ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿರಾ ಉಪಚುನಾವಣೆ: ಸ್ಪರ್ಧೆಗೆ ಪಕ್ಷೇತರರಿಂದಲೂ ಭರ್ಜರಿ ಸಿದ್ಧತೆ

ಉಪಚುನಾವಣೆ; ಜೆಡಿಯು, ಬಿಎಸ್‌ಪಿ ಅಭ್ಯರ್ಥಿಗಳು ಕಣಕ್ಕಿಳಿಯುವ ಸಾಧ್ಯತೆ
Last Updated 1 ಸೆಪ್ಟೆಂಬರ್ 2020, 9:51 IST
ಅಕ್ಷರ ಗಾತ್ರ

ಶಿರಾ: ವಿಧಾನಸಭೆ ಉಪಚುನಾವಣೆಗಾಗಿ ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಅಭ್ಯರ್ಥಿಗಳ ಆಯ್ಕೆಗಾಗಿ ಕಸರತ್ತು ನಡೆಸುತ್ತಿವೆ. ಮತ್ತೊಂದು ಕಡೆ ಸಂಯುಕ್ತ ಜನತಾದಳ, ಬಹುಜನ ಸಮಾಜ ಪಾರ್ಟಿ, ಪ್ರಜಾಕೀಯ, ಕರ್ನಾಟಕ ರಿಪಬ್ಲಿಕನ್ ಸೇನೆ ಹಾಗೂ ಪಕ್ಷೇತರ ಅಭ್ಯರ್ಥಿಗಳು ಸಹ ಕಣಕ್ಕಿಳಿಯಲು ತುದಿಗಾಲಿನಲ್ಲಿ ಇದ್ದಾರೆ.

ಶಿರಾ ವಿಧಾನಸಭೆ ಕ್ಷೇತ್ರದ ಇತಿಹಾಸದಲ್ಲಿ 1962ರಲ್ಲಿ ಸಿ.ಜೆ.ಮುಕ್ಕಣ್ಣಪ್ಪ ಹಾಗೂ 1983ರಲ್ಲಿ ಪಿ.ಮೂಡ್ಲೇಗೌಡ ಪಕ್ಷೇತರರಾಗಿ ಸ್ಪರ್ಧಿಸಿ ಆಯ್ಕೆ ಆಗಿದ್ದರು. ಇದನ್ನು ಹೊರತುಪಡಿಸಿದರೆ ಉಳಿದಂತೆ ಕಾಂಗ್ರೆಸ್, ಜನತಾ ಪಕ್ಷ ಹಾಗೂ ಜೆಡಿಎಸ್ ಅಭ್ಯರ್ಥಿಗಳು ಆಯ್ಕೆ ಆಗಿದ್ದಾರೆ. 1985ರ ಚುನಾವಣೆಯಲ್ಲಿ ಪಕ್ಷೇತರರಾಗಿ ಸ್ವರ್ಧೆ ಮಾಡಿದ್ದ ಎಸ್.ಕೆ.ಸಿದ್ದಣ್ಣ 19,987 ಮತಗಳನ್ನು ಪಡೆದು ಕಾಂಗ್ರೆಸ್‌ನ ಸಿ.ಪಿ.ಮೂಡಲಗಿರಿಯಪ್ಪ ಅವರ ವಿರುದ್ಧ ಕೇವಲ 82 ಮತಗಳ ಅಂತರದಿಂದ ಪರಾಜಿತರಾಗಿದ್ದರು.

ಕ್ಷೇತ್ರದಲ್ಲಿ ಹಲವಾರು ಬಾರಿ ಪಕ್ಷೇತರ ಅಭ್ಯರ್ಥಿಗಳು ರಾಜಕೀಯ ಪಕ್ಷಗಳ ನಿದ್ದೆ ಕೆಡಿಸಿದ್ದಾರೆ. ಈ ಬಾರಿ ಸಹ ಹಲವರು ಸ್ಪರ್ಧೆಗೆ ಮುಂದಾಗಿದ್ದಾರೆ. ಅವರು ಯಾರ ಮತಬುಟ್ಟಿಗೆ ಕೈ ಹಾಕುವರು ಎನ್ನುವುದನ್ನು ಕಾದು ನೋಡಬೇಕಾಗಿದೆ.

ಸಂಯುಕ್ತ ಜನತಾದಳದಿಂದ ಚೇತನ್ ಕುಮಾರ್ ಲಿಂಗದಹಳ್ಳಿ ಆಕಾಂಕ್ಷಿ ಆಗಿದ್ದಾರೆ. ಜೆಡಿಯು ರಾಜ್ಯ ಘಟಕದ ಅಧ್ಯಕ್ಷ ಮಹಿಮಾ ಪಟೇಲ್, ಚೇತನ್ ಅವರನ್ನು ಆಕಾಂಕ್ಷಿ ಅಭ್ಯರ್ಥಿ ಎಂದು ಘೋಷಿಸಿ ಚುನಾವಣೆಗೆ ಅಣಿಯಾಗುವಂತೆ ಸೂಚಿಸಿದ್ದಾರೆ.

ಕೊರೊನಾ ಸಮಯದಲ್ಲಿ ತಾಲ್ಲೂಕಿನ ಬಡವರಿಗೆ ಪಡಿತರ, ಔಷಧಿ ನೀಡುವ ಮೂಲಕ ಸೇವೆಯಲ್ಲಿ ತೊಡಗಿದ್ದರು. ತಾಲ್ಲೂಕಿನಲ್ಲಿ ನಡೆದಿದ್ದ ಮೇವು ಹಗರಣದ ಬಗ್ಗೆ ಲೋಕಾಯುಕ್ತಕ್ಕೆ ದೂರು ನೀಡುವ ಮೂಲಕ ಭ್ರಷ್ಟಾಚಾರದ ವಿರುದ್ಧ ಹೋರಾಟ ನಡೆಸಿದ್ದಾರೆ.

ಪ್ರಜಾಕೀಯ ಪಕ್ಷದಿಂದ ಶಶಿಕುಮಾರ್ ಕಣಕ್ಕೆ ಇಳಿಯುವ ಸಾಧ್ಯತೆ ಇದೆ. 2013 ಮತ್ತು 2018ರ ವಿಧಾನಸಭಾ ಚುನಾವಣೆಯಲ್ಲಿ ಅವರು ಸ್ಪರ್ಧಿಸಿದ್ದರು. ಅವರು ಸಿದ್ಧಗಂಗಾ ಮಠದ ಶಿವಕುಮಾರ ಸ್ವಾಮೀಜಿ ಅವರಿಗೆ ಭಾರತ ರತ್ನ ನೀಡುವಂತೆ ದೆಹಲಿಯ ಸಂಸತ್ ಭವನದ ಮುಂದೆ ಏಕಾಂಗಿಯಾಗಿ ಪ್ರತಿಭಟನೆ ನಡೆಸಿ ಗಮನ ಸೆಳೆದಿದ್ದರು.

ಬಿಎಸ್‌ಪಿ ಕಳೆದ ಚುನಾವಣೆಯಲ್ಲಿ ಜೆಡಿಎಸ್‌ ಬೆಂಬಲಿಸಿತ್ತು. ಈ ಬಾರಿ ರಾಜ್ಯದ ವರಿಷ್ಠರ ಸೂಚನೆಯಂತೆ ಸ್ಪರ್ಧೆ ಮಾಡುವುದಾಗಿ ಬಿಎಸ್‌ಪಿ ರಾಜ್ಯ ಕಾರ್ಯದರ್ಶಿ ಜೆ.ಎನ್.ರಾಜಸಿಂಹ ಹೇಳುತ್ತಾರೆ.

ಕರ್ನಾಟಕ ರಿಪಬ್ಲಿಕನ್ ಸೇನೆಯಿಂದ ಮುಸ್ಲಿಂ ಮಹಿಳೆಗೆ ಟಿಕೆಟ್‌ ನೀಡಲು ತೀರ್ಮಾನಿಸಲಾಗಿದೆ. ಈಗಾಗಲೇ ರಾಜ್ಯ ಘಟಕದ ಅಧ್ಯಕ್ಷ ಜಿಗಣಿ ಶಂಕರ್ ಶಿರಾಕ್ಕೆ ಭೇಟಿ ನೀಡಿ ಕಾರ್ಯಕರ್ತರ ಜತೆ ಮಾತುಕತೆ ನಡೆಸಿದ್ದಾರೆ.

ಜತೆಗೆ ಹಲವರು ಸ್ವತಂತ್ರವಾಗಿ ಸ್ಪರ್ಧೆ ನಡೆಸಲು ಮುಂದಾಗಿದ್ದು, ಚುನಾವಣೆ ದಿನಾಂಕ ಪ್ರಕಟವಾದರೆ ಸ್ವಷ್ಟ ಚಿತ್ರಣ ದೊರೆಯಲಿದೆ.

***

ಪಕ್ಷೇತರರಿಗೆ ಹೆಚ್ಚು ಮತ; ಕಾಂಗ್ರೆಸ್‌ಗೆ ಸೋಲು

ಪಕ್ಷೇತರ ಅಭ್ಯರ್ಥಿಗಳು ಹೆಚ್ಚು ಮತ ಪಡೆದ ಸಮಯದಲ್ಲಿ ಕಾಂಗ್ರೆಸ್ ಸೋಲು ಅನುಭವಿಸಿದೆ. ಮತಗಳ ವಿಭಜನೆಯಾದ ಸಮಯದಲ್ಲಿ ಕಾಂಗ್ರೆಸ್ಸೇತರ ಅಭ್ಯರ್ಥಿಗಳು ಆಯ್ಕೆ ಆಗಿದ್ದಾರೆ. ಕಳೆದ ಚುನಾವಣೆಯಲ್ಲೂ ಪಕ್ಷೇತರರಾಗಿ ಸ್ವರ್ಧಿಸಿದ್ದ ಸಿ.ಎಂ.ನಾಗರಾಜು 14,468 ಮತಗಳನ್ನು ಪಡೆದಿದ್ದರು. ಮತಗಳು ವಿಭಜನೆಯಾಗಿ ಜೆಡಿಎಸ್ ಪಕ್ಷದ ಬಿ.ಸತ್ಯನಾರಾಯಣ ಶಾಸಕರಾಗಿ ಆಯ್ಕೆಯಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT