ಶುಕ್ರವಾರ, ಮೇ 27, 2022
23 °C

ತುಮಕೂರು: ರೈತರನ್ನು ಕಾಡುತ್ತಿರುವ ಮಳೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ತುಮಕೂರು: ಕಳೆದ ಎರಡು ದಿನಗಳಿಂದ ಬಿಡುವು ನೀಡಿದ್ದ ವರುಣ ಗುರುವಾರ ಮತ್ತೆ ಅಬ್ಬರಿಸಲು ಆರಂಭಿಸಿದೆ. ಬೆಳಿಗ್ಗೆ ಸೋನೆ ಬೀಳಲಾರಂಭಿಸಿದ್ದು, ಮಧ್ಯಾಹ್ನದ ನಂತರ ಬಿರುಸು ಪಡೆದುಕೊಂಡಿದೆ.

ಇಡೀ ದಿನ ಬೀಳುತ್ತಲೇ ಇದ್ದು, ಜನಜೀವನ ಅಸ್ತವ್ಯಸ್ತಗೊಂಡಿದ್ದು, ಬಹುತೇಕ ಚಟುವಟಿಕೆಗಳು ಸ್ತಬ್ಧಗೊಂಡಿ
ದ್ದವು. ಬೆಳಿಗ್ಗೆ ಸಣ್ಣ ಹನಿಗಳ ನಡುವೆಯೇ ಜನರು ತಮ್ಮ ಚಟುವಟಿಕೆಗಳನ್ನು ಆರಂಭಿಸಿದ್ದರು. ಮಧ್ಯಾಹ್ನ 3 ಗಂಟೆ ನಂತರ ಜೋರಾಗಿದ್ದು, ನೆನೆದುಕೊಂಡೇ ತೆರಳುತ್ತಿದ್ದ ದೃಶ್ಯ ಕಂಡು ಬಂತು. ಶಾಲೆ, ಕಾಲೇಜುಗಳಿಗೆ ತೆರಳಿದ್ದ ಮಕ್ಕಳು ಮನೆಗೆ ಮರಳಲು ಪರದಾಡಿದರು. ರಾತ್ರಿ ವೇಳೆಗೆ ಮತ್ತಷ್ಟು ಜೋರಾಗಿ ಸುರಿಯಲಾರಂಭಿಸಿತು.

ಸತತವಾಗಿ ಮಳೆಯಾಗುತ್ತಿರುವುದರಿಂದ ಕೃಷಿ ಚಟುವಟಿಕೆಗಳು ಸ್ಥಗಿತಗೊಂಡಿದ್ದು, ಬೆಳೆ ಹಾನಿ ಸಂಭವಿಸಿದೆ. ರಾಗಿ, ಜೋಳ, ಶೇಂಗಾ ಸೇರಿದಂತೆ ಕೊಯ್ಲಿಗೆ ಬಂದಿದ್ದ ಬೆಳೆಗಳು ಹಾಳಾಗಿವೆ. ಹೊಲ, ಗದ್ದೆಗಳಲ್ಲಿ ನೀರು ನಿಂತಿದ್ದು, ಏನೂ ಮಾಡಲಾಗದ ಅಸಹಾಯಕ ಸ್ಥಿತಿಯಲ್ಲಿ ರೈತರು ಒದ್ದಾಡುತ್ತಿದ್ದಾರೆ. ಕೈಗೆ ಬಂದ ತುತ್ತು ಬಾಯಿಗೆ ಬಾರದಾಗಿದೆ.

ಈ ಪ್ರಮಾಣದ ಮಳೆ ಕಂಡು ದಶಕ ಕಳೆದಿತ್ತು. ಈ ಬಾರಿ ಕೆರೆ, ಕಟ್ಟೆಗಳು ಬಹುತೇಕ ಭರ್ತಿಯಾಗಿದ್ದು, ಹಳ್ಳ, ಕೊಳ್ಳಗಳು ತುಂಬಿ ಹರಿಯುತ್ತಿವೆ. ಸಣ್ಣಪುಟ್ಟ ನದಿಗಳು ಮೈದುಂಬಿಕೊಂಡಿವೆ. ಇಷ್ಟು ದಿನಗಳ ಕಾಲ ಮಳೆ ಬಂದರೆ ಸಾಕು ಎನ್ನುತ್ತಿದ್ದವರು, ಈಗ ಯಾವಾಗ ನಿಲ್ಲುತ್ತದೆ ಎಂದು ಕಾಯುವಂತಾಗಿದೆ. ಅತಿಯಾದ ಮಳೆ ರೈತರನ್ನು ಕಾಡುತ್ತಿದ್ದು, ಸಾಕಪ್ಪ ಸಾಕು ಎನ್ನವಂತಾಗಿದೆ.

ಮಳೆ ವಿವರ: ಜಿಲ್ಲೆಯ ವಿವಿಧೆಡೆ ಕಳೆದ 24 ಗಂಟೆಗಳಲ್ಲಿ (ಗುರುವಾರ ಬೆಳಿಗ್ಗೆ ವರೆಗೆ) ಬಿದ್ದ ಮಳೆ ವಿವರ (ಮೀ.ಮೀ).

ತುಮಕೂರು ಊರ್ಡಿಗೆರೆ 5.1, ಬೆಳ್ಳಾವಿ 4.6, ನೆಲಹಾಳ್ 5.3, ಗುಬ್ಬಿ 4, ಹಾಗಲವಾಡಿ 5, ಕುಣಿಗಲ್ ತಾಲ್ಲೂಕು ಹುಲಿಯೂರುದುರ್ಗ 16.2, ಕೆ.ಎಚ್.ಹಳ್ಳಿ 10.2, ತಿಪಟೂರು 22.1, ನೊಣವಿನಕೆರೆ 11.4, ಹೊನ್ನವಳ್ಳಿ 10.4, ಹಾಲ್ಕುರಿಕೆ 3.2, ಚಿಕ್ಕನಾಯಕನಹಳ್ಳಿ ತಾಲ್ಲೂಕು ಸಿಂಗದಹಳ್ಳಿ 6.3 ಮಿ.ಮೀ, ತುರುವೇಕೆರೆ ತಾಲ್ಲೂಕು ದಬ್ಬೇಘಟ್ಟ 10.2, ಕೊರಟಗೆರೆ ತಾಲ್ಲೂಕು ಕೋಳಾಲ 2.4, ಹೊಳವನಹಳ್ಳಿ 7, ಪಾವಗಡ 4, ತಿರುಮಣಿ 10, ನಾಗಲಮಡಿಕೆ 17 ಮಿ.ಮೀ ಮಳೆಯಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು