ಶನಿವಾರ, ಜೂನ್ 19, 2021
23 °C
ಮೈತ್ರಿ ಮತ್ತಷ್ಟು ಬಿಗಿ: ಕಾಂಗ್ರೆಸ್‌ನ ಫರೀದಾ ಮೇಯರ್‌?

ತುಮಕೂರು ಮಹಾನಗರ ಪಾಲಿಕೆ: ಮೈತ್ರಿ ಮುಂದುವರಿಸಲು ಕೈ– ತೆನೆ ಒಮ್ಮತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ತುಮಕೂರು: ಕಾಂಗ್ರೆಸ್‌ ಮತ್ತು ಜೆಡಿಎಸ್‌ ಮೈತ್ರಿ ಮತ್ತಷ್ಟು ಗಟ್ಟಿಯಾಗಿದ್ದು, 13ನೇ ವಾರ್ಡ್‌ನ ಪಾಲಿಕೆ ಸದಸ್ಯೆ ಕಾಂಗ್ರೆಸ್‌ನ ಫರೀದಾ ಬೇಗಂ ಮೇಯರ್‌ ಆಗಿ ಆಯ್ಕೆ ಆಗುವುದು ಬಹುತೇಕ ಖಚಿತವಾಗಿದೆ.

ಒಗ್ಗಟ್ಟಿನ ಬಂಧ ಸಡಿಲವಾಗದಿರಲೆಂದು ಕಾಂಗ್ರೆಸ್‌ ಮತ್ತು ಜೆಡಿಎಸ್‌ನ ಪಾಲಿಕೆ ಸದಸ್ಯರು ನೆಲಮಂಗಲ ಸಮೀಪದ ರೇಸಾರ್ಟ್‌ವೊಂದರಲ್ಲಿ ಬೀಡುಬಿಟ್ಟಿದ್ದಾರೆ ಎನ್ನಲಾಗುತ್ತಿದೆ. ಈ ಎರಡು ಬಣಗಳ ಸೇತುವೆಯಾಗಿ ಕಾಂಗ್ರೆಸ್‌ ಮುಖಂಡ ರಫೀಕ್‌ ಅಹ್ಮದ್‌ ಮತ್ತು ಗುಬ್ಬಿ ಶಾಸಕ ಎಸ್‌.ಆರ್‌.ಶ್ರೀನಿವಾಸ್‌ ಕಾರ್ಯನಿರ್ವಹಿಸುತ್ತಿದ್ದಾರೆ.

‘ಸಮಾನಮನಸ್ಕರಾದ ನಾವು ಒಗ್ಗಟ್ಟಿನಿಂದ ಇದ್ದೇವೆ. ಕಳೆದ ಬಾರಿಯಂತೆಯೇ ಮೈತ್ರಿ ಮುಂದುವರೆಯಲಿದೆ. ನಮ್ಮ ಕಡೆಯಿಂದ ಮೇಯರ್‌ ಅಭ್ಯರ್ಥಿಯಾಗಿ ಫರೀದಾ ಬೇಗಂ ಅವರನ್ನು ಒಮ್ಮತದಿಂದ ಆರಿಸಿದ್ದೇವೆ. ಈ ಆಯ್ಕೆಗೆ ಜೆಡಿಎಸ್‌ನವರೂ ಸಹ ಒಪ್ಪಿಗೆ ಸೂಚಿಸಿದ್ದಾರೆ‘ ಎಂದು ರಫೀಕ್ ಅಹ್ಮದ್‌ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ನಮ್ಮ ಮೈತ್ರಿಯಲ್ಲಿ ಎಲ್ಲಿಯೂ ಅಸಮಾಧಾನ ಇಲ್ಲ. ಎಲ್ಲರೂ ಒಟ್ಟಿಗೆ ತುಮಕೂರು ನಗರದ ಹೊರವಲಯಕ್ಕೆ ಪ್ರವಾಸಕ್ಕೆಂದು ಬಂದಿದ್ದೇವೆ. ಎಲ್ಲರೂ ಒಟ್ಟಿಗೆ ಬಂದು ಗುರುವಾರ ಮತ ಚಲಾಯಿಸುತ್ತೇವೆ. ಕಾಂಗ್ರೆಸ್‌ನವರು ಮೇಯರ್‌ ಸ್ಥಾನವನ್ನು, ನಮ್ಮವರು ಉಪಮೇಯರ್‌ ಸ್ಥಾನದಲ್ಲಿ ಕೂರಲಿದ್ದಾರೆ‘ ಎಂದು ಎಸ್‌.ಆರ್‌.ಶ್ರೀನಿವಾಸ್‌ ಅವರು ವಿಶ್ವಾಸದಿಂದ ಹೇಳಿದರು.

‘ಉಪಮೇಯರ್‌ ಸ್ಥಾನ ಇತರೆ ಹಿಂದುಳಿದ ವರ್ಗಕ್ಕೆ ಹಂಚಿಕೆ ಆಗಿದೆ. ನಮ್ಮ ಸದಸ್ಯರಾದ ಶಶಿಕಲಾ ಗಂಗಹನುಮಯ್ಯ (33ನೇ ವಾರ್ಡ್‌) ಅವರನ್ನು ಆಯ್ಕೆ ಮಾಡಲು ನಿರ್ಧರಿಸಿದ್ದೇವೆ‘ ಎಂದು ಅವರು ತಿಳಿಸಿದರು.

ಪಕ್ಷೇತರರ ಬೆಂಬಲ: ಉಪ್ಪಾರಹಳ್ಳಿ ವಾರ್ಡ್‌ ಪ್ರತಿನಿಧಿಸುವ ಪಕ್ಷೇತರ ಸದಸ್ಯ ಶಿವರಾಮ್‌ ಅವರು ಮೈತ್ರಿ ಜತೆಯಾಗಿದ್ದಾರೆ. ಕಾಂಗ್ರೆಸ್‌ನಿಂದ ಟಿಕೆಟ್‌ ಸಿಗದಿದ್ದರೂ ಸ್ವತಂತ್ರ ಅಭ್ಯರ್ಥಿಯಾಗಿ ಗೆದ್ದಿರುವ ನೂರುನ್ನಿಸಾ ಬಾನು ಸಹ ಈಗ ಮೈತ್ರಿಯ ಮಂದಿಯೊಂದಿಗೆ ಸೇರಿದ್ದಾರೆ. ಇಂದರಿಂದಾಗಿ ಒಗ್ಗಟಿನ ಬಣ ಮೇಲುಗೈ ಸಾಧಿಸುವುದು ಬಹುತೇಕ ಖಚಿತವಾಗಿದೆ.

ಈ ಎರಡು ಪಕ್ಷಗಳು ಮೈತ್ರಿ ಬಿಗಿಯಾಗಿರುವ ಕಾರಣ, ಬಿಜೆಪಿಗೆ ಅಧಿಕಾರದ ‘ಹಣ್ಣು’ ಸಿಗುವುದಿಲ್ಲ ಎಂಬ ಸೂಚನೆ ಸಿಕ್ಕಿದೆ. ಹಾಗಾಗಿ ಅವರು ಈ ಚುನಾವಣೆಗಾಗಿ ಯಾವುದೇ ವಿಶೇಷ ತಯಾರಿಗಳನ್ನು ಮಾಡಿಕೊಳ್ಳುತ್ತಿಲ್ಲ. ಅವರಿಗೆ ಈ ಹಿಂದಿನಂತೆ ಸ್ಥಾಯಿ ಸಮಿತಿಗಳ ಅಧ್ಯಕ್ಷಗಿರಿ ಸಿಗುವ ಸಾಧ್ಯತೆ ಇದೆ.

ಯಾರು ಈ ಫರೀದಾ ಬೇಗಂ?
ಈ ಹಿಂದೆ ಎರಡು ಬಾರಿ 13ನೇ ವಾರ್ಡ್‌ನಿಂದಲೇ ಪಾಲಿಕೆ ಸದಸ್ಯರಾಗಿ ಆಯ್ಕೆ ಆಗಿದ್ದ ಮಹಮ್ಮದ್‌ ಹಫೀಜ್‌ ಅವರ ಪತ್ನಿ. ಫರೀದಾ ಇದೇ ಮೊದಲ ಬಾರಿಗೆ ಪಾಲಿಕೆ ಪ್ರವೇಶ ಮಾಡಿದ್ದಾರೆ. ಅವರ ಮೊದಲ ಯತ್ನದಲ್ಲಿಯೇ ಮೇಯರ್‌ ಸ್ಥಾನದಲ್ಲಿ ಕೂರುವ ಅವಕಾಶ ಒಲಿದು ಬಂದಿದೆ.

ಉತ್ತಮ ವಾಗ್ಮಿಯೂ ಆಗಿರುವ ಇವರು, ಮಾಸ್ಟರ್‌ ಆಫ್‌ ಕಂಪ್ಯೂಟರ್‌ ಅಪ್ಲಿಕೇಷನ್‌ನಲ್ಲಿ(ಎಂಸಿಎ) ಸ್ನಾತಕೋತ್ತರ ಪದವೀಧರೆ.

ಜೆಡಿಎಸ್‌ನ 6+6 ಸೂತ್ರ
ಜೆಡಿಎಸ್‌ನ ಉಪಮೇಯರ್ ಸ್ಥಾನಕ್ಕೆ 33ನೇ ವಾರ್ಡ್‌ನ ಶಶಿಕಲಾ ಗಂಗಹನುಮಯ್ಯ ಮತ್ತು 29ನೇ ವಾರ್ಡ್‌ನ ನಾಜಿಮಾ ಪೈಪೋಟಿ ನಡೆಸಿದ್ದಾರೆ.

ಈ ಭಿನ್ನಮತವನ್ನು ಶಮನ ಮಾಡಲು ಮುಖಂಡರು ‘6+6 ಸೂತ್ರ’ ರೂಪಿಸಿದ್ದಾರೆ. ಮೊದಲ ಆರು ತಿಂಗಳ ಅವಧಿಗೆ ಶಶಿಕಲಾ, ವರ್ಷದ ಉಳಿದಾರ್ಧ ಅವಧಿಯಲ್ಲಿ ನಾಜಿಮಾ ಬಿ ಅವರು ಉಪಮೇಯರ್‌ ಗಾದಿ ಮೇಲೆ ಕೂರಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಇಂದು ಮೇಯರ್ ಚುನಾವಣೆ
ಮೇಯರ್, ಉಪಮೇಯರ್ ಸ್ಥಾನಕ್ಕೆ ಚುನಾವಣೆ ಮತ್ತು ನಾಲ್ಕು ಸ್ಥಾಯಿ ಸಮಿತಿಗಳ ಸದಸ್ಯರ ಆಯ್ಕೆ ಪ್ರಕ್ರಿಯೆಯೂ ಜ.30ರಂದು ನಡೆಯಲಿದೆ.

ಬೆಂಗಳೂರು ವಿಭಾಗದ ಪ್ರಾದೇಶಿಕ ಆಯುಕ್ತರಾದ ಎನ್‌.ವಿ.ಪ್ರಸಾದ್‌ ಅಧ್ಯಕ್ಷತೆಯಲ್ಲಿ ಬೆಳಿಗ್ಗೆ 11.30 ಗಂಟೆಗೆ ಪಾಲಿಕೆ ಸಭಾಂಗಣದಲ್ಲಿ ಚುನಾವಣಾ ಪ್ರಕ್ರಿಯೆ ನಡೆಯಲಿದೆ ಎಂದು ಪಾಲಿಕೆ ಆಯುಕ್ತ ಟಿ.ಭೂಬಾಲನ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಬೆಳಿಗ್ಗೆ 8.30ರಿಂದ 10ರ ವರೆಗೆ ನಾಮಪತ್ರ ಸಲ್ಲಿಸಲು ಸಮಯಾವಕಾಶವಿದೆ. ಮಧ್ಯಾಹ್ನ 1ರ ಹೊತ್ತಿಗೆ ಫಲಿತಾಂಶ ಹೊರಬೀಳಲಿದೆ ಎಂದು ಚುನಾವಣಾ ಸಿಬ್ಬಂದಿ ತಿಳಿಸಿದರು.

**
ಅವರಿಬ್ಬರು ಒಂದಾಗಿದ್ದಾರೆ. ನಾವೇನು ಮಾಡೋಣ. ಆಡಳಿತದಲ್ಲಿ ವಿರೋಧ ಪಕ್ಷವೂ ಇರಬೇಕಲ್ಲವೇ? ನೋಡೋಣ ಕೊನೆಯ ಗಳಿಗೆಯಲ್ಲಿ ಏನಾಗುತ್ತದೆಯೆಂದು.
-ಜ್ಯೋತಿ ಗಣೇಶ್‌, ಶಾಸಕ

 

ಮತದಾನದ ಹಕ್ಕು: ಪಕ್ಷಗಳ ಬಲಾಬಲ

ಬಿಜೆಪಿ: ಶಾಸಕ ಜಿ.ಬಿ.ಜ್ಯೋತಿ ಗಣೇಶ್‌, ಸಂಸದ ಜಿ.ಎಸ್‌.ಬಸವರಾಜು ಸೇರಿ 14 ಮತಗಳು 

ಜೆಡಿಎಸ್‌: ವಿಧಾನ ಪರಿಷತ್‌ ಸದಸ್ಯ ಕಾಂತರಾಜು ಸೇರಿ 11 ಮತಗಳು

ಕಾಂಗ್ರೆಸ್‌: 10

ಪಕ್ಷೇತರ: 3

ಚುನಾವಣೆ ಗೆಲ್ಲಲು ಬೇಕಾದ ಮತಗಳು: 20

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು