ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

PV Web Exclusive: ಪರಿಹಾರ ನೀಡದೆ ರೈತರ ಮೇಲೆ ದೌರ್ಜನ್ಯ

Last Updated 9 ಅಕ್ಟೋಬರ್ 2020, 5:43 IST
ಅಕ್ಷರ ಗಾತ್ರ

ತುಮಕೂರು: ಜಿಲ್ಲೆಯಲ್ಲಿ ನೀರಾವರಿ, ರಸ್ತೆ ಅಭಿವೃದ್ಧಿ, ಅನಿಲ ಕೊಳವೆ ಮಾರ್ಗಗಳ ನಿರ್ಮಾಣ ಸೇರಿದಂತೆ ಹಲವು ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿವೆ. ಈ ಎಲ್ಲಾ ಪ್ರಗತಿ ಕೆಲಸಗಳಿಗೂ ರೈತರ ಕೃಷಿ ಭೂಮಿಯೇ ಬೇಕಾಗಿದೆ. ಆದರೆ ಪರಿಹಾರ ಮಾತ್ರ ಕೇಳುವಂತಿಲ್ಲ!

ಸಾಕಷ್ಟು ಯೋಜನೆಗಳಲ್ಲಿ ಭೂಸ್ವಾಧೀನ ಮಾಡಿಕೊಳ್ಳದೆ, ಪರಿಹಾರವನ್ನೂ ನೀಡದೆ ದೌರ್ಜನ್ಯದಿಂದ ಭೂಮಿಯನ್ನು ವಶಕ್ಕೆ ಪಡೆದು ಕಾಮಗಾರಿ ನಡೆಸಲಾಗುತ್ತಿದೆ. ಕಳೆದ ಕೆಲ ತಿಂಗಳುಗಳಿಂದ ರೈತರು ತಮ್ಮ ಜಮೀನಿನ ಬಳಿ ಪ್ರತಿಭಟನೆ ನಡೆಸುವುದು, ಪರಿಹಾರಕ್ಕೆ ಒತ್ತಾಯಿಸುವುದು ಮುಂದುವರಿದಿದೆ. ಕನಿಷ್ಠ ಪಕ್ಷ ಗಮನಕ್ಕೂ ಬಾರದೆ ನಮ್ಮ ಜಮೀನಿನಲ್ಲಿ ಕೆಲಸ ಮಾಡುವುದು ಯಾವ ನ್ಯಾಯ ಎಂದು ರೈತರು ಪ್ರಶ್ನಿಸುತ್ತಿದ್ದಾರೆ. ಆದರೆ ಇದಕ್ಕೆ ಜನಪ್ರತಿನಿಧಿಗಳು, ಅಧಿಕಾರಿಗಳಿಂದ ಉತ್ತರ ಇಲ್ಲವಾಗಿದೆ.

ಒಬ್ಬಿಬ್ಬರು ರೈತರು ಪ್ರತಿಭಟನೆ ಮಾಡಿದರೆ ದೌರ್ಜನ್ಯ ನಡೆಸಿ, ಪೊಲೀಸರ ಮೂಲಕ ಬಂಧಿಸುವ ಬೆದರಿಕೆ ಹಾಕಿ ಕಾಮಗಾರಿ ಮಾಡುತ್ತಾರೆ. ಹೆಚ್ಚಿನ ರೈತರು ಒಟ್ಟಾದರೆ ಕೆಲಸ ನಿಲ್ಲಿಸಿ, ಪರಿಹಾರದ ಭರವಸೆ ಕೊಡುತ್ತಾರೆ. ಅಷ್ಟರ ಮಟ್ಟಿಗೆ ರೈತರ ಮೇಲೆ ದೌರ್ಜನ್ಯ ಮುಂದುವರಿದಿದೆ. ಆದರೆ ಭೂಮಿ ಕಳೆದುಕೊಂಡು ಬೀದಿಗೆ ಬರುವ ರೈತರ ಆತಂಕ, ನೋವುಆಡಳಿತ ಪ್ರಭುಗಳಿಗೆ ಕೇಳಿಸುತ್ತಿಲ್ಲ.

ಬಹುತೇಕ ಕಡೆಗಳಲ್ಲಿ ರೈತರು ಪ್ರತಿಭಟನೆ ನಡೆಸಿದ ಸಮಯದಲ್ಲಿ ಪೊಲೀಸರನ್ನು ಮುಂದಿಟ್ಟುಕೊಂಡು ಬೆದರಿಸಲಾಗುತ್ತಿದೆ. ಬಂಧಿಸುವ, ಜೈಲಿಗೆ ಕಳುಹಿಸುವ ಎಚ್ಚರಿಕೆ ನೀಡಲಾಗುತ್ತಿದೆ. ಕೊನೆಗೆ ಎಷ್ಟಾದರೂ ಪರಿಹಾರ ಸಿಗಲಿ ಎಂಬ ಸ್ಥಿತಿಯನ್ನು ನಿರ್ಮಿಸಿ ರೈತರಿಂದ ಬಲವಂತವಾಗಿ ಭೂಮಿ ಕಿತ್ತುಕೊಳ್ಳುವ ಕೆಲಸ ನಡೆದಿದೆ.

ರೈತರಿಗೆ ಗೊತ್ತಿಲ್ಲ: ಶಿರಾ ತಾಲ್ಲೂಕಿನಲ್ಲಿ ಅನಿಲ ಕೊಳವೆ ಮಾರ್ಗದ ನಿರ್ಮಾಣ ಕಾಮಗಾರಿ (ಆಂಧ್ರಪ್ರದೇಶಕ್ಕೆ ಸಂಪರ್ಕ ಕಲ್ಪಿಸುವುದು) ಆರಂಭವಾಗಿತ್ತು. ರೈತರ ಜಮೀನಿನಲ್ಲಿ ಜೆಸಿಬಿ ಯಂತ್ರಗಳು ಸೇರಿದಂತೆ ದೊಡ್ಡ ದೊಡ್ಡ ಯಂತ್ರಗಳು ಕೆಲಸದಲ್ಲಿ ನಿರತವಾಗಿದ್ದವು. ಇದನ್ನು ಕಂಡ ರೈತರಿಗೆ ದಿಕ್ಕೇ ತೋಚದಂತಾಯಿತು. ರಾತ್ರಿ ಬೆಳಗಾಗುವುದರ ಒಳಗೆ ನಮ್ಮ ಜಮೀನಿಗೆ ಬಂದು ಗುಂಡಿ ತೋಡಲಾಗುತ್ತಿದೆ. ಹೀಗೇಕೆ ಎಂದು ಪ್ರಶ್ನಿಸಿದರು. ಅಕ್ಕಪಕ್ಕದ ಜಮೀನಿನ ರೈತರು ಒಟ್ಟಾದರು. ಕೆಲಸ ನಿಲ್ಲಿಸುವಂತೆ ಒತ್ತಾಯಿಸಿದರು. ಅದಕ್ಕೆ ಗುತ್ತಿಗೆದಾರರು ಜಗ್ಗಲಿಲ್ಲ.

‘ಪೊಲೀಸರನ್ನು ಕರೆಸಿ ಬಂಧಿಸುತ್ತೇವೆ. ಇದು ಸರ್ಕಾರದ ಕೆಲಸ. ಯಾರೂ ಅಡ್ಡಿಪಡಿಸುವಂತಿಲ್ಲ. ಬೇಕಾದರೆ ಪರಿಹಾರ ಕೊಡುತ್ತೇವೆ ಬಂದು ತೆಗೆದುಕೊಂಡುಹೋಗಿ’ ಎಂದು ರೈತರನ್ನೇ ಬೆದರಿಸಿದರು. ಪೊಲೀಸರು ಗುತ್ತಿಗೆದಾರರ ಜತೆಗೆ ಕೈಜೋಡಿಸಿದರು. ಇದರಿಂದ ರೈತರು ಮತ್ತಷ್ಟು ಕುಸಿದುಹೋದರು. ನಂತರ ಒಂದಷ್ಟು ಮಂದಿ ಒಟ್ಟಾಗಿ ಪ್ರತಿಭಟನೆಗೆ ಇಳಿದರು. ರೈತರು ಒಗ್ಗೂಡಿದ್ದು ಕಂಡು ಗುತ್ತಿಗೆದಾರರು ಅಲ್ಲಿಂದ ಕಾಲುಕಿತ್ತರು. ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಳ್ಳುವ ಮುನ್ನ ಇಲ್ಲಿ ಕೆಲಸ ಆರಂಭಿಸುವ ಪ್ರಯತ್ನ ನಡೆದಿತ್ತು.

ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಹುಳಿಯಾರು ಹೋಬಳಿ ಹೊಯ್ಸಳಕಟ್ಟೆ ಭಾಗದಲ್ಲಿ ರೈತರು ಈಗ ಹೋರಾಟಕ್ಕೆ ಇಳಿದಿದ್ದಾರೆ. ಅನಿಲ ಮಾರ್ಗ ನಿರ್ಮಿಸಲು ಭೂಸ್ವಾಧೀನಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಸೂಕ್ತ ‍ಪರಿಹಾರಕ್ಕೆ ಆಗ್ರಹಿಸಿದ್ದಾರೆ. ಮೊದಲು ಪರಿಹಾರ ನಂತರ ಮುಂದಿನ ಕೆಲಸ ಎಂದು ಪಟ್ಟುಹಿಡಿದಿದ್ದಾರೆ.

ಎತ್ತಿನಹೊಳೆಯಲ್ಲೂ ಸಿಗದ ಪರಿಹಾರ

ಸಕಲೇಶಪುರ ಭಾಗದಿಂದ ಬಯಲು ಸೀಮೆಗೆ ನೀರು ಹರಿಸಲು ರೂಪಿಸಿರುವ ಎತ್ತಿನಹೊಳೆ ಯೋಜನೆಯಲ್ಲೂ ಭೂಸ್ವಾಧೀನಕ್ಕೆ ಸಮರ್ಪಕವಾಗಿ ಪರಿಹಾರ ನೀಡಿಲ್ಲ. ಜಿಲ್ಲೆಯ ಒಂದಿಲ್ಲೊಂದು ಕಡೆ ಪ್ರತಿಭಟನೆ ಸಾಮಾನ್ಯ ಎಂಬಂತಾಗಿದೆ. ಬಿಳಿಗೊಂಡ್ಲು ಬಳಿ ಜಲಾಶಯ ನಿರ್ಮಾಣಕ್ಕೆ ಭೂಮಿ ಬಿಟ್ಟುಕೊಟ್ಟವರಿಗೆ ಪರಿಹಾರದ ಮೊತ್ತವನ್ನು ನಿಗದಿಪಡಿಸದೆ ಕಾಮಗಾರಿ ಮುಂದೆ ಸಾಗಿಲ್ಲ.

ಈ ಯೋಜನೆಯಲ್ಲಿ ಪರಿಹಾರ ನೀಡುವಲ್ಲಿ ತಾರತಮ್ಯ ಮಾಡಲಾಗಿದೆ. ಒಂದೇ ತಾಲ್ಲೂಕಿನಲ್ಲಿ ಪ್ರತ್ಯೇಕ ಮಾನದಂಡ ಅನುಸರಿಸಿ ಪರಿಹಾರ ಕೊಡಲಾಗಿದೆ. ಇದರಿಂದ ರೈತರ ನಡುವೆ ಅಸಮಾಧಾನಕ್ಕೆ ಕಾರಣವಾಗಿದೆ. ರೈತರ ನಡುವೆಯೇವೈಮನಸ್ಸು ಮೂಡುವಂತೆ ಮಾಡಿ, ಆಡಳಿತ ಪ್ರಭುಗಳು ತಮ್ಮ ಕೆಲಸವನ್ನು ಸಲೀಸು ಮಾಡಿಕೊಂಡಿದ್ದಾರೆ. ಹಾಗಾಗಿ ಕೃಷಿಕರಿಗೆ ಸರಿಯಾಗಿ ಪರಿಹಾರ ಸಿಕ್ಕಿಲ್ಲ ಎಂಬ ದೊಡ್ಡ ಕೂಗು ಎದ್ದಿದೆ.

ಸಮರ್ಪಕವಾಗಿ ಪರಿಹಾರ ನೀಡದಿರುವುದು ಹಾಗೂ ಪರಿಹಾರ ನೀಡುವಲ್ಲಿ ತಾರತಮ್ಯ ಮಾಡಿರುವುದನ್ನು ಪ್ರಶ್ನಿಸಿ ಹಲವರು ನ್ಯಾಯಾಲಯದ ಮೆಟ್ಟಿಲೇರಿದ್ದಾರೆ. ಹಾಗಾಗಿ ಕಾಮಗಾರಿ ಆಮೆ ವೇಗದಲ್ಲಿ ಸಾಗಿದೆ.

ಹೇಮಾವತಿಯಿಂದ ನೀರು ಹರಿಸುವ ಕಾಲುವೆ ನಿರ್ಮಾಣಕ್ಕೆ ಪರಿಹಾರ ಸಿಗದೆ ತಿಪಟೂರು ತಾಲ್ಲೂಕಿನ ರೈತರು ಕೆಲಸ ನಡೆಯುತ್ತಿದ್ದ ಸ್ಥಳದಲ್ಲಿ ಅಹೋರಾತ್ರಿ ಧರಣಿ ನಡೆಸಿದರು. ಕೊನೆಗೂ ಹೋರಾಟಕ್ಕೆ ಮಣಿದು ಪರಿಹಾರದ ಹಣವನ್ನು ಬಿಡುಗಡೆ ಮಾಡಲಾಯಿತು.

ಹೆದ್ದಾರಿ ಕಾಮಗಾರಿಯಲ್ಲೂ ಇದೇ ಸ್ಥಿತಿ

ತುಮಕೂರು– ಶಿವಮೊಗ್ಗ ನಡುವಿನ ಹೆದ್ದಾರಿಯನ್ನುಚತುಷ್ಪಥ ರಸ್ತೆಯನ್ನಾಗಿ ಪರಿವರ್ತಿಸಲಾಗುತ್ತಿದೆ. ಈ ಮಾರ್ಗದ ಕಾಮಗಾರಿ ಆರಂಭವಾಗಿ ವರ್ಷಗಳೇ ಕಳೆದಿದ್ದರೂ ಇನ್ನೂ ಪೂರ್ಣಗೊಳ್ಳುವ ಲಕ್ಷಣ ಕಾಣುತ್ತಿಲ್ಲ. ಭೂ ಸ್ವಾಧೀನ ಮಾಡಿಕೊಳ್ಳದೆ, ಪರಿಹಾರವನ್ನು ನೀಡದೆ ರೈತರನ್ನು ಅಲೆದಾಡಿಸಲಾಯಿತು. ಪರಿಹಾರ ನಿಗದಿಪಡಿಸುವಲ್ಲೂ ತಾರತಮ್ಯ ಮಾಡಲಾಯಿತು. ಒಂದಿಲ್ಲೊಂದು ಕಡೆ ರೈತರು ಪ್ರತಿಭಟನೆ ನಡೆಸುವುದು, ಪರಿಹಾರ ಕೊಡುವ ಭರವಸೆ ಮುಂದುವರಿದಿತ್ತು.

ತಿಪಟೂರು ತಾಲ್ಲೂಕು ಭಾಗದಲ್ಲಿ ಹೋರಾಟ ತೀವ್ರಸ್ವರೂಪ ಪಡೆದುಕೊಂಡಿತು. ಕೆಲವೆಡೆ ಕಾಮಗಾರಿಗೆ ತಡೆಯೊಡ್ಡಿದರು. ಮತ್ತದೆ ಪರಿಹಾರದ ಭರವಸೆ ನೀಡುವ ಮೂಲಕ ರೈತರ ಕೋಪವನ್ನು ತಣಿಸಲಾಯಿತು.

ತಿಪಟೂರು ಬೈಪಾಸ್ ನಿರ್ಮಾಣಕ್ಕೆ ಭೂಸ್ವಾಧೀನವಾಗದೆ ಕೆಲಸ ಆರಂಭಿಸಲಾಯಿತು. ಇದನ್ನು ಪ್ರಶ್ನಿಸಿದ ರೈತರನ್ನು ಪೊಲೀಸರ ಮೂಲಕ ಬೆದರಿಸಲಾಯಿತು. ರೈತ ಸಂಘದ ಮುಖಂಡರು ಬಂದು ಪ್ರತಿಭಟನೆಗೆ ಇಳಿಸಿದರು. ಕೊನೆಗೂ ಹೋರಾಟದ ಮೂಲಕ ಪರಿಹಾರ ಪಡೆದುಕೊಂಡರು.

ಬೀದರ್– ಶ್ರೀರಂಗಪಟ್ಟಣ ಹೆದ್ದಾರಿ

ಈ ಹೆದ್ದಾರಿ ವಿಸ್ತರಣೆ ಸಮಯದಲ್ಲೂ ಪರಿಹಾರಕ್ಕೆ ಹೋರಾಟ ಮಾಡಬೇಕಾಯಿತು. ಹುಳಿಯಾರು, ಚಿಕ್ಕನಾಯಕನಹಳ್ಳಿ, ಕೆ.ಬಿ.ಕ್ರಾಸ್, ತುರುವೇಕೆರೆ ಭಾಗದ ಜನರು ಭೂಮಿ, ಕಟ್ಟಡ ಕಳೆದುಕೊಂಡು ಪರಿಹಾರಕ್ಕೆ ಕಚೇರಿ ಕಂಬ ಸುತ್ತುತ್ತಿದ್ದಾರೆ.

ಒತ್ತಾಯ: ತೆಂಗು, ಅಡಿಕೆ ಸೇರಿದಂತೆ ತೋಟಗಾರಿಕೆ ಬೆಳೆಗಳಿಗೆ ಪ್ರತ್ಯೇಕವಾಗಿ ಪರಿಹಾರ ನೀಡಬೇಕು. ಖುಷ್ಕಿ ಜಮೀನಿಗೂ ಸಮರ್ಪಕವಾಗಿ ಪರಿಹಾರ ನಿಗದಿಪಡಿಸಬೇಕು ಎಂದು ರಾಜ್ಯ ರೈತ ಸಂಘದ ಉಪಾಧ್ಯಕ್ಷ ಕೆಂಕೆರೆ ಸತೀಶ್ ಒತ್ತಾಯಿಸಿದ್ದಾರೆ.

ಪ್ರಮುಖ ಯೋಜನೆಗಳು

* ಎತ್ತಿನಹೊಳೆ ಕಾಮಗಾರಿ

* ಅನಿಲ ಕೊಳವೆ ಮಾರ್ಗ ನಿರ್ಮಾಣ

* ಹೆದ್ದಾರಿಗಳ ವಿಸ್ತರಣೆ

* ತಿಪಟೂರು ಬೈಪಾಸ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT