ಗುಬ್ಬಿ: ಪಟ್ಟಣದ ತಾಲ್ಲೂಕು ಆಸ್ಪತ್ರೆಗೆ ಸೋಮವಾರ ರಾತ್ರಿ ಸುರಿದ ಮಳೆಗೆ ನೀರು ನುಗ್ಗಿ ರೋಗಿಗಳು ಪರದಾಡುವಂತಾಯಿತು.
ಒಂದು ಗಂಟೆಗೂ ಹೆಚ್ಚು ಸಮಯ ಸುರಿದ ಮಳೆಯಿಂದಾಗಿ ಆಸ್ಪತ್ರೆಯ ಕೆಳ ಅಂತಸ್ತಿನಲ್ಲಿರುವ ಐಸಿಯು ವಾರ್ಡ್ ಸೇರಿದಂತೆ ರೋಗಿಗಳ ವಾರ್ಡ್‌ಗಳಿಗೆ ನೀರು ನುಗ್ಗಿತು.
ವೈದ್ಯರು ಹಾಗೂ ಸಿಬ್ಬಂದಿ ರೋಗಿಗಳನ್ನು ಬೇರೆ ವಾರ್ಡ್‌ಗಳಿಗೆ ಸ್ಥಳಾಂತರಿಸಿ ಅಗತ್ಯಕ್ರಮ ಕೈಗೊಂಡರು.
ವಾರ್ಡ್‌ನಲ್ಲಿ 11 ಪುರುಷ ಹಾಗೂ 5 ಮಹಿಳಾ ರೋಗಿಗಳು ಇದ್ದು ಒಮ್ಮೆಲೆ ನೀರು ನುಗ್ಗಿದ್ದರಿಂದ ರೋಗಿಗಳು ಆತಂಕಕ್ಕೆ ಒಳಗಾದರು.
ನೂರು ಹಾಸಿಗೆಗಳ ಆಸ್ಪತ್ರೆಯಾಗಿದ್ದರೂ, ಮೂಲ ಸೌಕರ್ಯ ಕೊರತೆಯಿಂದ ಪ್ರತಿಬಾರಿ ಮಳೆ ಬಂದಾಗಲೂ ಇಂತಹ ಪರಿಸ್ಥಿತಿ ಎದುರಿಸುವಂತಾಗಿದೆ ಎಂದು ಸ್ಥಳೀಯರು ಆರೋಸಿದ್ದಾರೆ.
ಮಳೆಯ ನೀರಿನ ಜೊತೆಗೆ ಚಾವಣಿ ನೀರು ಒಂದೆಡೆ ಸೇರಿ ಹೊರಗಡೆ ಹೋಗಲು ಇಕ್ಕಟ್ಟಾಗಿರುವುದರಿಂದ ವಾರ್ಡ್‌ಗಳಿಗೆ ನೀರು ನುಗ್ಗಿದೆ. ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಗಮನಕ್ಕೆ ಈ ಸಮಸ್ಯೆಯನ್ನು ತಂದಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ರೋಗಿಗಳು ದೂರಿದರು.
ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ. ಕೇಶವರಾಜ್ ಪ್ರತಿಕ್ರಿಯಿಸಿ, ಆಸ್ಪತ್ರೆಯ ನೀರು ಹೊರಗೆ ಹರಿದು ಹೋಗಲು ಚರಂಡಿ ಇದ್ದರೂ ತುಂಬಾ ಕಿರಿದಾಗಿದೆ. ಜೋರಾಗಿ ಮಳೆ ಬಂದಲ್ಲಿ ಇಂತಹ ಸಮಸ್ಯೆ ಉಂಟಾಗುತ್ತಿದೆ. ತಕ್ಷಣ ಕ್ರಮ ಕೈಗೊಂಡು ನೀರು ಒಳಗೆ ನುಗ್ಗದಂತೆ ತಡೆ ನಿರ್ಮಿಸಲು ಕ್ರಮ ಕೈಗೊಂಡಿದ್ದೇವೆ ಎಂದರು.