ಮಂಗಳವಾರ, ಅಕ್ಟೋಬರ್ 27, 2020
22 °C

ಬಿಇಡಿ ಪರೀಕ್ಷೆ ರದ್ದತಿಗೆ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ತುಮಕೂರು: ಬಿಇಡಿ ಪರೀಕ್ಷೆ ರದ್ದುಪಡಿಸಿ, ಮುಂದಿನ ಸೆಮಿಸ್ಟರ್‌ಗೆ ಬಡ್ತಿ ನೀಡುವಂತೆ ಆಗ್ರಹಿಸಿ ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್‍ಎಫ್‍ಐ) ನೇತೃತ್ವದಲ್ಲಿ ಬಿಇಡಿ ವಿದ್ಯಾರ್ಥಿಗಳು ತುಮಕೂರು ವಿಶ್ವವಿದ್ಯಾಲಯದ ಎದುರು ಮಂಗಳವಾರ ಪ್ರತಿಭಟನೆ ನಡೆಸಿದರು.

ಕೋವಿಡ್ ಸಂದರ್ಭದಲ್ಲಿ ತರಗತಿಗಳು ನಡೆಯದೇ ಇರುವುದರಿಂದ ಮುಂದಿನ ಸೆಮಿಸ್ಟರ್‌ಗೆ ಬಡ್ತಿ ನೀಡುವಂತೆ ಯುಜಿಸಿ, ಕೇಂದ್ರ ಸರ್ಕಾರ ಆದೇಶಿಸಿದೆ. ಆದರೆ ವಿ.ವಿ.ಯಲ್ಲಿ ಯುಜಿಸಿ ನಿಯಮ ಪಾಲನೆಯಾಗುತ್ತಿಲ್ಲ ಎಂದು ಎಸ್‍ಎಫ್‍ಐ ರಾಜ್ಯ ಕಾರ್ಯದರ್ಶಿ ವಾಸುದೇವರೆಡ್ಡಿ ಆರೋಪಿಸಿದರು.

ವಿದ್ಯಾರ್ಥಿಗಳ ಸಮಸ್ಯೆಗಳಿಗೆ ವಿ.ವಿ ಪ್ರಾಮಾಣಿಕವಾಗಿ ಸ್ಪಂದಿಸುವ ಕೆಲಸ ಮಾಡಬೇಕು. ವಿ.ವಿ ವಿಜ್ಞಾನ ಕಾಲೇಜಿನ ವಿವಿಧ ವಿಭಾಗಗಳಲ್ಲಿ ಸೀಟು ಹಂಚಿಕೆ ವಿಚಾರದಲ್ಲಿ ಬಹಳಷ್ಟು ಗೊಂದಲ ಉಂಟಾಗಿದ್ದು, ವಿದ್ಯಾರ್ಥಿಗಳಿಗೆ ತೊಂದರೆಯಾಗಿದೆ. ಇದನ್ನು ಸರಿಪಡಿಸಲು ಮುಂದಾಗಬೇಕು ಎಂದು ಎಸ್‍ಎಫ್‍ಐ ಜಿಲ್ಲಾ ಘಟಕದ ಅಧ್ಯಕ್ಷ ಈ.ಶಿವಣ್ಣ ಆಗ್ರಹಿಸಿದರು.

ಮನವಿ ಸ್ವೀಕರಿಸಿದ ಪರೀಕ್ಷಾಂಗ ಕುಲಸಚಿವ ಪ್ರೊ.ಎಂ.ಕೊಟ್ರೇಶ್, ‘ಬಿಇಡಿ ವಿದ್ಯಾರ್ಥಿಗಳ ಸಮಸ್ಯೆಗಳು ಗಮನಕ್ಕೆ ಬಂದಿವೆ. ಪರೀಕ್ಷೆಗಳನ್ನು ರದ್ದುಗೊಳಿಸಲಾಗುವುದು. ಎಲ್ಲಾ ವಿದ್ಯಾರ್ಥಿಗಳನ್ನು ಮುಂದಿನ ಸೆಮಿಸ್ಟರ್‌ಗೆ ಬಡ್ತಿ ನೀಡಲಾಗುವುದು’ ಎಂದು ಭರವಸೆ ನೀಡಿದರು.

ಎಸ್‌ಎಫ್‌ಐ ಮುಖಂಡರಾದ ನವೀನ್, ಆಶಾ, ತಿಲಕ್, ಕಾವ್ಯ, ಯೋಗೀಶ್, ಜಿ.ದರ್ಶನ್, ಸೌಂದರ್ಯ, ಕಿರಣ್, ಪುಟ್ಟರಾಜ್, ಹನುಮಂತರಾಜು, ಲೋಕೇಶ್ ನೇತೃತ್ವ ವಹಿಸಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.