ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುಮಕೂರು: ರಂಜಾನ್; ಸರಳ ಆಚರಣೆಯತ್ತ ಚಿತ್ತ

ಮನೆಗಳಲ್ಲಿಯೇ ಪ್ರಾರ್ಥನೆ; ಕುಗ್ಗಿದ ಖರೀದಿಯ ಭರಾಟೆ
Last Updated 22 ಮೇ 2020, 15:14 IST
ಅಕ್ಷರ ಗಾತ್ರ

ತುಮಕೂರು: ಕೊರೊನಾ ಭೀತಿ, ಲಾಕ್‌ಡೌನ್‌ ನಡುವೆಯೇ ಸರಳವಾಗಿ ರಂಜಾನ್ ಆಚರಿಸಲು ಮುಸ್ಲಿಂ ಸಮುದಾಯದವರು ಸಜ್ಜಾಗಿದ್ದಾರೆ.

ರಂಜಾನ್‌ ಮಾಸದಲ್ಲಿ ಮುಸ್ಲಿಮರಿಗೆ ಎಲ್ಲಿಲ್ಲದ ಸಂಭ್ರಮ. ಈ ವೇಳೆ ಹೊಸಬಟ್ಟೆಗಳ ಖರೀದಿ, ಮನೆ, ಮಸೀದಿಗಳಿಗೆ ಬಣ್ಣ ಬಳಿಯುವುದು, ನೆಂಟರಿಗೆ ಆಹ್ವಾನ, ಸಾಮೂಹಿಕ ಪ್ರಾರ್ಥನೆ, ಬಡವರಿಗೆ, ನಿರ್ಗತಿಕರಿಗೆ ದಾನ... ಹೀಗೆ ಪ್ರತಿಯೊಬ್ಬರು ಸಂಭ್ರಮದಿಂದ ದಿನಗಳನ್ನು ಕಳೆಯುತ್ತಿದ್ದರು. ಆದರೆ, ಈ ವರ್ಷ ಸಂಭ್ರಮದ ಮೇಲೆ ಕೊರೊನಾ ಕರಿನೆರಳು ಆವರಿಸಿದೆ.

ರಂಜಾನ್‌ ಮಾಸದಲ್ಲಿ ಜನಜಂಗುಳಿಯಿಂದ ಕೂಡಿರುತ್ತಿದ್ದ ಅಂಗಡಿಗಳು ಬಿಕೋ ಎನ್ನುತ್ತಿವೆ. ಪ್ರಮುಖ ವಾಣಿಜ್ಯ ಕೇಂದ್ರಗಳಾದ ಬಿ.ಎಚ್.ರಸ್ತೆ, ಎಂ.ಜಿ.ರಸ್ತೆ, ಅಶೋಕ ರಸ್ತೆ, ಎಸ್‌.ಎಸ್‌.ಪುರಂ ರಸ್ತೆ, ಕುಣಿಗಲ್ ರಸ್ತೆ, ಚಿಕ್ಕಪೇಟೆ, ಮಂಡಿಪೇಟೆ, ಉಪ್ಪಾರಹಳ್ಳಿ, ಹೊರಪೇಟೆ, ಕುಣಿಗಲ್ ರಸ್ತೆ ರಂಜಾನ್ ವೇಳೆ ಜನರಿಂದ ಗಿಜಿಗುಡುತ್ತಿದ್ದವು. ಆದರೆ, ಈ ವರ್ಷ ಗ್ರಾಹಕರ ಸಂಖ್ಯೆ ಕಡಿಮೆಯಾಗಿದೆ.

ಇಫ್ತಾರ್ ಕೂಟಕ್ಕೆ ತಡೆ

ಉಪವಾಸ ಮುಗಿಸಿದ ನಂತರ ಸಂಜೆ, ರಾತ್ರಿ ಇಫ್ತಾರ್ ಕೂಟಗಳು ನಡೆಯುತ್ತಿದ್ದವು. ಈ ಕೂಟಕ್ಕೆ ವಿವಿಧ ಜಾತಿ, ಜನಾಂಗ, ಧರ್ಮದ, ಸ್ನೇಹಿತರನ್ನು ಆಹ್ವಾನಿಸುತ್ತಿದ್ದರು. ಆದರೆ, ತುಮಕೂರಿನಲ್ಲಿ ಸಂಜೆ 7 ರಿಂದ ಬೆಳಿಗ್ಗೆ 7ರವರೆಗೆ ನಿಷೇಧಾಜ್ಞೆ ಜಾರಿ ಇರುವುದರಿಂದ ಕೂಟಗಳನ್ನು ನಡೆಸುವುದಕ್ಕೆ ತಡೆ ಬಿದ್ದಿದೆ.

ತರಾಬಿ ಪ್ರವಚನ

ರಂಜಾನ್‌ ಮಾಸದಲ್ಲಿ ಬೆಳಗಿನ ಜಾವದಿಂದ ಸಂಜೆಯವರೆಗೆ ಉಪವಾಸ ಇರುವ ಮುಸ್ಲಿಮರು ಈ ಅವಧಿಯಲ್ಲಿ ಕನಿಷ್ಠ ಮೂರ್ನಾಲ್ಕು ಬಾರಿಯಾದರೂ ಮಸೀದಿಗಳಿಗೆ ತೆರಳಿ ಸಾಮೂಹಿಕವಾಗಿ ಪ್ರಾರ್ಥನೆ ಸಲ್ಲಿಸುತ್ತಿದ್ದರು. ಈ ವೇಳೆ ಮೌಲ್ವಿಗಳು ತರಾಬಿ ಪ್ರವಚನ ನೀಡುತ್ತಿದ್ದರು. ಕುರಾನ್‌ ಓದಲು ಬಾರದವರಿಗೆ ಈ ತರಾಬಿ ಪ್ರವಚನ ಹೆಚ್ಚು ಉಪಯುಕ್ತ ಆಗುತ್ತಿತ್ತು. ಆದರೆ, ಈ ಬಾರಿ ಮಸೀದಿಗಳಲ್ಲಿ ಸಾಮೂಹಿಕ ಪ್ರಾರ್ಥನೆಗೆ ಅವಕಾಶ ಇಲ್ಲದ ಕಾರಣ ಅನೇಕರು ತರಾಬಿ ಪ್ರವಚನಕೇಳಲಾಗದೆ ಬೇಸರಗೊಂಡಿದ್ದಾರೆ.

ಮುಖಂಡರ ಮನವಿ

ಲಾಕ್‌ಡೌನ್‌ ಹಾಗೂ ಕೊರೊನಾ ಭೀತಿ ಹಿನ್ನೆಲೆಯಲ್ಲಿ ಸಮುದಾಯದ ಮುಖಂಡರು ಹಬ್ಬವನ್ನು ಸರಳವಾಗಿ ಆಚರಿಸುವಂತೆ ಸಮುದಾಯದ ಜನರಿಗೆ ಮನವಿ ಮಾಡುತ್ತಿದ್ದಾರೆ. ಹಬ್ಬಕ್ಕಾಗಿ ಖರ್ಚು ಮಾಡುತ್ತಿದ್ದ ಹಣವನ್ನು ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್‌ ಎಂಬ ತಾರತಮ್ಯ ಮಾಡದೇ ಕಷ್ಟದಲ್ಲಿರುವವರನ್ನು ಗುರುತಿಸಿ ದಿನಸಿ ಹಾಗೂ ನಗದು ದಾನ ಮಾಡುವಂತೆ ತಿಳಿಸುತ್ತಿದ್ದಾರೆ.

ದಾನ, ಧರ್ಮಕ್ಕೆ ಮೀಸಲು

ರಂಜಾನ್‌ ಮಾಸದಲ್ಲಿ ಸಮುದಾಯದ ಸ್ಥಿತಿವಂತರು ಜಾತಿ, ಧರ್ಮವನ್ನು ಮರೆತು ಬಡವರಿಗೆ, ನಿರ್ಗತಿಕರಿಗೆ ಹಣ, ದವಸ ಧಾನ್ಯ, ಹಣ್ಣು, ಬಟ್ಟೆ ಹಂಚಿ ಸಹಾಯ ಹಸ್ತ ಚಾಚುವುದು ವಾಡಿಕೆ. ಹಾಗಾಗಿ ಈ ವರ್ಷ ಅನೇಕರು ಸರಳ ರಂಜಾನ್ ಆಚರಣೆಗೆ ಮುಂದಾಗಿರುವುದರಿಂದ ರಂಜಾನ್ ಮಾಸದಲ್ಲಿ ಖರ್ಚು ಮಾಡುತ್ತಿದ್ದ ಹಣವನ್ನು ದಾನ, ಧರ್ಮಕ್ಕೆ ಮೀಸಲಿಟ್ಟಿದ್ದಾರೆ.

ತುಮಕೂರು ನಗರ ಸೇರಿದಂತೆ ಜಿಲ್ಲೆಯ ಹಲವು ಕಡೆಗಳಲ್ಲಿ ಆರ್ಥಿಕ ಸ್ಥಿತಿವಂತರು ಸಮುದಾಯದ ಬಡವರಿಗೆ ದಿನಸಿ ಕಿಟ್‌ಗಳನ್ನು ವಿತರಿಸುತ್ತಿದ್ದಾರೆ. ಹೊಸ ಬಟ್ಟೆಗಳನ್ನು ನೀಡುತ್ತಿದ್ದಾರೆ.

ವ್ಯಾಪಾರವಿಲ್ಲ

ರಂಜಾನ್‌ ಹಬ್ಬದ ಹಿಂದಿನ ಒಂದು ವಾರ ತುಮಕೂರಿನ ಮಾರುಕಟ್ಟೆಗಳು ಗ್ರಾಹಕರಿಂದ ಕೂಡಿರುತ್ತಿದ್ದವು. ರಂಜಾನ್‌ ಹಬ್ಬಕ್ಕಾಗಿಯೇ ವ್ಯಾಪಾರಿಗಳು ತರೇಹವಾರಿ ವಸ್ತುಗಳನ್ನು ಮಾರುಕಟ್ಟೆಗೆ ತರುತ್ತಿದ್ದರು. ಆದರೆ, ಈ ಬಾರಿ ಗ್ರಾಹಕರ ಸಂಖ್ಯೆ ಗಣನೀಯ ಇಳಿಮುಖವಾಗಿದೆ. ಹಣ್ಣು, ಬಟ್ಟೆ, ಖರ್ಜೂರ ಕೊಳ್ಳುವವರ ಸಂಖ್ಯೆಯೂ ತಗ್ಗಿದೆ. ಮಸೀದಿಗಳ ಎದುರು ಸಮೋಸ ಮಾರಾಟ ಕಾಣದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT