ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂಟಿಗ್ರೇಟೆಡ್ ಟೌನ್‌ಶಿಪ್‌ಗೆ ತೀವ್ರ ವಿರೋಧ

ಹೋರಾಟ ಸಮಿತಿಯಿಂದ ಪ್ರತಿಭಟನೆ: ಸರ್ಕಾರದ ವಿರುದ್ಧ ವಾಗ್ದಾಳಿ: ಕುದುರೆ ಫಾರಂ ಉಳಿಸಲು ಮನವಿ
Published 17 ಜನವರಿ 2024, 20:06 IST
Last Updated 17 ಜನವರಿ 2024, 20:06 IST
ಅಕ್ಷರ ಗಾತ್ರ

ಕುಣಿಗಲ್: ಪಟ್ಟಣದ ಕುದುರೆ ಫಾರಂ ಉಳಿವಿಗಾಗಿ ಅಸ್ಥಿತ್ವಕ್ಕೆ ಬಂದಿರುವ ಹೋರಾಟ ಸಮಿತಿಯಿಂದ ಬುಧವಾರ ನಡೆದ ಪ್ರತಿಭಟನೆಯಲ್ಲಿ ಇಂಟಿಗ್ರೇಟೆಡ್ ಟೌನ್‌ಶಿಪ್‌ಗೆ ತೀವ್ರ ವಿರೋಧ ವ್ಯಕ್ತವಾಯಿತು.

ಪ್ರತಿಭಟನಕಾರರು ಕುದುರೆ ಫಾರಂ ಉಳಿವಿಗಾಗಿ ನಿರಂತರ ಹೋರಾಟಕ್ಕೆ ಸಿದ್ಧವಿರುವುದಾಗಿ ಘೋಷಣೆ ಕೂಗಿ, ಉಪವಿಭಾಗಾಧಿಕಾರಿ ಗೌರವ್ ಕುಮಾರ್ ಶೆಟ್ಟಿ ಅವರಿಗೆ ಮನವಿ ಪತ್ರ ಸಲ್ಲಿಸಿದರು.

ಪಟ್ಟಣದ ಪ್ರವಾಸಿ ಮಂದಿರದಿಂದ ಹೊರಟ ಸಾವಿರಾರು ಕಾರ್ಯಕರ್ತರು ಮೆರವಣಿಗೆಯಲ್ಲಿ ತೆರಳಿ ತಾಲ್ಲೂಕು ಕಚೇರಿ ಮುಂದೆ ಸಭೆ ನಡೆಸಿದರು.

ಸಭೆಯಲ್ಲಿ ನಟ ಚೇತನ್ ಅಹಿಂಸಾ ಮಾತನಾಡಿ, ಸಮಾಜವಾದಿ ಹೆಸರಿನಲ್ಲಿ ‘ಗ್ಯಾರಂಟಿ’ಗಳ ಮೇಲೆ ಅಧಿಕಾರಿಕ್ಕೆ ಬಂದ ಸರ್ಕಾರ ಬಂಡವಾಳಶಾಹಿಗಳ ಪರ ನಿಂತು ಪಾರಂಪರಿಕ ತಾಣ ಕುದುರೆ ಫಾರಂ ಅನ್ನು ಹಾಳುಮಾಡಿ ಟೌನ್‌ಶಿಪ್ ನಿರ್ಮಾಣಕ್ಕೆ ಸಂಚು ರೂಪಿಸುತ್ತಿದೆ. ನಾಡಿನ ಜನರಿಗೂ ಕುಣಿಗಲ್ ಕುದುರೆ ಫಾರಂಗೂ ಅವಿನಾಭಾವ ಸಂಬಂಧವಿದೆ. ಮುಖ್ಯಮಂತ್ರಿ ಈ ವಿಚಾರದಲ್ಲಿ ಮಧ್ಯಪ್ರವೇಶಿಸಬೇಕು’ ಎಂದು ಒತ್ತಾಯಿಸಿದರು.

ಅಮ್ ಆದ್ಮಿ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು, ‘ಇಂಟಿಗ್ರೇಟೆಡ್‌ ಟೌನ್‌ಶಿಪ್‌ ನಿರ್ಮಾಣ ವಿಚಾರದಲ್ಲಿ ಜಮೀನು ಕಬಳಿಸುವ ಹುನ್ನಾರವಿದೆ. ಮುಖ್ಯಮಂತ್ರಿ ಮತ್ತು ಸರ್ಕಾರ ಸಾರ್ವಜನಿಕರ ಆಸ್ತಿ ಉಳಿಸುವತ್ತ ಗಮನ ಹರಿಸಬೇಕಿದೆ’ ಎಂದು ಮನವಿ ಮಾಡಿದರು.

ತಾಲ್ಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಬಿ.ಬಿ.ರಾಮಸ್ವಾಮಿಗೌಡ, ‘ಶಾಸಕ ಮತ್ತು ಅಧಿಕಾರದಲ್ಲಿರುವ ಅವರ ಸಂಬಂಧಿಕರು ಬೆಂಗಳೂರಿನಲ್ಲಿರುವ ರೇಸ್ ಕೋರ್ಸ ಜಾಗ ಕಬಳಿಸಲು ಸಂಚು ನಡೆಸುತ್ತಿದ್ದಾರೆ. ಸ್ಟಡ್‌ಫಾರಂಗೆ ಸೇರಿದ ರಾಮಬಾಣ ಹಂತದ ಮತ್ತು ಹೇರೂರ್ ಕಾವಲು ಪ್ರದೇಶದ ಮೇಲೂ ಕಣ್ಣು ಬಿದ್ದಿದೆ. ಕಾನೂನು ಬದ್ದ ಹೋರಾಟದ ಮೂಲಕ ಕುದುರೆ ಫಾರಂ ಉಳಿವಿಗೆ ಶ್ರಮಿಸಲಾಗುವುದು’ ಎಂದರು.

ಹೋರಾಟ ಸಮಿತಿ ಅಧ್ಯಕ್ಷ ಬಿ.ಎಂ.ಹುಚ್ಚೇಗೌಡ, ಮಾಜಿ ಸಚಿವೆ ಬಿ.ಟಿ.ಲಲಿತಾ ನಾಯ್ಕ, ಧರ್ಮೇಂದ್ರ ಕುಮಾರ್, ತಲಕಾಡು ಚಿಕ್ಕರಂಗೇಗೌಡ, ವೈ.ಎಚ್.ಹುಚ್ಚಯ್ಯ, ಬರಹಗಾರ್ತಿ ಕೆ.ಷರೀಪಾ, ಬಿಜೆಪಿ ಮುಖಂಡ ರಾಜೇಶ್ ಗೌಡ, ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ಬಲರಾಮ, ಕೆಆರ್‌ಎಸ್ ಪಕ್ಷದ ರಾಜ್ಯ ಯುವ ಘಟಕದ ಅಧ್ಯಕ್ಷ ರಘು ಜಾಣಗೆರೆ, ಜಿ.ಕೆ.ನಾಗಣ್ಣ, ಬಿ.ಎನ್. ಜಗದೀಶ್, ಅಬ್ದುಲ್ ಮುನಾಫ್, ಜಯರಾಮಯ್ಯ, ಬಲರಾಮ, ಮಾತನಾಡಿದರು.

ವಿವಿಧ ಸಂಘಟನೆಗಳ ಪದಾಧಿಕಾರಿಗಳು, ಅಂಗನವಾಡಿ ಕಾರ್ಯಕರ್ತೆಯರು ಪಾಲ್ಗೊಂಡಿದ್ದರು.

ಪ್ರತಿಭಟನಾ ಸಭೆಯಲ್ಲಿ ನಂಜರಾಜ್‌ ಅರಸು ಮಾತನಾಡಿದರು
ಪ್ರತಿಭಟನಾ ಸಭೆಯಲ್ಲಿ ನಂಜರಾಜ್‌ ಅರಸು ಮಾತನಾಡಿದರು
ಉಪಮುಖ್ಯಮಂತ್ರಿ ಈಗಾಗಲೇ ಈ ಜನ್ಮಕ್ಕಾಗುವಷ್ಟು ಹಣ ಮಾಡಿಕೊಂಡಿದ್ದಾರೆ. ಇನ್ನೂ ದಾಹವಿದೆಯೇ? ಮುಂದಿನ ದಿನಗಳಲ್ಲಿ ಕುದುರೆ ಫಾರಂ ಉಳಿವಿಗೆ ಅಮರಣಾಂತ ಉಪವಾಸಕ್ಕೆ ಸಿದ್ಧ.
–ನಂಜರಾಜ್‌ ಅರಸು ಇತಿಹಾಸ ತಜ್ಞ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT