ಭಾನುವಾರ, 14 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಆತ್ಮಾವಲೋಕನಕ್ಕೆ ಹಚ್ಚುವ ‘ಅಟ್ರಾಸಿಟಿ’

ಗುರುಪ್ರಸಾದ್‌ ಕಂಟಲಗೆರೆಯವರ ‘ಅಟ್ರಾಸಿಟಿ’ ಕಾದಂಬರಿ ಬಿಡುಗಡೆ
Published 30 ಜೂನ್ 2024, 6:02 IST
Last Updated 30 ಜೂನ್ 2024, 6:02 IST
ಅಕ್ಷರ ಗಾತ್ರ

ತುಮಕೂರು: ಸಂವಿಧಾನ ಬದಲಾವಣೆಯ ಮಾತನಾಡುತ್ತಿರುವ ಈ ಹೊತ್ತಿನಲ್ಲಿ ಪ್ರಜಾಪ್ರಭುತ್ವದ ರಕ್ಷಣೆಗೆ ಧ್ವನಿ ಎತ್ತುವ ಅಗತ್ಯವಿದೆ. ಅಂತಹ ಅಗತ್ಯದ ಕಡೆಗೆ, ನಮ್ಮೆಲ್ಲರನ್ನು ಆತ್ಮಾವಲೋಕನಕ್ಕೆ ಹಚ್ಚುವ ಕೃತಿ ‘ಅಟ್ರಾಸಿಟಿ’ ಎಂದು ಸಾಹಿತಿ ಪ್ರೊ.ಎಸ್‌.ಜಿ.ಸಿದ್ದರಾಮಯ್ಯ ಅಭಿಪ್ರಾಯಪಟ್ಟರು.

ನಗರದಲ್ಲಿ ಶನಿವಾರ ದಲಿತ ಸಂಘರ್ಷ ಸಮಿತಿ, ಕನ್ನಡ ಸಾಹಿತ್ಯ ಪರಿಷತ್ತು, ಆದಿಜಂಬೂ ಪ್ರಕಾಶನದಿಂದ ಹಮ್ಮಿಕೊಂಡಿದ್ದ ಗುರುಪ್ರಸಾದ್ ಕಂಟಲಗೆರೆಯವರ ‘ಅಟ್ರಾಸಿಟಿ’ ಕಾದಂಬರಿ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ನಮ್ಮ ರಾಜ್ಯದಲ್ಲಿ ಜಮೀನ್ದಾರಿ ಧೋರಣೆ ಹೊಂದಿರುವ ಮನಸ್ಸುಗಳಿಂದ ಆಕ್ರಮಣ ನಡೆಯುತ್ತಿದೆ. ಮಣಿಪುರದ ಘಟನೆ ಇಡೀ ದೇಶ ಕ್ರೌರ್ಯ, ಹಿಂಸೆಯ ದಾರಿಯಲ್ಲಿ ಸಾಗುತ್ತಿದೆ ಎಂಬುವುದನ್ನು ಮನವರಿಕೆ ಮಾಡಿಕೊಟ್ಟಿದೆ. ಇದು ಸಾಹಿತಿಗಳು, ಸಂಘಟನೆಗಳು ಆತ್ಮಾವಲೋಕನ ಮಾಡಿಕೊಳ್ಳಬೇಕಾದ ಕಾಲಘಟ್ಟವಾಗಿದೆ. ಇಂತಹ ಸಂದರ್ಭದಲ್ಲಿ ಕೃತಿ ಬಿಡುಗಡೆಯಾಗುತ್ತಿದ್ದು, ಇದರ ಮಹತ್ವ ಬಹಳ ಮುಖ್ಯವಾದದ್ದು ಎಂದರು.

‘ಅಟ್ರಾಸಿಟಿ’ ಕಾದಂಬರಿಯಲ್ಲಿ ಆರು ದಶಕಗಳ ಡಿಎಸ್‌ಎಸ್‌ ಸಂಘಟನೆಯನ್ನು ತುಂಬಾ ಸೂಕ್ಷ್ಮವಾಗಿ ಚಿತ್ರಿಸಲಾಗಿದೆ. ಅದರ ಗುಣಾತ್ಮಕ ಅಂಶಗಳನ್ನೂ ಪ್ರಸ್ತಾಪಿಸುತ್ತಾ, ಸಂಘಟನೆ ಮುನ್ನಡೆಸಬೇಕಾದವರ ದೌರ್ಬಲ್ಯಗಳನ್ನು ಹೇಳಿದ್ದಾರೆ. ಸಂಘಟನೆಯನ್ನು ಮತ್ತೆ ಮರು ಚಿಂತನೆಗೆ ಒಡ್ಡಿದ್ದಾರೆ ಎಂದು ವಿಶ್ಲೇಷಿಸಿದರು.

ಸಾಂಸ್ಕೃತಿಕ ಸ್ವಾತಂತ್ರ್ಯ ಪಡೆಯದ ಮನಸುಗಳು ಬೇರೆಯವರಿಗೆ ದಾಳವಾಗಿ ಬಳಕೆಯಾಗುತ್ತಿವೆ. ಸಾಂಸ್ಕೃತಿಕ ಜೀತದ ಮನಸ್ಥಿತಿ ಅಂಬೇಡ್ಕರ್‌ ಅವರ ಶಿಕ್ಷಣ, ಸಂಘಟನೆ ಹೋರಾಟದ ವೈಫಲ್ಯಕ್ಕೆ ಕಾರಣವಾಗಿದೆ. ಶಿಕ್ಷಣದಿಂದ ಮಾತ್ರ ಈ ಮನಸ್ಥಿತಿ ಹೊಡೆಯಬೇಕು. ಸಂಘಟನೆಗಳಿಗೆ ಇದರ ಅರಿವು ಆಗದಿದ್ದರೆ ಅವು ಗಟ್ಟಿಗೊಳ್ಳುವುದಿಲ್ಲ. ಸಂಘಟನೆಗಳು ಬಲವಾಗದ ಹೊರತು ಹೋರಾಟದ ಗುರಿ ಮುಟ್ಟಲು ಸಾಧ್ಯವಿಲ್ಲ ಎಂಬುವುದನ್ನು ಕೃತಿಯಲ್ಲಿ ಕಾಣಬಹುದು ಎಂದು ಹೇಳಿದರು.

‘ಸುಧಾ’ ಕಾರ್ಯನಿರ್ವಾಹಕ ಸಂಪಾದಕ ರಘುನಾಥ್ ಚ.ಹ, ‘ಗುರುಪ್ರಸಾದ್ ಅವರ ಕಥೆಗಳು ಇಡೀ ಕನ್ನಡ ಕಥನ ಪರಂಪರೆಗೆ ಹೊಸ ಹೊಳಪನ್ನು ನೀಡುತ್ತವೆ. ಹೊಸ ತಲೆಮಾರಿನ ಲೇಖಕರು ಸಾಹಿತ್ಯವನ್ನು ಕಲಾತ್ಮಕ ನೆಲೆಗಟ್ಟಿನಲ್ಲಿ ಕಾಣಿಸುತ್ತಿದ್ದಾರೆ. ಐದಾರು ವರ್ಷದಲ್ಲಿ ಅನೇಕ ಕಾದಂಬರಿಗಳು ಬಂದಿವೆ. ಆದರೆ ದುರದೃಷ್ಟವಶಾತ್ ಅವುಗಳ ಬಗ್ಗೆ ಚರ್ಚೆಯೇ ಆಗುತ್ತಿಲ್ಲ’ ಎಂದರು.

ದಲಿತ ಸಂಘಟನೆಯ ಮುಖಂಡ ಕುಂದೂರು ತಿಮ್ಮಯ್ಯ, ಸಾಹಿತಿ ತುಂಬಾಡಿ ರಾಮಯ್ಯ, ಚಿಂತಕ ಸಿ.ಜಿ.ಲಕ್ಷ್ಮಿಪತಿ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕೆ.ಎಸ್.ಸಿದ್ಧಲಿಂಗಪ್ಪ, ಕೃತಿಕಾರ ಗುರುಪ್ರಸಾದ್‌ ಕಂಟಲಗೆರೆ ಇತರರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT