ಶನಿವಾರ, 15 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುಮಕೂರು | ಬೇಡಿಕೆ 28,805 ಕ್ವಿಂಟಲ್; 659 ಕ್ವಿಂಟಲ್ ದಾಸ್ತಾನು

ಬಿತ್ತನೆ ಬೀಜ, ಗೊಬ್ಬರಕ್ಕೆ ಸಮಸ್ಯೆ ಆಗದಂತೆ ನೋಡಿಕೊಳ್ಳಲು ಸೂಚನೆ
Published 23 ಮೇ 2024, 4:26 IST
Last Updated 23 ಮೇ 2024, 4:26 IST
ಅಕ್ಷರ ಗಾತ್ರ

ತುಮಕೂರು: ಜಿಲ್ಲೆಯಲ್ಲಿ ಉತ್ತಮ ಮಳೆಯಾಗುತ್ತಿದ್ದು, ಕೃಷಿ ಚಟುವಟಿಕೆಗಳು ಚುರುಕು ಪಡೆದುಕೊಂಡಿವೆ. ಒಟ್ಟು 28,805 ಕ್ವಿಂಟಲ್ ಬಿತ್ತನೆ ಬೀಜಕ್ಕೆ ಬೇಡಿಕೆ ಇದ್ದು, ಕೇವಲ 765 ಕ್ವಿಂಟಲ್ ದಾಸ್ತಾನು ಮಾಡಲಾಗಿದ್ದು, ಅದರಲ್ಲಿ 106 ಕ್ವಿಂಟಲ್ ವಿತರಣೆ ಮಾಡಲಾಗಿದೆ.

ಕೃಷಿ ಇಲಾಖೆ ಬಳಿ ಪ್ರಸ್ತುತ 659 ಕ್ವಿಂಟಲ್ ಬಿತ್ತನೆ ಬೀಜವಷ್ಟೇ ಉಳಿದಿದ್ದು, ಈ ಬೀಜವನ್ನೂ ರೈತರು ತೆಗೆದುಕೊಂಡು ಹೋದರೆ ವಿತರಣೆ ಮಾಡಲು ಬೀಜವೇ ಇರುವುದಿಲ್ಲ. ತಕ್ಷಣಕ್ಕೆ ಕೃಷಿ ಇಲಾಖೆ ಬಿತ್ತನೆ ಬೀಜದ ದಾಸ್ತಾನು ಹೆಚ್ಚಳ ಮಾಡದಿದ್ದರೆ, ರೈತರು ಸಮಸ್ಯೆ ಎದುರಿಸಬೇಕಾಗುತ್ತದೆ.

ಮುಂಗಾರು ಹಂಗಾಮಿನ ಸಿದ್ಧತೆ ಕುರಿತು ಕೃಷಿ ಇಲಾಖೆಯ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳೊಂದಿಗೆ ನಡೆಸಿದ ಸಭೆಯಲ್ಲಿ ಇಲಾಖೆ ಜಂಟಿ ನಿರ್ದೇಶಕ ರಮೇಶ್ ಮಾಹಿತಿ ನೀಡಿದರು.

ಪ್ರಸಕ್ತ ಸಾಲಿನಲ್ಲಿ ಪ್ರಮುಖ ಬೆಳೆಗಳಾದ ಭತ್ತ, ಜೋಳ, ರಾಗಿ, ಸಿರಿ ಧಾನ್ಯ, ಮುಸುಕಿನ ಜೋಳ, ದ್ವಿದಳ ಧಾನ್ಯ, ಎಣ್ಣೆಕಾಳು, ವಾಣಿಜ್ಯ ಬೆಳೆ ಸೇರಿದಂತೆ 3,20,455 ಹೆಕ್ಟೇರ್ ವಿಸ್ತೀರ್ಣದಲ್ಲಿ ಬಿತ್ತನೆ ಮಾಡುವ ಗುರಿ ಹೊಂದಲಾಗಿದೆ. ವಿವಿಧ ಸರಬರಾಜು ಸಂಸ್ಥೆಗಳಲ್ಲಿ 52,217 ಕ್ವಿಂಟಲ್ ಬೀಜ ಲಭ್ಯವಿದ್ದು, ಬರುವ ಜೂನ್ ಒಳಗೆ ಹಂತ ಹಂತವಾಗಿ ಎಲ್ಲಾ ರೈತ ಸಂಪರ್ಕ ಕೇಂದ್ರಗಳಲ್ಲಿ ದಾಸ್ತಾನು ಮಾಡಲಾಗುವುದು ಎಂದು ತಿಳಿಸಿದರು.

ಯೂರಿಯಾ, ಡಿಎಪಿ, ಎಂಒಪಿ, ಎನ್‍ಪಿಕೆಎಸ್, ಎಸ್‍ಎಸ್‍ಪಿ ಸೇರಿದಂತೆ ಒಟ್ಟು 70,264 ಮೆಟ್ರಿಕ್ ಟನ್ ರಸಗೊಬ್ಬರಕ್ಕೆ ಬೇಡಿಕೆ ಇದ್ದು, ಈವರೆಗೆ 50,160 ಮೆಟ್ರಿಕ್ ಟನ್ ಗೊಬ್ಬರವನ್ನು ವಿವಿಧ ಸಂಸ್ಥೆಗಳು ಸರಬರಾಜು ಮಾಡಿವೆ ಎಂದು ಮಾಹಿತಿ ನೀಡಿದರು.

ಜಿಲ್ಲಾಧಿಕಾರಿ ಶುಭ ಕಲ್ಯಾಣ್, ‘ಬೀಜ, ಗೊಬ್ಬರದ ಕೊರತೆ ಉಂಟಾದರೆ ಸಂಬಂಧಿಸಿದ ತಾಲ್ಲೂಕು ಕೃಷಿ ಸಹಾಯಕ ನಿರ್ದೇಶಕರನ್ನು ಹೊಣೆಗಾರರನ್ನಾಗಿ ಮಾಡಲಾಗುವುದು’ ಎಂದು ಎಚ್ಚರಿಸಿದರು.

ರೈತರ ಬೇಡಿಕೆಗೆ ಅನುಗುಣವಾಗಿ ಬಿತ್ತನೆ ಬೀಜ, ರಸಗೊಬ್ಬರವನ್ನು ದಾಸ್ತಾನು ಮಾಡಿರಬೇಕು. ರೈತ ಸಂಪರ್ಕ ಕೇಂದ್ರಗಳಲ್ಲಿ ದಾಸ್ತಾನು ಮಾಡಲು ಜಾಗದ ಸಮಸ್ಯೆಯಾದರೆ ಗೋದಾಮು, ಗ್ರಾಮ ಪಂಚಾಯಿತಿ ಭವನಗಳಲ್ಲಿ ದಾಸ್ತಾನು ಮಾಡಬೇಕು. ಬೀಜಕ್ಕಾಗಿ ರೈತರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಬಾರದು ಎಂದು ಹೇಳಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ.ಪ್ರಭು, ‘ಬಿತ್ತನೆ ಬೀಜದ ದಾಸ್ತಾನು ಪ್ರಮಾಣವನ್ನು ಹಿಂದಿನ ಸಾಂಪ್ರದಾಯಿಕ ಪದ್ಧತಿ ಅನ್ವಯ ನಿಗದಿಪಡಿಸಬಾರದು. ರೈತರನ್ನು ಖುದ್ದಾಗಿ ಭೇಟಿ ಮಾಡಿ ವಾಸ್ತವವಾಗಿ ಅಗತ್ಯವಿರುವ ಪ್ರಮಾಣವನ್ನು ನಿರ್ಧರಿಸಿ ದಾಸ್ತಾನು ಮಾಡಬೇಕು. ಮುಖ್ಯ ಬೆಳೆಗಳಾದ ರಾಗಿ, ಶೇಂಗಾ ಬಿತ್ತನೆ ಬೀಜವನ್ನು ಬೇಡಿಕೆಗಿಂತ ಹೆಚ್ಚುವರಿಯಾಗಿ ದಾಸ್ತಾನು ಮಾಡಬೇಕು’ ಎಂದು ಸಲಹೆ ನೀಡಿದರು.

ರೈತರಿಗೆ ಸಕಾಲದಲ್ಲಿ ರೈತ ಸಂಪರ್ಕ ಕೇಂದ್ರಗಳಲ್ಲಿ ಬಿತ್ತನೆ ಬೀಜ ಪೂರೈಕೆಯಾಗದಿದ್ದಲ್ಲಿ ಮುಕ್ತ ಮಾರುಕಟ್ಟೆಗೆ ಹೋಗುವ ಸಾಧ್ಯತೆ ಇರುತ್ತದೆ. ಈ ನಿಟ್ಟಿನಲ್ಲಿ ಮೇ ಅಂತ್ಯದ ಒಳಗಾಗಿ ಅಗತ್ಯ ಬಿತ್ತನೆ ಬೀಜ, ರಸಗೊಬ್ಬರ ದಾಸ್ತಾನು ಮಾಡಲು ಕ್ರಮವಹಿಸಬೇಕು ಎಂದರು.

ಈ ಬಾರಿ ದಾಖಲೆ ಮಳೆ

ಕಳೆದ ಮೂರು ವರ್ಷಗಳಿಗೆ ಹೋಲಿಸಿದರೆ ಜಿಲ್ಲೆಯಲ್ಲಿ ಈ ಬಾರಿ ಮೇ ತಿಂಗಳಲ್ಲಿ ದಾಖಲೆ ಪ್ರಮಾಣದಲ್ಲಿ ಮಳೆಯಾಗಿದೆ. ಈವರೆಗೆ ಮೇ ತಿಂಗಳಲ್ಲಿ ಸರಾಸರಿ 193.8 ಮಿ.ಮೀ ಮಳೆ ಬಿದ್ದಿದೆ. 2021ರಲ್ಲಿ 164.5 ಮಿ.ಮೀ 2022ರಲ್ಲಿ 126 ಮಿ.ಮೀ 2023ರಲ್ಲಿ 139.7 ಮಿ.ಮೀ ಸರಾಸರಿ ಮಳೆಯಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT