ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾತ್ರಿ ವೇಳೆ ಸ್ಮಾರ್ಟ್‌ ಸಿಟಿ ಕಾಮಗಾರಿ ಯಾಕೆ?

ಸ್ಮಾರ್ಟ್‌ ಸಿಟಿ ಕಾಮಗಾರಿಗಳು ಅವೈಜ್ಞಾನಿಕ: ಸೋಮೇಶ್ವರಪುರ ನಿವಾಸಿಗಳ ಆರೋಪ
Last Updated 14 ಫೆಬ್ರುವರಿ 2020, 9:18 IST
ಅಕ್ಷರ ಗಾತ್ರ

ತುಮಕೂರು: ನಗರದ ಸೋಮೇಶ್ವರಪುರದ ತೋಟಗಾರಿಕಾ ಇಲಾಖೆ ಕಚೇರಿ ರಸ್ತೆಯಲ್ಲಿ ನಡೆಯುತ್ತಿರುವ ಸ್ಮಾರ್ಟ್‌ಸಿಟಿ ಕಾಮಗಾರಿ ಅವೈಜ್ಞಾನಿಕವಾಗಿದೆ ಎಂದು ಸ್ಥಳೀಯರು ಗುರುವಾರ ಆರೋಪಿಸಿ, ಜನಪ್ರತಿನಿಧಿಗಳ ಗಮನ ಸೆಳೆದರು.

ಬೆಳಿಗ್ಗೆ ಕಾಮಗಾರಿ ಸ್ಥಳ ಪರಿಶೀಲಿಸಿದ ಮೇಯರ್‌ ಫರೀದಾ ಬೇಗಂ, ಸಾರ್ವಜನಿಕರಿಗೆ ತೊಂದರೆ ಆಗದಂತೆ ಸಮರ್ಪಕವಾಗಿ ಕಾಮಗಾರಿ ನಡೆಸಲು ಸ್ಮಾರ್ಟ್‌ ಸಿಟಿ ಎಂಜಿನಿಯರ್‌ಗಳಿಗೆ ಸೂಚಿಸಿದರು.

ಕಾಮಗಾರಿ ನಡೆಯುವ ರಸ್ತೆ ಜನವಸತಿ ಪ್ರದೇಶದಲ್ಲಿದೆ. ಇಲ್ಲಿ ರಾತ್ರಿ ಸಹ ಜೆಸಿಬಿ ಯಿಂದ ಅಗೆಯುವ ಕೆಲಸ ಮಾಡುತ್ತಾರೆ. ನೆಮ್ಮದಿಯಿಂದ ನಿದ್ದೆ ಮಾಡಲು ಆಗುತ್ತಿಲ್ಲ. ಕಾಮಗಾರಿಯಿಂದ ಏಳುತ್ತಿರುವ ದೂಳಿನ ನಿಯಂತ್ರಣಕ್ಕೂ ಕ್ರಮ ವಹಿಸುತ್ತಿಲ್ಲ ಎಂದು ಸ್ಥಳೀಯರು ದೂರಿದರು.

ಸೋಮೇಶ್ವರಪುರದ 15ನೇ ಅಡ್ಡರಸ್ತೆಯಲ್ಲಿ ಕಾಮಗಾರಿಯಿಂದ ನೀರು ಸರಬರಾಜು, ವಿದ್ಯುತ್ ಪೂರೈಕೆ ಹಾಗೂ ಒಳಚರಂಡಿ ಸಂಪರ್ಕವನ್ನು ಪದೇ ಪದೇ ಕಡಿತಗೊಳಿಸಲಾಗುತ್ತಿದೆ. ಕಾಮಗಾರಿಯಿಂದ ಫಣೀಂದ್ರ ಎಂಬುವವರ ಮನೆಯಲ್ಲಿ ಶಾರ್ಟ್‌ ಸರ್ಕಿಟ್‌ ಸಂಭವಿಸಿದೆ. ಸುರಕ್ಷಾ ಕ್ರಮಗಳನ್ನು ಅನುಸರಿಸದೆ ಅವೈಜ್ಞಾನಿಕವಾಗಿ ಕಾಮಗಾರಿ ನಡೆಸಲಾಗುತ್ತಿದೆ. ಈ ಬಗ್ಗೆ ಗಮನ ಸೆಳೆದರೂ ಅಧಿಕಾರಿಗಳು ಸ್ಪಂದಿಸುತ್ತಿಲ್ಲ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು.

15ನೇ ವಾರ್ಡ್ ವ್ಯಾಪ್ತಿಯ ವೀರ ಸಾರ್ವಕರ್ ಉದ್ಯಾನ ಹಾಳಾಗಿದೆ. ನಿರ್ವಹಣೆಗೆ ಪಾಲಿಕೆಯಿಂದ ಅನುದಾನ ಬರುತ್ತಿಲ್ಲ. ಉದ್ಯಾನದಲ್ಲಿ ರಾತ್ರಿ ಅನೈತಿಕ ಚಟುವಟಿಕೆ ನಡೆಯುತ್ತಿವೆ. ಕ್ರಮ ವಹಿಸಿ ಎಂದು ಒತ್ತಾಯಿಸಿದರು.

*

‘ರಾತ್ರಿ ಹೊತ್ತು ಕರೆ ಮಾಡ್ತಾರೆ’

ರಾತ್ರಿ ವೇಳೆ ನಡೆಯುವ ಕಾಮಗಾರಿಯಿಂದ ನೀರು, ವಿದ್ಯುತ್‌ ಪೂರೈಕೆಯಲ್ಲಿ ವ್ಯತ್ಯಯವಾದರೆ, ಜನರು ರಾತ್ರಿ 2 ಗಂಟೆ ಹೊತ್ತಿಗೂ ಕರೆ ಮಾಡಿ ದೂರುತ್ತಾರೆ ಎಂದು ಸ್ಥಳೀಯ ಪಾಲಿಕೆ ಸದಸ್ಯೆ ವಿ.ಎಸ್‌.ಗಿರಿಜಾ ಧನಿಯಾಕುಮಾರ್‌ ಅವರು ಅಸಮಾಧಾನ ವ್ಯಕ್ತಪಡಿಸಿದರು.

ಮೂಲಸೌಕರ್ಯಗಳ ಸೌಲಭ್ಯ ಸಿಗದಿದ್ದಾಗ, ಜನರು ಕಾರ್ಪೊರೇಟರ್‌ಗಳ ಬಳಿ ಬರುತ್ತಾರೆ. ಅವರಿಗೆ ನಾವು ಉತ್ತರದಾಯಿ ಆಗಬೇಕಿದೆ. ಅವೈಜ್ಞಾನಿಕ ಕಾಮಗಾರಿಗಳಿಂದ ಆಗುವ ಸಮಸ್ಯೆಗಳನ್ನು ನಿಭಾಯಿಸುತ್ತ, ಜನರಿಗೆ ಸಮಜಾಯಿಸಿ ನೀಡಿ ನಾವೂ ಸೋತಿದ್ದೇವೆ ಎಂದು ಹೇಳಿದರು.

ಕಾಮಗಾರಿ ವೇಳೆ ಕೊಳವೆಗಳು ಒಡೆದು ನೀರು ಪೋಲಾಗುತ್ತಿದೆ ಎಂದು ಬೇಸರಿಸಿದರು.

ರಸ್ತೆಯಲ್ಲಿ 25 ಮೀಟರ್‌ವರೆಗೂ ಕಾಮಗಾರಿ ನಡೆಸಿ, ಸ್ಮಾರ್ಟ್‌ ಡಕ್ಟ್‌ ಅಳವಡಿಸಿದ ನಂತರ, ಮುಂದಿನ ಕಾಮಗಾರಿ ನಡೆಸಬೇಕೆಂಬ ನಿಯಮವಿದೆ. ಆದರೆ, ಸ್ಮಾರ್ಟ್‌ ಸಿಟಿಯವರು ಎಲ್ಲ ರಸ್ತೆಗಳನ್ನು ಒಟ್ಟಿಗೆ ಅಗೆದು ಜನರ ಸಂಚಾರಕ್ಕೂ ಅಡಚಣೆ ಉಂಟು ಮಾಡಿದ್ದಾರೆ ಎಂದು ಗಿರಿಜಾ ದೂರಿದರು.

*

ಎಂಜಿನಿಯರ್‌ಗೆ ಮೇಯರ್‌ ತರಾಟೆ

ಮೇಯರ್ ಫರೀದಾಬೇಗಂ ಅವರು ಸ್ಥಳಕ್ಕೆ ಭೇಟಿ ನೀಡಿದಾಗ ಎಂಜಿನಿಯರ್‌ಗಳು ಇರಲಿಲ್ಲ. ಅವರಿಗೆ ಕರೆ ಮಾಡಿ ಕರೆಸಲಾಯಿತು. ತಡವಾಗಿ ಬಂದ ಸ್ಮಾರ್ಟ್‌ ಸಿಟಿ ಎಂಜಿನಿಯರ್‌ ಅನ್ನು ಮೇಯರ್‌ ತರಾಟೆಗೆ ತೆಗೆದುಕೊಂಡರು.

‘ಜನಪ್ರತಿನಿಧಿಗಳು ಬೇಡ ಎಂದರೂ ರಾತ್ರಿವೇಳೆ ಕಾಮಗಾರಿ ಮಾಡಿದವರು ಯಾರು, ಸ್ಮಾರ್ಟ್‍ಸಿಟಿ ಅಧಿಕಾರಿಗಳಿಗೆ ಜವಾಬ್ದಾರಿ ಇಲ್ಲವೇ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT