ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುಮಕೂರು: ಜಿಲ್ಲೆಯ ಬಿಜೆಪಿಯಲ್ಲೂ ಅತೃಪ್ತಿಯ ಕಿಡಿ

ಆ‌ಗ್ನೇಯ ಪದವೀಧರ ಕ್ಷೇತ್ರ ಬಿಜೆಪಿ ಅಭ್ಯರ್ಥಿ ಆಯ್ಕೆ, ನ್ಯಾಯ ಒದಗಿಸಲು ಆಕಾಂಕ್ಷಿಗಳ ಒತ್ತಾಯ
Last Updated 9 ಜೂನ್ 2020, 14:18 IST
ಅಕ್ಷರ ಗಾತ್ರ

ತುಮಕೂರು: ಆಗ್ನೇಯ ಪದವೀಧರ ಕ್ಷೇತ್ರಕ್ಕೆ ಶಿಫಾರಸು ಮಾಡಿರುವ ಬಿಜೆಪಿ ಅಭ್ಯರ್ಥಿ ಚಿದಾನಂದಗೌಡ ಅವರನ್ನು ಬದಲಾಯಿಸಿ ಪಕ್ಷಕ್ಕಾಗಿ ದುಡಿದನಿಷ್ಠಾವಂತ ಕಾರ್ಯಕರ್ತರಿಗೆ ನ್ಯಾಯ ದೊರಕಿಸಿಕೊಡಬೇಕು ಎಂದು ಆಕಾಂಕ್ಷಿಗಳು ಬಿಜೆಪಿ ವರಿಷ್ಠರನ್ನು ಒತ್ತಾಯಿಸಿದರು.

ಬಿಜೆಪಿ ಆಕಾಂಕ್ಷಿಗಳಾದ ತುಮಕೂರಿನ ಡಾ.ಹಾಲನೂರು ಎಸ್.ಲೇಪಾಕ್ಷ, ಸಿ.ಮಲ್ಲಿಕಾರ್ಜುನ, ಪಿ.ಆರ್.ಬಸವರಾಜು, ಚಿತ್ರದುರ್ಗದ ಡಾ.ಆನಂದ್ ಕಿರಿಶ್ಯಾಳ, ಎಂ.ಶಿವಲಿಂಗಪ್ಪ, ದಾವಣಗೆರೆಯ ಜಯಪ್ರಕಾಶ ಕೊಂಡಜ್ಜ, ಡಾ.ಜೆ.ಮಂಜುನಾಥಗೌಡ ನಗರದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿ ನಡೆಸಿ, ಈ ಬೇಡಿಕೆ ಸಲ್ಲಿಸಿದರು.

‘ನಾವು ಹಲವು ವರ್ಷದಿಂದ ಪಕ್ಷದಲ್ಲಿ ಸಕ್ರಿಯ ಕಾರ್ಯಕರ್ತರಾಗಿ ದುಡಿದಿದ್ದೇವೆ. ವಿವಿಧ ಹಂತಗಳಲ್ಲಿ ಪಕ್ಷದ ಬಲವರ್ಧನೆಗೆ ಶ್ರಮಿಸಿದ್ದೇವೆ. ಹಿಂದೆ ನಡೆದಿರುವ ಆಗ್ನೇಯ ಶಿಕ್ಷಕರ ಕ್ಷೇತ್ರ, ಪದವೀಧರ ಕ್ಷೇತ್ರದ ಚುನಾವಣೆಗಳಲ್ಲಿ ಪಕ್ಷದ ಅಭ್ಯರ್ಥಿಗಳ ಗೆಲುವಿಗಾಗಿ ಕೆಲಸ ಮಾಡಿದ್ದೇವೆ. ಅನೇಕ ಸಂದರ್ಭಗಳಲ್ಲಿ ನಮಗೆ ಮುಂದಿನ ಚುನಾವಣೆಯಲ್ಲಿ ನ್ಯಾಯ ದೊರಕಿಸಿಕೊಡುವ ಭರವಸೆ ನೀಡಿ ಚುನಾವಣೆ ಸಂದರ್ಭದಲ್ಲಿ ಕಡೆಗಣಿಸುತ್ತಿರುವುದು ಯಾವ ನ್ಯಾಯ’ ಎಂದು ಪ್ರಶ್ನಿಸಿದರು.

‘ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ವೈ.ಎ.ನಾರಾಯಣಸ್ವಾಮಿ ಅವರನ್ನು ಆಯ್ಕೆ ಮಾಡುವಾಗ ತಮಗೆ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ನ್ಯಾಯ ದೊರಕಿಸಿಕೊಡುವ ಭರವಸೆ ನೀಡಲಾಗಿತ್ತು. ಆದರೆ ಇದೀಗ ನಿರ್ಲಕ್ಷಿಸಿ ಬೇರೆ ಪಕ್ಷದಿಂದ ಬಂದಂತಹ ಚಿದಾನಂದಗೌಡ ಅವರಿಗೆ ಮಣೆ ಹಾಕಿರುವುದು ತಮಗೆ ನೋವುಂಟು ಮಾಡಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಬಿಜೆಪಿಗೆ ಅವಮಾನ: ಚಿದಾನಂದಗೌಡ ಅವರನ್ನು ಇನ್ನು ಅಧಿಕೃತ ಅಭ್ಯರ್ಥಿ ಎಂದು ಘೋಷಿಸಿಲ್ಲ. ಅವರ ಹೆಸರನ್ನು ಕೇವಲ ಶಿಫಾರಸು ಮಾಡಲಾಗಿದೆ. ಆದರೆ, ಅವರು ತಾವೇ ಅಧಿಕೃತ ಅಭ್ಯರ್ಥಿ ಎಂದು ಭಿತ್ತಿ ಪತ್ರಗಳು, ಬ್ಯಾನರ್‌ಗಳು, ಕರಪತ್ರಗಳನ್ನು ಮುದ್ರಿಸಿ ಪ್ರಚಾರ ಮಾಡುತ್ತಿರುವುದು ರಾಜ್ಯ ಬಿಜೆಪಿ ಘಟಕಕ್ಕೆ ಅವಮಾನಿಸಿದಂತಾಗುತ್ತದೆ. ಆದ್ದರಿಂದ ಕೂಡಲೇ ಪಕ್ಷದಹಿತದೃಷ್ಟಿಯಿಂದ ಶಿಫಾರಸನ್ನು ಹಿಂಪಡೆದು ನಮ್ಮಲ್ಲಿ ಯಾರಿಗಾದರೂ ಟಿಕೆಟ್‌ ನೀಡಬೇಕು. ನಮ್ಮಲ್ಲಿ ಯಾರಿಗೆಟಿಕೇಟ್ ನೀಡಿದರೂ ನಾವೆಲ್ಲರೂ ಒಟ್ಟಾಗಿ ಕೆಲಸಮಾಡಿ ಗೆಲ್ಲಿಸಿಕೊಡಲಿದ್ದೇವೆ ಎಂದು ತಿಳಿಸಿದರು.

ಮೂಲದವರಿಗೆ ಮಣೆ ಹಾಕಿ
ಬಿಜೆಪಿ ಕೇಂದ್ರ ಸಮಿತಿಯು ರಾಜ್ಯಸಭೆಗೆ ಪಕ್ಷದ ನಿಷ್ಠಾವಂತ ಕಾರ್ಯಕರ್ತರಿಗೆ ಮಣೆ ಹಾಕುವ ಮೂಲಕ ಉತ್ತಮ ನಿರ್ಧಾರ ತೆಗೆದುಕೊಂಡಿದೆ. ಅದೇ ರೀತಿ ಆಗ್ನೇಯ ಪದವೀಧರ ಕ್ಷೇತ್ರದ ಚುನಾವಣೆಯಲ್ಲೂ ರಾಜ್ಯ ಸಮಿತಿಯು ಮೂಲ ಬಿಜೆಪಿಯವರಿಗೆ ಮಣೆ ಹಾಕಲಿದೆ ಎಂಬ ನಂಬಿಕೆ ಇದೆ. ಪಕ್ಷದ ನಿಷ್ಠಾವಂತ ಯಾವೊಬ್ಬ ಕಾರ್ಯಕರ್ತನಿಗೆ ಅವಕಾಶ ನೀಡಿದರೂ ಕೆಲಸ ಮಾಡುತ್ತೇವೆ. ಬಿಜೆಪಿಯಲ್ಲಿ ಹೆಸರನ್ನೇ ಕೇಳದ ಚಿದಾನಂದಗೌಡ ಅವರಿಗೆ ಯಾವುದೇ ಕಾರಣಕ್ಕೂ ಟಿಕೆಟ್ ನೀಡಬಾರದು ಎಂದು ಆಕಾಂಕ್ಷಿಗಳು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT