ಭಾನುವಾರ, ಮೇ 22, 2022
22 °C
ಗ್ರಾಮ ಪಂಚಾಯಿತಿ ಸದಸ್ಯರ ಸಮಾವೇಶ

ಸಿದ್ದರಾಮಯ್ಯ ಕಾಂಗ್ರೆಸ್ ಮುಗಿಸುತ್ತಾರೆ: ಶಾಸಕ ಜಗದೀಶ್ ಶೆಟ್ಟರ್ ಲೇವಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ತುಮಕೂರು: ಪಂಜಾಬ್‌ನಲ್ಲಿ ನವಜೋತ್ ಸಿಂಗ್ ಸಿದ್ದು ಕಾಂಗ್ರೆಸ್ ಮುಗಿಸಿದ್ದು, ರಾಜ್ಯದಲ್ಲಿ ಸಿದ್ದರಾಮಯ್ಯ ಪಕ್ಷ ಮುಗಿಸುತ್ತಾರೆ. ಇಬ್ಬರು ‘ಸಿದ್ದು’ಗಳಿಂದ ಆ ಪಕ್ಷಕ್ಕೆ ಕಂಟಕ ಎಂದು ಶಾಸಕ ಜಗದೀಶ್ ಶೆಟ್ಟರ್ ಲೇವಡಿ ಮಾಡಿದರು.

ವಿಧಾನ ಪರಿಷತ್ ಚುನಾವಣೆ ಸಲುವಾಗಿ ಬಿಜೆಪಿ ಹಮ್ಮಿಕೊಂಡಿದ್ದ ‘ಜನಸ್ವರಾಜ್’ ಯಾತ್ರೆಯ ನೇತೃತ್ವ ವಹಿಸಿದ್ದು, ಶುಕ್ರವಾರ ನಡೆದ ಗ್ರಾಮ ಪಂಚಾಯಿತಿ ಸದಸ್ಯರ ಸಮಾವೇಶದಲ್ಲಿ ಮಾತನಾಡಿದರು.

ಒಂದೆರಡು ರಾಜ್ಯಗಳನ್ನು ಬಿಟ್ಟರೆ ದೇಶದಲ್ಲಿ ಕಾಂಗ್ರೆಸ್ ಎಲ್ಲಿದೆ ಎಂದು ಹುಡುಕಬೇಕಿದೆ. ರಾಜ್ಯದಲ್ಲಿ ಡಿ.ಕೆ.ಶಿವಕುಮಾರ್ ಹಾಗೂ ಸಿದ್ದರಾಮಯ್ಯ ನಡುವೆ ಬಣ ರಾಜಕಾರಣ, ಕಾದಾಟ ತೀವ್ರವಾಗಿದೆ. ಆಂತರಿಕ ಒಳಜಗಳ ಬಿರುಸು ಪಡೆದುಕೊಂಡಿದ್ದು, ಇದರಿಂದಾಗಿ ಪಕ್ಷ ದುರ್ಬಲವಾಗಿದೆ. ಇದು ಬಿಜೆಪಿಗೆ ನೆರವಾಗಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

2,023ರಲ್ಲಿ ನಡೆಯುವ ವಿಧಾನ ಸಭೆ ಚುನಾವಣೆಯಲ್ಲಿ ಅಧಿಕಾರಕ್ಕೆ ಬರುವುದಾಗಿ ಕಾಂಗ್ರೆಸಿಗರು ಈಗಿನಿಂ
ದಲೇ ಕನಸು ಕಾಣುತ್ತಿದ್ದಾರೆ. ಭ್ರಮೆಯಲ್ಲಿ ತೇಲಾಡುತ್ತಿದ್ದು, ಮುಂದೆಯೂ ಭ್ರಮೆಯಲ್ಲೇ ಇರಬೇಕಾಗುತ್ತದೆ. ಕೇಂದ್ರ, ರಾಜ್ಯದಲ್ಲಿ ಬಿಜೆಪಿ ಉತ್ತಮ ಆಡಳಿತ ನೀಡುತ್ತಿದ್ದು, ಮುಂದೆಯೂ ಅಧಿಕಾರಕ್ಕೆ ಬರುತ್ತೇವೆ ಎಂದು ಹೇಳಿದರು.

ಕೇಂದ್ರ ಸಾಮಾಜಿಕ ನ್ಯಾಯ ಹಾಗೂ ಸಬಲೀಕರಣ ರಾಜ್ಯ ಸಚಿವ ಎ.ನಾರಾಯಣಸ್ವಾಮಿ, ‘ಬಿಜೆಪಿ ಅಧಿಕಾರಕ್ಕೆ ಬಂದಿದ್ದು, ಸಂಘ ಪರಿವಾರದ ಕಾರ್ಯಕರ್ತರ ಕನಸನ್ನು ನನಸು ಮಾಡುತ್ತಿದೆ. ರಾಜ್ಯದಲ್ಲಿ ಈಚೆಗೆ ನಡೆದ ಉಪಚುನಾವಣೆಯಲ್ಲಿ ಒಂದು ಸ್ಥಾನವನ್ನು ಗೆದ್ದಿರುವ ಕಾಂಗ್ರೆಸ್‌ನವರು ನಮ್ಮ ಬಗ್ಗೆ ಮಾತನಾಡುತ್ತಿದ್ದಾರೆ. ಪರಿಷತ್ ಚುನಾವಣೆಯಲ್ಲಿ ಕಾರ್ಯಕರ್ತರು ಅದಕ್ಕೆ ತಕ್ಕ ಉತ್ತರ ನೀಡಬೇಕು’ ಎಂದು ಕೇಳಿಕೊಂಡರು.

ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ, ‘ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಜಿಲ್ಲೆಯಲ್ಲಿ ನಡೆದಿರುವ ಎಲ್ಲಾ ಚುನಾವಣೆಗಳನ್ನು ಗೆದ್ದಿದೆ. ವಿಧಾನ ಪರಿಷತ್‌ನಲ್ಲೂ ಬಿಜೆಪಿಗೆ ಬಹುಮತ ಸಿಗಬೇಕಾದರೆ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಬೇಕು’ ಎಂದು ಮನವಿ ಮಾಡಿದರು.

ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್, ‘ಗ್ರಾಮ ಪಂಚಾಯಿತಿಗಳನ್ನು ಬಲಪಡಿಸಿ, ಸದಸ್ಯರಿಗೆ ಸ್ಥಾನಮಾನ ನೀಡುವ ಕೆಲಸವನ್ನು ಪಕ್ಷ ಮಾಡುತ್ತಾ ಬಂದಿದೆ. ಜಿಲ್ಲೆಯಲ್ಲಿ ಇಬ್ಬರಿಗೆ ಸಚಿವ ಸ್ಥಾನ ನೀಡುವ ಮೂಲಕ ಅಭಿವೃದ್ಧಿ ಕೆಲಸಗಳಿಗೆ ಅವಕಾಶ ಮಾಡಿಕೊಟ್ಟಿದೆ’ ಎಂದು ಅಭಿಪ್ರಾಯಪಟ್ಟರು.

ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ, ‘ಚುನಾವಣೆ ಸಮಯದಲ್ಲಿ ಕಾಂಗ್ರೆಸಿಗರು ಅಂಬೇಡ್ಕರ್, ಗಾಂಧೀಜಿ ಹೆಸರು ಹೇಳುತ್ತಾರೆ. ಜಿಲ್ಲೆಯವರಾದ ಡಾ.ಜಿ.ಪರಮೇಶ್ವರ ಗೆದ್ದು ಬಂದರೆ ಅಧಿಕಾರ ಕೇಳುತ್ತಾರೆ ಎಂದು ಅವರನ್ನು ಕಾಂಗ್ರೆಸಿಗರೇ ಸೋಲಿಸಿದರು’ ಎಂದು ಆರೋಪಿಸಿದರು.

ಕೇಂದ್ರದಲ್ಲಿ ಮನಮೋಹನ್ ಸಿಂಗ್ ಅಧಿಕಾರದಲ್ಲಿ ಇದ್ದಾಗ ಒಂದರ ಹಿಂದೆ ಒಂದು ಹಗರಣಗಳು ನಡೆದವು. ಆದರೆ ನರೇಂದ್ರ ಮೋದಿ ಸ್ವಚ್ಛ ಆಡಳಿತ ನೀಡಿದ್ದಾರೆ. ಮನಮೋಹನ್ ಸಿಂಗ್ ಸರ್ಕಾರ ಅಧಿಕಾರದಲ್ಲಿ ಇತ್ತು ಎಂಬುದನ್ನೇ ಈಗ ಯಾರೂ ನೆನಪಿಸಿಕೊಳ್ಳುವುದಿಲ್ಲ’ ಎಂದು ಕುಟುಕಿದರು.

ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ್, ‘ನಗರದಲ್ಲಿ ಸ್ಮಾರ್ಟ್ ಸಿಟಿ ಕಾಮಗಾರಿಗಳು ನಡೆಯುತ್ತಿರುವುದಕ್ಕೆ ನರೇಂದ್ರ ಮೋದಿ ಕಾರಣ’ ಎಂದರು.

ಸಚಿವ ಕೆ.ಗೋಪಾಲಯ್ಯ, ‘ಪ್ರತಿ ಕ್ವಿಂಟಲ್ ರಾಗಿಗೆ ₹3,300 ಬೆಂಬಲ ಬೆಲೆಯನ್ನು ಬಿಜೆಪಿ ಸರ್ಕಾರ ನೀಡಿದ್ದು, ರೈತರ ನೆರವಿಗೆ ಬಂದಿದೆ’ ಎಂದು ಹೇಳಿದರು.

ಸಂಸದ ಜಿ.ಎಸ್.ಬಸವರಾಜು, ಶಾಸಕರಾದ ಜ್ಯೋತಿಗಣೇಶ್, ಮಸಾಲೆ ಜಯರಾಮ್, ಸಿ.ಎಂ.ರಾಜೇಶ್‌ಗೌಡ, ವೈ.ಎನ್.ನಾರಾಯಣಸ್ವಾಮಿ, ಚಿದಾನಂದಗೌಡ, ತುಳಸಿ ಮುನುರಾಜುಗೌಡ, ಮುಖಂಡರಾದ ಮಹೇಶ್ ಟೆಂಗಿನಕಾಯಿ, ಎಂ.ಬಿ.ನಂದೀಶ್, ಸೊಗಡು ಶಿವಣ್ಣ, ಡಾ.ಎಂ.ಆರ್.ಹುಲಿನಾಯ್ಕರ್, ಬಿ.ಕೆ.ಮಂಜುನಾಥ್, ಕಿರಣ್ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು.

ಸುರೇಶ್‌ಗೌಡ ಗೈರು

ಬಿಜೆಪಿ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ಹಾಗೂ ಮಾಜಿ ಶಾಸಕ ಬಿ.ಸುರೇಶ್‌ಗೌಡ ಗೈರು ಹಾಜರಿ ಎದ್ದು ಕಾಣುತಿತ್ತು. ಜಗದೀಶ್ ಶೆಟ್ಟರ್ ನೇತೃತ್ವದಲ್ಲಿ ನಡೆದ ಕೋರ್ ಕಮಿಟಿ ಸಭೆಯಲ್ಲೂ ಭಾಗವಹಿಸಿರಲಿಲ್ಲ. ಸಾರ್ವಜನಿಕ ಸಭೆಯಿಂದಲೂ ದೂರವೇ ಉಳಿದರು.

ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಜತೆಗಿನ ಭಿನ್ನಮತ ಮುಂದುವರೆದಿದ್ದು, ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ಪಕ್ಷದಲ್ಲಿ ಅಂತರ ಕಾಯ್ದುಕೊಂಡಿದ್ದರು. ಇತ್ತೀಚೆಗೆ ಪಕ್ಷದ ಕೆಲವು ಸಭೆಗಳಿಗೆ ಹಾಜರಾಗಿದ್ದರು. ಈಗ ವಿಧಾನ ಪರಿಷತ್ ಚುನಾವಣೆಗೆ ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ಭಿನ್ನಾಭಿಪ್ರಾಯ ಮೂಡಿದ್ದು, ಸಭೆಯಿಂದ ದೂರು ಉಳಿದಿದ್ದಾರೆ ಎನ್ನಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು