ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಒಂದು ನಿಲ್ದಾಣ, ಒಂದು ಉತ್ಪನ್ನ’ ಮಳಿಗೆ: ಇಂದು ಪ್ರಧಾನಿ ಮೋದಿ ಚಾಲನೆ

‘ಒಂದು ನಿಲ್ದಾಣ, ಒಂದು ಉತ್ಪನ್ನ’ ಮಳಿಗೆ ಆರಂಭ
Published 12 ಮಾರ್ಚ್ 2024, 2:57 IST
Last Updated 12 ಮಾರ್ಚ್ 2024, 2:57 IST
ಅಕ್ಷರ ಗಾತ್ರ

ಪ್ರಜಾವಾಣಿ ವಾರ್ತೆ

ತುಮಕೂರು: ತೆಂಗು ಉತ್ಪನ್ನಗಳನ್ನು ಪರಿಚಯಿಸಿ, ಪ್ರೋತ್ಸಾಹಿಸುವ ಉದ್ದೇಶದಿಂದ ಜಿಲ್ಲೆಯ 2 ರೈಲು ನಿಲ್ದಾಣಗಳಲ್ಲಿ ‘ಒಂದು ನಿಲ್ದಾಣ, ಒಂದು ಉತ್ಪನ್ನ’ ಮಳಿಗೆ ತೆರೆಯಲಾಗಿದೆ.

ನಗರದ ರೈಲು ನಿಲ್ದಾಣ ಮತ್ತು ತಿಪಟೂರು ರೈಲು ನಿಲ್ದಾಣದಲ್ಲಿ ತಲಾ 1 ಮಳಿಗೆ ಪ್ರಾರಂಭಿಸಲಾಗಿದೆ. ಮಳಿಗೆಯಲ್ಲಿ ಕೊಬ್ಬರಿ, ತೆಂಗಿನ ಕಾಯಿ, ಕೊಬ್ಬರಿಯಿಂದ ತಯಾರಿಸಿದ ಸಿಹಿ ತಿನಿಸು, ವಿವಿಧ ಕಲಾಕೃತಿ ಮತ್ತು ಕೊಬ್ಬರಿ ಎಣ್ಣೆ ಮಾರಾಟ ಮಾಡಲಾಗುತ್ತಿದೆ. ‘ಪ್ರತಿ ನಿತ್ಯ ಸಾವಿರಾರು ಜನರು ಓಡಾಡುವ ಸ್ಥಳದಲ್ಲಿ ಮಳಿಗೆ ತೆರೆಯುವ ಮೂಲಕ ಜಿಲ್ಲೆಯ ಪ್ರಮುಖ ಬೆಳೆಯಾದ ತೆಂಗಿನ ಬಗ್ಗೆ ಇತರರಿಗೂ ತಿಳಿಸುವ ಕೆಲಸವಾಗುತ್ತದೆ. ಇದರಿಂದ ಸ್ಥಳೀಯ ರೈತರಿಗೂ, ಉದ್ಯಮಿಗಳಿಗೂ ಅನುಕೂಲವಾಗುತ್ತದೆ’ ಎಂಬುವುದು ರೈಲ್ವೆ ಅಧಿಕಾರಿಗಳ ವಿವರಣೆ.

ರೈಲ್ವೆ ಇಲಾಖೆಯಿಂದ ಮಳಿಗೆ ತೆರೆಯಲು ಅವಕಾಶ ಕಲ್ಪಿಸಿದ್ದು, ಸುಮಾರು ₹3 ಲಕ್ಷ ವೆಚ್ಚ ಮಾಡಲಾಗಿದೆ. ವಿವಿಧ ತೆಂಗು ಉತ್ಪನ್ನಗಳನ್ನು ಇಟ್ಟುಕೊಳ್ಳಲು ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಮಳಿಗೆ ಪಡೆದವರು ರೈಲ್ವೆ ಇಲಾಖೆಗೆ ಪ್ರತಿ ತಿಂಗಳು ₹2 ಸಾವಿರ ರೂಪಾಯಿ ಪಾವತಿ ಮಾಡಬೇಕಾಗುತ್ತದೆ.

ಮಳಿಗೆಯನ್ನು ಬಾಡಿಗೆ ಪಡೆದವರೇ ಉತ್ಪನ್ನಗಳನ್ನು ತಂದು ಮಾರಾಟ ಮಾಡಬಹುದು. ಮಹಿಳಾ ಸ್ವ–ಸಹಾಯ ಸಂಘದ ಸದಸ್ಯರು ತಯಾರಿಸಿದ ಉತ್ಪನ್ನಗಳನ್ನು ಮಾರಾಟ ಮಾಡಲು ಆದ್ಯತೆ ನೀಡುವ ಮೂಲಕ ಸ್ವಯಂ ಉದ್ಯೋಗಿಗಳನ್ನು ಪ್ರೋತ್ಸಾಹಿಸಲಾಗುತ್ತದೆ.

ಇದೀಗ ತೆಂಗಿನ ಉತ್ಪನ್ನಗಳ ಪ್ರಚಾರ, ಖರೀದಿ ಮತ್ತು ಮಾರಾಟಕ್ಕೆ ಹೊಸ ವೇದಿಕೆ ಸಿಕ್ಕಂತಾಗಿದೆ. ನಗರದ ರೈಲು ನಿಲ್ದಾಣದಲ್ಲಿ ಈಗಾಗಲೇ ಮಳಿಗೆ ಶುರುವಾಗಿದ್ದು, ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಪ್ರಯಾಣಿಕರು ಆಸಕ್ತಿಯಿಂದಲೇ ಮಳಿಗೆಯತ್ತ ಬರುತ್ತಿದ್ದ ದೃಶ್ಯಗಳು ನಗರದ ರೈಲು ನಿಲ್ದಾಣದಲ್ಲಿ ಸೋಮವಾರ ಕಂಡು ಬಂದವು.

ಈ ಹಿಂದೆ ‘ಒಂದು ಜಿಲ್ಲೆ, ಒಂದು ಉತ್ಪನ್ನ’ ಯೋಜನೆಯಲ್ಲಿ ಜಿಲ್ಲೆಯ ಪ್ರಮುಖ ಬೆಳೆಯ ಉತ್ತೇಜನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಈ ಯೋಜನೆಯಡಿ ಜಿಲ್ಲೆಯಲ್ಲಿ ತೆಂಗು ಬೆಳೆಯನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ‘ಯೋಜನೆಯಡಿ ತೆಂಗು ಬೆಳೆಯ ಆಯ್ಕೆ ಬಿಟ್ಟರೆ ಬೇರೆ ಯಾವುದೇ ಬೆಳವಣಿಗೆ ಆಗುತ್ತಿಲ್ಲ. ಉದ್ಯಮ ಆರಂಭಕ್ಕೆ ಸರ್ಕಾರದಿಂದ ನೆರವು ಸಿಗುತ್ತಿಲ್ಲ. ಸಾಲ ಮಂಜೂರಾತಿಗೆ ಅರ್ಜಿ ಸಲ್ಲಿಸಿದರೂ ಅಧಿಕಾರಿಗಳು ಸರಿಯಾಗಿ ಸ್ಪಂದಿಸುತ್ತಿಲ್ಲ’ ಎಂದು ರೈತರು ಆರೋಪಿಸಿದ್ದರು.

ಇಂದು ಪ್ರಧಾನಿ ಮೋದಿ ಚಾಲನೆ

‘ಒಂದು ನಿಲ್ದಾಣ ಒಂದು ಉತ್ಪನ್ನ’ ಮಳಿಗೆಗೆ ಮಾರ್ಚ್‌ 12ರಂದು ಪ್ರಧಾನಿ ನರೇಂದ್ರ ಮೋದಿ ವರ್ಚುವಲ್ ಮೂಲಕ ಚಾಲನೆ ನೀಡಲಿದ್ದಾರೆ. ಬೆಳಗ್ಗೆ 9 ಗಂಟೆಗೆ ಕಾರ್ಯಕ್ರಮ ನಡೆಯಲಿದೆ. ಇದರಿಂದ ಕೊಬ್ಬರಿ ಉತ್ಪನ್ನಕ್ಕೆ ಒಂದು ಮಾರುಕಟ್ಟೆಯ ವ್ಯವಸ್ಥೆ ಕಲ್ಪಿಸಿದಂತೆ ಆಗುತ್ತದೆ. ಎ.ಎಲ್.ನಾಗರಾಜ್‌ ವ್ಯವಸ್ಥಾಪಕ ತುಮಕೂರು ರೈಲು ನಿಲ್ದಾಣ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT