ಭಾನುವಾರ, 21 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸರ್ಕಾರಿ ಜಾಗ ಪರಭಾರೆಗೆ ವಿರೋಧ

Published 20 ಜೂನ್ 2024, 6:02 IST
Last Updated 20 ಜೂನ್ 2024, 6:02 IST
ಅಕ್ಷರ ಗಾತ್ರ

ತುಮಕೂರು: ಹುಸಿ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದು ರಾಜ್ಯದ ಬೊಕ್ಕಸವನ್ನು ದಿವಾಳಿ ಅಂಚಿಗೆ ದೂಡಿರುವ ಕಾಂಗ್ರೆಸ್‌ ಸರ್ಕಾರ, ಇದೀಗ ಬೆಂಗಳೂರು ಸುತ್ತಮುತ್ತಲಿನ ಅಮೂಲ್ಯ ಸರ್ಕಾರಿ ಜಾಗವನ್ನು ಪರಭಾರೆ ಮಾಡಲು ಹೊರಟಿದೆ ಎಂದು ಗ್ರಾಮಾಂತರ ಬಿಜೆಪಿ ಶಾಸಕ ಬಿ.ಸುರೇಶ್‌ಗೌಡ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪೆಟ್ರೋಲ್‌, ಡೀಸೆಲ್‌ ಬೆಲೆ ಏರಿಕೆಯನ್ನು ಕೂಡಲೇ ಹಿಂತೆಗೆದುಕೊಳ್ಳಬೇಕು. ಸರ್ಕಾರಿ ಭೂಮಿ ಪರಭಾರೆ ಮಾಡುವಂತಹ ಹೊಣೆಗೇಡಿ ನಿರ್ಧಾರಗಳನ್ನು ಕೈ ಬಿಡಬೇಕು ಎಂದು ಅವರು ಹೇಳಿಕೆಯಲ್ಲಿ ಆಗ್ರಹಿಸಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಗ್ಯಾರಂಟಿ ಯೋಜನೆಗಳ ಹುಸಿ ಭರವಸೆಯಲ್ಲಿ ಅಧಿಕಾರಕ್ಕೆ ಬಂದ ಸಮಯದಲ್ಲಿ ಸಂಭ್ರಮಿಸಿದ್ದಕ್ಕೆ ಮಿತಿಯೇ ಇರಲಿಲ್ಲ. ಬುದ್ಧಿಜೀವಿಗಳು ಕೂಡ ಸಿದ್ದರಾಮಯ್ಯ ಅವರದೇ ಒಂದು ಅರ್ಥಶಾಸ್ತ್ರ ಎಂದು ಕೊಂಡಾಡಿದ್ದರು. ‘ಅಳಿಯನ ಕುರುಡು ಬೆಳಗಾದ ಮೇಲೆ’ ಎನ್ನುವಂತೆ ಸರ್ಕಾರ ಇನ್ನೂ ಒಂದು ವರ್ಷ ಪೂರೈಸುತ್ತಿದ್ದಂತೆಯೇ ಅದರ ಆರ್ಥಿಕ ಸ್ಥಿತಿಯ ಅಸಲಿಯತ್ತು ಬಯಲಾಗಿದೆ ಎಂದು ಆರೋಪಿಸಿದ್ದಾರೆ.

ಲೋಕಸಭೆ ಚುನಾವಣೆ ಫಲಿತಾಂಶದಿಂದ ಕಾಂಗ್ರೆಸ್‌ ಪಕ್ಷ ಕಂಗೆಟ್ಟಿರುವುದು ಸ್ಪಷ್ಟವಾಗಿದೆ. 87 ವಿಧಾನಸಭಾ ಕ್ಷೇತ್ರಗಳಲ್ಲಿ ಪಕ್ಷಕ್ಕೆ ಹಿನ್ನಡೆಯಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಹೇಳಿಕೊಂಡಿದ್ದಾರೆ. ಸರ್ಕಾರದ ಜನ ವಿರೋಧಿ ನೀತಿಗಳಿಗೆ ಲೋಕಸಭೆ ಚುನಾವಣೆಯಲ್ಲಿ ಉತ್ತರ ಸಿಕ್ಕಿದೆ. ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಮನೆಗೆ ಕಳಿಸುವುದರ ಮುನ್ಸೂಚನೆ ಎಂಬುದನ್ನು ಅರ್ಥಮಾಡಿಕೊಳ್ಳಬೇಕಿದೆ ಎಂದು ಸಲಹೆ ಮಾಡಿದ್ದಾರೆ.

ಕಾಂಗ್ರೆಸ್ ನಾಯಕ ರಾಹುಲ್‌ ಗಾಂಧಿ ಅವರು ಎಲ್ಲರ ಖಾತೆಗಳಿಗೆ ₹8,500 ಜಮೆ ಮಾಡಿ ಬಡತನವನ್ನು ‘ಟಕಾಟಕ್‌’ ನಿವಾರಿಸುವುದಾಗಿ ಹೇಳಿದ್ದರು. ಸಿದ್ದರಾಮಯ್ಯ ಹಾಗೆಯೇ ಮನೆಹಾಳು ಮಾಡುವ ಅರ್ಥಶಾಸ್ತ್ರ. ಯಾರ ಖಾತೆಗಾದರೂ ದುಡ್ಡು ಹಾಕಿದರೆ ಅವರ ಬಡತನ ನಿವಾರಣೆ ಆಗುತ್ತದೆಯೇ? ಕಾಂಗ್ರೆಸ್‌ನವರ ತಲೆಯಲ್ಲಿ ಬುದ್ಧಿಯಲ್ಲ, ಮೆದುಳೇ ಇಲ್ಲ ಎಂದು ನಾವು ಇದರಿಂದ ಅರ್ಥ ಮಾಡಿಕೊಳ್ಳಬಹುದು. ಇವರೆಲ್ಲ ಜನರಿಗೆ ಮಂಕುಬೂದಿ ಎರಚುವಂಥವರು ಎಂದು ಟೀಕಿಸಿದ್ದಾರೆ.

ಬಿಜೆಪಿ, ಪ್ರಧಾನಿ ನರೇಂದ್ರ ಮೋದಿ ನಿಂದಿಸುವುದನ್ನೇ ಸಿದ್ದರಾಮಯ್ಯ ಕೆಲಸ ಮಾಡಿಕೊಂಡಿದ್ದಾರೆ. ತಲೆಮಾರುಗಳಿಂದ ಉಳಿಸಿಕೊಂಡು ಬಂದಿರುವ ಭೂಮಿಯ ಮೇಲೆ ಈಗ ತಮ್ಮ ದೃಷ್ಟಿ ಬೀರಿದ್ದಾರೆ. ಹಿರಿಯರು ಮಾಡಿದ ಆಸ್ತಿಯನ್ನು ಮಾರಿ ಯಾರೂ ಸುಖ ಸಂಸಾರ ಮಾಡಲು ಸಾಧ್ಯವಿಲ್ಲ. ಅದು ಮತ್ತಷ್ಟು ಸಾಲದ ದವಡೆಗೆ ನೂಕುತ್ತದೆ. ಬೆವರು ಸುರಿಸಿ ದುಡಿಯುವ ಜನರ ಹೊಟ್ಟೆಯ ಮೇಲೆ ಪೆಟ್ರೋಲ್‌, ಡೀಸಲ್‌ ಬೆಲೆ ಏರಿಸಿ ಬರೆ ಹಾಕಿದ್ದು, ಈಗ ಆಸ್ತಿ ಮಾರಲು ಹೊರಟಿದ್ದಾರೆ. ಮುಂದಿನ ದಿನಗಳಲ್ಲಿ ವಿಧಾನಸೌಧ, ವಿಕಾಸಸೌಧ ಅಡವಿಟ್ಟರೆ ಆಶ್ಚರ್ಯವಿಲ್ಲ ಎಂದು ಅವರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT