ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸಿದ್ದಯ್ಯ ಕಾವ್ಯ ‘ಸುಡುವ ಮಂಜುಗಡ್ಡೆಯಂತೆ’: ಅಗ್ರಹಾರ ಕೃಷ್ಣಮೂರ್ತಿ

Published 4 ಮಾರ್ಚ್ 2024, 4:38 IST
Last Updated 4 ಮಾರ್ಚ್ 2024, 4:38 IST
ಅಕ್ಷರ ಗಾತ್ರ

ತುಮಕೂರು: ಕೆ.ಬಿ.ಸಿದ್ದಯ್ಯ ಅವರ ಕಾವ್ಯಕ್ಕೆ ಕನ್ನಡದ ವಿಮರ್ಶಕರು ಸರಿಯಾದ ನ್ಯಾಯ ಒದಗಿಸಿಲ್ಲ. ಅವರ ಕಾವ್ಯ ಸುಡುವ ಮಂಜುಗಡ್ಡೆಯಂತೆ. ಅದನ್ನು ಮುಟ್ಟುವುದು ಬಹಳ ಕಷ್ಟ ಎಂದು ಸಾಹಿತಿ ಅಗ್ರಹಾರ ಕೃಷ್ಣಮೂರ್ತಿ ಅಭಿಪ್ರಾಯಪಟ್ಟರು.

ನಗರದಲ್ಲಿ ಭಾನುವಾರ ಚಲನ ಪ್ರಕಾಶನ ಸಹಕಾರಿ ಮತ್ತು ಕೆ.ಬಿ ಬಳಗದಿಂದ ಹಮ್ಮಿಕೊಂಡಿದ್ದ ಸಾಹಿತಿ ದಿವಂಗತ ಕೆ.ಬಿ.ಸಿದ್ದಯ್ಯ ಅವರ ಕೈ ಬರಹದ ‘ತೊಗಲ ಮಂಟಪ’ ಖಂಡಕಾವ್ಯ ಜನಾರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಸಿದ್ದಯ್ಯ ಪ್ರಾರಂಭದಿಂದಲೇ ಬಹಳ ಭಿನ್ನವಾದ ಕಾವ್ಯ ಮಾರ್ಗ ಆಯ್ಕೆ ಮಾಡಿಕೊಂಡಿದ್ದರು. ಅವರ ಕಾವ್ಯದ ಬಗ್ಗೆ ವಿಮರ್ಶಕರು ಅಸಡ್ಡೆ, ನಿರ್ಲಕ್ಷ್ಯ ತೋರಿದ್ದಾರೆ. ವಿಮರ್ಶಕ ರವಿಕುಮಾರ್ ನೀಹ ಕೆ.ಬಿ.ಸಿದ್ದಯ್ಯ ಅವರ ಕಾವ್ಯಕ್ಕೆ ಸರಿಯಾದ ವಿಮರ್ಶೆ, ನ್ಯಾಯ, ಪ್ರೀತಿ ಕೊಟ್ಟಿದ್ದಾರೆ ಎಂದು ತಿಳಿಸಿದರು.

ಕಾವ್ಯ ರಾಜಕೀಯ ಮತ್ತು ಆಧ್ಯಾತ್ಮಿಕವಾಗಿ ಇರಬೇಕು ಎಂಬುವುದು ಸಿದ್ದಯ್ಯನವರ ನಿಲುವಾಗಿತ್ತು. ಹಾಗಾಗಿಯೇ ನಮ್ಮ ಪರಂಪರೆಯಲ್ಲಿ ಅವರ ಕಾವ್ಯಕ್ಕೆ ವಿಶೇಷ ಮಹತ್ವ ಸಿಕ್ಕಿಲ್ಲ ಎಂದರು.

ಹಂಪಿ ಕನ್ನಡ ವಿ.ವಿಯ ಪ್ರಾಧ್ಯಾಪಕ ಬಿ.ಎಂ.ಪುಟ್ಟಯ್ಯ, ‘ಕೆ.ಬಿ ಅವರ ಕಾವ್ಯ ತನ್ನದೇ ಆದ ಭಿನ್ನತೆ, ವಿಶಿಷ್ಟತೆ ಹೊಂದಿದೆ. ಜಡ್ಡು ಹಿಡಿದು ಹೋಗಿರುವ, ನಮ್ಮ ಮೇಲೆ ಹೇರಲ್ಪಟ್ಟ ಸಾಹಿತ್ಯ, ಓದಿನ ಎಲ್ಲ ಯಜಮಾನಿಕೆಯ ಮಾದರಿಗಳನ್ನು ಬದಿಗಿಟ್ಟು, ಕೆ.ಬಿ ಕಾವ್ಯದಲ್ಲಿ ಬೆರೆತಾಗ ಮಾತ್ರ ಅವರ ಕಾವ್ಯ ನಮಗೆ ಅರ್ಥವಾಗುತ್ತದೆ’ ಎಂದು ವಿಶ್ಲೇಷಿಸಿದರು.

ಸಾಹಿತಿ ಕೋಟಗಾನಹಳ್ಳಿ ರಾಮಯ್ಯ, ‘ಸಿದ್ದಯ್ಯ ಕಾವ್ಯದ ಮಣೆಗಾರ. ಸ್ಥಾನಮಾನ, ವಿಮರ್ಶೆಗೂ ಮೀರಿ ಅವರ ಕಾವ್ಯ ಬೆಳೆಯುತ್ತದೆ ಮತ್ತು ಜೀವಂತವಾಗಿರುತ್ತದೆ’ ಎಂದರು.

ಕೇಂದ್ರ ವಲಯದ ಐಜಿಪಿ ಬಿ.ಆರ್‌.ರವಿಕಾಂತೇಗೌಡ, ‘ಕಾವ್ಯ ಮತ್ತು ಕವಿಯ ಜತೆಗೆ ವಿಮರ್ಶೆ ಬೆಳೆಯಬೇಕು. ವಿಮರ್ಶೆಯಿಂದ ಕಾವ್ಯವು ಸಹ ಬೆಳೆಯುತ್ತದೆ. ಕೆ.ಬಿ ಅವರ ಕಾವ್ಯವನ್ನು ಅರ್ಥ ಮಾಡಿಕೊಳ್ಳುವಂತಹ ಸಿದ್ಧತೆ ಕನ್ನಡದ ಕಾವ್ಯ ವಿಮರ್ಶಕರಿಗೆ ಪ್ರಾಪ್ತವಾಗಿಲ್ಲ. ಅವರ ಕಾವ್ಯವನ್ನು ಗಂಭೀರವಾಗಿ ಓದುವ, ಅರ್ಥ ಮಾಡಿಕೊಳ್ಳುವ ಪ್ರಯತ್ನ ಆಗಿಲ್ಲ’ ಎಂದು ಕಳವಳ ವ್ಯಕ್ತಪಡಿಸಿದರು.

ಕೆ.ಬಿ.ಸಿದ್ದಯ್ಯರ ಕಾವ್ಯವನ್ನು ಜನರಿಗೆ ತಲುಪಿಸುವ ಕೆಲಸ ಮಾಡಬೇಕು. ಇದರಿಂದ ಹಲವು ಗೋಜಲುಗಳಿಗೆ ಬಿಡುಗಡೆಯ ದಾರಿ ಸಿಗುತ್ತದೆ ಎಂದು ಹೇಳಿದರು.

ಶಾಸಕ‌ ಟಿ.ಬಿ.ಜಯಚಂದ್ರ, ಕವಯತ್ರಿ ಸವಿತಾ ನಾಗಭೂಷಣ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ.ಅಶೋಕ್, ಚರಕ ಆಸ್ಪತ್ರೆಯ ಡಾ.ಬಸವರಾಜು, ಚಲನ ಪ್ರಕಾಶನ ಸಹಕಾರಿಯ ಪಿ.ಗಂಗರಾಜಮ್ಮ ಕೆ.ಬಿ.ಸಿದ್ದಯ್ಯ, ಮುಖಂಡ ಕೊಟ್ಟ ಶಂಕರ್‌ ಇತರರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT