ಮಂಗಳವಾರ, ಮಾರ್ಚ್ 9, 2021
31 °C
ಪಾಲಿಕೆಯಲ್ಲಿ ಮತ್ತೆ ಆರಂಭ ಮೈತ್ರಿ ಆಡಳಿತದ ಯಾತ್ರೆ; ಜೆಡಿಎಸ್‌ನ ಶಶಿಕಲಾ ಗಂಗಹನುಮಯ್ಯ ಉಪಮೇಯರ್‌

ತುಮಕೂರು ಪಾಲಿಕೆ: ಕಾಂಗ್ರೆಸ್‌ನ ಫರೀದಾ ಮೇಯರ್‌, ಜೆಡಿಎಸ್‌ನ ಶಶಿಕಲಾ ಉಪಮೇಯರ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತುಮಕೂರು: ಮಹಾನಗರ ಪಾಲಿಕೆಯಲ್ಲಿ ಕಾಂಗ್ರೆಸ್‌ ಮತ್ತು ಜೆಡಿಎಸ್‌ನ ಸ್ಥಳೀಯ ಮುಖಂಡರ ಮೈತ್ರಿ ಮುಂದುವರೆದಿದೆ. ಗುರುವಾರ ನಡೆದ ಚುನಾವಣೆಯಲ್ಲಿ ನಿರೀಕ್ಷೆಯಂತೆ ಮೇಯರ್‌ ಆಗಿ ಕಾಂಗ್ರೆಸ್‌ನ ಫರೀದಾ ಬೇಗಂ ಹಾಗೂ ಉಪಮೇಯರ್‌ ಸ್ಥಾನ ಆಗಿ ಜೆಡಿಎಸ್‌ನ ಶಶಿಕಲಾ ಗಂಗಹನುಮಯ್ಯ ಅವರು ಅವಿರೋಧವಾಗಿ ಆಯ್ಕೆಯಾದರು.

ಸ್ಪರ್ಧೆಯಿಂದ ಬಿಜೆಪಿ ಹಿಂದೆ ಸರಿದಿದ್ದರಿಂದ ಈ ಸ್ಥಾನಗಳ ಆಯ್ಕೆಗೆ ಮತದಾನ ನಡೆಸುವ ಪ್ರಮೇಯವೇ ಚುನಾವಣ ಅಧಿಕಾರಿಗಳಿಗೆ ಎದುರಾಗಲಿಲ್ಲ.

‘ಸಾಮಾನ್ಯ ಮಹಿಳೆ’ಗೆ ಮೀಸಲಾಗಿದ್ದ ‘ಮೇಯರ್‌ಗಿರಿ’ಗೆ ಫರೀದಾ ಮತ್ತು ಬಿಜೆಪಿಯ ಬಿ.ಜಿ.ವೀಣಾ ನಾಮಪತ್ರ ಸಲ್ಲಿಸಿದ್ದರು. ‘ಹಿಂದುಳಿದ ವರ್ಗ’ಕ್ಕೆ ಮೀಸಲಾಗಿದ್ದ ಉಪಮೇಯರ್‌ ಸ್ಥಾನಕ್ಕಾಗಿ ಶಶಿಕಲಾ ಗಂಗಹನುಮಯ್ಯ ಒಬ್ಬರೇ ನಾಮಪತ್ರ ಹಾಕಿದ್ದರು.

ಹೇಗಾಯಿತು ಆಯ್ಕೆ: ಪಾಲಿಕೆ ಸಭಾಂಗಣದಲ್ಲಿ ಗುರುವಾರ ಮಧ್ಯಾಹ್ನ 11.30ಕ್ಕೆ ಮೇಯರ್‌ ಆಯ್ಕೆ ಪ್ರಕ್ರಿಯೆ ಆರಂಭವಾಯಿತು. ಚುನಾವಣಾ ಅಧಿಕಾರಿ ಮೊದಲು ಸದಸ್ಯರ ಹಾಜರಾತಿ ತೆಗೆದುಕೊಂಡರು. ಮತದಾನದ ಹಕ್ಕು ಹೊಂದಿದ್ದ ಸಂಸದ ಜಿ.ಎಸ್‌.ಬಸವರಾಜು, ಶಾಸಕ ಜಿ.ಬಿ.ಜ್ಯೋತಿಗಣೇಶ್‌, ವಿಧಾನ ಪರಿಷತ್‌ ಸದಸ್ಯ ಜೆಡಿಎಸ್‌ನ ಕಾಂತರಾಜು ಸೇರಿ ಒಟ್ಟು 38 ಸದಸ್ಯರು ಹಾಜರಿ ಹಾಕಿದರು.

ನಾಮಪತ್ರ ಹಿಂತೆಗೆದುಕೊಳ್ಳಲು ಅಧಿಕಾರಿ 2 ನಿಮಿಷದ ಸಮಯಾವಕಾಶ ಕೊಟ್ಟರು. ಬಿಜೆಪಿ ಬಣ ಚರ್ಚಿಸಿಕೊಂಡು ಬಂದಿತ್ತು. ಆ ಪ್ರಕಾರ ವೀಣಾ ಅವರು ನಾಮಪತ್ರ ಹಿಂದಕ್ಕೆ ಪಡೆದರು. ಆಗ ಮೈತ್ರಿ ಅಭ್ಯರ್ಥಿಗಳು ಸ್ಥಳೀಯಾಡಳಿತದ ಪ್ರಮುಖ ಸ್ಥಾನಗಳಿಗೆ ‘ಅವಿರೋಧವಾಗಿ ಆಯ್ಕೆ ಆಗಿದ್ದಾರೆ’ ಎಂದು ಅಧಿಕಾರಿ ಘೋಷಿಸಿದರು.

ಚುನಾವಣಾ ಅಧಿಕಾರಿಗಳಾಗಿ ಬೆಂಗಳೂರಿನ ಪ್ರಾದೇಶಿಕ ಆಯುಕ್ತ ಎನ್‌.ವಿ.ಪ್ರಸಾದ್‌, ಹೆಚ್ಚುವರಿ ಆಯುಕ್ತೆ ವಿದ್ಯಾಕುಮಾರಿ, ಸಹಾಯಕ ಚುನಾವಣಾ ಅಧಿಕಾರಿಯಾಗಿ ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಚನ್ನಬಸಪ್ಪ ಕಾರ್ಯ ನಿಭಾಯಿಸಿದರು.

***

ಮೂಲಸೌಕರ್ಯಗಳ ಅಭಿವೃದ್ಧಿ, ನಿರ್ವಹಣೆಗೆ ಕ್ರಿಯಾಶೀಲವಾಗಿ ದುಡಿಯುತ್ತೇನೆ. ಉದ್ಯಾನಗಳು ಮತ್ತು ಬೀದಿದೀಪಗಳ ನಿರ್ವಹಣೆಗೆ ಆದ್ಯತೆ ಕೊಡುತ್ತೇನೆ.

- ಶಶಿಕಲಾ ಗಂಗಹನುಮಯ್ಯ, ಉಪಮೇಯರ್‌

***

ಫರೀದಾ ಬೇಗಂ ಪರಿಚಯ

l ವಾರ್ಡ್‌: 13, ಕುರಿಪಾಳ್ಯ

l ವಿದ್ಯಾರ್ಹತೆ: ಮಾಸ್ಟರ್ಸ್ ಇನ್‌ ಕಂಪ್ಯೂಟರ್‌ ಅಪ್ಲಿಕೇಷನ್ಸ್(ಎಂಸಿಎ)

l ಅನುಭವ: ಗೃಹಿಣಿಯಾಗಿದ್ದವರು, ಮೊದಲ ಬಾರಿಗೆ ಪಾಲಿಕೆಗೆ ಆಯ್ಕೆಯಾಗಿದ್ದಾರೆ.

l ಭಾಷಾ ಕೌಶಲ: ಕನ್ನಡ, ಇಂಗ್ಲಿಷ್‌, ಹಿಂದಿ, ಉರ್ದು, ಅರಬ್ಬಿ.

ಮೇಯರ್‌ ಫರೀದಾ ಬೇಗಂ ಸಂದರ್ಶನ 

 

ಪ್ರಮುಖ ಹುದ್ದೆ ಸಿಕ್ಕಿದೆ, ಹೇಗೆ ಅನಿಸುತ್ತಿದೆ?

ಮೇಯರ್‌: ಇಂತಹ ದೊಡ್ಡ ಜವಾಬ್ದಾರಿ ನಿಭಾಯಿಸುವ ಅವಕಾಶ ಸಿಕ್ಕಿದ್ದಕ್ಕೆ ತುಂಬಾ ಸಂತೋಷ ಆಗುತ್ತಿದೆ.

ನಿಮ್ಮ ಕಾರ್ಯಯೋಜನೆ ಏನು?

ಮೇ: ಈ ಕ್ಷಣಕ್ಕೆ ಎಲ್ಲ ಕಾರ್ಯಯೋಜನೆಗಳನ್ನು ಹೇಳಲಾಗದು. ಪಾಲಿಕೆ ಎಲ್ಲ ಸದಸ್ಯರೊಂದಿಗೆ ಚರ್ಚಿಸಿಯೇ ನಗರದಲ್ಲಿ ಶಾಂತಿ ನೆಲಸಲು, ಅಭಿವೃದ್ಧಿಯಾಗಲು ಬೇಕಾದ ಕಾರ್ಯಯೋಜನೆ ರೂಪಿಸುತ್ತೇನೆ. ಅದನ್ನು ಮುಂದಿನ ದಿನಗಳಲ್ಲಿ ತಿಳಿಸುತ್ತೇನೆ.

ನಗರಾಭಿವೃದ್ಧಿಯಲ್ಲಿ ನಿಮ್ಮ ಆದ್ಯತೆ?

ಮೇ: ಕಸದ ಸಮರ್ಪಕ ವಿಲೇವಾರಿ, ಅಗತ್ಯವಿರುವಷ್ಟು ನೀರಿನ ಪೂರೈಕೆ, ‘ದೂಳು ಸಿಟಿ’ಯನ್ನು ಸ್ಮಾರ್ಟ್‌ ಸಿಟಿ ಮಾಡುವುದು. ಪ್ರತಿ ತಿಂಗಳೂ ಸಸಿಗಳನ್ನು ನೆಡುವ ಅಭಿಯಾನ ನಡೆಸುತ್ತೇನೆ.

ನಿಮ್ಮ ನಿರ್ಧಾರಗಳಲ್ಲಿ ಬೇರೆಯವರ ಹಸ್ತಕ್ಷೇಪ ಇರುತ್ತದೆಯೇ?

ಮೇ: ನಾನು ಯಾರ ‘ರಿಮೋರ್ಟ್‌ ಕಂಟ್ರೋಲ್‌’ನಿಂದ ಕೆಲಸ ಮಾಡಲ್ಲ. ಎಲ್ಲ ಪಕ್ಷದವರಿಂದ ಸಲಹೆ ಸ್ವೀಕರಿಸುತ್ತೇನೆ. ಎಲ್ಲರ ಮಾತುಗಳನ್ನು ಚೆನ್ನಾಗಿ ಕೇಳಿಸಿಕೊಳ್ಳುತ್ತೇನೆ. ನನ್ನಲ್ಲಿರುವ ಮಾಹಿತಿಯೇ ನನಗೆ ಜ್ಞಾನ. ನೋಡ್ತಾ ಇರಿ, ತಿಂಗಳಿನಲ್ಲಿ ಏನಾಗುತ್ತೆ ಅಂತ.

ಪಾಲಿಕೆ ಸದಸ್ಯೆಯರ ಪತಿಯರು ಆಡಳಿತದಲ್ಲಿ ಹಸ್ತಕ್ಷೇಪ ಮಾಡುತ್ತಾರೆ ಎಂಬ ಆರೋಪವಿದೆಯಲ್ಲ.

ಮೇ: ನೋಡಿ, ಶೇ 50 ಮಹಿಳಾ ಮೀಸಲಾತಿಯಿಂದಾಗಿ ಬಹುತೇಕ ಸದಸ್ಯೆಯರು ಮೊದಲ ಬಾರಿಗೆ ಆಯ್ಕೆ ಆಗಿದ್ದಾರೆ. ಅವರಿಗೆ ಏನೂ ಗೊತ್ತಿಲ್ಲ. ಅವರು ಪತಿಯಿಂದ ಆಡಳಿತ ನಡೆಸುವ ಕಲೆಯನ್ನು ಕಲಿಯುವುದು ತಪ್ಪಲ್ಲ. ಪತ್ನಿಯರು ರಾಜಕೀಯದಲ್ಲಿ ಬೆಳೆಯಲಿ ಎಂಬ ಕಾರಣಕ್ಕೆ ಪತಿಯರು ಮಾರ್ಗದರ್ಶನ ಮಾಡುತ್ತಿದ್ದಾರೆ. ಪಾಲಿಕೆಯಲ್ಲಿ ಯಾರಿಂದಲೂ ಅಧಿಕಾರದ ದುರುಪಯೋಗ ಆಗಲ್ಲ.

 

ಗಿಡ ಬೆಳಸಮ್ಮ: ಸಂಸದ

ನಿನ್ನ ಗಂಡ ಮರಗಳನ್ನು ಕಡಿಸುವ ಗುತ್ತಿಗೆದಾರ ಆಗಿದ್ದ. ಕಾಮಗಾರಿಗಳಿಗೆಂದು ಅದೇ ಕೆಲಸವನ್ನು ನೀನೂ ಮಾಡಬೇಡಮ್ಮ. ಸಸಿಗಳನ್ನು ಹೆಚ್ಚು ಬೆಳೆಸುವ ಕಾರ್ಯಕ್ರಮ ರೂಪಿಸಮ್ಮ ಎಂದು ಸಂಸದ ಜಿ.ಎಸ್‌.ಬಸವರಾಜು ಅವರು ನೂತನ ಮೇಯರ್‌ಗೆ ಸಲಹೆ ನೀಡಿದರು.

ಅಧಿಕಾರ ಸಿಕ್ಕಿತೆಂದು ದರ್ಬಾರು ಮಾಡಬೇಡಿ. ನಿಮ್ಮ– ನಿಮ್ಮಲ್ಲೇ ಕಿತ್ತಾಟ ಮಾಡಿಕೊಳ್ಳಬೇಡಿ. ಸಮನ್ವಯದಿಂದ ಕೆಲಸ ಮಾಡಿ. ನಗರ ಅಭಿವೃದ್ಧಿಗೆ ನಮ್ಮ ಪಕ್ಷದಿಂದಲೂ ಸಂಪೂರ್ಣ ಸಹಕಾರ ಕೊಡುತ್ತೇನೆ. ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಸಕಾಲಕ್ಕೆ ಅನುದಾನ ತರುತ್ತೇವೆ ಎಂದರು.

ಅಭಿನಂದನೆಯ ಸುರಿಮಳೆ

ನೂತನವಾಗಿ ಆಯ್ಕೆಯಾದವರಿಗೆ ಪಕ್ಷದ ಸಾಮಾನ್ಯ ಕಾರ್ಯಕರ್ತರು, ಸ್ಥಳೀಯ ಮುಖಂಡರು ಸೇರಿದಂತೆ ಶಾಸಕ ಜಿ.ಬಿ.ಜ್ಯೋತಿಗಣೇಶ್‌, ಸಂಸದ ಜಿ.ಎಸ್‌.ಬಸವರಾಜು ಸಹ ಹೂಗುಚ್ಛಗಳನ್ನು ನೀಡಿ, ಹೂವಿನ ಮಾಲೆಗಳನ್ನು ಹಾಕಿ ಅಭಿನಂದಿಸಿದರು.

ಶಾಸಕ ಜಿ.ಪರಮೇಶ್ವರ್‌, ಗುಬ್ಬಿ ಶಾಸಕ ಎಸ್‌.ಆರ್‌.ಶ್ರೀನಿವಾಸ್‌, ತುಮಕೂರು ಗ್ರಾಮಾಂತರ ಶಾಸಕ ಗೌರಿಶಂಕರ್‌, ಕಾಂಗ್ರೆಸ್‌ ಮುಖಂಡ ರಫೀಕ್‌ ಅಹ್ಮದ್‌, ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ ಆರ್.ರಾಮಕೃಷ್ಣ, ಜೆಡಿಎಸ್‌ ಜಿಲ್ಲಾ ಘಟಕದ ಅಧ್ಯಕ್ಷ ಆರ್‌.ಸಿ.ಆಂಜಿನಪ್ಪ ಅವರು ಚುನಾಯಿತರನ್ನು ಅಭಿನಂದಿಸಿದರು. ಫರೀದಾ ಅವರು ಫಲಿತಾಂಶದ ಬಳಿಕ ಸಿದ್ಧಗಂಗಾ ಕಾಲೇಜು ಎದುರಿನ ‘ಜೋಡಿ ಮಜಾರ್‌ ದರ್ಗಾ’ಕ್ಕೆ ಭೇಟಿ ನೀಡಿದರು. ಕಾರ್ಯಕರ್ತರು ಪಾಲಿಕೆಯ ಆವರಣದಲ್ಲಿ ಪಟಾಕಿಗಳನ್ನು ಸಿಡಿಸಿ, ಸಿಹಿಯನ್ನು ಹಂಚಿ ಸಂಭ್ರಮಿಸಿದರು. ಪಾಲಿಕೆ ಆವರಣಕ್ಕೆ ಕರೆತಂದಿದ್ದ ಸಾಂಸ್ಕೃತಿಕ ಕಲಾತಂಡಗಳ ವಾದ್ಯ–ನಾದಕ್ಕೆ ಕಾರ್ಯಕರ್ತರು ಹೆಜ್ಜೆ ಹಾಕಿದರು.

4 ಸ್ಥಾಯಿ ಸಮಿತಿ: ಸದಸ್ಯರ ಆಯ್ಕೆ

ಪಾಲಿಕೆಯ ನಾಲ್ಕು ಸ್ಥಾಯಿ ಸಮಿತಿಗಳ ಸದಸ್ಯರನ್ನು ಇದೇ ಸಂದರ್ಭದಲ್ಲಿ ಆಯ್ಕೆ ಮಾಡಲಾಯಿತು.

ತೆರಿಗೆ ಸುಧಾರಣೆ, ಹಣಕಾಸು ಮತ್ತು ಅಪೀಲುಗಳ ಸ್ಥಾಯಿ ಸಮಿತಿ: ಧರಣೇಂದ್ರ ಕುಮಾರ್, ಟಿ.ಎಂ.ಮಹೇಶ್,  ಷಕೀಲ್ ಅಹಮದ್ ಷರೀಫ್, ನಳಿನ ಇಂದ್ರಕುಮಾರ್, ಮುಜಿದಾ ಖಾನಂ, ನೂರು ಉನ್ನೀಸಾ ಬಾನು, ಬಿ.ಎಸ್.ಮಂಜುನಾಥ.

ಸಾರ್ವಜನಿಕ ಆರೋಗ್ಯ ಮತ್ತು ಶಿಕ್ಷಣ ಮತ್ತು ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ: ಎಚ್.ಎಂ.ದೀಪಶ್ರೀ, ಟಿ.ಕೆ.ನರಸಿಂಹಮೂರ್ತಿ, ಸೈಯದ್ ನಯಾಜ್, ಬಿ.ಜಿ.ಕೃಷ್ಣಪ್ಪ, ಎ.ಶ್ರೀನಿವಾಸ, ಎಂ.ಪ್ರಭಾವತಿ, ಲಲಿತಾ ರವೀಶ್.

ಪಟ್ಟಣ ಯೋಜನೆ ಮತ್ತು ಸುಧಾರಣೆ ಸ್ಥಾಯಿ ಸಮಿತಿ: ಎಚ್.ಮಲ್ಲಿಕಾರ್ಜುನಯ್ಯ, ವಿ.ಎಸ್.ಗಿರಿಜಾ, ಎಚ್.ಎಸ್.ನಿರ್ಮಲ ಶಿವಕುಮಾರ್, ಎಂ.ಸಿ.ನವೀನ ಅರುಣ, ನಾಸಿರಾ ಬಾನು,  ಬಿ.ಎಸ್.ರೂಪಶ್ರೀ,  ಬಿ.ಜಿ.ವೀಣಾ.

ಲೆಕ್ಕಪತ್ರ ಸ್ಥಾಯಿ ಸಮಿತಿ: ಕೆ.ಎಸ್.ಮಂಜುಳ, ಎಸ್. ಮಂಜುನಾಥ್, ಸಿ.ಎನ್.ರಮೇಶ್, ಚಂದ್ರಕಲಾ, ಇನಾಯತುಲ್ಲಾ ಖಾನ್,  ಜೆ.ಕುಮಾರ್, ವಿಷ್ಣುವರ್ಧನ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು