ಬುಧವಾರ, ಜುಲೈ 28, 2021
23 °C
ಜಿಲ್ಲೆಯಲ್ಲಿದ್ದಾರೆ 6,500 ಬಿಸಿಯೂಟ ನೌಕರರು; ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಕೆಲಸ ಕಳೆದುಕೊಳ್ಳುವ ಭೀತಿ

ಅಕ್ಷರ ದಾಸೋಹ ಸಿಬ್ಬಂದಿಗಿಲ್ಲ ವೇತನ

ಸುಮಾ ಬಿ. Updated:

ಅಕ್ಷರ ಗಾತ್ರ : | |

ತುಮಕೂರು: ಅಕ್ಷರ ದಾಸೋಹ ಯೋಜನೆಯಡಿ ಜಿಲ್ಲೆಯಲ್ಲಿ ಕೆಲಸ ನಿರ್ವಹಿಸುತ್ತಿರುವ 6,500 ಮಂದಿ ಬಿಸಿಯೂಟ ಸಿಬ್ಬಂದಿಗೆ ಮೂರು ತಿಂಗಳಿನಿಂದ ವೇತನ ಬಿಡುಗಡೆಯಾಗಿಲ್ಲ.

ಗಾಯದ ಮೇಲೆ ಬರೆ ಎನ್ನುವಂತೆ ತೀವ್ರ ಸಂಕಷ್ಟದಲ್ಲಿ ಜೀವನ ಸಾಗಿಸುತ್ತಿರುವ ನೌಕರರ ಬದುಕು ಮತ್ತಷ್ಟು ಸಂಕಷ್ಟಕ್ಕೆ ದೂಡಿದೆ. ಅಂಗವಿಕಲರು, ವಿಧವೆಯರು,‌ ಪತಿಯಿಂದ ದೂರವಾಗಿರುವವರು, ವೃದ್ಧೆಯರು– ಹೀಗೆ ಆರ್ಥಿಕ ಅಶಕ್ತರೇ ಬಿಸಿಯೂಟ ನೌಕರರಾಗಿ ಕೆಲಸ ಮಾಡುತ್ತಿದ್ದಾರೆ.

ಬಿಸಿಯೂಟ ನೌಕರರಿಗೆ ಸರ್ಕಾರ ಮೂರು ತಿಂಗಳಿಗೆ ಒಮ್ಮೆ ವೇತನ ನೀಡುತ್ತದೆ. ಈಗ ಮೂರು ತಿಂಗಳು ಪೂರ್ಣವಾಗಿದೆ. ಅನುದಾನ ಬಂದಿಲ್ಲ. ಬಂದ ನಂತರ ವೇತನ ಬಿಡುಗಡೆ ಮಾಡುವುದಾಗಿ ಅಧಿಕಾರಿಗಳು ಹೇಳುತ್ತಾರೆ. ಆದರೆ, ಲಾಕ್‌ಡೌನ್ ಕಾರಣ ಆರ್ಥಿಕ ಸಂಕಷ್ಟದಲ್ಲಿ ಇರುವವರಿಗೆ ಸರ್ಕಾರ ಪ್ಯಾಕೇಜ್ ಘೋಷಿಸಿದೆ. ಆದರೆ, ಈ ನೌಕರರಿಗೆ ದುಡಿದ ಹಣವನ್ನೇ ನೀಡಿಲ್ಲ.

ಕೆಲಸ ಕಳೆದುಕೊಳ್ಳುವ ಭೀತಿ: ಕನಿಷ್ಠ ವೇತನಕ್ಕೆ ದುಡಿಯುತ್ತಿರುವ ಅಕ್ಷರ ದಾಸೋಹ ನೌಕರರು ಕೊರೊನಾ ಪರಿಣಾಮ ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಕೆಲಸವನ್ನೇ ಕಳೆದುಕೊಳ್ಳುವ ಆತಂಕ ಎದುರಿಸುತ್ತಿದ್ದಾರೆ.

ಪ್ರಸಕ್ತ ವರ್ಷ ಶಾಲೆಗಳು ಆರಂಭವಾಗುವುದು ಅನಿಶ್ಚಿತವಾಗಿದೆ. ಆರಂಭವಾದರೂ ಶಾಲೆಯಲ್ಲಿ ಬಿಸಿಯೂಟ ನೀಡುವುದು ಬೇಡ ಎಂಬ ಆಗ್ರಹ ಪೋಷಕರಿಂದ ಬಲವಾಗಿ ಕೇಳಿಬರುತ್ತಿದೆ. ಹೀಗಾಗಿ, ಕೆಲಸದ ಅಭದ್ರತೆ ನೌಕರರನ್ನು ತೀವ್ರವಾಗಿ ಕಾಡುತ್ತಿದೆ.

‘ಇಷ್ಟುದಿನ ವೇತನ ಹೆಚ್ಚಳ ಮಾಡಬೇಕು, ‘ಡಿ’ ಗ್ರೂಪ್‌ ನೌಕರರು ಎಂದು ಪರಿಗಣಿಸಬೇಕು ಹೀಗೆ ಹಲವು ಬೇಡಿಕೆಗಳ ಈಡೇರಿಕೆಗೆ ಪ್ರತಿಭಟನೆ ಮಾಡುತ್ತಿದ್ದೆವು. ಈಗ ಹೊಸ ಆತಂಕ ಶುರುವಾಗಿದೆ. ಈ ವರ್ಷ ಶಾಲೆಗಳು ಶುರುವಾದರೂ ಶಾಲೆಗಳಲ್ಲಿ ಬಿಸಿಯೂಟ ವ್ಯವಸ್ಥೆ ಬೇಡ. ಮನೆಯಿಂದಲೇ ಊಟ ಕಳುಹಿಸುತ್ತೇವೆ ಎಂದು ಹಲವು ಪೋಷಕರು ಈಚೆಗೆ ನಡೆದ ಸಭೆಯಲ್ಲಿ ಹೇಳಿದ್ದಾರೆ. ಬಿಸಿಯೂಟ ಬೇಡವೆಂದರೆ ನಮ್ಮ ಕೆಲಸವೂ ಹೋಗುತ್ತದೆ’ ಎಂದು ಅಳಲು ತೋಡಿಕೊಳ್ಳುತ್ತಾರೆ ಬಿಸಿಯೂಟ ಅಡುಗೆ ಸಿಬ್ಬಂದಿ ತುಮಕೂರಿನ ಗಂಗಮ್ಮ.

ಅಲ್ಲದೆ ಜೂನ್‌ ತಿಂಗಳಿಂದ ಅಕ್ಷರ ದಾಸೋಹ ನೌಕರರ ಆನ್‌ಲೈನ್‌ ಹಾಜರಾತಿಯನ್ನು ಇಲಾಖೆ ಪಡೆದಿಲ್ಲ. ಇದು ನೌಕರರಲ್ಲಿ ಆತಂಕ ಹೆಚ್ಚಿಸಿದೆ. ಲಾಕ್‌ಡೌನ್‌ ಪರಿಣಾಮ ಮೂರು ತಿಂಗಳಿಂದ ಬೇರೆ ಕೆಲಸವೂ ಇಲ್ಲ. ವೇತನವೂ ಇಲ್ಲ.

ಸರ್ಕಾರ ಮುಖ್ಯ ಅಡುಗೆ ಸಿಬ್ಬಂದಿಗೆ ₹2,700, ಅಡುಗೆ ಸಹಾಯಕರಿಗೆ ₹2,600 ಮಾಸಿಕ ವೇತನ ನೀಡುತ್ತಿದೆ. ಅಕ್ಷರ ದಾಸೋಹ ಯೋಜನೆಯನ್ನೂ ಖಾಸಗೀಕರಣ ಮಾಡಲು ಸರ್ಕಾರ ಮುಂದಾಗಿತ್ತು. ಸಿಬ್ಬಂದಿಯ ಹೋರಾಟದ ಫಲವಾಗಿ ಈ ಪ್ರಸ್ತಾಪ ಕೈಬಿಟ್ಟಿತ್ತು.

ಲಾಕ್‌ಡೌನ್‌ನಲ್ಲೂ ಕೆಲಸ: ಪಾವಗಡದಂತಹ ಬರಪೀಡಿತ ತಾಲ್ಲೂಕುಗಳಲ್ಲಿ ಬೇಸಿಗೆ ರಜೆ ದಿನಗಳಲ್ಲೂ ಶಾಲಾ ಮಕ್ಕಳಿಗೆ ಅಕ್ಕಿ, ಬೇಳೆ, ಅಡುಗೆ ಎಣ್ಣೆಯನ್ನು ವಿತರಿಸಲಾಗುತ್ತದೆ. ಲಾಕ್‌ಡೌನ್‌ ವೇಳೆ ಅಕ್ಷರ ದಾಸೋಹ ಸಿಬ್ಬಂದಿ ಮಕ್ಕಳಿಗೆ ಬೇಳೆ, ಅಕ್ಕಿ ತಲುಪಿಸುವ ಕೆಲಸ ಮಾಡಿದ್ದಾರೆ.


ಲಕ್ಷ್ಮಿ

ಅಡುಗೆ ಜತೆ ಬೇರೆ ಕೆಲಸ

ಅಕ್ಷರ ದಾಸೋಹ ನೌಕರರು ಅಡುಗೆ ಜತೆಗೆ ಶಾಲೆಗೆ ಸಂಬಂಧಿಸಿದ ಬೇರೆ ಕೆಲಸವನ್ನೂ ಮಾಡಬೇಕು. ಕೆಲ ಶಾಲೆಗಳಲ್ಲಿ ಶಾಚಾಲಯ ಸ್ವಚ್ಛತೆ, ಶಾಲಾ ಕಾಂಪೌಂಡ್‌, ಆವರಣ ಸ್ವಚ್ಛತೆ ಕೆಲಸನ್ನೂ ಮಾಡುತ್ತೇವೆ. ಜತೆಗೆ ಬೆಲ್‌ ಹೊಡೆಯುವುದು ಸೇರಿದಂತೆ ಕ್ಲರ್ಕ್‌ ಕೆಲಸವನ್ನೂ ನಿರ್ವಹಿಸುತ್ತೇವೆ. ಈ ಕೆಲಸಗಳೆಲ್ಲ ನಮಗೆ ಭಾರವಾಗುವುದಿಲ್ಲ. ಆದರೆ, ಕೆಲಸಕ್ಕೆ ತಕ್ಕಂತೆ ವೇತನ, ಕೆಲಸದ ಭದ್ರತೆ ನೀಡಬೇಕು.

ಲಕ್ಷ್ಮಿ, ಜಿಲ್ಲಾ ಘಟಕದ ಅಧ್ಯಕ್ಷೆ, ಅಕ್ಷರ ದಾಸೋಹ ನೌಕರರ ಸಂಘ (ಸಿಐಟಿಯು), ತಿಪಟೂರು

 

ಪ್ಯಾಕೇಜ್ ಬೇಡ: ಸಂಬಳ ನೀಡಿ

ಗ್ರಾಮೀಣ ಪ್ರದೇಶದಲ್ಲಿರುವವರು ಲಾಕ್‌ಡೌನ್‌ ಸಮಯದಲ್ಲಿ ಕೂಲಿ ಕೆಲಸಕ್ಕಾದರೂ ಹೋಗಿ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದಾರೆ. ಆದರೆ, ನಗರ ಪ್ರದೇಶದ ನೌಕರರೂ ಒಪ್ಪೊತ್ತಿನ ಊಟಕ್ಕೂ ಪರದಾಡುವಂತಾಗಿದೆ. ಬೇರೆಲ್ಲ ಕಾರ್ಮಿಕರಿಗೆ ಸರ್ಕಾರ ವಿಶೇಷ ಪ್ಯಾಕೇಜ್‌ ನೀಡಿತು. ಆದರೆ, ನಮಗೆ ಮಾತ್ರ ಯಾವ ಪ್ಯಾಕೇಜ್ ನೀಡಿಲ್ಲ. ವಿಶೇಷ ಭತ್ಯೆ ಬೇಡ ನಮ್ಮ ಸಂಬಳ ನಮಗೆ ನೀಡಿ.

ಕೆಂಚಮ್ಮ, ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ, ಅಕ್ಷರ ದಾಸೋಹ ನೌಕರರ ಸಂಘ, ಪಾವಗಡ

ಅನುದಾನ ಬಂದಿಲ್ಲ

ಅಕ್ಷರ ದಾಸೋಹ ಸಿಬ್ಬಂದಿಗೆ ಮೂರು ತಿಂಗಳಿಗೆ ಒಮ್ಮೆ ವೇತನ ಬಿಡುಗಡೆ ಆಗುತ್ತದೆ. ಈ ಬಾರಿ ಇನ್ನೂ ಬಂದಿಲ್ಲ. ಹಣ ಬಿಡುಗಡೆಯಾದ ಕೂಡಲೇ ಅವರ ಖಾತೆಗೆ ಹಣ ವರ್ಗಾಯಿಸಲಾಗುವುದು. ಇನ್ನೂ ಶಾಲೆಗಳು ಆರಂಭವಾಗದ ಕಾರಣ ಸಿಬ್ಬಂದಿಯ ಆನ್‌ಲೈನ್‌ ಹಾಜರಾತಿ ತೆಗೆದುಕೊಳ್ಳುತ್ತಿಲ್ಲ. ಶಾಲೆ ಆರಂಭವಾದ ಕೂಡಲೇ ಹಾಜರಾತಿ ತೆಗೆದುಕೊಳ್ಳಲಾಗುವುದು. ಕೆಲಸ ಕಳೆದುಕೊಳ್ಳುವ ಆತಂಕ ಬೇಡ ಎಂದು ತುಮಕೂರಿನ ಅಕ್ಷರದಾಸೋಹ ಉಸ್ತುವಾರಿ ಶಿಕ್ಷಣಾಧಿಕಾರಿ ಬಿ.ಪಿ.ನಾಗರಾಜಪ್ಪ ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು