ತುಮಕೂರು ತಾಲ್ಲೂಕಿನ ಊರುಕೆರೆ ಬಳಿಯ ಸರ್ವೀಸ್ ರಸ್ತೆಯ ಸ್ಥಿತಿ
ತುಮಕೂರು ಶಿರಾಗೇಟ್ ಹತ್ತಿರದ ಹಂಪ್ಸ್
ಕೆಳ ಸೇತುವೆ ಕತ್ತಲು
ಹೆದ್ದಾರಿಗಳಿಂದ ನಗರಕ್ಕೆ ಪ್ರವೇಶ ಕಲ್ಪಿಸುವ ಕೆಳ ಸೇತುವೆ ಬಳಿ ಬೆಳಕಿನ ವ್ಯವಸ್ಥೆಯಿಲ್ಲ. ನಗರದಿಂದ ಹೋಗುವ ವಾಹನಕ್ಕೆ ಮುಖಾಮುಖಿಯಾಗಿ ಅವಘಡಗಳು ಆಗುತ್ತಿವೆ. ಬಟವಾಡಿ ಶ್ರೀದೇವಿ ಕಾಲೇಜು ಬಳಿ ಹನುಮಂತಪುರ ಸೇತುವೆಗಳ ಬಳಿ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡಿಲ್ಲ. ಬೆಳಿಗ್ಗೆ ಸಮಯದಲ್ಲಿ ತೊಂದರೆಯಾಗುತ್ತಿಲ್ಲ. ಕತ್ತಲಾದ ನಂತರವೇ ಅಸಲಿ ಆಟ ಶುರುವಾಗುತ್ತದೆ. ವಿದ್ಯುತ್ ದೀಪಗಳು ಇಲ್ಲದೆ ದಾರಿಯಲ್ಲಿ ಗುಂಡಿ ಎಲ್ಲಿದೆ ರಸ್ತೆ ಯಾವ ಕಡೆ ಇದೆ ಎಂದು ಹುಡುಕುವುದು ಸವಾಲಾಗುತ್ತದೆ. ಇಂತಹ ಜಾಗದಲ್ಲಿ ತಿರುವು ಪಡೆಯುವ ವೇಳೆ ಅಪಘಾತಗಳು ಜಾಸ್ತಿಯಾಗುತ್ತಿವೆ.
ಯಲ್ಲಾಪುರ ‘ಹಾಟ್‌ಸ್ಪಾಟ್’
ನಗರಕ್ಕೆ ಹೊಂದಿಕೊಂಡಿರುವ ಯಲ್ಲಾಪುರ ಪ್ರದೇಶ ಅಪಘಾತದ ಹಾಟ್‌ಸ್ಪಾಟ್ ಆಗಿದೆ. ಸಂಜೆ ಮತ್ತು ಬೆಳಗಿನ ಜಾವದ ವೇಳೆ ವಾಹನ ಸಂಚಾರ ಹೆಚ್ಚಿರುತ್ತದೆ. ರಸ್ತೆ ಕಿರಿದಾಗಿದ್ದು ವಾಹನ ಓಡಾಟ ಕಷ್ಟವಾಗುತ್ತಿದೆ. ಪಾದಚಾರಿಗಳು ರಸ್ತೆ ದಾಟುವಾಗ ಪ್ರಾಣಕ್ಕೆ ಕುತ್ತು ತಂದುಕೊಳ್ಳುತ್ತಿದ್ದಾರೆ. ಅತಿವೇಗವಾಗಿ ಬರುವ ವಾಹನಗಳಿಗೆ ಕಡಿವಾಣ ಹಾಕುವ ಕೆಲಸವಾಗುತ್ತಿಲ್ಲ. ಯಲ್ಲಾಪುರ ಈ ಹಿಂದೆ ಗ್ರಾಮ ಪಂಚಾಯಿತಿಗೆ ಒಳಪಡುತ್ತಿತ್ತು. ಈಗ ಮಹಾನಗರ ಪಾಲಿಕೆ ವ್ಯಾಪ್ತಿಗೆ ಸೇರಿಸಲಾಗಿದೆ. ಆದರೆ ಅಭಿವೃದ್ಧಿ ಕಾರ್ಯಗಳು ಮಾತ್ರ ಶೂನ್ಯ. ಕನಿಷ್ಠ ಸುಗಮ ಸಂಚಾರಕ್ಕೆ ಅಗತ್ಯ ರಸ್ತೆ ನಿರ್ಮಾಣ ಸಾಧ್ಯವಾಗಿಲ್ಲ.
ಹಂಪ್ಸ್ ಅವೈಜ್ಞಾನಿಕ
ಮಹಾನಗರ ಪಾಲಿಕೆಯಿಂದ ವಿವಿಧ ಕಡೆಗಳಲ್ಲಿ ಹಂಪ್ಸ್ ಹಾಕಲಾಗಿದೆ. ಅವಶ್ಯಕತೆ ಇರುವ ಕಡೆ ಬಿಟ್ಟು ಅನಗತ್ಯ ಪ್ರದೇಶಗಳಲ್ಲಿ ಅವೈಜ್ಞಾನಿಕವಾಗಿ ಹಂಪ್ಸ್ ಹಾಕಲಾಗಿದೆ ಎಂಬುದು ನಗರ ನಿವಾಸಿಗಳ ಆರೋಪ. ‘ಗಂಗಸಂದ್ರ ಶೇಷಾದ್ರಿಪುರಂ ಕಾಲೇಜು ರಾಜೀವ್‌ಗಾಂಧಿ ನಗರ ಮೆಳೆಕೋಟೆ ಭಾಗದಲ್ಲಿ 200 ಮೀಟರ್ ರಸ್ತೆಯಲ್ಲಿ ನಾಲ್ಕೈದು ಕಡೆ ಹಂಪ್ಸ್ ಹಾಕಲಾಗಿದೆ. ಹಂಪ್ಸ್‌ಗೆ ಬಣ್ಣ ಬಳಿದಿಲ್ಲ. ರಾತ್ರಿ ಹೊತ್ತಿನಲ್ಲಿ ಕಾಣುವುದೇ ಇಲ್ಲ. ಬ್ಲಿಂಕರ್ಸ್ ಹಾಕಿಲ್ಲ. ಅಧಿಕಾರಿಗಳು ಹಂಪ್ಸ್ ಅಳವಡಿಸಿದ್ದೇವೆ ಎಂದು ತೋರಿಸಿಕೊಳ್ಳಲು ಈ ಕೆಲಸ ಮಾಡಿದಂತೆ ಕಾಣುತ್ತಿದೆ’ ಎಂದು ಮೆಳೆಕೋಟೆಯ ನಾಗರಾಜು ಪ್ರತಿಕ್ರಿಯಿಸಿದರು.
ಚಿಕಿತ್ಸಾ ಕೇಂದ್ರ ನಾಮಕಾವಸ್ತೆ
ತುರ್ತು ಸಮಯದಲ್ಲಿ ಚಿಕಿತ್ಸೆ ನೀಡುವ ಉದ್ದೇಶದಿಂದ ಜಿಲ್ಲಾ ಆಸ್ಪತ್ರೆಯಲ್ಲಿ ಆರಂಭಿಸಿರುವ ಅಪಘಾತ ತುರ್ತು ಚಿಕಿತ್ಸಾ ಕೇಂದ್ರ (ಟ್ರಾಮಾ ಕೇರ್ ಸೆಂಟರ್) ಕೇವಲ ನಾಮಕಾವಸ್ತೆ ಎಂಬಂತೆ ಇದೆ. ‘ಸಣ್ಣಪುಟ್ಟ ಗಾಯಗಳಿಗೆ ಮಾತ್ರ ಇಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಗಂಭೀರ ಪ್ರಕರಣಗಳನ್ನು ಬೆಂಗಳೂರಿಗೆ ಕಳುಹಿಸಲಾಗುತ್ತಿದೆ. ಇಲ್ಲಿಂದ ಆಸ್ಪತ್ರೆಗೆ ಹೋಗುವ ಮಾರ್ಗ ಮಧ್ಯೆ ಹಲವರ ಜೀವ ಹಾರಿಹೋಗುತ್ತಿದೆ. ಆಸ್ಪತ್ರೆಯಲ್ಲಿ ಕಟ್ಟಡಗಳು ಮಾತ್ರ ಆಕಾಶದ ಎತ್ತರಕ್ಕೆ ಇವೆ. ಅಲ್ಲಿ ವೈದ್ಯರೇ ಇಲ್ಲ. ‘ಗೋಲ್ಡನ್ ಅವರ್’ನಲ್ಲಿ ಸೂಕ್ತ ಚಿಕಿತ್ಸೆ ಸಿಗುವುದಿಲ್ಲ’ ಎಂದು ಶೆಟ್ಟಿಹಳ್ಳಿಯ ಅಂಜನಮೂರ್ತಿ ಅಸಮಾಧಾನ ಹೊರ ಹಾಕಿದರು.