ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾನು ಕುರುಬ ಸಮುದಾಯವನ್ನು ಮರೆತಿಲ್ಲ: ಸಿದ್ದರಾಮಯ್ಯ

ಜಿಲ್ಲಾ ಮಟ್ಟದ ಕುರುಬರ ಜಾಗೃತಿ ಸಮಾವೇಶದಲ್ಲಿ ಒಗ್ಗಟ್ಟಿನ ಮಂತ್ರ
Last Updated 28 ಮೇ 2022, 19:28 IST
ಅಕ್ಷರ ಗಾತ್ರ

ತುಮಕೂರು: ‘ನಾನು ಕುರುಬ ಜನಾಂಗದಲ್ಲಿ ಹುಟ್ಟಿದ್ದೇನೆ. ಈ ಸಮುದಾಯವನ್ನು ಮರೆತಿಲ್ಲ. ಜನಾಂಗಕ್ಕೆ ನ್ಯಾಯ ಕೊಡಿಸುವ ಕೆಲಸಮಾಡುತ್ತಿದ್ದೇನೆ. ನೀವು ನನ್ನ ಜತೆಯಲ್ಲಿರಿ. ಅಧಿಕಾರ ಇರಲಿ, ಇಲ್ಲದಿರಲಿ ನಿಮಗಾಗಿ ಹೋರಾಡುತ್ತೇನೆ’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ನೆರೆದಿದ್ದ ಸಮುದಾಯಕ್ಕೆ ವಾಗ್ದಾನ ಮಾಡಿದರು.

ನಗರ ಕಾಳಿದಾಸ ಕಾಲೇಜು ಮೈದಾನದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಕುರುಬರ ಜಾಗೃತಿಸಮಾವೇಶ ಉದ್ಘಾಟಿಸಿ ಮಾತನಾಡಿದರು.

‘ಕುರುಬರಿಗೆ ಏನು ಮಾಡಿದ್ದೇನೆ ಎಂದು ರಾಜಕೀಯ ವಿರೋಧಿಗಳು ಪ್ರಶ್ನಿಸುತ್ತಾರೆ. ನಾನು ಕುರುಬನಾಗಿ ಹುಟ್ಟಿದ್ದು, ಜನಾಂಗಕ್ಕೆ ನ್ಯಾಯ ಒದಗಿಸುವ ಕೆಲಸ ಮಾಡಿದ್ದೇನೆ. ನಿಮ್ಮ ಪಾಲು ನಿಮಗೆ ಕೊಡಿಸಿದ್ದೇನೆ. ಸಾಮಾಜಿಕ ನ್ಯಾಯದಿಂದ ವಂಚಿತರಾಗಿರುವ ಇತರೆ ಹಿಂದುಳಿದ ಸಮುದಾಯಗಳಿಗೂ ನ್ಯಾಯ ಕೊಡಿಸುವುದು ನನ್ನ ಜವಾಬ್ದಾರಿಯಾಗಿದೆ. ಧ್ವನಿ ಇಲ್ಲದ ಜಾತಿ, ಸಮುದಾಯದ ಜನರಿಗೂ ಶಕ್ತಿಯಾಗಿ ಕೆಲಸ ಮಾಡುತ್ತಿದ್ದೇನೆ. ಇದು ನನ್ನ ಜವಾಬ್ದಾರಿ, ಕರ್ತವ್ಯ ಸಹ ಆಗಿದೆ. ಸಾಮಾಜಿಕ ನ್ಯಾಯ ಕೊಡಿಸುವಲ್ಲಿ ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ’ ಎಂದು ತಮ್ಮನ್ನು ಟೀಕಿಸುವವರಿಗೆ ವೇದಿಕೆ ಮೂಲಕ ಉತ್ತರ ನೀಡಿದರು.

ಕಾಂಗ್ರೆಸ್ ಬೆಂಬಲಿಸಿ: ಬಿಜೆಪಿ, ಜೆಡಿಎಸ್‌ ಪಕ್ಷದವರು ಹಿಂದುಳಿದ ವರ್ಗದವರನ್ನು ಮುಖ್ಯಮಂತ್ರಿ ಮಾಡುವುದಿಲ್ಲ. ಆ ಪಕ್ಷಗಳಲ್ಲಿ ಸಾಮಾಜಿಕ ನ್ಯಾಯ ಸಿಗುವುದಿಲ್ಲ. ಅವರ ಮಾತನ್ನು ಕೇಳಬೇಡಿ. ಮುಂದಿನ ಚುನಾವಣೆಯಲ್ಲಿ ನನ್ನ ಜತೆ ನಿಂತು ಕಾಂಗ್ರೆಸ್‌ಗೆ ಮತ ಹಾಕಬೇಕು. ಮತ್ತೊಮ್ಮೆ ಅಧಿಕಾರಕ್ಕೆ ಬಂದರೆ ನಿಮಗೆ ಒಳ್ಳೆಯದಾಗುತ್ತದೆ’ ಎಂದು ಸಲಹೆ ಮಾಡಿದರು.

ವಿಧಾನ ಪರಿಷತ್ ಮಾಜಿ ಸದಸ್ಯ ಎಚ್.ಎಂ.ರೇವಣ್ಣ ಅವರು, ‘ಪರಿಶಿಷ್ಟರು, ಹಿಂದುಳಿದವರಿಗೆ ಒಂದಾದ ಮೇಲೆ ಒಂದು ಕಷ್ಟವನ್ನು ಬಿಜೆಪಿಯವರು ಕೊಡುತ್ತಲೇ ಇದ್ದಾರೆ.

ಈ ಸಮುದಾಯಗಳಿಗೆ ಸಿಗುತ್ತಿದ್ದ ಸೌಲಭ್ಯಗಳನ್ನು ಕಡಿತ ಮಾಡಲಾಗಿದೆ. ಸ್ಥಳೀಯ ಸಂಸ್ಥೆಗಳಲ್ಲಿ ರಾಜಕೀಯ ಮೀಸಲಾತಿ ನೀಡುವ ವಿಚಾರದಲ್ಲೂ ಗೊಂದಲ ಸೃಷ್ಟಿಸಿ, ಲಾಭ ಮಾಡಿಕೊಳ್ಳುವ ಪ್ರಯತ್ನ ನಡೆದಿದೆ’ ಎಂದು ಆರೋಪಿಸಿದರು.

ಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೆ.ಎನ್.ರಾಜಣ್ಣ, ‘ಪರಿಶಿಷ್ಟರು, ಹಿಂದುಳಿದವರಿಗೆ ನೀಡುತ್ತಿರುವ ಮೀಸಲಾತಿ ತೆಗೆಯುವ ಪ್ರಯತ್ನ ನಡೆದಿದೆ. ಒಂದು ವೇಳೆ ಮೀಸಲಾತಿ ನಿಲ್ಲಿಸಿದರೆ ರಾಜ್ಯದಲ್ಲಿ ಕ್ರಾಂತಿಯಾಗಲಿದೆ’ ಎಂದು ಎಚ್ಚರಿಸಿದರು.

ವೇದಿಕೆಯಲ್ಲಿ ಮಾಜಿ ಶಾಸಕ ಜೆಡಿಎಸ್‌ನ ಸುರೇಶ್‌ಬಾಬು ಹೆಸರು ಹೇಳದಿರುವುದಕ್ಕೆ ಅವರ ಬೆಂಬಲಿಗರು ಆಕ್ಷೇಪ ವ್ಯಕ್ತಪಡಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಅವರು, ‘ಕಾಂಗ್ರೆಸ್‌ಗೆ ಬಂದು ಸ್ಪರ್ಧೆ ಮಾಡಲು ಸುರೇಶ್‌ಬಾಬುಗೆ ಹೇಳಿ. ಸಿದ್ದರಾಮಯ್ಯ ಹಿಂದೆ ಇರುವವರ ಹೆಸರನ್ನು ಮಾತ್ರ ಹೇಳಲಾಗುತ್ತದೆ. ಅವರಜತೆಗೆ ಇರದಿದ್ದರೆ ಯಾರ ಹೆಸರನ್ನೂ ಹೇಳುವುದಿಲ್ಲ. ಕೂಗಾಡುವುದರಲ್ಲಿ ಅರ್ಥವಿಲ್ಲ. ಸಿದ್ದರಾಮಯ್ಯ ಯಾವ ಪಕ್ಷದಲ್ಲಿ ಇದ್ದರೂ ಕುರುಬರು ಬೆಂಬಲಿಸಬೇಕು’ ಎಂದರು.

ಶಾಸಕ ಬೈರತಿ ಸುರೇಶ್, ‘ಸಿದ್ದರಾಮಯ್ಯ ಮತ್ತೆ ಮುಖ್ಯಮಂತ್ರಿಯಾಗಬೇಕು. ಅವರ ಜತೆಯಲ್ಲಿ ಇದ್ದವರಿಗೆ ಮಾತ್ರ ಸಮುದಾಯದ ಬೆಂಬಲ ಇರುತ್ತದೆ. ಆಗಸ್ಟ್ 3ರಂದು ದಾವಣಗೆರೆಯಲ್ಲಿ 10 ಲಕ್ಷ ಜನರನ್ನು ಸೇರಿಸಿ ಸಿದ್ದರಾಮಯ್ಯ ಹುಟ್ಟುಹಬ್ಬ ಆಚರಿಸಲಾಗುತ್ತದೆ’ ಎಂದು ಅವರು ಹೇಳಿದರು.

‘ಸಮುದಾಯದ ಶಕ್ತಿ ಪ್ರದರ್ಶನ’
ದಶಕಗಳ ನಂತರ ನಗರದಲ್ಲಿ ಕುರುಬ ಸಮುದಾಯದ ಶಕ್ತಿ ಪ್ರದರ್ಶನ ನಡೆಯಿತು. ಒಗ್ಗಟ್ಟಿನ ಮೂಲಕ ತಮ್ಮ ‘ಶಕ್ತಿ’ ತೋರ್ಪಡಿಸಿದರು. ಸಮಾವೇಶ ಸಂಘಟಿಸಿ ಜಿಲ್ಲೆಯಲ್ಲಿ ಒಟ್ಟುಗೂಡಿಸುವ ಪ್ರಯತ್ನ ಕಂಡುಬಂತು. ಸಮಾವೇಶದಿಂದ ಒಂದು ‘ಸಂದೇಶ’ ರವಾನಿಸಲಾಯಿತು.

ಜಿಲ್ಲೆಯ ಎಲ್ಲಾ ತಾಲ್ಲೂಕು, ವಿವಿಧೆಡೆಗಳಿಂದಲೂ ಜನರು ಬಂದಿದ್ದರು. ಕಾರ್ಯಕ್ರಮ ನಡೆದ ಕಾಳಿದಾಸ ಕಾಲೇಜು ಆವರಣ ಭರ್ತಿಯಾಗಿ ಹೊರಗೂ ಜನರು ನಿಂತಿದ್ದರು. 2005ರಲ್ಲಿ ನಡೆದ ಅಹಿಂದ ಸಮಾವೇಶವನ್ನು ಹೊರತುಪಡಿಸಿದರೆ, ಈಗ ಕುರುಬರ ಜಾತಿ ಸಮಾವೇಶ ಸಂಘಟಿಸಲಾಗಿತ್ತು. ಮುಂದಿನ ಚುನಾವಣೆಯ ಪ್ರಚಾರಕ್ಕೆ ಮುನ್ನುಡಿ ಬರೆದಂತಿತ್ತು.

'ಬಿಜೆಪಿ ಸರ್ಕಾರದಿಂದ ಕುರುಬ ಸಮುದಾಯಕ್ಕೆ ಅನ್ಯಾಯ'
ಬಿಜೆಪಿ ನೇತೃತ್ವದ ಸರ್ಕಾರದಿಂದ ಕುರುಬ ಸಮುದಾಯಕ್ಕೆ ಸಾಕಷ್ಟು ಅನ್ಯಾಯವಾಗಿದೆ. ಇದನ್ನು ನೋಡಿಕೊಂಡು ಸುಮ್ಮನೆ ಕುಳಿತುಕೊಳ್ಳಬಾರದು ಎಂದು ರಾಜ್ಯ ಕುರುಬರ ಸಂಘದ ಮಾಜಿ ಪ್ರಧಾನ ಕಾರ್ಯದರ್ಶಿ ರಾಮಚಂದ್ರಪ್ಪ ಸಮುದಾಯದ ಜನರನ್ನು ಎಚ್ಚರಿಸಿದರು.

‘ನಮಗೆ ಆಗಿರುವ ಅನ್ಯಾಯದ ಕೂಗನ್ನು ಮುಟ್ಟಿಸಬೇಕಿದೆ. ಸಮುದಾಯದ ವಿದ್ಯಾರ್ಥಿಗಳಿಗೆ ನೀಡುತ್ತಿದ್ದ ವಿದ್ಯಾರ್ಥಿ ವೇತನ ನಿಲ್ಲಿಸಲಾಗಿದೆ. ಹಿಂದುಳಿದ ವರ್ಗಗಳ ಮಕ್ಕಳಿಗೆ ಅನುಕೂಲವಾಗಿದ್ದ ವಿದ್ಯಾಸಿರಿ ಯೋಜನೆ ಮುಂದುವರಿಸಿಲ್ಲ. ಗಂಗಾ ಕಲ್ಯಾಣ, ಕುರುಬ ಸಮುದಾಯ ಭವನ ನಿರ್ಮಾಣಕ್ಕೆ ಅನುದಾನ ಕೊಡುತ್ತಿಲ್ಲ. ನಮಗೆ ಸಿಗುತ್ತಿದ್ದ ಸೌಲಭ್ಯಗಳನ್ನು ಕಿತ್ತುಕೊಳ್ಳುತ್ತಿದೆ. ಇದೇ ಪರಿಸ್ಥಿತಿ ಮುಂದುವರಿದು, ನಾವು ಸಹ ನಿರ್ಲಕ್ಷ್ಯಿಸಿದರೆ 70 ವರ್ಷ ಹಿಂದಕ್ಕೆ ಹೋಗುತ್ತೇವೆ. ಈ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಸಮಾವೇಶ ನಡೆಸುತ್ತಿದ್ದೇವೆ’ ಎಂದರು.

ಬಿಜೆಪಿ ಸರ್ಕಾರದಿಂದಾಗಿ ಹಿಂದುಳಿದವರಿಗೆ ರಾಜಕೀಯ ಮೀಸಲಾತಿಗೂ ಕಂಟಕ ಬಂದಿದೆ. ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಸೇರಿದಂತೆ ಸ್ಥಳೀಯ ಸಂಸ್ಥೆಗಳಲ್ಲಿ ರಾಜಕೀಯ ಮೀಸಲಾತಿ ಸಿಗದಂತೆ ಮಾಡುವ ಹುನ್ನಾರ ನಡೆದಿದೆ. ಮುಂದಿನ ದಿನಗಳಲ್ಲಿ ಪರಿಶಿಷ್ಟರು, ಹಿಂದುಳಿದವರಿಗೆ ಮೀಸಲಾತಿ ಇಲ್ಲವಾಗಿಸುತ್ತಾರೆ. ಅದಕ್ಕಾಗಿ ಹೋರಾಟ ನಡೆಸಬೇಕು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT