ಭಾನುವಾರ, ಜುಲೈ 3, 2022
24 °C
ಕೋವಿಡ್ ಸಂದರ್ಭದಲ್ಲಿ ಕೆಲಸ ಮಾಡಿದ ಎಲ್ಲ ಸ್ವಯಂಸೇವಕರಿಗೂ ಗೌರವ ಮೀಸಲು

‘ಕೊರೊನಾ ಸೇನಾನಿ’ಗಳಿಗೆ ‘ಪ್ರಜಾವಾಣಿ’ ಗೌರವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ತುಮಕೂರು: ಕೋವಿಡ್ ಸಂದರ್ಭದಲ್ಲಿ ವಿವಿಧ ಇಲಾಖೆಗಳ ಸಿಬ್ಬಂದಿ, ನೌಕರರು ಭಯವನ್ನು ದೂರ ಮಾಡುತ್ತಲೇ ಪೂರ್ಣ ಪ್ರಮಾಣದಲ್ಲಿ ಕೆಲಸದಲ್ಲಿ ತೊಡಗಿಸಿಕೊಂಡರು. ಹೀಗೆ ಕಠಿಣ ಸಂದರ್ಭದಲ್ಲಿ ತಮ್ಮ ಕರ್ತವ್ಯದಿಂದ ಹಿಂದೆ ಸರಿಯದೆ ಸಮಾಜಕ್ಕೆ ಮಾದರಿಯಾದರು. ಮತ್ತೊಂದಿಷ್ಟು ಜನರಿಗೆ ಸ್ಫೂರ್ತಿಯಾದರು.

ಹೀಗೆ ಕೋವಿಡ್ ಸಂದರ್ಭದಲ್ಲಿ ಕೆಲಸ ನಿರ್ವಹಿಸಿದ ಆರೋಗ್ಯ ಇಲಾಖೆಯ ಆಯ್ದ ಸಿಬ್ಬಂದಿಯನ್ನು ‘ಪ್ರಜಾವಾಣಿ’ ಗುರುತಿಸಿತ್ತು.  ಅವರ ಕಾರ್ಯದ ಬಗ್ಗೆ ಮೆಚ್ಚುಗೆಯ ಬರಹಗಳು ಪ್ರಕಟವಾಗಿದ್ದವು. ಈ ಆಯ್ದ ಸಿಬ್ಬಂದಿಯನ್ನು ಶುಕ್ರವಾರ ಗೌರವಿಸಲಾಯಿತು. 

ಜಿಲ್ಲಾ ಕೋವಿಡ್ ಆಸ್ಪತ್ರೆಯ ಐಸಿಯು ವಾರ್ಡ್‌ ಸ್ಟಾಫ್ ನರ್ಸ್ ಟಿ.ಎಸ್.ಸೌಮ್ಯಶ್ರೀ, ಜಿಲ್ಲಾ ಆಸ್ಪತ್ರೆ ಸ್ಟಾಫ್‌ ನರ್ಸ್ ವಿದ್ಯಾಶ್ರೀ, ಕೋವಿಡ್ ರೋಗಿಗಳ ಅಂತ್ಯಸಂಸ್ಕಾರ ನೆರವೇರಿಸಿದ ತಂಡದ ಪ್ರಮುಖ ಮಹಮ್ಮದ್ ಜಹೀರುದ್ದೀನ್, ಕೊರೊನಾ ನೋಡಲ್‌ ಅಧಿಕಾರಿ ಡಾ.ಚಂದ್ರಶೇಖರ್, ಆಂಬುಲೆನ್ಸ್ ಚಾಲಕ ಪ್ರಭುದೇವಯ್ಯ ದೇವರಮನಿ, ಪೌರಕಾರ್ಮಿಕ ಕೆಂಪಣ್ಣ ಗೌರವಕ್ಕೆ ಪಾತ್ರರಾದರು. ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಟಿ.ಎ.
ವೀರಭದ್ರಯ್ಯ ಅವರು ಈ ಕೊರೊನಾ ಸೇನಾನಿಗಳನ್ನು ಗೌರವಿಸಿದರು.

ಗೌರವಕ್ಕೆ ಪಾತ್ರರಾದವರ ಮುಖದಲ್ಲಿ ಮತ್ತಷ್ಟು ಕೆಲಸ ಮಾಡುವ ಹುಮ್ಮಸ್ಸು ಇತ್ತು. ತಮ್ಮ ಕೆಲಸ ಕಾರ್ಯಗಳನ್ನು ಗುರುತಿಸಿದ ‘ಪ್ರಜಾವಾಣಿ’ಯನ್ನು ಪ್ರಶಂಸಿಸಿದರು. ಅಲ್ಲದೆ ಈ ಪ್ರಶಸ್ತಿ ನಮಗೆ ಸಂದ ಗೌರವವಷ್ಟೇ ಅಲ್ಲ, ಕೋವಿಡ್ ಸಂದರ್ಭದಲ್ಲಿ ಭಯ ದೂರ ಮಾಡಿ ಕೆಲಸ ಮಾಡಿದ, ಆರೋಗ್ಯ ಇಲಾಖೆಯ ಶುಶ್ರೂಷಕಿಯರು, ಆಂಬುಲೆನ್ಸ್ ಸಿಬ್ಬಂದಿ, ವೈದ್ಯರು, ಪೊಲೀಸರು, ಪೌರ ಕಾರ್ಮಿಕರು, ಸ್ವಯಂ ಸೇವಕರು, ಸಂಘ ಸಂಸ್ಥೆಗಳಿಗೂ ಸಂದ ಗೌರವ ಎಂದು ಮನದುಂಬಿ ನುಡಿದರು.

ಸಾಂಕೇತಿಕ: ‘ಕೊರೊನಾ ಸಂದರ್ಭದಲ್ಲಿ ಕೆಲಸ ಮಾಡಿದ ಸಿಬ್ಬಂದಿಯನ್ನು ಪ್ರಜಾವಾಣಿ ಗುರುತಿಸಿ ಗೌರವಿಸಿರುವುದು ಒಳ್ಳೆಯ ಬೆಳವಣಿಗೆ. ಇಲ್ಲಿ ಆಯ್ದ ಕೆಲವರನ್ನು ಗುರುತಿಸಿ ಸನ್ಮಾನಿಸಲಾಗಿದೆ. ಇದು ಸಾಂಕೇತಿಕ. ಜಿಲ್ಲಾ ಆಸ್ಪತ್ರೆಯ ಎಲ್ಲ ಶುಶ್ರೂಷಕರು, ವೈದ್ಯರು, ಸಿಬ್ಬಂದಿ, ಸ್ವಚ್ಛತಾ ಕಾರ್ಯದಲ್ಲಿ ತೊಡಗಿರುವವರು ಎಲ್ಲರಿಗೂ ಈ ಗೌರವ ಸಲ್ಲುತ್ತದೆ’ ಎಂದು ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಟಿ.ಎ.ವೀರಭದ್ರಯ್ಯ ಹೇಳಿದರು.

‘ಕೋವಿಡ್ ಸಂದರ್ಭದಲ್ಲಿ ಕೆಲಸ ಮಾಡಿದ ಎಲ್ಲರೂ ಗೌರವ, ಸನ್ಮಾನಕ್ಕೆ ಅರ್ಹರು. ಬೇರೆ ಬೇರೆ ವೇದಿಕೆಗಳಲ್ಲಿ ಸನ್ಮಾನಿಸಲಾಗುತ್ತಿದೆ. ಇದು ಒಳ್ಳೆಯದು. ಹೀಗೆ ಗುರುತಿಸಿ ಸನ್ಮಾನಿಸುವುದರಿಂದ ಅವರಲ್ಲಿ ಕೆಲಸದ ಬಗ್ಗೆ ಮತ್ತಷ್ಟು ಹುರುಪು ಮೂಡುತ್ತದೆ. ಆ ಮೂಲಕ ಮತ್ತಷ್ಟು ಉತ್ತಮವಾಗಿ ಕೆಲಸ ನಿರ್ವಹಿಸುವರು’ ಎಂದು ಹೇಳಿದರು.

ಆಂಬುಲೆನ್ಸ್ ಚಾಲಕರಾದ ಪ್ರಭುದೇವಯ್ಯ ದೇವರಮನಿ ಅವರು ತಮಗೆ ದೊರೆತ ಈ ಗೌರವವನ್ನು ಆಂಬುಲೆನ್ಸ್ ಸಿಬ್ಬಂದಿ ರಂಗನಾಥ್ ಅವರ ಜತೆ ಹಂಚಿಕೊಂಡರು. ಈ ಖುಷಿಯಲ್ಲಿ ಅವರನ್ನೂ ಜತೆಯಾಗಿಸಿಕೊಂಡರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು