ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುಮಕೂರು: ಗೋಶಾಲೆಯಲ್ಲಿ ಅಧಿಕಾರಿಗಳು ದನ ಕಾಯಬೇಕೇ?

ಕಾಮಗಾರಿ ಮುಗಿಸಲು 2 ತಿಂಗಳು ಗಡುವು; ಕೆಡಿಪಿ ಸಭೆಯಲ್ಲಿ ತುಳಸಿ ಮದ್ದಿನೇನಿ ನಿರ್ದೇಶನ
Published 20 ಡಿಸೆಂಬರ್ 2023, 4:14 IST
Last Updated 20 ಡಿಸೆಂಬರ್ 2023, 4:14 IST
ಅಕ್ಷರ ಗಾತ್ರ

ತುಮಕೂರು: ಮುಂದಿನ ವರ್ಷ ಲೋಕಸಭಾ ಚುನಾವಣೆ ಎದುರಾಗಲಿದ್ದು, ಫೆಬ್ರುವರಿ ತಿಂಗಳ ಒಳಗಡೆ ಎಲ್ಲಾ ಕಾಮಗಾರಿ ಮುಗಿಸುವಂತೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ತುಳಸಿ ಮದ್ದಿನೇನಿ ಅಧಿಕಾರಿಗಳಿಗೆ ಗಡುವು ನೀಡಿದರು.

ನಗರದ ಜಿಲ್ಲಾ ಪಂಚಾಯಿತಿ ಕಚೇರಿಯಲ್ಲಿ ಮಂಗಳವಾರ ನಡೆದ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಮಾತನಾಡಿ, ‘ಅನುಮೋದನೆಯಾದ ಕಾಮಗಾರಿಗಳನ್ನು ಇನ್ನು ಎರಡು ತಿಂಗಳ ಒಳಗಡೆ ಮುಗಿಸಬೇಕು. ಬಾಕಿ ಉಳಿದಿರುವ ಕಾಮಗಾರಿಗಳನ್ನು ಡಿ. 25ರ ಒಳಗೆ ಆರಂಭಿಸಬೇಕು’ ಎಂದು ಸೂಚಿಸಿದರು.

ಬರ ಪರಿಸ್ಥಿತಿಯನ್ನು ಸಮರ್ಪಕವಾಗಿ ಎದುರಿಸಬೇಕು. ಗೋ ಶಾಲೆ ತೆರೆದರೆ ಅಧಿಕಾರಿಗಳು ಹೋಗಿ ಕಾವಲು ಕಾಯಬೇಕಾಗುತ್ತದೆ. ಗ್ರಾಮ ಪಂಚಾಯಿತಿ, ಕಂದಾಯ ಅಧಿಕಾರಿಗಳು ‘ದನ ಕಾಯಲು’ ಸಾಕಾಗುತ್ತಾರೆ. ಇಡೀ ದಿನ ಅದೇ ಕೆಲಸ ಆಗುತ್ತದೆ. ಅಂತಹ ಪರಿಸ್ಥಿತಿ ಬರದಂತೆ ನೋಡಿಕೊಳ್ಳಬೇಕು. ರೈತರಿಗೆ ಮೇವು ಬೆಳೆಯಲು ಉತ್ತೇಜನ ನೀಡಬೇಕು ಎಂದು ನಿರ್ದೇಶಿಸಿದರು.

ಮೇವಿನ ಕಿಟ್‌ ವಿತರಣೆ ಮಾಡಲಾಗಿದೆ ಎಂದು ಸುಮ್ಮನೆ ಕೂರಬಾರದು. ‘ಮೇವು ಬಿತ್ತನೆ ಭೂಮಿಯಲ್ಲಿ ಕಾಣಬೇಕೇ ಹೊರೆತು ಕೇವಲ ಹಾಳೆಯ ಮೇಲಲ್ಲ’. ನೀರಾವರಿ ಇದ್ದವರಿಗೆ ಮಾತ್ರ ಮೇವಿನ ಬೀಜದ ಕಿಟ್‌ ನೀಡಬೇಕು. ಕೇವಲ ಮನೆಯಲ್ಲಿ ಇಟ್ಟುಕೊಳ್ಳಲು ಕಿಟ್‌ ಕೊಡಬೇಡಿ. ಈಗ ವಿತರಿಸಿರುವ ಮೇವಿನ ಬೀಜಗಳು ಬಿತ್ತನೆಯಾದರೆ ಮಾರ್ಚ್‌– ಏಪ್ರಿಲ್‌ನಲ್ಲಿ ಮೇವಿಗೆ ತೊಂದರೆಯಾಗುವುದಿಲ್ಲ. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಮೇವಿಗೂ ಬರ ಆವರಿಸಲಿದೆ. ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಮೇವಿನ ಬೀಜಗಳ ಬಿತ್ತನೆ ಕುರಿತು ಪರಿಶೀಲನೆ ನಡೆಸಬೇಕು’ ಎಂದು ತಿಳಿಸಿದರು.

ಆರೋಗ್ಯ ಇಲಾಖೆಯಲ್ಲಿ ವೈದ್ಯರು ಮತ್ತು ಸಿಬ್ಬಂದಿಯ ಕೊರತೆ ಇದೆ. 24X7 ಪಿಎಚ್‌ಸಿಗಳಲ್ಲಿ ಅಗತ್ಯ ಸೇವೆಗಳು ಸಿಗುತ್ತಿಲ್ಲ. ಜನರು ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆಯುವ ಕೆಲಸ ಮಾಡುತ್ತಿದ್ದಾರೆ. ವೈದ್ಯರ ನೇಮಕಕ್ಕೆ ಯಾವ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಪ್ರಶ್ನಿಸಿದರು.

‘ನಮ್ಮ ಕ್ಲಿನಿಕ್‌, ಪಿಎಚ್‌ಸಿಗಳಲ್ಲೂ ವೈದ್ಯರ ಕೊರತೆ ಇದೆ. ಅಗತ್ಯ ಇರುವ ಕಡೆಗಳಲ್ಲಿ ಆಯುಷ್‌ ವೈದ್ಯರನ್ನು ನಿಯೋಜಿಸಿ ಕೊಳ್ಳಲಾಗಿದೆ. ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲಾಗುತ್ತಿದೆ’ ಎಂದು ಡಿಎಚ್‌ಒ ಡಾ.ಡಿ.ಎನ್‌.ಮಂಜುನಾಥ್‌ ಪ್ರತಿಕ್ರಿಯೆ ನೀಡಿದರು.

ಹೆಣ್ಣು ಭ್ರೂಣ ಹತ್ಯೆ ತಡೆಗೆ ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಜಿಲ್ಲೆಯಲ್ಲಿ ಒಟ್ಟು 146 ಸ್ಕ್ಯಾನಿಂಗ್‌ ಸೆಂಟರ್‌ಗಳು ಆರೋಗ್ಯ ಇಲಾಖೆಯಿಂದ ಅನುಮತಿ ಪಡೆದಿವೆ. ಅಕ್ರಮವಾಗಿ ನಡೆಯುವ, ಸೂಕ್ತ ದಾಖಲೆಗಳನ್ನು ಸಲ್ಲಿಸದ ಕೇಂದ್ರಗಳನ್ನು ಮುಚ್ಚಲಾಗುತ್ತಿದೆ. ಈಗಾಗಲೇ ಎರಡು ಕೇಂದ್ರಗಳನ್ನು ಮುಚ್ಚಿಸಲಾಗಿದೆ ಎಂದು ತಿಳಿಸಿದರು.

ಜಿಲ್ಲಾಧಿಕಾರಿ ಶುಭಾ ಕಲ್ಯಾಣ್‌, ಜಿ.ಪಂ ಸಿಇಒ ಜಿ.ಪ್ರಭು ಭಾಗವಹಿಸಿದ್ದರು.

ಗ್ರಾಮದಲ್ಲಿ ಕಾಣಿಸದ ವಿಎ

ಆರ್‌ಐ ಗ್ರಾಮ ಆಡಳಿತಾಧಿಕಾರಿ (ವಿಎ) ಕಂದಾಯ ನಿರೀಕ್ಷಕರು (ಆರ್‌ಐ) ಹಳ್ಳಿಯ ಜನರಿಗೆ ಸಿಗುತ್ತಿಲ್ಲ. ಅವರಿಗೆ ಪ್ರತ್ಯೇಕ ಕಚೇರಿಗಳು ಇಲ್ಲ. ಇದರಿಂದ ಜನ ಸಾಮಾನ್ಯರು ಪರದಾಡುತ್ತಾರೆ. ಗ್ರಾಮಾಂತರ ಭಾಗದಲ್ಲಿ ಲೋಕೋಪಯೋಗಿ ಇಲಾಖೆಯಿಂದ ನಿರ್ಮಿಸಿರುವ ವಸತಿ ಗೃಹಗಳು ಹಾಳಾಗುತ್ತಿವೆ. ಅವುಗಳನ್ನು ವಿಎ ಆರ್‌ಐಗಳಿಗೆ ನೀಡಿದರೆ ಪ್ರಯೋಜನವಾಗಲಿದೆ. ಈ ನಿಟ್ಟಿನಲ್ಲಿ ಕ್ರಮಕೈಗೊಳ್ಳಬೇಕು ಎಂದು ತುಳಸಿ ಮದ್ದಿನೇನಿ ತಿಳಿಸಿದರು. ‘ಜಿಲ್ಲೆಯಲ್ಲಿ ವರ್ಷಕ್ಕೆ 30 ಸರ್ಕಾರಿ ಶಾಲೆಗಳು ಮುಚ್ಚುತ್ತಿವೆ. ಅಂತಹ ಶಾಲೆಯ ಕೊಠಡಿಗಳನ್ನು ಬಳಕೆ ಮಾಡಿಕೊಳ್ಳಬಹುದು’ ಎಂದು ಜಿ.ಪಂ ಸಿಇಒ ಜಿ.ಪ್ರಭು ಸಲಹೆ ಮಾಡಿದರು.

10 ವಾರ ಮಾತ್ರ ಮೇವು

ಸದ್ಯ ಜಿಲ್ಲೆಯಾದ್ಯಂತ ಮುಂದಿನ 14 ವಾರಗಳಿಗೆ ಆಗುವಷ್ಟು ಮೇವು ಲಭ್ಯವಿದೆ. ಪಾವಗಡ ತಾಲ್ಲೂಕಿನ ನಾಗಲಮಡಿಕೆ ಮಧುಗಿರಿಯ ಐ.ಡಿ.ಹಳ್ಳಿ ಶಿರಾದ ಹುಲಿಕುಂಟೆ ಗೌಡಗೆರೆ ಹೋಬಳಿಗಳಲ್ಲಿ ಕೇವಲ 10 ವಾರಗಳಿಗೆ ಸಾಕಾಗುವಷ್ಟು ಮೇವು ಇದೆ ಎಂದು ಪಶುಪಾಲನಾ ಇಲಾಖೆ ಉಪನಿರ್ದೇಶಕ ಗಿರೀಶ್‌ಬಾಬು ರೆಡ್ಡಿ ಸಭೆಗೆ ಮಾಹಿತಿ ನೀಡಿದರು. 2.32 ಲಕ್ಷ ಮೇವಿನ ಬೀಜದ ಕಿಟ್‌ಗಳು ಬೇಕಾಗಿದ್ದು 1.8 ಲಕ್ಷ ಕಿಟ್‌ಗಳನ್ನು ವಿತರಿಸಲು ಕ್ರಮಕೈಗೊಳ್ಳಲಾಗುತ್ತಿದೆ. ಮುಂದಿನ ದಿನಗಳಲ್ಲಿ ಅಗತ್ಯ ಇರುವ ಕಡೆಗಳಲ್ಲಿ ಗೋ ಶಾಲೆ ತೆರೆಯಲಾಗುವುದು ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT