ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುರುವೇಕೆರೆ: ಗಣಿಗಾರಿಕೆ ವಿರೋಧಿಸಿ ರೈತರ ಪ್ರತಿಭಟನೆ

Published 8 ಮಾರ್ಚ್ 2024, 15:07 IST
Last Updated 8 ಮಾರ್ಚ್ 2024, 15:07 IST
ಅಕ್ಷರ ಗಾತ್ರ

ತುರುವೇಕೆರೆ: ಕೊಬಾಲ್ಟ್‌ ಹಾಗೂ ನಿಕಲ್‌ ಗಣಿಗಾರಿಕೆ ವಿರೋಧಿಸಿ ತಾಲ್ಲೂಕಿನ ಬಾಣಸಂದ್ರ, ದುಂಡಾ, ಕೋಡಿಹಳ್ಳಿ, ಕುಣಿಕೆನಹಳ್ಳಿ, ಬಲಮಾದಿಹಳ್ಳಿ, ರಂಗನಾಥಪುರ ಭೋವಿ ಕಾಲೊನಿ ರೈತರು ತಾಲ್ಲೂಕು ಕಚೇರಿ ಎದುರು ಗುರುವಾರ ಪ್ರತಿಭಟನೆ ನಡೆಸಿದರು.

ಪ್ರತಿಭಟನೆಯಲ್ಲಿ ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ದೊಡ್ಡಾಘಟ್ಟ ಚಂದ್ರೇಶ್ ಮಾತನಾಡಿ, ರೈತರು ಹಲವು ವರ್ಷಗಳಿಂದ ಕೃಷಿ ಮಾಡಿಕೊಂಡು ಜೀವನ ನಡೆಸುತ್ತಿದ್ದಾರೆ. ಯಾವುದೇ ಸರ್ಕಾರಗಳು ಗಣಿಗಾರಿಕೆ ನೆಪದಲ್ಲಿ ರೈತರನ್ನು ಒಕ್ಕಲೆಬ್ಬಿಸಬಾರದು ಎಂದರು.

ಸರ್ಕಾರಗಳು ರಾಷ್ಟ್ರೀಯ ಸಂಪತ್ತು ಗುರುತಿಸುವಿಕೆ ಕೆಲಸ ಮಾಡುತ್ತಿದೆ. ಗಣಿಗಾರಿಕೆ ಮಾಡುವ ಸ್ಥಳಗಳನ್ನು ಸರ್ಕಾರ ಸೂಕ್ಷ್ಮವಾಗಿ ಗಮನಿಸಬೇಕಿದೆ. ಈ ಗಣಿಗಾರಿಕೆಯಿಂದ ಕೂಲಿ ಕಾರ್ಮಿಕರು, ದಲಿತರು, ಬಡವರು, ರೈತರು ಭೂಮಿ ಕಳೆದುಕೊಂಡು ಬೀದಿಗೆ ಬರಬೇಕಾಗುತ್ತದೆ. ಪರಿಸರ, ಮರಗಿಡ, ಪ್ರಾಣಿ, ಪಕ್ಷಿ ನಾಶವಾಗುತ್ತವೆ ಎಂದು ಹೇಳಿದರು.

ಮುಖಂಡ ದುಂಡಸುರೇಶ್ ಮಾತನಾಡಿ, ಇಲ್ಲಿ ಗಣಿಗಾರಿಕೆ ಮಾಡಲು ಬಿಡುವುದಿಲ್ಲ. ಹೋರಾಟ ತೀವ್ರಗೊಳಿಸುತ್ತೇವೆ. ಸಂಸದರು, ಸಚಿವರನ್ನು ಭೇಟಿ ಮಾಡಿ ಗಣಿಗಾರಿಕೆ ನಿಲ್ಲಿಸುವರೆಗೂ ಹೋರಾಟ ಮಾಡುತ್ತೇವೆ ಎಂದರು.

ಸ್ಥಳಕ್ಕೆ ಬಂದ ಎ.ಸಿ.ಸಪ್ತಶ್ರೀ ಮಾತನಾಡಿ, ನಿಮ್ಮ ಅಹವಾಲು, ಆಕ್ಷೇಪಗಳನ್ನು ಸರ್ಕಾರಕ್ಕೆ ಕಳಿಸುತ್ತೇನೆ. ಕುಣಿಕೇನಹಳ್ಳಿ, ಬಲಮಾದಿಹಳ್ಳಿ ದುಂಡಾ ಗ್ರಾಮಗಳಲ್ಲಿ 500 ಎಕರೆ ವ್ಯಾಪ್ತಿಯಲ್ಲಿ ಕಂದಾಯ, ಹಿಡುವಳಿ, ಸರ್ಕಾರಿ ಜಮೀನು, ಕೆರೆ, ಕಟ್ಟೆ ಎಷ್ಟು ಎಂಬ ಮಾಹಿತಿ ಕೇಳಿದ್ದಾರೆ ಅಷ್ಟೇ. ಅದನ್ನು ಸಿದ್ಧ ಮಾಡಿದ್ದು, ಸರ್ಕಾರಕ್ಕೆ ನೀಡಬೇಕಿದೆ. ಗಣಿಗಾರಿಕೆ ಪ್ರಾರಂಭದ ಬಗ್ಗೆ ಸರ್ಕಾರದಿಂದ ಯಾವುದೇ ಮಾಹಿತಿ ಇಲ್ಲ ಎಂದು ಹೇಳಿದರು.

ತಹಶೀಲ್ದಾರ್ ವೈ.ಎಂ.ರೇಣುಕುಮಾರ್ ಇದ್ದರು.

ಪ್ರತಿಭಟನೆಯಲ್ಲಿ ವೆಂಕಟಾಪುರ ಪಾಟೀಲ, ಲಕ್ಷ್ಮೀದೇವಮ್ಮ, ರಾಜು, ಪ್ರಕಾಶ್, ಕುಣಿಕೇನಹಳ್ಳಿ ಈಶ್ವರಯ್ಯ, ಚಂದ್ರಣ್ಣ, ಚೇತನ್, ಭೋರೇಗೌಡ, ಕುಮಾರ್, ಪ್ರಕಾಶ್, ಶಿವಕುಮಾರ್, ಆನಂದಮರಿಯಾ ಸೇರಿದಂತೆ ಗ್ರಾಮಸ್ಥರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT