ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುರುವೇಕೆರೆಯಿಂದ ಎಎಪಿ ಅಭ್ಯರ್ಥಿಯಾಗಿ ನಟ ಟೆನ್ನಿಸ್‌ ಕೃಷ್ಣ ಸ್ಪರ್ಧೆ

ಮೊದಲ ಚುನಾವಣೆ ಎದುರಿಸಲು ಸಿದ್ಧತೆ, ಎಎಪಿಯ ಪ್ರಬಲ ಆಕಾಂಕ್ಷಿ
Last Updated 16 ಫೆಬ್ರುವರಿ 2023, 15:04 IST
ಅಕ್ಷರ ಗಾತ್ರ

ತುಮಕೂರು: ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ತುರುವೇಕೆರೆ ವಿಧಾನಸಭಾ ಕ್ಷೇತ್ರದಿಂದ ಆಮ್‌ ಆದ್ಮಿ ಪಕ್ಷದ ಅಭ್ಯರ್ಥಿಯಾಗಿ ಹಾಸ್ಯ ನಟ ಟೆನ್ನಿಸ್ ಕೃಷ್ಣ ಸ್ಪರ್ಧಿಸಲಿದ್ದಾರೆ.

ಕಳೆದ ವರ್ಷದ ಆಗಸ್ಟ್‌ನಲ್ಲಿ ಟೆನ್ನಿಸ್ ಕೃಷ್ಣ ಎಎಪಿ ಸೇರ್ಪಡೆಯಾಗುವ ಮೂಲಕ ರಾಜಕೀಯ ಪ್ರವೇಶಿಸಿದ್ದರು. ತುರುವೇಕೆರೆ ಕ್ಷೇತ್ರದಿಂದ ಮೊದಲ ಚುನಾವಣೆ ಎದುರಿಸಲು ತಯಾರಿ ನಡೆಸಿದ್ದಾರೆ. ನಟ, ರಾಜ್ಯಸಭಾ ಸದಸ್ಯ ಜಗ್ಗೇಶ್‌ ನಂತರ ಮತ್ತೊಬ್ಬ ಸಿನಿಮಾ ನಟ ತುರುವೇಕೆರೆಯತ್ತ ದೃಷ್ಟಿ ನೆಟ್ಟಿದ್ದಾರೆ.

‘ಈ ಹಿಂದೆ ಚುನಾವಣೆ ಸಮಯದಲ್ಲಿ ತುರುವೇಕೆರೆ ಕ್ಷೇತ್ರದಲ್ಲಿ ಪ್ರಚಾರ ಮಾಡಿದ ಅನುಭವ ಇದೆ. ಕಾಂಗ್ರೆಸ್, ಬಿಜೆಪಿಯಿಂದ ಆಹ್ವಾನ ಬಂದರೂ ನಾನು ಹೋಗಲಿಲ್ಲ. ಎಎಪಿ ಮೂಲಕ ಬಡ ಕಲಾವಿದರ ಅಭಿವೃದ್ಧಿಗೆ ಶ್ರಮಿಸಲಾಗುವುದು’ ಎಂದು ನಗರದಲ್ಲಿ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಟೆನ್ನಿಸ್‌ ಕೃಷ್ಣ ಹೇಳಿದರು.

ರಂಗಭೂಮಿ ಕಲಾವಿದರು ಮತ್ತು ಸಿನಿಮಾದಲ್ಲಿನ ಪೋಷಕ ನಟರು ಅಗತ್ಯ ಸೌಲಭ್ಯಗಳು ಇಲ್ಲದೆ ಪರದಾಡುತ್ತಿದ್ದಾರೆ. ವಾಸಕ್ಕೆ ಯೋಗ್ಯವಾದ ನಿವಾಸ, ಶೌಚಾಲಯಗಳ ವ್ಯವಸ್ಥೆಯೂ ಇಲ್ಲ. ಎಎಪಿ ಮೂಲಕ ಅಗತ್ಯ ಸೌಕರ್ಯಗಳನ್ನು ಒದಗಿಸುವ ಉದ್ದೇಶವಿದೆ. ಕಷ್ಟದಲ್ಲಿರುವ ರಂಗಭೂಮಿ ಕಲಾವಿದರ ಮಕ್ಕಳ ವಿದ್ಯಾಭ್ಯಾಸ, ಕಲಾವಿದರ ಆರೋಗ್ಯಕ್ಕೆ ಇಲ್ಲಿಯವರೆಗೆ ನಮ್ಮಿಂದ ಸಾಧ್ಯವಾದಷ್ಟು ಸಹಾಯ ಮಾಡಿದ್ದೇವೆ ಎಂದರು.

ಜೆಡಿಎಸ್‌, ಕಾಂಗ್ರೆಸ್‌, ಬಿಜೆಪಿ ಸರ್ಕಾರಗಳಿಂದ ಕಲಾವಿದರಿಗೆ ಯಾವುದೇ ನೆರವು ದೊರೆಯುತ್ತಿಲ್ಲ. ಎಲ್ಲ ಪಕ್ಷಗಳಲ್ಲಿ ಇರುವ ಸಿನಿಮಾ ನಟರೂ ಕೂಡ ಉಳಿದ ಕಲಾವಿದರಿಗೆ ಅಗತ್ಯ ಸೌಲಭ್ಯ ನೀಡಲು ಆಸಕ್ತಿ ತೋರುತ್ತಿಲ್ಲ. ಕಷ್ಟದಲ್ಲಿರುವ ಕಲಾವಿದರಿಗೆ ನೆರವಾಗುವ ನಿಟ್ಟಿನಲ್ಲಿ ಮುಂದಡಿ ಇಡಲಾಗುವುದು ಎಂದು ತಿಳಿಸಿದರು.

ಎಎಪಿ ಜಿಲ್ಲಾ ಘಟಕದ ಅಧ್ಯಕ್ಷ ಪ್ರೇಮ್‌ಕುಮಾರ್‌, ನಗರ ಘಟಕದ ಅಧ್ಯಕ್ಷ ಮುನೀರ್‌ಅಹ್ಮದ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಿಜಾಮುದ್ದೀನ್‌ ಇದ್ದರು.

**

‘ಪೊರಕೆಯೇ ಪರಿಹಾರ’ ಅಭಿಯಾನ

ರಾಜ್ಯದ 224 ಕ್ಷೇತ್ರಗಳಲ್ಲಿ ಆಮ್‌ ಆದ್ಮಿ ಪಕ್ಷದಿಂದ ‘ಪೊರಕೆಯೇ ಪರಿಹಾರ’ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಬುಧವಾರ ಬೆಂಗಳೂರಿನಲ್ಲಿ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ. ಶುಕ್ರವಾರದಿಂದ ರಾಜ್ಯದ ಎಲ್ಲ ತಾಲ್ಲೂಕುಗಳಲ್ಲಿ ಅಭಿಯಾನದ ನಿಮಿತ್ತ ವಿವಿಧ ಕಾರ್ಯಕ್ರಮಗಳು ನಡೆಯಲಿವೆ. ಆ ಮೂಲಕ ಜನರನ್ನು ಜಾಗೃತಗೊಳಿಸಲಾಗುವುದು ಎಂದು ಎಎಪಿ ರಾಜ್ಯ ಘಟಕದ ಉಪಾಧ್ಯಕ್ಷ ಡಾ.ವಿಶ್ವನಾಥ್‌ ಮಾಹಿತಿ ನೀಡಿದರು.

ಟೆನ್ನಿಸ್‌ ಕೃಷ್ಣ ಅವರು ಜಿಲ್ಲೆಯಿಂದ ಸ್ಪರ್ಧಿಸಲು ತಯಾರಿ ನಡೆಸುತ್ತಿದ್ದಾರೆ. ಇನ್ನೂ ಟಿಕೆಟ್‌ ಅಂತಿಮವಾಗಿಲ್ಲ. ಪ್ರಬಲ ಆಕಾಂಕ್ಷಿಯಾಗಿದ್ದಾರೆ. ಎಲ್ಲ ಕಡೆಗಳಲ್ಲಿ ಪಕ್ಷದ ಅಭ್ಯರ್ಥಿಗಳು ಪ್ರಬಲ ಸ್ಪರ್ಧೆ ಒಡ್ಡಲಿದ್ದಾರೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT