ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನೆಗಳಲ್ಲಿ ಸಂಕ್ರಾಂತಿಯ ಸಿಹಿ

Last Updated 15 ಜನವರಿ 2021, 4:09 IST
ಅಕ್ಷರ ಗಾತ್ರ

ತುಮಕೂರು: ನಗರ ಸೇರಿದಂತೆ ಜಿಲ್ಲೆಯಲ್ಲಿ ಗುರುವಾರ ಮಕರ ಸಂಕ್ರಾಂತಿಯ ಸಂಭ್ರಮ ಕಳೆಗಟ್ಟಿತ್ತು. ಅದರಲ್ಲಿಯೂ ಸಂಜೆ 4ರ ನಂತರ ಹೊಸಬಟ್ಟೆ ತೊಟ್ಟು ಪುಟಾಣಿ ಬ್ಯಾಗುಗಳಲ್ಲಿ ಎಳ್ಳು–ಬೆಲ್ಲ, ಕಬ್ಬು ತುಂಬಿಕೊಂಡು ಅಕ್ಕಪಕ್ಕದ ಮನೆಗಳಿಗೆ ಎಳ್ಳು ಬೆಲ್ಲ ಬೀರಲು ಹೊರಟ ‍ಪುಟಾಣಿ ಹೆಣ್ಣು ಮಕ್ಕಳು ಹಬ್ಬದ ಕಳೆಯನ್ನು ಮತ್ತಷ್ಟು ಹೆಚ್ಚಿಸಿದ್ದರು.

ಬೆಳ್ಳಂ ಬೆಳಿಗ್ಗೆಯೇ ಮಹಿಳೆಯರು, ಹೆಣ್ಣು ಮಕ್ಕಳು ಮನೆಯ ಆವರಣವನ್ನು ಸ್ವಚ್ಛಗೊಳಿಸಿ ನಾನಾ ಬಗೆಯ ರಂಗೋಲಿ ಬಿಡಿಸಿದರು. ಈ ಮೂಲಕ ಸಂಕ್ರಾಂತಿ ಮನೆ ಮನೆಗಳಲ್ಲಿಯೂ ಚಾಲನೆಗೊಂಡಿತು. ನಂತರ ಬಾಗಿಲುಗಳಿಗೆ ತೋರಣ ಕಟ್ಟಿ ಮನೆ ಮತ್ತು ಆವರಣವನ್ನು ಮತ್ತಷ್ಟು ಅಂದಗೊಳಿಸಿದರು. ದೇಗುಲಗಳಲ್ಲಿಯೂ ಬೆಳಿಗ್ಗೆಯೇ ಭಕ್ತರ ಕಲರವವಿತ್ತು. ದೇಗುಲಗಳ ಆವರಣಗಳಲ್ಲೂ ರಂಗೋಲಿ ಬಿಡಿಸಿ ತೋರಣಗಳನ್ನು ಕಟ್ಟಲಾಗಿತ್ತು.

ಗೆಣಸಿನ ಕಾಯಲ್, ಹೋಳಿಗೆ, ಪಾಯಸ ಹೀಗೆ ಜನರು ತಮಗೆ ಇಷ್ಟವಾದ ಸಿಹಿ ಅಡುಗೆಗಳನ್ನು ತಯಾರಿಸಿ ಸವಿದರು. ಮನೆಗಳಲ್ಲಿ ಪೂಜೆಯ ಸಂಭ್ರಮ ಮನೆ ಮಾಡಿತ್ತು.

ಕೆಲವರು ಬೆಳಿಗ್ಗೆಯೇ ದೇಗುಲಗಳಿಗೆ ತೆರಳಿದರೆ ಬಹಳಷ್ಟು ಮಂದಿ ಮನೆಗಳಲ್ಲಿ ಪೂಜೆಯ ತರುವಾಯ ದೇಗುಲಗಳಿಗೆ ದೇವರ ದರ್ಶನಕ್ಕೆ ತೆರಳಿದರು.

ಮನೆಗಳ ಹೊಸ್ತಿಲ ದಾಟದ ಸಂಕ್ರಾಂತಿ ಸಂಭ್ರಮದ ಆಚರಣೆ ಸಂಜೆ ಬೀದಿ ಬೀದಿಗಳಲ್ಲಿ ಜಗಮಗಿಸಿತು. ಅದು ಮಕ್ಕಳ ಮೂಲಕ. ಪುಟಾಣಿಗಳು ನೆರೆಹೊರೆಯ ಮನೆಗಳಿಗೆ ಎಳ್ಳು ಬೆಲ್ಲ ಬೀರಲು ಮುಂದಾಗುವುದನ್ನು ನೋಡಿ ಪೋಷಕರು ಸಹ ಸಂಭ್ರಮಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT