ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸತ್ಯಮಂಗಲ ಕೆರೆ ಅಭಿವೃದ್ಧಿಗೆ ಬಿಡದ ಗ್ರಹಣ

13 ಎಕರೆ ವಿಸ್ತೀರ್ಣ, 4.97 ಎಂಸಿಎಫ್‌ಟಿ ನೀರು ಸಂಗ್ರಹ
ಮೈಲಾರಿ ಲಿಂಗಪ್ಪ
Published 3 ಜೂನ್ 2024, 8:13 IST
Last Updated 3 ಜೂನ್ 2024, 8:13 IST
ಅಕ್ಷರ ಗಾತ್ರ

ತುಮಕೂರು: ನಗರ ಹೊರವಲಯದ ಸತ್ಯಮಂಗಲ ಕೆರೆ ಪ್ರದೇಶ ಕುಡುಕರ ಅಡ್ಡೆಯಾಗಿ ಬದಲಾಗಿದ್ದು, ಕೆರೆಯ ರಕ್ಷಣೆ, ಅಭಿವೃದ್ಧಿಗೆ ಯಾರೊಬ್ಬರು ಮುಂದಾಗಿಲ್ಲ.

ಸತ್ಯಮಂಗಲ ಅರೆ–ನಗರ ಪ್ರದೇಶವಾಗಿರುವುದರಿಂದ ಈ ಬಗ್ಗೆ ಅಧಿಕಾರಿಗಳು, ಜನಪ್ರತಿನಿಧಿಗಳು ಅಸಡ್ಡೆ, ತಾತ್ಸಾರ ಭಾವನೆ ತೋರುತ್ತಿದ್ದಾರೆ. ಕೆರೆ ಅಕ್ರಮ ಚಟುವಟಿಕೆಗಳ ತಾಣವಾಗುತ್ತಿದ್ದರೂ ಅದನ್ನು ತಡೆಯುವ ಕೆಲಸಕ್ಕೆ ಯಾರೂ ಧ್ವನಿ ಎತ್ತುತ್ತಿಲ್ಲ. ಕೆರೆಯ ಸುತ್ತ ತಂತಿ ಬೇಲಿ ಹಾಕಿ, ಅನ್ಯ ಕಾರ್ಯಗಳಿಗಾಗಿ ಇತ್ತ ಬರದಂತೆ ನಿರ್ಬಂಧ ವಿಧಿಸುವ ಕೆಲಸ ತುರ್ತಾಗಿ ಆಗಬೇಕಿದೆ.

ಕೆರೆ 13 ಎಕರೆ ವಿಸ್ತೀರ್ಣ ಹೊಂದಿದ್ದು, ಇದರಲ್ಲಿ ಒತ್ತುವರಿ ಜಾಸ್ತಿಯಾಗಿದೆ. ಮಹಾನಗರ ಪಾಲಿಕೆಯ ಅಧಿಕಾರಿಗಳು ಕೆರೆಯ ಸರ್ವೆ ಮಾಡುವುದನ್ನೇ ಮರೆತಿದ್ದಾರೆ. ಹೀಗಾಗಿ ಅವರಿಗೆ ಒತ್ತುವರಿಯಾದ ಬಗ್ಗೆ ಮಾಹಿತಿಯೇ ಇಲ್ಲ. ಅಧಿಕಾರಿಗಳು ಕಚೇರಿಯಲ್ಲಿ ಕೂತು ಕೆರೆಯ ನಕ್ಷೆ ನೋಡಿಕೊಂಡು ‘ಒತ್ತುವರಿಯಾಗಿಲ್ಲ’ ಎನ್ನುತ್ತಿದ್ದಾರೆ. ಆದರೆ, ವಾಸ್ತವದ ಸ್ಥಿತಿ ಬೇರೆಯೇ ಇದೆ.

‘ಅಧಿಕಾರಿಗಳು ಒಮ್ಮೆ ಸ್ಥಳ ಪರಿಶೀಲನೆ ನಡೆಸಿದರೆ ವಾಸ್ತವ ಚಿತ್ರಣ ಏನು ಎಂಬುವುದು ಅವರ ಗಮನಕ್ಕೆ ಬರುತ್ತದೆ. ಸಂಬಂಧಪಟ್ಟವರು ಬಂದು ಕೆರೆಯನ್ನು ‘ಜೀವಂತ’ವಾಗಿ ಉಳಿಸುವ ಕೆಲಸ ಮಾಡಬೇಕು. ಕಚೇರಿ ಬಿಟ್ಟು ಹೊರ ಬಂದು ಜನರ ಸಮಸ್ಯೆ ತಿಳಿಯುವ ಪ್ರಯತ್ನ ಮಾಡಲಿ’ ಎಂದು ಸತ್ಯಮಂಗಲದ ಶಿವಾನಂದ ಮನವಿ ಮಾಡಿದರು.

4.97 ಎಂಸಿಎಫ್‌ಟಿ ನೀರು ಸಂಗ್ರಹದ ಸಾಮರ್ಥ್ಯ ಇರುವ ಕೆರೆಯಲ್ಲಿ ಬರೀ ತ್ಯಾಜ್ಯ ತುಂಬಿಕೊಂಡಿದೆ. ಹಲವು ವರ್ಷಗಳ ಹಳೆಯದಾದ ಕೆರೆ ಈ ಹಿಂದೆ ಖಾಲಿಯಾಗಿತ್ತು. 2022ರಲ್ಲಿ ಸುರಿದ ನಿರಂತರ ಮಳೆಯಿಂದ ಹಲವು ವರ್ಷಗಳ ನಂತರ ಭರ್ತಿಯಾಗಿತ್ತು. ಜನರು ಕೆರೆ ತುಂಬಿದ್ದಕ್ಕೆ ಸಂಭ್ರಮಿಸಿದ್ದರು. ಆದರೆ ಕೆರೆ ತುಂಬಿದರೂ ಆ ನೀರು ಯಾರಿಗೂ ಬಳಕೆಗೆ ಬಾರದಂತಾಗಿದೆ.

ಕೆರೆಯಲ್ಲಿ ನೀರು ತುಂಬಿದ್ದರಿಂದ ಈ ಭಾಗದಲ್ಲಿನ ಅಂತರ್ಜಲ ಮಟ್ಟ ಹೆಚ್ಚಿದೆ. ಅಕ್ಕ–ಪಕ್ಕದ ಜಮೀನುಗಳಲ್ಲಿನ ಕೊಳವೆ ಬಾವಿಗಳಲ್ಲಿ ನೀರಿನ ಸಮಸ್ಯೆಯಾಗುತ್ತಿಲ್ಲ. ಕಳೆದ ಬಾರಿ ಮಳೆ ಸುರಿಯದಿದ್ದರೂ ಹೆಚ್ಚಿನ ಸಮಸ್ಯೆಯಾಗಿಲ್ಲ. ಅಧಿಕಾರಿಗಳು ಎಚ್ಚರಿಕೆ ವಹಿಸಿ ಕೆರೆಗಳ ಅಭಿವೃದ್ಧಿಗೆ ಕ್ರಮಕೈಗೊಳ್ಳಲಿ ಎಂಬುವುದು ಸತ್ಯಮಂಗಲದ ನಿವಾಸಿಗಳ ಒತ್ತಾಯ.

‘ಕೆರೆ ಖಾಲಿಯಾಗಿದ್ದ ಸಮಯದಲ್ಲಿ ನಗರದ ತ್ಯಾಜ್ಯ, ಪ್ಲಾಸ್ಟಿಕ್‌ ಅನ್ನು ಕೆರೆಯ ಒಡಲಿಗೆ ಹಾಕಿದ್ದರು. ಇದರ ಜತೆಗೆ ಗಿಡಗಂಟೆಗಳು ಬೆಳೆದು ನಿಂತಿದ್ದವು. ಸಂಬಂಧಪಟ್ಟವರು ಇವುಗಳನ್ನು ತೆರವುಗೊಳಿಸುವ ಗೋಜಿಗೆ ಹೋಗಲಿಲ್ಲ. ‘ಕೆರೆ ತುಂಬಿದಾಗ ನೋಡೋಣ’ ಎಂದು ನಿರ್ಲಕ್ಷ್ಯ ತೋರಿದ್ದರು. ಇದರ ಫಲ ಇದೀಗ ಕೆರೆಯ ನೀರು ಬಳಕೆಗೆ ಸಾಧ್ಯವಾಗುತ್ತಿಲ್ಲ’ ಎಂದು ಸತ್ಯಮಂಗಲದ ರಾಮಾಂಜಿನಿ ಬೇಸರಿಸಿದರು.

ಲಕ್ಷ್ಮಿನಾರಾಯಣ
ಲಕ್ಷ್ಮಿನಾರಾಯಣ

ಕಚೇರಿ ಬಿಟ್ಟು ಬಾರದ ಅಧಿಕಾರಿಗಳು ಕೆರೆಯ ಅಭಿವೃದ್ಧಿಗಿಲ್ಲ ಆಸಕ್ತಿ ಒತ್ತುವರಿ ತೆರವಿಗೂ ನಿರಾಸಕ್ತಿ

- ಕೆರೆ ನೀರು ಕಲುಷಿತ ಒಂದು ಕಾಲದಲ್ಲಿ ಜನ–ಜಾನುವಾರುಗಳ ದಾಹ ತಣಿಸುತ್ತಿದ್ದ ನೀರು ಇದೀಗ ಕಲುಷಿತಗೊಂಡಿದೆ. ಕೆರೆ ಖಾಲಿ ಇದ್ದಾಗ ಪ್ಲಾಸ್ಟಿಕ್‌ ತ್ಯಾಜ್ಯ ತುಂಬಿಕೊಂಡಿತ್ತು. ಅಧಿಕಾರಿಗಳು ಎಚ್ಚೆತ್ತುಕೊಂಡು ಸ್ವಚ್ಛತೆಗೆ ಆದ್ಯತೆ ನೀಡಬೇಕಿತ್ತು. ಆದರೆ ಕೆರೆ ಉಳಿಸಲು ಯಾರೊಬ್ಬರೂ ಮುಂದೆ ಬರಲಿಲ್ಲ. ಈಗಲಾದರೂ ಪಾಲಿಕೆಯ ಅಧಿಕಾರಿಗಳು ಅಭಿವೃದ್ಧಿ ಕಾರ್ಯಗಳಿಗೆ ಒತ್ತು ನೀಡಬೇಕಿದೆ. ಲಕ್ಷ್ಮಿನಾರಾಯಣ ಸತ್ಯಮಂಗಲ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT