ಶನಿವಾರ, ಜುಲೈ 31, 2021
26 °C

ಚಿಕ್ಕನಾಯಕನಹಳ್ಳಿ: ಮುಖ್ಯಾಧಿಕಾರಿ ವಜಾಮಾಡಲು ವಿವಿಧ ಸಂಘಗಳ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

prajavani

ಚಿಕ್ಕನಾಯಕನಹಳ್ಳಿ: ಹುಳಿಯಾರು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಮಂಜುನಾಥ್ ಸಾರ್ವಜನಿಕರೊಂದಿಗೆ ಅಸಭ್ಯವಾಗಿ ವರ್ತಿಸುಸುತ್ತಾರೆ. ಅವರನ್ನು ಕೆಲಸದಿಂದ ವಜಾ ಮಾಡಬೇಕು ಎಂದು ಆಗ್ರಹಿಸಿ ತಾಲ್ಲೂಕು ಕಚೇರಿ ಮುಂದೆ ಪಟ್ಟಣದ ಹಲವು ಸಂಘ ಸಂಸ್ಥೆಗಳು ಪ್ರತಿಭಟನೆ ನಡೆಸಿದವು.

ತಹಶೀಲ್ದಾರ್ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿ, ಮನವಿ ಸಲ್ಲಿಸಿದ ಸಂಘಟನೆಗಳ ಮುಖಂಡರು, ಮುಖ್ಯಾಧಿಕಾರಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಹುಳಿಯಾರಿನ ಮುಖ್ಯಾಧಿಕಾರಿ ತಮ್ಮ ಅಧಿಕಾರ ವ್ಯಾಪ್ತಿ ತಿಳಿದಿದ್ದರೂ ಮಾತಿನ ಮೇಲೆ ನಿಯಂತ್ರಣವಿಲ್ಲದೆ ಜಗಳ ಆಡಿರುವ ವಿಡಿಯೊ ಹಾಗೂ ಸಾರ್ವಜನಿಕರೊಂದಿಗೆ ವರ್ತಿಸುವ ರೀತಿ ಬೇಸರ ಉಂಟಾಗಿದೆ. ಜನರ ಬಳಿ ಹೇಗೆ ವರ್ತಿಸಬೇಕೆಂಬ ಕನಿಷ್ಠ ತಿಳಿವಳಿಕೆ ಇಲ್ಲದವರಂತೆ ಜನರ ಮೇಲೆ ಜಗಳಕ್ಕೆ ಬೀಳುವುದು ಒಳ್ಳೆಯ ಬೆಳವಣಿಗೆಯಲ್ಲ ಎಂದು ಪ್ರತಿಭಟನಾಕಾರರು
ದೂರಿದರು.

ತಾಲ್ಲೂಕು ಪಂಚಾಯಿತಿ ಸದಸ್ಯ ಆಲದಕಟ್ಟೆ ತಿಮ್ಮಯ್ಯ ಮಾತನಾಡಿ, ‘ಅಧಿಕಾರಿಗಳು ಸಾಮಾನ್ಯ ಜನರನ್ನು ಬೈಯುವುದು ಅಸಂಬದ್ದವಾದದ್ದು. ಇಂತಹ ಅಧಿಕಾರಿಗಳು ಜನರಲ್ಲಿ ಗಲಭೆ ಉಂಟು ಮಾಡುವಂತಹ ಸ್ಥಿತಿಯನ್ನು ತರುತ್ತಾರೆ’ ಎಂದರು.

ಪುರಸಭಾ ಮಾಜಿ ಸದಸ್ಯ ಎಂ.ಎಸ್.ರವಿಕುಮಾರ್, ‘ಹುಳಿಯಾರಿನಲ್ಲಿ ಕ್ವಾರಂಟೈನ್‌ನಲ್ಲಿದ್ದ ಕೆಲವು ಮಹಿಳೆಯರಿಗೆ ಊಟ ಕೊಡಲು ಅವಾಚ್ಯ ಶಬ್ದಗಳಿಂದ ನಿಂದಿಸಿರುವುದು ದುರದೃಷ್ಟಕರ. ಇಂತಹ ಅಧಿಕಾರಿಗಳನ್ನು ಸಚಿವರು ತಾಲ್ಲೂಕಿನಲ್ಲಿ ಇನ್ನೂ ಮುಂದುವರಿಸಿರುವುದು ಖಂಡನೀಯ’ ಎಂದರು.

ಪುರಸಭಾ ಮಾಜಿ ಸದಸ್ಯ ಸಿ.ಡಿ.ಚಂದ್ರಶೇಖರ್, ಕುಂಚಾಂಕುರ ಕಲಾ ಸಂಘದ ಅಧ್ಯಕ್ಷ ಸಿ.ಎಚ್.ಗಂಗಾಧರ್, ಆಟೊ ಚಾಲಕರ ಸಂಘದ ಅಧ್ಯಕ್ಷ ಮಂಜುನಾಥ್, ಪುರಸಭಾ ಸದಸ್ಯ ರಾಜಶೇಖರ್ ಭಾಗವಹಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು