ಮಂಗಳವಾರ, ಜೂನ್ 28, 2022
26 °C

ವೈ.ಎನ್.ಹೊಸಕೋಟೆ: ಹೊಸದುರ್ಗ ಗುಡ್ಡಕ್ಕೆ ಹಸಿರು ಹೊದಿಕೆ

ನಾಗರಾಜಪ್ಪ Updated:

ಅಕ್ಷರ ಗಾತ್ರ : | |

Prajavani

ವೈ.ಎನ್.ಹೊಸಕೋಟೆ: 30 ವರ್ಷಗಳ ಹಿಂದೆ ಗ್ರಾಮಸ್ಥರಲ್ಲಿ ಮೂಡಿದ ಒಗ್ಗಟ್ಟು ಮತ್ತು ಹಸಿರು ಸಂರಕ್ಷಣೆಯ ಹೋರಾಟದ ಫಲವಾಗಿ ಹೊಸದುರ್ಗ ಗ್ರಾಮಬೆಟ್ಟ ಇಂದು ಹಸಿರು ವನರಾಶಿಯಿಂದ ಕಂಗೊಳಿಸುತ್ತಿದೆ.

ಹೋಬಳಿ ಕೇಂದ್ರಕ್ಕೆ ನಾಲ್ಕು ಕಿ.ಮೀ ದೂರದಲ್ಲಿರುವ ಹೊಸದುರ್ಗ ಐತಿಹಾಸಿಕ ಸ್ಥಳ. ಹೊಸದುರ್ಗದ ಗ್ರಾಮಾಭಿವೃದ್ಧಿಗಾಗಿ 40 ಜನ ಯುವಕರು ಸೇರಿ 1986-87ರಲ್ಲಿ ಕರಿಯಮ್ಮ ದೇವಿ ಯುವಕ ಸಂಘ ಪ್ರಾರಂಭಿಸಿದರು. ಬೆಟ್ಟದ ಮೇಲಿರುವ ಮಾರಮ್ಮದೇವಿಗೆ ಪ್ರತಿ ಮಂಗಳವಾರ ಪೂಜೆ ಸಲ್ಲಿಸುವುದು ಗ್ರಾಮದಲ್ಲಿ ಸಂಪ್ರದಾಯವಾಗಿ ಬೆಳೆದು ಬಂದಿತ್ತು.

ಪೂಜೆಯ ನಂತರ ಪ್ರಸಾದ ಸ್ವೀಕರಿಸುವಾಗ ದೇವಾಲಯದ ಪಕ್ಕದಲ್ಲಿ ಇದ್ದ ಮೋತಿಗೆ ಮರದ ಎಲೆಗಳನ್ನು ಕಿತ್ತು ಬಳಸಲಾಗುತ್ತಿತ್ತು. ಆ ಎಲೆಗಳು ದೊಡ್ಡದಾಗಿದ್ದು, ಕೆಲವೊಮ್ಮೆ ಅದರಲ್ಲಿ ಊಟ ಮಾಡಿರುವ ಉದಾಹರಣೆಗಳಿವೆ. ಇಂತಹ ಮರವನ್ನು ಕೆಲವರು ಕಟ್ಟಿಗೆಗಾಗಿ ಕಡಿದು ಹಾಕಿದಾಗ ಪ್ರಸಾದ ಪಡೆಯಲು ಎಲೆ ಇಲ್ಲವಾಯಿತು.

ಕರಿಯಮ್ಮ ದೇವಿ ಯುವಕ ಸಂಘದ ಸದಸ್ಯರು ಅಂದೇ ಸಭೆ ಸೇರಿ ಊರಬೆಟ್ಟದಲ್ಲಿ ಯಾರು ಗಿಡ, ಮರ ಕಡಿಯಬಾರದು. ಕಡಿದರೆ ದಂಡ ಹಾಕಲಾಗುವುದು ಎಂದು ಸಾರಿದರು. ಸಂಘದ ಮಾತನ್ನು ಲೆಕ್ಕಿಸದೆ ಸೌದೆಯನ್ನು ಕಡಿದವರಿಗೆ ದಂಡ ವಿಧಿಸಲಾಯಿತು. ಗಿಡಮರ ಕಡಿಯದಂತೆ ಕಾಯಲು ವ್ಯಕ್ತಿಯೊಬ್ಬರನ್ನು ನೇಮಿಸಲಾಯಿತು. ಆನಂತರ ಬೆಟ್ಟದಲ್ಲಿ ಗಿಡಮರಗಳ ಮಾರಣಹೋಮ ಕಡಿಮೆಯಾಗಿ ವನ
ರಾಶಿ ಬೆಟ್ಟವನ್ನಾವರಿಸಿತು ಎನ್ನುತ್ತಾರೆ ಸಂಘದ ಸದಸ್ಯರಾದ ಮಾರಣ್ಣ, ಕರಿಯಣ್ಣ, ದಿವಾಕರಪ್ಪ, ಸಂಜೀವಪ್ಪ.

200 ಹೆಕ್ಟೇರ್ ಪ್ರದೇಶವನ್ನು ಆವರಿಸಿರುವ ಬೆಟ್ಟದಲ್ಲಿ ಇಂದಿಗೂ ಗಿಡಮರಗಳನ್ನು ಕಡಿಯಲು ಅವಕಾಶವಿಲ್ಲ. ಕಾಡುಮರಗಳೊಂದಿಗೆ ಸೀತಾಫಲ, ಕಾರೆ, ಬಾರೆ, ಕವಳೆ, ಊಡಿಗೆ, ಜಾಜಾರು ಮುಂತಾದ ಹಣ್ಣು ನೀಡುವ ಮರಗಳು ಯಥೇಚ್ಚವಾಗಿದೆ. ಅಸಂಖ್ಯಾತ ಔಷ
ಧೀಯ ಸಸ್ಯಗಳಿವೆ. ಸದಾಆಹಾರ ದೊರೆಯುವುದರಿಂದ ನವಿಲು, ಬೆಳವ ಇನ್ನಿತರೆ ಪಕ್ಷಿಸಂಕುಲ ನಲಿಯುತ್ತಿದೆ. ಚಿರತೆ, ಕರಡಿ, ಹಂದಿ ಇತ್ಯಾದಿ ವನ್ಯಜೀವಿಗಳು ಮನೆಮಾಡಿಕೊಂಡಿವೆ. ಬೆಟ್ಟದಲ್ಲಿದ್ದ ಸೀತಾಫಲವನ್ನು ಮಾರಿ ಗ್ರಾಮಾಭಿವೃದ್ಧಿಗೆ ಬಳಸಿದ ಉದಾಹರಣೆಗಳಿವೆ. ಇದು 80ರ ದಶಕದಿಂದ ಪ್ರಾರಂಭವಾದ ಹಸಿರ ಹೋರಾಟಕ್ಕೆ ಸಿಕ್ಕ ಪ್ರತಿಫಲ.

ಹೊಸದುರ್ಗದಿಂದ ಅನತಿ ದೂರದ ಕೆ.ರಾಂಪುರದ ಗ್ರಾಮಸ್ಥರೂ ಇದೇ ಮಾದರಿಯನ್ನು ಅನುಸರಿಸಿ ಬೆಟ್ಟವನ್ನು ಸಂರಕ್ಷಿಸಿದ್ದಾರೆ. ಇಂದು ಅದು ನವಿಲುಧಾಮವಾಗಿ ಮಾರ್ಪಟ್ಟಿದೆ. ಮುಗದಾಳಬೆಟ್ಟದ ಸಂರಕ್ಷಣೆಗೂ ಇದೇ ಹೊಸದುರ್ಗ ಪ್ರೇರಣೆಯಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು