ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಪಾವಗಡ | ಕಚೇರಿ ಸಮಯದಲ್ಲಿ ಪಾರ್ಟಿ: ಕೆಪಿಟಿಸಿಎಲ್‌ ಸಿಬ್ಬಂದಿ ನಡುವೆ ಹೊಡೆದಾಟ

ಬಿಯರ್ ಬಾಟಲಿ ಬಳಸಿ ಬಡಿದಾಟ‌
Published 29 ಮೇ 2024, 23:54 IST
Last Updated 29 ಮೇ 2024, 23:54 IST
ಅಕ್ಷರ ಗಾತ್ರ

ಪಾವಗಡ (ತುಮಕೂರು): ವಾರದ ಹಿಂದೆ ನಡೆದ ಪಾರ್ಟಿಯಲ್ಲಿ ಇಲ್ಲಿಯ ಕರ್ನಾಟಕ ವಿದ್ಯುತ್‌ ಪ್ರಸರಣ ನಿಗಮ (ಕೆಪಿಟಿಸಿಎಲ್‌) ಕಚೇರಿಯ ಜೂನಿಯರ್‌ ಎಂಜಿನಿಯರ್‌ ಮತ್ತು ಸಿಬ್ಬಂದಿ ಬಿಯರ್‌ ಬಾಟಲಿಯಿಂದ ಹೊಡೆದಾಡಿಕೊಂಡಿದ್ದಾರೆ ಎಂಬ ದೃಶ್ಯಗಳಿರುವ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಈಗ ಹರಿದಾಡುತ್ತಿದೆ.

ಮೇ 23ರಂದು ಕಚೇರಿಯ ಸಮಯದಲ್ಲೇ ಪಟ್ಟಣದ ಹೊರವಲಯದ ತೋಟವೊಂದರಲ್ಲಿ ಕೆಪಿಟಿಸಿಎಲ್‌ ಅಧಿಕಾರಿಗಳು ಮತ್ತು ಸಿಬ್ಬಂದಿ ಸೇರಿ ಪಾರ್ಟಿ ಮಾಡಿದ್ದರು. ಪಾರ್ಟಿ ಮಧ್ಯೆ ಮಾತಿಗೆ ಮಾತು ಬೆಳೆದು ಕೈ ಕೈ ಮಿಲಾಯಿಸಿದ್ದಾರೆ.

ಮೆಕ್ಯಾನಿಕಲ್‌ ಗ್ರೇಡ್‌ (ಜೆಎಂ) ಸಿಬ್ಬಂದಿ ನರಸಿಂಹಮೂರ್ತಿ ಎಂಬವರು ಜೂನಿಯರ್‌ ಎಂಜಿನಿಯರ್‌ ವರದರಾಜು ಎಂಬವರ ತಲೆಗೆ ಬಿಯರ್‌ ಬಾಟಲಿಯಿಂದ ಬಲವಾಗಿ ಹೊಡೆದಿದ್ದಾರೆ. ತಲೆಗೆ ಪೆಟ್ಟು ಬಿದ್ದು ರಕ್ತ ಸುರಿದಿದೆ. ವರದರಾಜು ಅವರೂ ಬಿಯರ್‌ ಬಾಟಲಿ ಹಿಡಿದು ನರಸಿಂಹಮೂರ್ತಿ ಮೇಲೆ ಹಲ್ಲೆ ಮಾಡಿರುವುದು ವಿಡಿಯೊದಲ್ಲಿ ದಾಖಲಾಗಿದೆ.

ಮತ್ತೊಬ್ಬ ಜೂನಿಯರ್‌ ಎಂಜಿನಿಯರ್‌ ಶ್ರೀನಿವಾಸ್‌, ಕಚೇರಿ ಅಟೆಂಡರ್‌ ಸಂತೋಷ್‌ ಜಗಳ ಬಿಡಿಸಿದ್ದಾರೆ. ಪಾರ್ಟಿಯಲ್ಲಿ ಭಾಗವಹಿಸಿದ್ದ ಸಿಬ್ಬಂದಿಯೊಬ್ಬರು ಈ ಹೊಡೆದಾಟವನ್ನು ತಮ್ಮ ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದಾರೆ.

ಈ ಘಟನೆಯಲ್ಲಿ ಗಾಯಗೊಂಡ ಸಿಬ್ಬಂದಿ ಸೇರಿದಂತೆ ಎಲ್ಲರೂ ಕಚೇರಿಗೆ ಹೋಗಿದ್ದಾರೆ. ಆದರೆ, ಜಗಳ ನಡೆದಿರುವುದನ್ನು ಮುಚ್ಚಿಟ್ಟಿದ್ದಾರೆ. ಕಚೇರಿಯ ಅಧಿಕಾರಿಗಳ ಮಧ್ಯೆ ಇರುವ ಮನಸ್ತಾಪದಿಂದ ವಾರದ ನಂತರ ವಿಡಿಯೊ ಬಹಿರಂಗವಾಗಿದೆ ಎಂದು ಮೂಲಗಳು ಹೇಳಿವೆ.

ಕೆಪಿಟಿಸಿಎಲ್‌ ಕಚೇರಿ ಸಿಬ್ಬಂದಿ ಮಧ್ಯೆ ಹಣ ಹಂಚಿಕೆಯ ವಿಷಯದಲ್ಲಿನ ಮನಸ್ತಾಪದಿಂದ ವಿಡಿಯೊ ಹೊರ ಬಂದಿದೆ. ಪರಸ್ಪರ ಹೊಡೆದಾಟ ಮಾಡಿಕೊಂಡ ಸಿಬ್ಬಂದಿಯ ವಿರೋಧಿ ಬಣದವರು ವಿಡಿಯೊ ಬಿಡುಗಡೆ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.

ನೋಟಿಸ್‌ ಜಾರಿ

ಪಾವಗಡ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಇದುವರೆಗೂ ಯಾವುದೇ ದೂರು ದಾಖಲಾಗಿಲ್ಲ. ಆದರೆ, ಎಂಜಿನಿಯರ್ ಸೇರಿದಂತೆ ನಾಲ್ವರು ಸಿಬ್ಬಂದಿಗೆ ಕಾರಣ ಕೇಳಿ ಮಧುಗಿರಿ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್‌ ಜಯದೇವಪ್ಪ ನೋಟಿಸ್‌ ಜಾರಿ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT