ಬುಧವಾರ, 11 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ತುಮಕೂರು | ತ್ಯಾಜ್ಯದ ತಾಣವಾದ ಗಾರೆನರಸಯ್ಯನಕಟ್ಟೆ

Published 9 ನವೆಂಬರ್ 2023, 4:49 IST
Last Updated 9 ನವೆಂಬರ್ 2023, 4:49 IST
ಅಕ್ಷರ ಗಾತ್ರ

ತುಮಕೂರು: ನಗರದಲ್ಲಿ ಅಂತರ್ಜಲದ ಮಟ್ಟ ದಿನದಿಂದ ದಿನಕ್ಕೆ ಕುಸಿಯುತ್ತಿದ್ದು, ಇರುವ ಜಲ ಮೂಲಗಳ ಸಂರಕ್ಷಣೆಯತ್ತ ಗಮನ ಇಲ್ಲವಾಗಿದೆ. ಬರ, ಬೇಸಿಗೆಯ ಸಮಯದಲ್ಲಿ ನೀರಿಗಾಗಿ ಪರದಾಡುವ ಅಧಿಕಾರಿಗಳು, ಸಾರ್ವಜನಿಕರು ಜಲ ಮೂಲಗಳ ರಕ್ಷಣೆಗೆ ಮಾತ್ರ ಆಸಕ್ತಿ ತೋರುವುದಿಲ್ಲ. ಇದಕ್ಕೆ ನಗರದ ಗಾರೆ ನರಸಯ್ಯನಕಟ್ಟೆ ತಾಜಾ ಉದಾಹರಣೆ.

ನಗರದ ಜಯನಗರ ಪಶ್ಚಿಮ ಬಡಾವಣೆಯಲ್ಲಿರುವ ಗಾರೆ ನರಸಯ್ಯನಕಟ್ಟೆ ಕೆರೆಯು ಮನೆ, ಅಂಗಡಿಗಳ ತ್ಯಾಜ್ಯ ಸುರಿಯುವ ಸ್ಥಳವಾಗಿ ಬದಲಾಗಿದೆ. ಇಲ್ಲಿ ಕಸ ಹಾಕುವವರಿಗೆ ಕಡಿವಾಣ ಬೀಳುತ್ತಿಲ್ಲ. ಕಟ್ಟೆಯ ನೀರು ಸಹ ಸಂಪೂರ್ಣವಾಗಿ ಕಲುಷಿತಗೊಂಡಿದೆ. ಮನೆಯ ತ್ಯಾಜ್ಯ ಕಟ್ಟೆಯ ಒಡಲು ಸೇರುತ್ತಿದೆ.

ಹಿಂದಿನ ಮೇಯರ್ ಬಿ.ಜಿ.ಕೃಷ್ಣಪ್ಪ ಅಧಿಕಾರ ಅವಧಿಯಲ್ಲಿ ಕಟ್ಟೆಯ ಅಭಿವೃದ್ಧಿ ಕಾಮಗಾರಿಗಳು ನಡೆದಿದ್ದವು. ಕಟ್ಟೆಯ ಒಂದು ಭಾಗದಲ್ಲಿ ಸಾರ್ವಜನಿಕರು ಕುಳಿತುಕೊಳ್ಳಲು ಆಸನಗಳನ್ನು ಹಾಕಿರುವುದು ಬಿಟ್ಟರೆ ಬೇರೆ ಏನೂ ಬದಲಾವಣೆಗಳು ಆಗಿಲ್ಲ. ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯು ₹46 ಲಕ್ಷ ವೆಚ್ಚದಲ್ಲಿ ಕಟ್ಟೆಯಲ್ಲಿ ಹೂಳೆತ್ತುವುದು ಸೇರಿದಂತೆ ಇತರೆ ಕೆಲಸಗಳನ್ನು ಪೂರ್ಣಗೊಳಿಸಿತ್ತು.

ಮಹಾನಗರ ಪಾಲಿಕೆಯ ₹40 ಲಕ್ಷ ವೆಚ್ಚದಲ್ಲಿ ಕಟ್ಟೆಯ ಸುತ್ತಲಿನ ರಸ್ತೆ ಅಭಿವೃದ್ಧಿ ಪಡಿಸಲಾಗಿದೆ. ಕಾಮಗಾರಿ ಪೂರ್ಣಗೊಂಡ ಕೆಲವೇ ದಿನಗಳಿಗೆ ಒಂದು ಬದಿಯ ರಸ್ತೆ ಕುಸಿದಿದೆ. ತಿರುವಿನಲ್ಲಿ ರಸ್ತೆ ಕುಸಿದಿರುವುದರಿಂದ ವಾಹನ ಸವಾರರು ಜಾಗರೂಕತೆಯಿಂದ ಸಂಚಾರ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಒಂದು ಪುಟ್ಟ ಕೆರೆ ಅಭಿವೃದ್ಧಿಗೆ ₹86 ಲಕ್ಷ ವೆಚ್ಚವಾಗಿದ್ದರೂ ಸುಸ್ಥಿಯಲ್ಲಿ ಇಟ್ಟುಕೊಳ್ಳಲು ಸಾಧ್ಯವಾಗಿಲ್ಲ.

ಲಕ್ಷಾಂತರ ರೂಪಾಯಿ ಖರ್ಚು ಮಾಡಿ, ಅಭಿವೃದ್ಧಿ ಕಾಮಗಾರಿ ಕೈಗೊಂಡರೂ ಕಟ್ಟೆಯಲ್ಲಿನ ತ್ಯಾಜ್ಯ ವಿಲೇವಾರಿಯಾಗಿಲ್ಲ. ಕೆರೆಗೆ ತ್ಯಾಜ್ಯ ಸುರಿಯುವುದನ್ನು ತಪ್ಪಿಸಲಾಗಿಲ್ಲ. ಹೊಸದಾಗಿ ಕಸ ಎಸೆಯುವುದು ನಿಂತಿಲ್ಲ. ಇಲ್ಲಿ ಒಬ್ಬರು ಕಾವಲುಗಾರರನ್ನು ನೇಮಿಸಿ, ಕಸ ಹಾಕುವವರಿಗೆ ದಂಡ ವಿಧಿಸುವ ಕೆಲಸವಾಗುತ್ತಿಲ್ಲ. ಕಟ್ಟೆಯಲ್ಲಿ ನೀರಿಲ್ಲದ ಸಮಯದಲ್ಲಿಯೇ ಸ್ವಚ್ಛತಾ ಕಾರ್ಯ ಕೈಗೊಂಡು ಸಂಪೂರ್ಣ ಅಭಿವೃದ್ಧಿ ಮಾಡಬೇಕು. ಆದರೆ, ಅಧಿಕಾರಿಗಳು ನೀರಿನ ಜತೆಗೆ ತ್ಯಾಜ್ಯ ತುಂಬಿದ ನಂತರ ಎಚ್ಚೆತ್ತು ಕೊಳ್ಳುತ್ತಿದ್ದಾರೆ.

ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆ ಕೆರೆ ಅಭಿವೃದ್ಧಿ ಕೆಲಸ ಪೂರ್ಣಗೊಳಿಸಿದ ಸಮಯದಲ್ಲಿ ಕಾರ್ಯಕ್ರಮವನ್ನು ಜಿಲ್ಲಾ ಉಸ್ತುವಾರಿ ಸಚಿವ ಜಿ.ಪರಮೇಶ್ವರ ಉದ್ಘಾಟಿಸಿದ್ದರು. ಈ ಕೆಲಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ, ಕೆರೆ ಸಂರಕ್ಷಣೆಯ ಮಾತುಗಳನ್ನಾಡಿದ್ದರು. ಕಸ ಹಾಕುವುದನ್ನು ತಡೆಗಟ್ಟಬೇಕು. ಕೆರೆಗೆ ಕೊಳಚೆ ಹರಿಯುವುದ್ನು ತಪ್ಪಿಸಿ, ನೀರು ಕಲುಷಿತವಾಗದಂತೆ ನೋಡಿಕೊಳ್ಳಬೇಕು ಎಂದು ಮಹಾನಗರ ಪಾಲಿಕೆ ಅಧಿಕಾರಿಗಳಿಗೆ ಸೂಚಿಸಿದರು. ಆದರೆ ಸಚಿವರ ಸೂಚನೆ ಇನ್ನೂ ಕಾರ್ಯ ರೂಪಕ್ಕೆ ಬಂದಿಲ್ಲ.

‘ಸಂಕಟ ಬಂದಾಗ ವೆಂಕಟರಮಣ’ ಎನ್ನುವಂತೆ ನೀರಿನ ಕೊರತೆಯಾದಾಗ ಮಾತ್ರ ಅಧಿಕಾರಿ ವರ್ಗ ಮತ್ತು ಜನರಿಗೆ ಕೆರೆ, ಕಟ್ಟೆಗಳು ನೆನಪಿಗೆ ಬರುತ್ತವೆ. ಯಾವುದೇ ಸಮಸ್ಯೆ ಇಲ್ಲದಿದ್ದಾಗ ಇವುಗಳ ರಕ್ಷಣೆಗೆ ಯಾರೊಬ್ಬರೂ ಮುಂದೆ ಬರುವುದಿಲ್ಲ. ಇದರಿಂದಾಗಿ ಪ್ರಸ್ತುತ ಅನೇಕ ಕೆರೆ, ಕಟ್ಟೆಗಳು ಒತ್ತುವರಿಯಾಗುತ್ತಿವೆ.

‘ಕೆಲವರು ರಾಜ ಕಾಲುವೆಗಳ ಮೇಲೆ ಬೃಹತ್‌ ಕಟ್ಟಡಗಳನ್ನು ಕಟ್ಟುತ್ತಿದ್ದಾರೆ. ಈ ಬಗ್ಗೆ ಗಮನ ಹರಿಸಬೇಕಿದ್ದ ಅಧಿಕಾರಿಗಳು ಮಾತ್ರ ಮೌನಕ್ಕೆ ಶರಣಾಗಿದ್ದಾರೆ. ರಾಜಕಾಲುವೆ ಮೇಲೆ ಅನಧಿಕೃತವಾಗಿ ನಿರ್ಮಿಸಿದ ಕಟ್ಟಡಗಳನ್ನು ತೆರವುಗೊಳಿಸುವಂತೆ ಹಲವು ಬಾರಿ ಪಾಲಿಕೆಯ ಅಧಿಕಾರಿಗಳಲ್ಲಿ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ’ ಎಂದು ಸಾಮಾಜಿಕ ಕಾರ್ಯಕರ್ತ ಇಮ್ರಾನ್‌ ಬೇಸರದ ಮಾತುಗಳನ್ನಾಡಿದರು.

ಕಾಂಪೌಂಡ್‌ ತೆರವಿಗೆ ನೋಟಿಸ್‌

ಗಾರೆನರಸಯ್ಯನ ಕಟ್ಟೆ ಬಳಿಯ ರಾಜ ಕಾಲುವೆ ಮೇಲೆ ಕಟ್ಟಡ ಕಟ್ಟಲು ಕಾಂಪೌಂಡ್‌ ನಿರ್ಮಿಸಿದ್ದ ಮಾಲೀಕರಿಗೆ ಕಾಂಪೌಂಡ್‌ ತೆರವುಗೊಳಿಸುವಂತೆ ಪಾಲಿಕೆಯಿಂದ ನೋಟಿಸ್‌ ನೀಡಲಾಗಿದೆ. ಮುಂದಿನ ಮೂರು ದಿನಗಳಲ್ಲಿ ಕಾಂಪೌಂಡ್‌ ತೆರವುಗೊಳಿಸಲಾಗುವುದು ಎಂದು ಮಹಾನಗರ ಪಾಲಿಕೆ ಸದಸ್ಯ ವಿಷ್ಣುವರ್ಧನ್‌ ಮಾಹಿತಿ ನೀಡಿದರು. ಪಾಲಿಕೆಯಿಂದ ಅನುಮತಿ ಪಡೆಯದೆ ಕಟ್ಟಡ ನಿರ್ಮಾಣಕ್ಕೆ ಮುಂದಾಗಿದ್ದರು. ಇದು ಗಮನಕ್ಕೆ ಬಂದ ಕೂಡಲೇ ಕ್ರಮಕೈಗೊಳ್ಳಲಾಗಿದೆ. ಮನೆಯ ಕಸವನ್ನು ಕಟ್ಟೆಗೆ ಸುರಿಯುತ್ತಿರುವುದು ಜಾಸ್ತಿಯಾಗುತ್ತಿದೆ. ಇದಕ್ಕೆ ಆದಷ್ಟು ಬೇಗ ಕಡಿವಾಣ ಹಾಕಲಾಗುವುದು. ಈಗಾಗಲೇ ಸಂಗ್ರಹವಾಗಿರುವ ಕಸವನ್ನು ತೆಪ್ಪದ ಸಹಾಯದೊಂದಿಗೆ ತೆರವುಗೊಳಿಸಲಾಗುವುದು ಎಂದು ತಿಳಿಸಿದರು.

ಗಾರೆ ನರಸಯ್ಯನಕಟ್ಟೆ ಬಳಿಯ ರಸ್ತೆ ಕುಸಿದಿರುವುದು
ಗಾರೆ ನರಸಯ್ಯನಕಟ್ಟೆ ಬಳಿಯ ರಸ್ತೆ ಕುಸಿದಿರುವುದು
ತುಮಕೂರಿನ ಜಯನಗರ ಪಶ್ಚಿಮ ಬಡಾವಣೆಯಲ್ಲಿರುವ ಗಾರೆ ನರಸಯ್ಯನಕಟ್ಟೆ ಬಳಿ ಸುರಿದಿರುವ ಕಸ
ತುಮಕೂರಿನ ಜಯನಗರ ಪಶ್ಚಿಮ ಬಡಾವಣೆಯಲ್ಲಿರುವ ಗಾರೆ ನರಸಯ್ಯನಕಟ್ಟೆ ಬಳಿ ಸುರಿದಿರುವ ಕಸ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT