ತುಮಕೂರು: ನಗರದ ಹೊರವಲಯದ ವಸಂತನರಸಾಪುರ ಕೈಗಾರಿಕಾ ಪ್ರದೇಶದಲ್ಲಿ ಬಹುಕೌಶಲ ತರಬೇತಿ ಕೇಂದ್ರ ಆರಂಭಿಸಲು ಶೀಘ್ರ ಚಾಲನೆ ನೀಡುವಂತೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮುರಳೀಧರ ಹಾಲಪ್ಪ ಅವರು ಸಂಸದ ಜಿ.ಎಸ್.ಬಸವರಾಜು ಅವರಿಗೆ ಮನವಿ ಮಾಡಿದರು.
ಬಸವರಾಜು ಅವರನ್ನು ಬುಧವಾರ ಭೇಟಿಮಾಡಿ ಕೌಶಲ ತರಬೇತಿ ಕೇಂದ್ರದ ಆರಂಭ ಕುರಿತು ಚರ್ಚಿಸಿದರು. ಜಿಲ್ಲೆಯ ಯುವ ಜನತೆಗೆ ಬ್ಯಾಂಕಿಂಗ್, ವಿಮೆ, ಗ್ರಾಫಿಕ್ಸ್, ಮಲ್ಟಿಮೀಡಿಯಾ, ಅನಿಮೇಷನ್, ಕೃತಕ ಬುದ್ಧಿಮತ್ತೆ, ಸಿಎನ್‌ಸಿ ಮಷಿನ್ ಟೂಲ್ಸ್ ಹಾಗೂ ಇತರೆ ನೂತನ ತಂತ್ರಜ್ಞಾನದ ಬಗ್ಗೆ ಬಹುಕೌಶಲ ತರಬೇತಿ ಕೇಂದ್ರದಲ್ಲಿ ಗುಣಮಟ್ಟದ ತರಬೇತಿ ಕೊಡಿಸುವುದು. ಅಪ್ರೆಂಟಿಸ್‌ಗೆ ಅವಕಾಶ ಹಾಗೂ ಉದ್ಯೋಗ ಕಲ್ಪಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರದ ಕೌಶಲ ಹಾಗೂ ಯುವ ಸಬಲೀಕರಣ ಇಲಾಖೆ ಅನುದಾನ ಬಳಸಿಕೊಳ್ಳುವ ಬಗ್ಗೆ ಇಬ್ಬರೂ ಚರ್ಚಿಸಿದರು.
ಅಂತರಸನಹಳ್ಳಿ, ಹಿರೇಹಳ್ಳಿ, ವಸಂತನರಾಸಪುರ ಕೈಗಾರಿಕಾ ಪ್ರದೇಶದಲ್ಲಿ ಇರುವ ಉದ್ದಿಮೆಗಳು, ಗುಬ್ಬಿ ಬಳಿ ಆರಂಭವಾಗಿರುವ ಎಚ್ಎಎಲ್ ಸಹಕಾರ ಪಡೆದುಕೊಳ್ಳಬೇಕು. ಜಿಟಿಟಿಸಿ, ಜರ್ಮನ್ ತಂತ್ರಜ್ಞಾನ ತರಬೇತಿ ಕೇಂದ್ರ, ಸಿಡಾಕ್, ಎಸ್‌ಬಿಐ ತರಬೇತಿ ಕೇಂದ್ರದ ಸಹಯೋಗದೊಂದಿಗೆ ಕೌಶಲ ಕೇಂದ್ರ ಪ್ರಾರಂಭಿಸುವಂತೆ ಮನವಿ ಮಾಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.