ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಿಯು ಉಪನ್ಯಾಸಕರಿಗೆ ಇನ್ನೂ ಸಿಗದ ವೇತನ

ಬೋಧಕ ಸಿಬ್ಬಂದಿ ಸಂಬಳ ಬೋಧಕೇತರರಿಗೆ ನೀಡಿದ್ದೇ ಕಾರಣ
Last Updated 7 ಡಿಸೆಂಬರ್ 2019, 1:59 IST
ಅಕ್ಷರ ಗಾತ್ರ

ತುಮಕೂರು: ಸರ್ಕಾರಿ ಹಾಗೂ ಅನುದಾನಿತ ಪದವಿಪೂರ್ವ ಕಾಲೇಜುಗಳ ಉಪನ್ಯಾಸಕರಿಗೆ ಎರಡು ತಿಂಗಳಿಂದ ವೇತನ ಪಾವತಿಯಾಗಿಲ್ಲ. ಇದರಿಂದ ಉಪನ್ಯಾಸಕರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಪಿಯು ಮಂಡಳಿಯ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗೆ ಡಿಸೆಂಬರ್‌ ತಿಂಗಳ ಮೊದಲ ವಾರ ಕಳೆಯುತ್ತಿದ್ದರೂ ಅಕ್ಟೋಬರ್‌ ಹಾಗೂ ನವೆಂಬರ್‌ ತಿಂಗಳ ಸಂಬಳ ಪಾವತಿಯಾಗದೆ ಇರುವುದು ರಾಜ್ಯದ ಸುಮಾರು 18,000 ಸಿಬ್ಬಂದಿಯನ್ನು ಆತಂಕಕ್ಕೆ ದೂಡಿದೆ.

ಏಕೆ ಪಾವತಿಯಾಗಿಲ್ಲ: ‘ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗೆ ವೇತನ ಪಾವತಿ ಮಾಡಲು ಲೆಕ್ಕಶೀರ್ಷಿಕೆ (ಹೆಡ್‌ ಆಫ್‌ ಅಕೌಂಟ್‌) ಎಂಬುದಿರುತ್ತದೆ. ಅದರಲ್ಲಿ ಇಬ್ಬರಿಗೂ ಪ್ರತ್ಯೇಕ ಲೆಕ್ಕಶೀರ್ಷಿಕೆ ಅಡಿ ವೇತನ ಪಾವತಿ ಮಾಡಲಾಗುತ್ತದೆ. ವರ್ಷದ ಮೊದಲೇ ಒಂದು ವರ್ಷಕ್ಕಾಗುವಷ್ಟು ವೇತನವನ್ನು ಖಜಾನೆಗೆ ತುಂಬಲಾಗುತ್ತದೆ’ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

ಪ್ರಸಕ್ತ ವರ್ಷ ಬೋಧಕೇತರ ಸಿಬ್ಬಂದಿಗೆ ನೀಡುವ ವೇತನವನ್ನು ಬೋಧಕ ಸಿಬ್ಬಂದಿಗೆ ನೀಡುವ ಖಜಾನೆಯಿಂದ ತೆಗೆಯಲಾಗಿದೆ. ಇದರಿಂದ ಬೋಧಕ ಸಿಬ್ಬಂದಿಗೆ ನೀಡುವ ವೇತನದ ಖಜಾನೆ ಖಾಲಿಯಾಗಿದೆ. ಸುಮಾರು ₹ 178 ಕೋಟಿ ಹೆಚ್ಚುವರಿ ಹಣವನ್ನು ಬೋಧಕ ಸಿಬ್ಬಂದಿಗೆ ನೀಡುವ ಖಜಾನೆಯಿಂದ ತೆಗೆಯಲಾಗಿದೆ ಎನ್ನಲಾಗುತ್ತಿದೆ.

ಆದ್ದರಿಂದ ಎರಡೂ ಖಜಾನೆಯಲ್ಲಿನ ವೇತನ ಸರಿದೂಗಿಸಲು ಸಿಬ್ಬಂದಿ ವೇತನವನ್ನು ತಡೆ ಹಿಡಿಯಲಾಗಿದೆ. ಇದನ್ನು ಮರುಹೊಂದಾಣಿಕೆ ಮೂಲಕ ಸರಿದೂಗಿಸಬೇಕು ಎಂಬ ಉತ್ತರವನ್ನು ಪಿಯು ಮಂಡಳಿ ಉಪನ್ಯಾಸಕರಿಗೆ ಹೇಳುತ್ತಿದೆ.

‘ರಾಜ್ಯಮಟ್ಟದಲ್ಲಿ ಆರ್ಥಿಕ ಇಲಾಖೆ, ಖಜಾನೆ ಅಧಿಕಾರಿಗಳು ಹಾಗೂ ಪಿಯು ಮಂಡಳಿ ಅಧಿಕಾರಿಗಳು ಸೇರಿ ಸಮಸ್ಯೆಯನ್ನು ಬಗೆಹರಿಸಬೇಕು. ವಾರದೊಳಗಾಗಿ ಸರಿಪಡಿಸುವ ಸಮಸ್ಯೆ ಇದು. ಅದಕ್ಕೆ ಎರಡು ತಿಂಗಳು ಬೇಕೆ?. ರಾಜ್ಯ ಸರ್ಕಾರದ ಖಜಾನೆಯಲ್ಲೇ ಹಣವಿಲ್ಲ. ಆದ್ದರಿಂದ ಉಪನ್ಯಾಸಕರಿಗೆ ಇಲಾಖೆ ಇಲ್ಲದ ಸಬೂಬು ಹೇಳುತ್ತಿದೆ’ ಎಂದು ಅನುದಾನಿತ ಕಾಲೇಜಿನ ಉಪನ್ಯಾಸಕರೊಬ್ಬರು ಅಸಮಾಧಾನ ವ್ಯಕ್ತಪಡಿಸಿದರು.

‘ಮನೆ ನಿರ್ಮಾಣಕ್ಕಾಗಿ ಬ್ಯಾಂಕ್‌ನಲ್ಲಿ ಸಾಲ ತೆಗೆದಿದ್ದೇನೆ. ಪ್ರತಿ ತಿಂಗಳ ಸಂಬಳದಲ್ಲಿ ಸಾಲ ಕಡಿತಗೊಳ್ಳುತ್ತಿತ್ತು. ಎರಡು ತಿಂಗಳಿಂದ ವೇತನ ಪಾವತಿ ಆಗದಿರುವುದರಿಂದ ಸಾಲಕ್ಕೆ ದಂಡ ಕಟ್ಟುವ ಸ್ಥಿತಿ ಉಂಟಾಗಿದೆ’ ಎಂದು ಉಪನ್ಯಾಸಕಿಯೊಬ್ಬರು ಬೇಸರದಿಂದ ನುಡಿದರು.

‘ಈ ತಿಂಗಳ ಅಂತ್ಯಕ್ಕೆ ಮಗಳ ಮದುವೆ ಇದೆ. ಎರಡು ತಿಂಗಳಿಂದ ಕೈಗೆ ಸಂಬಳ ಬರದಿರುವುದು ನುಂಗಲಾರದ ತುತ್ತಾಗಿದೆ. ಅಷ್ಟೊ ಇಷ್ಟೊ ಖರ್ಚಿಗೂ ಈಗ ಸಾಲ ಮಾಡುವ ಸ್ಥಿತಿ ಬಂದಿದೆ’ ಎಂದು ಮತ್ತೊಬ್ಬ ಉಪನ್ಯಾಸಕರು ಅಳಲು ತೋಡಿಕೊಂಡರು.

***

ತಾಂತ್ರಿಕ ದೋಷದಿಂದ ಸಂಬಳ ಪಾವತಿಯಾಗಿಲ್ಲ. ಇಲಾಖೆಯಿಂದ ಪರಿಶೀಲನೆ ನಡೆಸಿ ಹಣ ಹಾಕಲಾಗುತ್ತದೆ. ವೇತನ ಬರಲು ಇನ್ನು ಎಷ್ಟು ದಿನ ಆಗುತ್ತದೆ ಎಂಬುದು ಗೊತ್ತಿಲ್ಲ.

–ಲಲಿತಾ ಕುಮಾರಿ, ಡಿಡಿಪಿಯು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT