ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಪ ಚುನಾವಣಾ ಫಲಿತಾಂಶ ರಾಜಕೀಯ ದಿಕ್ಸೂಚಿಯಲ್ಲ: ಡಿ.ಕೆ.ಶಿವಕುಮಾರ್

Last Updated 21 ಅಕ್ಟೋಬರ್ 2020, 8:44 IST
ಅಕ್ಷರ ಗಾತ್ರ

ಶಿರಾ:ಉಪ ಚುನಾವಣಾ ಫಲಿತಾಂಶ ರಾಜಕೀಯ ದಿಕ್ಸೂಚಿಯಲ್ಲ, ಈ ಫಲಿತಾಂಶ ರಾಜ್ಯದ ಭ್ರಷ್ಟ ಸರ್ಕಾರಕ್ಕೆ ಒಂದು ಸಂದೇಶ ನೀಡಲಿದೆ. ಅದ್ದರಿಂದ ಉಪಚುನಾವಣೆಯಲ್ಲಿ ಮತದಾರರು ಬಿಜೆಪಿಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದುಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು.

ನಗರದಲ್ಲಿ ಬುಧವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದರು.

ರಾಜ್ಯದಲ್ಲಿ ಸರ್ಕಾರ ಅಸ್ತಿತ್ವದಲ್ಲಿ ಇಲ್ಲದೇ ಇರುವುದರಿಂದ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ, ಮುಖ್ಯಮಂತ್ರಿಗೆ ಪುತ್ರ ವ್ಯಾಮೋಹ ಹೆಚ್ಚಾಗಿ ಆಡಳಿತ ಕುಸಿದಿದೆ ಎಂದು ವಾಗ್ದಾಳಿ ನಡೆಸಿದರು.

ಉತ್ತರ ಕರ್ನಾಟಕ ಜಲ ಪ್ರವಾಹಕ್ಕೆ ತುತ್ತಾದರೂ ಯಾವೊಬ್ಬ ಸಚಿವರು ಜನರ ನೆರವಿಗೆ ಬರುತ್ತಿಲ್ಲ ಎಂದು ದೂರಿದರು

ಕಾಂಗ್ರೆಸ್ ಪಕ್ಷದಲ್ಲಿ ಎಲ್ಲ ಮುಖಂಡರು ಒಟ್ಟಾಗಿ ಚುನಾವಣೆಯನ್ನು ಎದುರಿಸಲಿದ್ದಾರೆ. ಆದರೆ ಬಿಜೆಪಿ ವಿಜಯೇಂದ್ರ ನೇತೃತ್ವದಲ್ಲಿ ಉಪ ಚುನಾವಣೆ ನಡೆಯುತ್ತಿದೆ ಎಂದು ಮುಖ್ಯಮಂತ್ರಿ ಹೇಳಿದ ಮೇಲೆ ಬೇರೆಯವರ ಬಗ್ಗೆ ಮಾತನಾಡುವ ಅವಶ್ಯಕತೆ ಇಲ್ಲ ಎಂದರು.

ಶಿರಾ ಮತದಾರರು ಬುದ್ಧಿವಂತರಿದ್ದಾರೆ, ಜಯಚಂದ್ರ ಅವರ ಅಭಿವೃದ್ಧಿಯನ್ನು ಕಂಡಿದ್ದಾರೆ, ಜೆಡಿಎಸ್ ಶಾಸಕರಿದ್ದಾಗ ಏನಾಗಿದೆ, ಬಿಜೆಪಿ ಸರ್ಕಾರದಲ್ಲಿ ಏನಾಗಿದೆ ಎನ್ನುವುದರ ಬಗ್ಗೆ ಮತದಾರರಿಗೆ ತಿಳಿದಿದೆ. ಕಾಂಗ್ರೆಸ್ ಪಕ್ಷದ ಆಂತರಿಕ ವರದಿಯಲ್ಲಿ ಶೇ 44 ರಷ್ಟು ಮತ ಪಡೆದು ಟಿ.ಬಿ‌.ಜಯಚಂದ್ರ ಅವರು ಬಹುಮತ ಪಡೆಯಲಿದ್ದಾರೆ, ಉಳಿದ ಎರಡು ಪಕ್ಷಗಳು ಶೇ 22 ಮತ್ತು ಶೇ 21ರಷ್ಟು ಮತಗಳನ್ನು ಪಡೆಯಲಿದ್ದಾರೆ ಎಂದರು.

ಆಗ್ನೇಯ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ರಮೇಶ್ ಬಾಬು ಅವರು ಸ್ಪರ್ಧಿಸಿದ್ದು, ಅವರಲ್ಲಿರುವ ಸಾಮಾಜಿಕ ನ್ಯಾಯದ ಹಿನ್ನೆಲೆಯಲ್ಲಿ ಪದವೀಧರರು ಅವರಿಗೆ ಮತ ನೀಡಬೇಕು. ಅದೇ ರೀತಿರಾಜ್ಯದಲ್ಲಿ ನಡೆಯುತ್ತಿರುವ ಪದವೀಧರ ಹಾಗೂ ಶಿಕ್ಷಕರ ಕ್ಷೇತ್ರಗಳ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳಿಗೆ ಮತ ನೀಡುವ ಮೂಲಕ, ಮೇಲ್ಮನೆಯಲ್ಲಿ ಪ್ರಜ್ಞಾವಂತರನ್ನು ಆಯ್ಕೆ ಮಾಡುವಂತೆ ಮನವಿ ಮಾಡಿದರು.

ನಗರ ಪ್ರದೇಶದಲ್ಲಿ ಇಂದು ನಿರುದ್ಯೋಗ ಹೆಚ್ಚಳವಾಗಿದೆ, ಮೋದಿ ಸರ್ಕಾರ ಎರಡು ಕೋಟಿ ಉದ್ಯೋಗ ನೀಡುವ ಭರವಸೆ ಹುಸಿಯಾಗಿದೆ, ರಾಜ್ಯದಲ್ಲಿ ಬೇರೆಯವರಿಗೆ ಉದ್ಯೋಗ ಸಿಗುತ್ತಿದೆ ಆದರೆ ನಮ್ಮವರಿಗೆ ಉದ್ಯೋಗ ಇಲ್ಲದಂತಾಗಿದೆ ಎಂದರು.

ಕೊರೋನಾದಿಂದ ಉದ್ಯೋಗ ಕಳೆದುಕೊಂಡವರಿಗೆ ಪರ್ಯಾಯ ಉದ್ಯೋಗ ಕಲ್ಪಿಸಲು ಬಿಜೆಪಿ ಸರ್ಕಾರ ಮುಂದಾಗಲಿಲ್ಲ, ವೃತ್ತಿ ನಿರತಸಮುದಾಯವರಿಗೆ ಪರಿಹಾರ ವಿತರಿಸಲಿಲ್ಲ, ಶಿಕ್ಷಣ ಕ್ಷೇತ್ರ ಬಂದ್ ಆಗಿದ್ದು, ಶಿಕ್ಷಕರು ಭತ್ಯೆ ಇಲ್ಲದೆ ಸಂಕಷ್ಟದಲ್ಲಿದ್ದಾರೆ, ಶೇ 76 ರಷ್ಟು ಉದ್ಯೋಗ ನಷ್ಟ ರಾಜ್ಯದಲ್ಲಿ ಆದರೂ ಸರ್ಕಾರ ಕ್ರಮಕೈಗೊಳ್ಳುತ್ತಿಲ್ಲ ಎಂದು ದೂರಿದರು.

ಕಾಂಗ್ರೆಸ್ ಅಭ್ಯರ್ಥಿ ಟಿ.ಬಿ.ಜಯಚಂದ್ರ, ಕೆಪಿಸಿಸಿ ವಕ್ತಾರ ಬಿ.ಎನ್.ಚಂದ್ರಪ್ಪ, ಮುಖಡರಾದ ಸಂತೋಷ್ ಲಾಡ್, ಸತೀಶ್ ಸಾಸಲು, ಕಲ್ಕೆರೆ ರವಿಕುಮಾರ್ ಗೋಷ್ಠಿಯಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT