ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲ್ಪತರು ನಾಡಿನಲ್ಲಿ ವಿಶ್ವೇಶತೀರ್ಥರ ಹೆಜ್ಜೆ ಗುರುತು

ತುಮಕೂರು ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್; ಜಿಲ್ಲೆಯ ಮಠಗಳೊಂದಿಗೆ ಅವಿನಾಭಾವ ಸಂಬಂಧ
Last Updated 29 ಡಿಸೆಂಬರ್ 2019, 16:30 IST
ಅಕ್ಷರ ಗಾತ್ರ

ತುಮಕೂರು: ಜಿಲ್ಲೆಯೊಂದಿಗೆ ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಅವರ ಒಡನಾಡ ಉತ್ತಮವಾಗಿತ್ತು. ಕೇವಲ ಮಾಧ್ವ ಬ್ರಾಹ್ಮಣ ಸಮುದಾಯ ಕಾರ್ಯಕ್ರಮಗಳಲ್ಲಿ ಅಷ್ಟೇ ಅಲ್ಲ ಜಿಲ್ಲೆಯ ಹಲವು ಮಠಗಳಲ್ಲಿ ನಡೆದ ಕಾರ್ಯಕ್ರಮಗಳಲ್ಲಿ ಅವರು ಪಾಲ್ಗೊಂಡಿದ್ದಾರೆ.

ಅದರಲ್ಲಿಯೂ ಸಿದ್ಧಗಂಗಾ ಮಠದ ಶಿವಕುಮಾರ ಸ್ವಾಮೀಜಿ ಅವರೊಂದಿಗೆ ಒಡನಾಟ ಹೆಚ್ಚು. ಪೇಜಾವರ ಮಠದಲ್ಲಿ ನಡೆಯುತ್ತಿದ್ದ ಕಾರ್ಯಕ್ರಮಗಳಲ್ಲಿ ಶಿವಕುಮಾರ ಸ್ವಾಮೀಜಿ ಪಾಲ್ಗೊಂಡಿದ್ದಾರೆ. ಅದೇ ರೀತಿ ಸಿದ್ಧಗಂಗಾ ಮಠದಲ್ಲಿ ನಡೆದ ಕಾರ್ಯಕ್ರಮಗಳಲ್ಲಿ ವಿಶ್ವೇಶತೀರ್ಥ ಸ್ವಾಮೀಜಿ ಭಾಗಿ ಆಗಿದ್ದಾರೆ.

ಶಿವಕುಮಾರ ಸ್ವಾಮೀಜಿ ಅನಾರೋಗ್ಯಕ್ಕೆ ತುತ್ತಾದ ಸಂದರ್ಭದಲ್ಲಿ ಅವರ ಆರೋಗ್ಯದ ಬಗ್ಗೆ ಕಾಳಜಿವಹಿಸಿದವರಲ್ಲಿ ವಿಶ್ವೇಶತೀರ್ಥರು ಪ್ರಮುಖರು. ಸ್ವಾಮೀಜಿ ಅನಾರೋಗ್ಯಕ್ಕೆ ತುತ್ತಾಗಿದ್ದ ದಿನಗಳಲ್ಲಿ ಬೆಳ್ಳಂ ಬೆಳಿಗ್ಗೆ ಅವರ ಆರೋಗ್ಯ ವಿಚಾರಿಸಲು ಮಠಕ್ಕೆ ಬರುತ್ತಿದ್ದರು. ಶಿವಕುಮಾರ ಸ್ವಾಮೀಜಿ ಅವರ 112ನೇ ಜಯಂತಿ ಮತ್ತು ಗುರುವಂದನೆ ಕಾರ್ಯಕ್ರಮದಲ್ಲಿಯೂ ಭಾಗಿಯಾಗಿದ್ದರು.

ಜಿಲ್ಲಾ ಮಾಧ್ವ ಸಮ್ಮೇಳನ, ವಾಸವಿ ಸಂಘ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಸಾವಿರ ದಿನಗಳ ಸತ್ಸಂಗ... ಅವರು ಇತ್ತೀಚೆಗೆ ಜಿಲ್ಲೆಯಲ್ಲಿ ಪಾಲ್ಗೊಂಡ ಕಾರ್ಯಕ್ರಮಗಳಾಗಿವೆ.

2014ರಲ್ಲಿ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಕುಪ್ಪೂರು ಗದ್ದುಗೆ ಮಠದಲ್ಲಿ ನಡೆದ ಯತೀಶ್ವರ ಶಿವಾಚಾರ್ಯ ಸ್ವಾಮೀಜಿ ಅವರ ಪೀಠಾರೋಹಣ ರಜತಮಹೋತ್ಸವದಲ್ಲಿ ಭಾಗವಹಿಸಿದ್ದರು. ಜಿಲ್ಲೆಯ ಧಾರ್ಮಿಕ ಕ್ಷೇತ್ರದಲ್ಲಿ ಸ್ವಾಮೀಜಿ ಅವರು ಮಹತ್ವದ ಸ್ಥಾನ ಪಡೆದಿದ್ದರು.

2010 ತುಮಕೂರು ವಿಶ್ವವಿದ್ಯಾಲಯವು ಸ್ವಾಮೀಜಿ ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಿತ್ತು.

ಕೆ.ಬಿ.ಸಿದ್ದಯ್ಯ ಮನೆಗೆ ಭೇಟಿ:ವಿಶ್ವೇಶತೀರ್ಥ ಸ್ವಾಮೀಜಿ ಸಾಹಿತಿ ಹಾಗೂ ದಲಿತ ಹೋರಾಟಗಾರ ದಿ.ಕೆ.ಬಿ.ಸಿದ್ದಯ್ಯ ಅವರ ಮನೆಗೆ ಅನಿರೀಕ್ಷಿಯವಾಗಿ ಭೇಟಿ ನೀಡಿದ್ದು ಜಿಲ್ಲೆಯ ಜನಮಾನಸದಲ್ಲಿ ಅಚ್ಚಳಿಯದೆ ಉಳಿದಿದೆ. ಆ ಸಮಯದಲ್ಲಿ ಸ್ವಾಮೀಜಿ ದಲಿತರ ಮನೆಗಳಲ್ಲಿ ಪಾದ ಪೂಜೆ ಇತ್ಯಾದಿ ಕಾರ್ಯಕ್ರಮದ ಮೂಲಕ ಹಿಂದೂ ಧರ್ಮದಲ್ಲಿನ ಅಸ್ಪೃಶ್ಯತೆ ಹೋಗಲಾಡಿಸಲು ತಮ್ಮದೇ ಆದ ರೀತಿಯಲ್ಲಿ ಕಾರ್ಯಕ್ರಮಗಳನ್ನು ಕೈಗೊಂಡಿದ್ದರು.

‘ನಮ್ಮ ಯಜಮಾನರಿಗೆ ಮೈಸೂರಿನ ಕಾರ್ಯಕ್ರಮವೊಂದರಲ್ಲಿ ಸ್ವಾಮೀಜಿ ಪರಿಚಯ ಆಗಿತ್ತಂತೆ. ಸ್ವಾಮೀಜಿ ಯಾವುದೋ ಕಾರ್ಯಕ್ರಮಕ್ಕೆ ತುಮಕೂರಿಗೆ ಬಂದಾಗ, ನಮ್ಮ ಮನೆಗೆ ಬರುವ ಇಂಗಿತ ವ್ಯಕ್ತಪಡಿಸಿದ್ದರು. ನಾವು ಬೇಡ ಎನ್ನಲಾಗುತ್ತದೆಯೇ, ಬರಮಾಡಿಕೊಂಡೆವು’ ಎಂದು ಸಿದ್ದಯ್ಯ ಅವರ ಪತ್ನಿ ಪಿ.ಗಂಗರಾಜಮ್ಮ ಸ್ಮರಿಸುವರು.

ಸ್ವಾಮೀಜಿ ಬಂದ ದಿನ ಜೋರು ಮಳೆ ಸುರಿಯುತ್ತಿತ್ತು. ವಯಸ್ಸಾಗಿರುವ ಸ್ವಾಮೀಜಿ ಜಾರಿ ಬೀಳದಂತೆ ನಾವು ಕಾಳಜಿ ತೋರುತ್ತಿದ್ದೆವು. ಆಗ ನಮ್ಮ ಯಜಮಾನರು ‘ಅವರೆಲ್ಲಿ ಬೀಳುತ್ತಾರೆ, ನಮ್ಮಂತವರನ್ನು ಬೀಳಿಸುತ್ತಾರೆ’ ಎಂದು ಚಟಾಕಿ ಹಾರಿಸಿದ್ದರು ಎಂದು ನೆನಪಿಸಿಕೊಂಡರು.

***

ಸಾಮಾಜಿಕ ಬದಲಾವಣೆ ತಂದ ಸಂತ

ವಿಶ್ವೇಶತೀರ್ಥ ಸ್ವಾಮೀಜಿ ಸಾಮಾಜಿಕ, ಧಾರ್ಮಿಕ ಮತ್ತು ಶೈಕ್ಷಣಿಕ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಸುದೀರ್ಘವಾದ ಸನ್ಯಾಸಾಶ್ರಮ ನಡೆಸಿದವರು. ಅವರು ಕೇವಲ ಕರ್ನಾಟಕವಷ್ಟೇ ಅಲ್ಲ ರಾಷ್ಟ್ರದ ಎಲ್ಲೆಡೆ ಸಂಚರಿಸಿ ಧಾರ್ಮಿಕ ಸಂಸ್ಕಾರ ನೀಡಿದವರು. ಸಾಮಾಜಿಕ ಬದಲಾವಣೆ ತಂದರು.

ಅತಿ ಹೆಚ್ಚು ಪರ್ಯಾಯ ನಡೆಸಿದ ಕೀರ್ತಿ ಅವರದ್ದು. ನಮ್ಮ ಮತ್ತು ಅವರ ಒಡನಾಟ ಅಪಾರವಾದುದು ಪೂಜ್ಯರು ಮಠದ ಬಗ್ಗೆ ಅಪಾರವಾದ ಗೌರವವನ್ನು ಹೊಂದಿದ್ದರು. ನಾವು ಸಹ ಅವರಲ್ಲಿ ಹೆಚ್ಚಿನ ಗೌರವವನ್ನು ಇಟ್ಟುಕೊಂಡಿದ್ದೆವು. ಸ್ವಾಮೀಜಿ ಅವರ ಸೇವೆ, ತ್ಯಾಗ ಅನುಕರಣೀಯವಾದುದು.

ಸಿದ್ದಲಿಂಗ ಸ್ವಾಮೀಜಿ, ಸಿದ್ಧಗಂಗಾ ಮಠದ ಅಧ್ಯಕ್ಷ

***

ಆತ್ಮೀಯ ಒಡನಾಟ

ವಿಶ್ವೇಶತೀರ್ಥ ಸ್ವಾಮೀಜಿ ಅತ್ಯಂತ ವಾಗ್ಮಿಗಳು, ಸರ್ವಧರ್ಮಪ್ರಿಯರೂ, ಭಕ್ತಜನಪ್ರಿಯರೂ, ಧರ್ಮೋದ್ಧಾರದ ಕನಸುಗಳನ್ನು ಕಟ್ಟಿಕೊಂಡವರೂ ಆಗಿದ್ದರು. ಅದರಲ್ಲಿ ಯಶಸ್ಸು ಕಂಡರು. ಸರಳ ನಡೆ ನುಡಿಯ ಶ್ರೀಗಳವರ ಅತ್ಯಂತ ಆತ್ಮೀಯ ಒಡನಾಟವನ್ನು ನಾವು ಎಂದೆಂದಿಗೂ ಮರೆಯಲಾರೆವು.

ಯತೀಶ್ವರ ಶಿವಾಚಾರ್ಯ ಸ್ವಾಮೀಜಿ, ಕುಪ್ಪೂರು ಗದ್ದುಗೆ ಮಠ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT