ವಾಜಪೇಯಿಗೆ ಇತ್ತು ತುಮಕೂರಿನ ಗೆಳೆತನದ ನಂಟು

7
ಮಾಜಿ ಉಪ ಸಭಾಪತಿ ಎಸ್‌.ಮಲ್ಲಿಕಾರ್ಜುನಯ್ಯ, ವಾಜಪೇಯಿ ಅವರ ಆಪ್ತ ಗೆಳೆಯರಲ್ಲಿ ಒಬ್ಬರಾಗಿದ್ದರು

ವಾಜಪೇಯಿಗೆ ಇತ್ತು ತುಮಕೂರಿನ ಗೆಳೆತನದ ನಂಟು

Published:
Updated:
Deccan Herald

ತುಮಕೂರು: ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ತುಮಕೂರು ಜಿಲ್ಲೆಯ ಗೆಳೆತನದ ನಂಟು ಹೊಂದಿದ್ದರು.

ಮಾಜಿ ಉಪಸಭಾಪತಿ, ಬಿಜೆಪಿಯ ಹಿರಿಯ ನಾಯಕರಾಗಿದ್ದ ಎಸ್.ಮಲ್ಲಿಕಾರ್ಜುನಯ್ಯ ಅವರು ವಾಜಪೇಯಿ ಅವರ ಅತ್ಯಂತ ಆಪ್ತಗೆಳೆಯರಲ್ಲೊಬ್ಬರಾಗಿದ್ದರು.

ಕರ್ನಾಟಕಕ್ಕೆ ವಾಜಪೇಯಿ ಬಂದರೆ ಮಲ್ಲಿಕಾರ್ಜುನಯ್ಯ ಅವರು ಪಕ್ಕದಲ್ಲಿಯೇ ಇರಬೇಕು. ಅಷ್ಟೊಂದು ಆಪ್ತತೆ, ಆತ್ಮೀಯ ಗೆಳೆತನ ಹೊಂದಿದ್ದರು. ಮಲ್ಲಿಕಾರ್ಜುನಯ್ಯ ಅವರು ಒಂದು ವೇಳೆ ಕಾಣಿಸದೇ ಇದ್ದರೆ ಕಹಾಂ ಹೇ ಮಲ್ಲಿಕಾರ್ಜುನ್‌ ಜಿ ಎಂದು ಅಕ್ಕಪಕ್ಕದವರನ್ನು ಕೇಳುತ್ತಿದ್ದರು. ಇದು ವಾಜಪೇಯಿ ಅವರ ಸರಳತೆ ಎಂದು ಇವರಿಬ್ಬರ ಕಂಡ ನಗರದ ಹಿರಿಯರು ಹೇಳುವ ಮಾತುಗಳಿವು.

ಮಲ್ಲಿಕಾರ್ಜುನಯ್ಯ ಅವರು ಲೋಕಸಭೆ ಚುನಾವಣೆಗೆ ಸ್ಪರ್ಧಿಸಿದಾಗಲೆಲ್ಲ ವಾಜಪೇಯಿ ಅವರು ಪ್ರಚಾರ ಸಭೆಗಳಿಗೆ ಬಂದು ಮತದಾರರಲ್ಲಿ ಮತಯಾಚಿಸಿದ್ದರು.

ನಂಟಿಗೆ ಹಿನ್ನೆಲೆಯುಂಟು: 1975ರಲ್ಲಿ ತುರ್ತು ಪರಿಸ್ಥಿತಿಯಲ್ಲಿ ಎಸ್‌.ಮಲ್ಲಿಕಾರ್ಜುನಯ್ಯ ಅವರ ಬಂಧಿತರಾಗಿ ಬೆಂಗಳೂರಿನ ಜೈಲಿನಲ್ಲಿದ್ದರು. ಅಟಲ್ ಬಿಹಾರಿ ವಾಜಪೇಯಿ ಅವರೂ ಅದೇ ಜೈಲಿನಲ್ಲಿ ಹಲವು ತಿಂಗಳುಗಳ ಕಾಲ ಇದ್ದಾಗ ಸ್ನೇಹ, ಆಪ್ತತೆ ಬೆಳೆದಿತ್ತು. ಅದೇ ಸ್ನೇಹ ನಂತರವೂ ಮುಂದುವರಿಯಿತು.

1994ರಲ್ಲಿ ವಾಜಪೇಯಿ ಅವರು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿದ್ದಾಗ ತುಮಕೂರು ಜಿಲ್ಲೆಗೂ ಭೇಟಿ ನೀಡಿದ್ದರು. ಅವರ 60ನೇ ಜನ್ಮದಿನದ ಪ್ರಯುಕ್ತ ಪಕ್ಷ ಸಂಘಟನೆಗೆ ಜಿಲ್ಲೆಯಲ್ಲಿ ದೇಣಿಗೆ ಸಂಗ್ರಹಿಸಿದ್ದರು.

ತಿಪಟೂರಿನಿಂದ ತುಮಕೂರು ನಗರಕ್ಕೆ ಬಂದಾಗ ಟೌನ್ ಹಾಲ್ ವೃತ್ತದಲ್ಲಿ ಅವರ ಅಭಿಮಾನಿಗಳೆಲ್ಲ ಸ್ವಾಗತಿಸಿ ಸತ್ಕರಿಸಿದ್ದೆವು. ದೇಶ ಉನ್ನತಿ, ದೇಶಾಭಿಮಾನ ಕುರಿತ ಅದ್ಭುತ ಮಾತುಗಳನ್ನು ಕೆಲವೇ ಕೆಲ ಜನರನ್ನುದ್ದೇಶಿಸಿ ಮಾತನಾಡಿ ತೆರಳಿದ್ದರು ಎಂದು ವಕೀಲರಾದ ಎಂ.ಮಲ್ಲಿಕಾರ್ಜುನ ಅವರು ಸ್ಮರಿಸಿದರು.

‘ಪ್ರವಾಸಿ ಮಂದಿರದಲ್ಲಿ ಕಾಫಿ, ಟೀ ಸವಿದು ಬೆಂಗಳೂರಿಗೆ ತೆರಳಿದರು. ಮಾಜಿ ಸಚಿವ ಶಿವಣ್ಣ, ಉದ್ಯಮಿ ಸಿ.ವಿ.ಮಹದೇವಯ್ಯ ಅವರು ಸೇರಿದಂತೆ ಅನೇಕರಿದ್ದೆವು’ ಎಂದು ನೆನಪಿಸಿಕೊಂಡರು.

ತುಮಕೂರಿನಲ್ಲಿ ನಡೆದ ಸಭೆಯಲ್ಲಿ ಭಾಗಿ: 1983ರಲ್ಲಿ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆ ನಗರದ ಅಶೋಕ ರಸ್ತೆಯ ವುಡ್‌ಲ್ಯಾಂಡ್ ಹೊಟೇಲ್‌ನ ಸಭಾಂಗಣದಲ್ಲಿ ನಡೆದಿತ್ತು. 

ಸಭೆಯಲ್ಲಿ ವಾಜಪೇಯಿ ಅವರು ಭಾಗವಹಿಸಿದ್ದರು. ನಗರದ ಟಿ.ಕೆ.ನಂಜುಂಡಪ್ಪ ಅವರು ಸ್ವಾಗತ ಸಮಿತಿಯ ಅಧ್ಯಕ್ಷರೂ ಆಗಿದ್ದರು. ನಮ್ಮ ಮಾವನರಾದ ಮಲ್ಲಿಕಾರ್ಜುನಯ್ಯ ಅವರೊಂದಿಗೆ ತುಂಬಾ ಆತ್ಮೀಯತೆ ಹೊಂದಿದ್ದರು ಎಂದು ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಹಾಗೂ ಎಸ್.ಮಲ್ಲಿಕಾರ್ಜುನಯ್ಯ ಅವರ ಅಳಿಯ ಟಿ.ಎಸ್.ನಿರಂಜನ್ ‘ಪ್ರಜಾವಾಣಿ’ಗೆ ತಿಳಿಸಿದರು.

ಸಿದ್ಧಗಂಗಾಮಠಕ್ಕೆ ಭೇಟಿ: ಅನ್ನದಾಸೋಹ, ಜ್ಞಾನ ದಾಸೋಹಕ್ಕೆ ಹೆಸರಾದ ಸಿದ್ಧಗಂಗಾಮಠದಲ್ಲಿ 1999ರಲ್ಲಿ ಸಿದ್ಧಲಿಂಗೇಶ್ವರ ವೇದ ಸಂಸ್ಕೃತ ಕಾಲೇಜು ಆಯೋಜಿಸಿದ್ದ 81ನೇ ಸಂಸ್ಕೃತೋತ್ಸವದಲ್ಲಿ ವಾಜಪೇಯಿ ಅವರು ಪಾಲ್ಗೊಂಡಿದ್ದರು. ಜಗತ್ತಿನ ಒಳಿತು ಬಯಸಿ ಮಠವು ಮಾಡುತ್ತಿರುವ ಸೇವೆಯನ್ನು ಶ್ಲಾಘಿಸಿದ್ದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !