ಗುರುವಾರ , ಸೆಪ್ಟೆಂಬರ್ 23, 2021
24 °C
ಸಹಜಲ ಶ್ರಮದಾನ ಕಾರ್ಯಕ್ರಮದಲ್ಲಿ ಶಾಸಕ ಎಂ.ವಿ.ವೀರಭದ್ರಯ್ಯ ಸಲಹೆ

ಮಧುಗಿರಿ: ಮಳೆ ನೀರು ಸಂಗ್ರಹ ಆದ್ಯತೆಯಾಗಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಧುಗಿರಿ: ವ್ಯವಸಾಯ ಹಾಗೂ ರೈತ ಉಳಿಯಬೇಕಾದರೆ ಎಲ್ಲರೂ ಪರಿಸರ ಸಂರಕ್ಷಿಸಬೇಕು ಎಂದು ಶಾಸಕ ಎಂ.ವಿ.ವೀರಭದ್ರಯ್ಯ ಹೇಳಿದರು.

ತಾಲ್ಲೂಕಿನ ದೊಡ್ಡೇರಿ ಹೋಬಳಿಯ ಬೋರಾಗುಂಟೆಯಲ್ಲಿ ತುಮಕೂರು ವಿಜ್ಞಾನ ಕೇಂದ್ರ ಮತ್ತು ಗಾಂಧಿ ಸಹಜ ಬೇಸಾಯ ಆಶ್ರಮದಿಂದ ಭಾನುವಾರ ಹಮ್ಮಿಕೊಂಡಿದ್ದ ಸಹಜಲ ಶ್ರಮದಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಮಳೆ ನೀರನ್ನು ಇಂಗಿಸಲು ರೈತರು ಹೆಚ್ಚಿನ ಆದ್ಯತೆ ನೀಡಬೇಕು. ನೀರು ಇಂಗಿಸುವ ಸಲುವಾಗಿ ಈಗಾಗಲೇ ಚೆಕ್ ಡ್ಯಾಂಗಳನ್ನು ನಿರ್ಮಿಸಲಾಗುತ್ತಿದೆ. ಇದರಿಂದ ಅಂತರ್ಜಲ ವೃದ್ಧಿಗೆ ಸಹಕಾರಿಯಾಗುತ್ತದೆ ಎಂದರು.

ಎ.ಎಂ.ಕಾವಲ್‌ನಲ್ಲಿ ಜವಳಿ ಪಾರ್ಕ್ ನಿರ್ಮಾಣಕ್ಕೆ ಸರ್ವೆ ಮಾಡಲಾಗುತ್ತಿದೆ ಎಂಬ ಮಾತು ಕೇಳಿ ಬಂದಿವೆ. ಕೈಗಾರಿಕಾ ಘಟಕಗಳು ಆದರೆ ಉದ್ಯೋಗ ಸೃಷ್ಟಿಯಾಗುತ್ತದೆ. ಎ.ಎಂ.ಕಾವಲ್ ಸ್ಥಳವನ್ನು ಹೈನುಗಾರಿಕೆಗೆ ಮೀಸಲಿಡಬೇಕು ಎನ್ನುವುದು ರೈತರು ಹಾಗೂ ಈ ಭಾಗದ ಜನರ ಆಶಯವಾಗಿದೆ ಎಂದು ಹೇಳಿದರು.

ಜಿಲ್ಲಾ ಪಂಚಾಯಿತಿ ಸಿಇಒ ವಿದ್ಯಾಕುಮಾರಿ ಮಾತನಾಡಿ, ಪರಿಸರ ಉಳಿಸಿ, ಬೆಳಸಲು ಪ್ರತಿಯೊಬ್ಬರೂ ಸಹಕರಿಸಬೇಕು. ಮುಂದಿನ ಪೀಳಿಗೆಗೆ ಉತ್ತಮ ಪರಿಸರ ನಿರ್ಮಾಣ ಮಾಡುವುದು ಎಲ್ಲರ ಕರ್ತವ್ಯವಾಗಬೇಕು. ಮಳೆ ನೀರು ಶೇಖರಿಸಿದರೆ ನೀರಿನ ಬವಣೆ ತಪ್ಪಲಿದೆ. ಸಹಜಲ ಆಂದೋಲನ ಜಿಲ್ಲೆಗೆ ಮಾದರಿಯಾಗಿದೆ ಎಂದರು.

ಕೃಷಿ ವಿಜ್ಞಾನಿ ಡಾ.ಎಚ್.ಮಂಜುನಾಥ್ ಮಾತನಾಡಿ, ತಾಲ್ಲೂಕಿನ ಮೂರು ಗ್ರಾಮದ ರೈತರಿಗೆ ಅಗತ್ಯವಾಗಿರುವ ಕಿತ್ತಳೆ, ಸೀತಾಫಲ, ಸೀಬೆ ಸೇರಿದಂತೆ ಅನೇಕ ಸಸಿಗಳನ್ನು ನೀಡಲಾಗಿದೆ. ಈಗಾಗಲೇ ರೈತರು ತಮ್ಮ ಜಮೀನುಗಳಲ್ಲಿ ನೆಟ್ಟು ಪೋಷಿಸುತ್ತಿದ್ದಾರೆ. 7,500 ಎಕರೆ ಪ್ರದೇಶದಲ್ಲಿ ಸಸಿ ನೆಟ್ಟು ಅದರ ಪೋಷಣೆ ಮಾಡಲು ಗಾಂಧಿ ಸಹಜ ಬೇಸಾಯ ಆಶ್ರಮ ಗುರಿ ಹೊಂದಿದೆ ಎಂದರು.

ಈ ಭಾಗದ ಭೂಮಿಗೆ ನೀರು ಇಂಗಿಸಿಕೊಳ್ಳುವ ಶಕ್ತಿ ಇದೆ. ಈ ಯೋಜನೆಯ ಯಶಸ್ವಿಗೆ ಈಗಾಗಲೇ ಹಲವು ಸಂಘ ಸಂಸ್ಥೆಗಳು ಕೈ ಜೋಡಿಸಿದ್ದಾರೆ. 7,500 ಎಕರೆ ಪ್ರದೇಶದಲ್ಲಿ ಅಂತರ್ಜಲ ವೃದ್ಧಿಸಿ ಬರ ಮುಕ್ತ ಗ್ರಾಮಗಳನ್ನಾಗಿ ಮಾಡುವ ಪಣ ತೊಡಲಾಗಿದೆ ಎಂದು ಹೇಳಿದರು.

ತಾಲ್ಲೂಕಿನ ಬೋರಾಗುಂಟೆ, ಗಿಡಗದಾಲಹಳ್ಳಿ ಹಾಗೂ ರಂಗನಹಳ್ಳಿ ರೈತರ ಜಮೀನು ಹಾಗೂ ಸರ್ಕಾರಿ ಜಾಗದಲ್ಲಿ ಸಾವಿರಾರು ಸಸಿಗಳನ್ನು ನೆಡಲಾಯಿತು. ಸ್ವಯಂ ಸೇವಕರು ಹಾಗೂ ವಿದ್ಯಾರ್ಥಿಗಳು ಶ್ರಮದಾನ‌ ಮಾಡುವ ಮೂಲಕ ಇದಕ್ಕೆ ಸಾತ್‌ ನೀಡಿದರು.

ಮಾಜಿ ಶಾಸಕ ಮಹಿಮಾ ಪಟೇಲ್, ನಿವೃತ್ತ ಉಪವಿಭಾಗಾಧಿಕಾರಿ ಜನ್ನಪ್ಪ, ಗಾಂಧಿ ಸಹಜ ಬೇಸಾಯ ಆಶ್ರಮದ ಯತಿರಾಜ ಮಾತನಾಡಿದರು.

ತಾ.ಪಂ.ಇಒ ಡಿ.ದೊಡ್ಡಸಿದ್ದಪ್ಪ, ಸಾಮಾಜಿಕ ಅರಣ್ಯ ಇಲಾಖೆಯ ತಾರಕೇಶ್ವರಿ, ಜಿ.ಪಂ.ಮಾಜಿ ಸದಸ್ಯರಾದ ತೇಜಸ್ವಿ ಪಟೇಲ್, ಭಾರತಿ ಗೋವಿಂದರಾಜು, ಗ್ರಾ.ಪಂ.ಅಧ್ಯಕ್ಷೆ ಜ್ಯೋತಿ, ಉಪಾಧ್ಯಕ್ಷ ಕಾಮರಾಜು, ಪಿಡಿಒ ಚಿಕ್ಕನರಸಪ್ಪ, ಜಿಲ್ಲಾ ಕಸಾಪ ಅಧ್ಯಕ್ಷೆ ಬಾ.ಹ.ರಮಾಕುಮಾರಿ, ಲೇಖಕಿ ಮಲ್ಲಿಕಾ, ನಿವೃತ್ತ ಪ್ರಾಂಶುಪಾಲ ಮರುಳಯ್ಯ, ಮುಖಂಡರಾದ ರವೀಶ್, ಬಸವರಾಜು, ಸ್ಟಾನ್ಲಿ ಜಾರ್ಜ್, ಬಸವರಾಜು ಪಾಟೀಲ್ ಭಾಗವಹಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.