ತುಮಕೂರು: ಕಾಯಕ ಸಮಾಜಗಳಿರುವ ‘2ಎ ಮೀಸಲಾತಿ ಪಟ್ಟಿ’ಗೆ ಪಂಚಮಸಾಲಿ, ಲಿಂಗಾಯತಗೌಡ, ಮಲೆಗೌಡ, ದೀಕ್ಷ ಲಿಂಗಾಯತರನ್ನು ಸೇರಿಸಬಾರದು ಎಂದು ಕರ್ನಾಟಕ ರಾಜ್ಯ ಕಾಯಕ ಸಮಾಜಗಳ ಒಕ್ಕೂಟದ ಅಧ್ಯಕ್ಷ ಕೆ.ಸಿ.ಪುಟ್ಟಸಿದ್ದಶೆಟ್ಟಿ ಇಲ್ಲಿ ಮಂಗಳವಾರ ಒತ್ತಾಯಿಸಿದರು.
2ಎ ಮೀಸಲಾತಿಗೆ ಪಂಚಮಸಾಲಿ ಸಮುದಾಯ ಸೇರಿಸುವಂತೆಕೂಡಲಸಂಗಮ ಪಂಚಮಸಾಲಿ ಗುರುಪೀಠದ ಬಸವಜಯ ಮೃತ್ಯುಂ
ಜಯ ಸ್ವಾಮೀಜಿ ಒತ್ತಡಕ್ಕೆ ಸರ್ಕಾರ ಮಣಿಯಬಾರದು ಎಂದು ಪತ್ರಿಕಾಗೋಷ್ಠಿಯಲ್ಲಿ ಆಗ್ರಹಿಸಿದರು.
ಪಂಚಮಸಾಲಿ ಸಮುದಾಯವನ್ನು 2ಎ ಮೀಸಲಾತಿ ಪಟ್ಟಿಗೆ ಸೇರಿಸಿದರೆ ಕಾಯಕ ಸಮುದಾಯಗಳಾದ ವಿಶ್ವಕರ್ಮ, ಕುಂಬಾರ, ಗಾಣಿಗ, ಉಪ್ಪಾರ, ಬಲಿಜಿಗ, ಮಡಿವಾಳ, ಸವಿತಾ ಸಮಾಜ, ಈಡಿಗ, ಹಿಂದೂ ಸಾದರು, ಯಾದವ, ದೇವಾಂಗ ಶೆಟ್ಟರು ಸೇರಿದಂತೆ 102 ಜಾತಿಗಳಿಗೆ ಅನ್ಯಾಯವಾಗಲಿದೆ. ಪಂಚಮಸಾಲಿ ಸಮುದಾಯ ಸೇರ್ಪಡೆ ವಿರೋಧಿಸಿ, ಜಾತಿ ಗಣತಿಯನ್ನು ಜನರ ಮುಂದಿಡು
ವಂತೆ ಆಗ್ರಹಿಸಿ, ಈಗಿರುವ ಮೀಸಲಾತಿ ಪ್ರಮಾಣವನ್ನು ಶೇ 15ರಿಂದ 27ಕ್ಕೆ ಹೆಚ್ಚಳ ಮಾಡಬೇಕು, ಒಳಮೀಸಲಾತಿ ಕಲ್ಪಿಸುವಂತೆ ಒತ್ತಾಯಿಸಿ ಒಕ್ಕೂಟದ ನೇತೃತ್ವದಲ್ಲಿ ಸೆ. 20ರಂದು ಬೆಂಗಳೂರಿನಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ವಿವರಿಸಿದರು.
ಸ್ವಾತಂತ್ರ್ಯ ಬಂದು 75 ವರ್ಷಗಳು ಕಳೆದಿದ್ದರೂ ಕಸುಬು ಆಧಾರಿತ ಶ್ರಮಿಕ ವರ್ಗಕ್ಕೆ ಸೇರಿದ ಸೂಕ್ಷ್ಮಾತಿ ಸೂಕ್ಷ್ಮ ಜಾತಿಗಳನ್ನು ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಮುಖ್ಯವಾಹಿನಿಗೆ ತರಲು ಎಲ್ಲಾ ಸರ್ಕಾರಗಳು ವಿಫಲವಾಗಿವೆ. ಈ ಸಮುದಾಯಗಳು ಮಾಡುತ್ತಿರುವ ಕಾಯಕಗಳು ನೆಲಕಚ್ಚಿದ್ದು, ಕೂಲಿಮಾಡಿ ಜೀವನ ನಡೆಸುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಉಳಲು ಜಮೀನಿಲ್ಲ, ವಾಸಿಸಲು ಮನೆ ಇಲ್ಲದೆ ಬದುಕು ಅಂತಂತ್ರಕ್ಕೆ ಸಿಲುಕಿದ್ದು, ತಬ್ಬಲಿತನ ಕಾಡುತ್ತಿದೆ ಎಂದು ವಸ್ತುಸ್ಥಿತಿ ಬಿಚ್ಚಿಟ್ಟರು.
ಶಿಕ್ಷಣ, ಸರ್ಕಾರಿ ಉದ್ಯೋಗದಲ್ಲಿ ಶೇ 15ರಷ್ಟು ಮೀಸಲಾತಿ ಪಡೆಯುತ್ತಿರುವುದನ್ನು ಕಂಡು ಮುಂದುವರಿದ ಜಾತಿಯವರು ನಮ್ಮನ್ನು ಬದುಕಲು ಬಿಡುತ್ತಿಲ್ಲ. ನಮ್ಮ ಮಕ್ಕಳಿಗೆ ಸಿಗುತ್ತಿರುವ ಮೀಸಲಾತಿ ಹಕ್ಕು ಕಿತ್ತುಕೊಳ್ಳಲು ಹೊರಟಿದ್ದಾರೆ. ಅದಕ್ಕೆಬಸವಜಯ ಮೃತ್ಯುಂಜಯ ಸ್ವಾಮೀಜಿ ಕಾರಣಕರ್ತರಾಗಿದ್ದಾರೆ. ನಮ್ಮ ವಿರುದ್ಧ ಪಂಚಮಸಾಲಿ ಲಿಂಗಾಯತರನ್ನು ಎತ್ತಿಕಟ್ಟುವ ಕೆಲಸ ಮಾಡುತ್ತಿದ್ದಾರೆ. 2ಎ ಮೀಸಲಾತಿಗೆ ಸೇರಿಸುವಂತೆ ಸರ್ಕಾರದ ಮೇಲೆ ಒತ್ತಡ ತಂದು ಬ್ಲ್ಯಾಕ್‌ಮೇಲ್ ಮಾಡುತ್ತಿದ್ದಾರೆ. ಪ್ರಚೋದನಾಕಾರಿ ಹೇಳಿಕೆಗಳನ್ನು ಕೊಟ್ಟು ಸಮಾಜದಸ್ವಾಸ್ಥ್ಯ ಹಾಳುಮಾಡುತ್ತಿದ್ದಾರೆ ಎಂದರು.
ಈಗಾಗಲೇ ಪಂಚಮಸಾಲಿಗಳು ಶೇ 5ರಷ್ಟು ಮೀಸಲಾತಿ ಪಡೆಯುತ್ತಿದ್ದು, ಸರ್ಕಾರದ ಮೇಲೆ ಒತ್ತಡ ತಂದು ಮೀಸಲಾತಿ ಪ್ರಮಾಣ ಹೆಚ್ಚಿಸಿಕೊಳ್ಳಲಿ. ಅದು ಬಿಟ್ಟು 2ಎಗೆ ಸೇರಿಸಬೇಕು ಎಂದು ಪಟ್ಟುಹಿಡಿಯುವುದು ಸರಿಯಲ್ಲ. ಇದು ಕಾಯಕ ಸಮುದಾಯಗಳ ಅನ್ನ ಕಸಿದುಕೊಳ್ಳುವ ಪ್ರಯತ್ನವಾಗಿದೆ. ಬಸವಣ್ಣ ಐಕ್ಯವಾದ ಸ್ಥಳದಲ್ಲಿ ಪೀಠ ಇಟ್ಟುಕೊಂಡು, ಬಸವಣ್ಣನ ತತ್ವಗಳಿಗೆ ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದಾರೆ. ರಾಜಕೀಯ ಮಾಡುವುದಾದರೆ ಕಾವಿ ಕಳಚಿ, ಪೀಠ ತೊರೆದು ಹೊರಬರಲಿ ಎಂದುಬಸವಜಯ ಮೃತ್ಯುಂಜಯ ಸ್ವಾಮೀಜಿ ವಿರುದ್ಧ ಗುಡುಗಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.