕ್ಕಳ ಸಂಸಾರ. 14 ವರ್ಷದ ಮೇಘನ ಜತೆಗೆ 12 ವರ್ಷದ ಕೀರ್ತನ ಎಂಬ ಇಬ್ಬರು ಹೆಣ್ಣು ಮಕ್ಕಳು ಇದ್ದರು.

ಗಂಗರಾಜು ತುಮುಲ್‌ನಲ್ಲಿ ಗುತ್ತಿಗೆ ನೌಕರರಾಗಿ ಕೆಲಸ ನಿರ್ವಹಿಸುತ್ತಿದ್ದರು. ಬರುವ ಅಲ್ಪಸ್ವಲ್ಪ ಆದಾಯದಲ್ಲಿ ಸಂಸಾರವನ್ನು ಮುನ್ನಡೆಸಿಕೊಂಡು ಹೋಗುತ್ತಿದ್ದರು. ಯಾವ ಮಾಯದಲ್ಲಿ ಕೋವಿಡ್ಬಂತೊ ಗೊತ್ತಿಲ್ಲ. ಆರೋಗ್ಯದಲ್ಲಿ ಏರುಪೇರು ಆಗುತ್ತಿದ್ದಂತೆ ಕುಟುಂಬದವರು ಆಸ್ಪತ್ರೆಗೆ ಕರೆದುಕೊಂಡು ಹೋದರು. ಆ ವೇಳೆಗೆ ಕೋರೊನಾ ಸೊಂಕು ಖಚಿತವಾಗಿತ್ತು.

ಒಂದು ತಿಂಗಳ ಕಾಲ ಚಿಕಿತ್ಸೆ ಕೊಡಿಸಿದರೂ ಗುಣಮುಖರಾಗಲಿಲ್ಲ. ಒಂದು ಆಸ್ಪತ್ರೆಯಿಂದ ಮತ್ತೊಂದು ಆಸ್ಪತ್ರೆಗೆ ಸುತ್ತಿದರೂ ಪ್ರಯೋಜನವಾಗಲಿಲ್ಲ. ಸಾಕಷ್ಟು ಹಣವೂ ಖರ್ಚಾಯಿತು. ಆದರೆ ಅಪ್ಪ ಬದುಕಿ ಉಳಿಯಲಿಲ್ಲ. ಅಪ್ಪನಿಲ್ಲದೆ ಒಂದು ತಿಂಗಳು ಕಳೆದಿದ್ದೇವೆ ಎಂದು 8ನೇ ತರಗತಿಯಲ್ಲಿ ಓದುತ್ತಿರುವ ಮೇಘನ ನೊಂದುಕೊಂಡರು.

‘ನಮ್ಮನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದರು. ಓದಿಸಲು ಎಲ್ಲಾ ವ್ಯವಸ್ಥೆ ಮಾಡಿದ್ದರು. ಈಗ ತುಂಬಾನೆ ಮಿಸ್ ಮಾಡಿಕೊಳ್ಳುತ್ತಿದ್ದೇವೆ. ಅಪ್ಪನ ಸಾವು ನೆನಪಿಸಿಕೊಳ್ಳಲೂ ಆಗುತ್ತಿಲ್ಲ’ ಎಂದು ಹೇಳುತ್ತಲೇ ಮುಂದಕ್ಕೆ ಮಾತು ಹೊರಳದಾಯಿತು.

‘ಲಕ್ಷಾಂತರ ರೂಪಾಯಿ ಖರ್ಚು ಮಾಡಿದರೂ ಉಳಿಸಿಕೊಳ್ಳಲು ಆಗಲಿಲ್ಲ. ಕೋವಿಡ್‌ಗೆ ಆಸ್ಪತ್ರೆಗಳಲ್ಲಿ ಸರಿಯಾಗಿ ಚಿಕಿತ್ಸೆ ನೀಡುವುದಿಲ್ಲ. ಯಾವ ರೀತಿ ಚಿಕಿತ್ಸೆ ಕೊಡುತ್ತಾರೆ. ಹೇಗೆ ನೋಡಿಕೊಳ್ಳುತ್ತಾರೆ ಎಂಬುದೂ ಗೊತ್ತಾಗುವುದಿಲ್ಲ’ ಎಂದು ಪತಿಯನ್ನು ಕಳೆದುಕೊಂಡಿರುವ ಚೂಡಾಮಣಿ ಅಸಹಾಯಕತೆ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT