ನಾಮಪತ್ರ ಸಲ್ಲಿಕೆಗೆ ಕೊನೆ ದಿನವಾದರೂ ಕೈ ಸೇರದ ‘ಬಿ.ಫಾರಂ’

7
ಟಿಕೆಟ್ ಖಾತ್ರಿ ಇಲ್ಲದೆಯೇ ಬಡಾವಣೆಗಳಲ್ಲಿ ಓಡಾಡಿ ಮತಯಾಚಿಸುತ್ತಿರುವ ಪ್ರಮುಖ ಪಕ್ಷಗಳ ಆಕಾಂಕ್ಷಿಗಳು

ನಾಮಪತ್ರ ಸಲ್ಲಿಕೆಗೆ ಕೊನೆ ದಿನವಾದರೂ ಕೈ ಸೇರದ ‘ಬಿ.ಫಾರಂ’

Published:
Updated:
Deccan Herald

ತುಮಕೂರು: ನಾಮಪತ್ರ ಸಲ್ಲಿಕೆಗೆ ಕೊನೆ ದಿನವಾದರೂ (ಆ.20) ಪ್ರಮುಖ ರಾಜಕೀಯ ಪಕ್ಷಗಳ ಅಭ್ಯರ್ಥಿಗಳಿಗೆ ಟಿಕೆಟ್ ಹಂಚಿಕೆ ಹಗ್ಗ ಜಗ್ಗಾಟ ಮುಂದುವರಿದಿದೆ. ಈ ಕಸರತ್ತು ಸೋಮವಾರ ಕೊನೆಯ ಕ್ಷಣದವರೆಗೂ ಇರಲಿದೆ.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ ಪರ ಕೆಲಸ ಮಾಡದೆ ಬೆನ್ನು ತೋರಿಸಿದ್ದವರಿಗೆ ಟಿಕೆಟ್ ಖಾತ್ರಿ ಪಡಿಸದೆ ಬಿಸಿ ಮುಟ್ಟಿಸಲಾಗುತ್ತಿದೆ.

ಪಕ್ಷದ ಪರ ಯಾರು ಕೆಲಸ ಮಾಡಿಲ್ಲವೊ ಅಂತಹವರಿಗೆ ಟಿಕೆಟ್ ನಿರಾಕರಿಸಿದ್ದಾರೆ. ಆದರೆ, ಆಕಾಂಕ್ಷಿಗಳು ಮಾತ್ರ ನಾಯಕರ ದುಂಬಾಲು ಬೀಳುತ್ತಲೇ ಇದ್ದಾರೆ. ಮೀಸಲಾತಿ ಬದಲಾವಣೆಯಿಂದ ಹಾಲಿ ಸದಸ್ಯರು ಬೇರೆ ಕಡೆ ಸ್ಪರ್ಧಿಸಲು ಮುಂದಾಗಿದ್ದಾರೆ. ಕೆಲವು ಕಡೆ ಪತ್ನಿಯರನ್ನು ಕಣಕ್ಕಿಳಿಸಲು ತಂತ್ರ ರೂಪಿಸುತ್ತಿದ್ದಾರೆ. 

ಹಾಲಿ ಸದಸ್ಯರು ತಮ್ಮ ವಾರ್ಡಿನಲ್ಲಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಎಷ್ಟು ಮತ ಹಾಕಿಸಿದ್ದಾರೆ ಎಂಬುದರ ಆಧಾರದ ಮೇಲೆ ಟಿಕೆಟ್ ಹಂಚಿಕೆ ಮಾಡಲು ಮಾಜಿ ಶಾಸಕ ರಫೀಕ್ ಅಹಮ್ಮದ್ ಮುಂದಾಗಿದ್ದಾರೆ. ಬಿಜೆಪಿ ಪರವಾಗಿ ಪ್ರಚಾರ ನಡೆಸಿದ ಕಾಂಗ್ರೆಸ್ ಮುಖಂಡರಿಗೆ ಟಿಕೆಟ್ ನೀಡದಿರಲು ನಿರ್ಧರಿಸಿದ್ದಾರೆ ಎನ್ನುತ್ತವೇ ಆ ‍ಪಕ್ಷದ ಮೂಲಗಳು.

ಬಿಜೆಪಿಗೆ ಹಳಬರು ಹೊಸಬರ ಸಮಸ್ಯೆ:  ಬಿಜೆಪಿಯಲ್ಲಿ ಮೂಲಕಾರ್ಯಕರ್ತರು, ಹೊಸದಾಗಿ ಸೇರ್ಪಡೆಯಾದವರು ಟಿಕೆಟ್‌ಗೆ ಪೈಪೋಟಿ ನಡೆಸಿದ್ದಾರೆ. ಹಳಬರು, ಹೊಸಬರ ಈ ಆಟ ಶಾಸಕ ಜಿ.ಬಿ.ಜ್ಯೋತಿಗಣೇಶ್ ಅವರಿಗೆ ತಲೆನೋವಾಗಿದೆ.

ಶಾಸಕರು, ಮಾಜಿ ಸಂಸದ ಜಿ.ಎಸ್.ಬಸವರಾಜು ಹಾಗೂ ಪಕ್ಷದ ಮುಖಂಡರ ಮುಂದೆಯೇ ಎರಡೂ ಬಣದವರು ಟಿಕೆಟ್‌ಗಾಗಿ ಏರು ಧ್ವನಿಯಲ್ಲಿ ಅಬ್ಬರಿಸಿದ್ದಾರೆ. ಆಕಾಂಕ್ಷಿಗಳನ್ನು ಸಮಾಧಾನ ಮಾಡುವ ಹೊಣೆ ಜಿ.ಎಸ್.ಬಸವರಾಜು ಅವರ ಹೆಗಲಿಗೇರಿದೆ.

ಪಾಲಿಕೆಯಲ್ಲಿ ಬಿಜೆಪಿ ಸ್ವತಂತ್ರವಾಗಿ ಅಧಿಕಾರದ ಗದ್ದುಗೆ ಹಿಡಿಯಬೇಕು ಎಂಬ ಬಯಕೆ ಶಾಸಕರಿಗೆ ಇದ್ದಷ್ಟೇ ಪಾಲಿಕೆ ಸದಸ್ಯರಾಗಬೇಕು ಎಂಬ ಬಯಕೆ ಅವರ ಬೆಂಬಲಿಗರಿಗೆ ಇದೆ. ಇದೆಲ್ಲವೂ ಟಿಕೆಟ್‌ ಅಂತಿಮಗೊಳಿಸುವುದು ಕಗ್ಗಂಟಾಗಿದೆ. ಯಾರ‍್ಯಾರು ಆಕಾಂಕ್ಷಿಗಳಿದ್ದಾರೊ ಅವರೆಲ್ಲ ಹೋಗಿ ನಾಮಪತ್ರ ಸಲ್ಲಿಸುತ್ತಿದ್ದಾರೆ. ಆದರೆ ಪಕ್ಷ ಅಧಿಕೃತವಾಗಿ ಬಿ.ಫಾರಂ ನೀಡಿಲ್ಲ.

ಜೆಡಿಎಸ್‌ನಲ್ಲಿ ಹೊಸಬರಿಗೆ ಮಣೆ

ಜೆಡಿಎಸ್‌ ಈ ಬಾರಿ 3–4 ಜನ ಹಾಲಿ ಸದಸ್ಯರಿಗೆ ಟಿಕೆಟ್ ಕೊಟ್ಟಿದೆ. 30 ವಾರ್ಡ್‌ಗಳಲ್ಲಿ ಹೊಸಮುಖಗಳನ್ನು ಕಣಕ್ಕಿಳಿಸಲು ಮುಖಂಡರು ತೀರ್ಮಾನಿಸಿದ್ದಾರೆ. ‘ಹಣ ಬಲ್ಲ ಮತ್ತು ವರ್ಚಸ್ಸು ಇಲ್ಲದವರಿಗೆ ಟಿಕೆಟ್ ನೀಡಲಾಗುತ್ತಿದೆ. ದಶಕಗಳ ಕಾಲ ಪಕ್ಷಕ್ಕೆ ಕೆಲಸ ಮಾಡಿದ, ನಿರ್ದಿಷ್ಟ ವಾರ್ಡ್‌ಗೆ ಟಿಕೆಟ್‌ ಕೇಳಿದ ನಿಷ್ಠಾವಂತ ಕಾರ್ಯಕರ್ತರನ್ನು ಕಡೆಗಣಿಸಲಾಗಿದೆ’ ಎಂಬ ಅಸಮಾಧಾನ ಟಿಕೆಟ್ ವಂಚಿತರಲ್ಲಿ ಎದ್ದು ಕಾಣುತ್ತಿದೆ.

ಅನಾರೋಗ್ಯ ಕಾರಣದಿಂದ ಜೆಡಿಎಸ್ ಜಿಲ್ಲಾ ಘಟಕ ಅಧ್ಯಕ್ಷ ಸಿ.ಚನ್ನಿಗಪ್ಪ ಟಿಕೆಟ್‌ ಹಂಚಿಕೆಯನ್ನು ಸಚಿವ ಎಸ್.ಆರ್.ಶ್ರೀನಿವಾಸ್ ಹಾಗೂ ಪಕ್ಷದ ಪ್ರಧಾನ ಕಾರ್ಯದರ್ಶಿ ಗೋವಿಂದರಾಜ್ ಅವರಿಗೆ ಒಪ್ಪಿಸಿದ್ದಾರೆ. 

ಜೆಡಿಎಸ್ ಪಕ್ಷ ಗರಿಷ್ಠ ಸ್ಥಾನಗಳನ್ನು ಗೆದ್ದು ಅಧಿಕಾರ ಹಿಡಿಯಬೇಕು. ಅಂತಹವರಿಗೆ ಟಿಕೆಟ್ ಕೊಡಿ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಸೂಚಿಸಿದ್ದಾರೆ. ಆದರೆ, ಈ ಇಬ್ಬರು ಮುಖಂಡರು ಕೇವಲ 10 ಸ್ಥಾನ ಗೆದ್ದರೆ ಸಾಕು. ಕಾಂಗ್ರೆಸ್ ಜತೆ ಕೈ ಜೋಡಿಸಿ ಮೈತ್ರಿ ಮಾಡಿಕೊಂಡು ಅಧಿಕಾರ ಹಿಡಿಯಬಹುದು ಎಂಬ ಲೆಕ್ಕಾಚಾರದಲ್ಲಿ ಟಿಕೆಟ್ ಕೊಡಲು ನಿರ್ಧರಿಸಿದಂತಿದೆ ಎಂದು ಟಿಕೆಟ್ ವಂಚಿತ ಪಕ್ಷದ ಮುಖಂಡರು ಅಳಲು ತೋಡಿಕೊಂಡರು.

ಜೆಡಿಎಸ್‌ನಿಂದ ಮಾಜಿ ಮೇಯರ್‌ಗಳಾದ ರವಿಕುಮಾರ್, ಲಲಿತಾ ರವೀಶ್, ಮಾಜಿ ಉಪಮೇಯರ್ ಟಿ.ಆರ್.ನಾಗರಾಜ್, ಸದಸ್ಯ ರಾಮಕೃಷ್ಣ ಸೇರಿ 5 ಜನರಿಗೆ ಮಾತ್ರ ಟಿಕೆಟ್ ಕೊಡಲಾಗಿದೆ.  

 

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !