ಬುಧವಾರ, ಮಾರ್ಚ್ 3, 2021
20 °C
ತುರುವೇಕೆರೆ: ಲಾಕ್‌ಡೌನ್‌ನಿಂದಾಗಿ ತಾಲ್ಲೂಕಿಗೆ ಮರಳಿದ್ದಾರೆ 38 ಸಾವಿರಕ್ಕೂ ಹೆಚ್ಚು ಜನರು

ತುಮಕೂರ: ಹೆಚ್ಚುವರಿ ನೀರು ಪೂರೈಕೆಯೇ ಸವಾಲು

ಪಾಂಡುರಂಗಯ್ಯ ಎ. Updated:

ಅಕ್ಷರ ಗಾತ್ರ : | |

Prajavani

ತುರುವೇಕೆರೆ: ಲಾಕ್‌ಡೌನ್‌ನಿಂದಾಗಿ ಬೆಂಗಳೂರಿನಿಂದ ತಾಲ್ಲೂಕಿಗೆ 38 ಸಾವಿರಕ್ಕೂ ಹೆಚ್ಚು ಜನರು ಮರಳಿದ್ದಾರೆ. ಪ್ರತಿ ದಿನ ಒಬ್ಬ ವ್ಯಕ್ತಿಗೆ 50 ಲೀಟರ್‌ನಂತೆ ಲೆಕ್ಕಹಾಕಿದರೂ 2 ಲಕ್ಷ ಲೀಟರ್‌ನಷ್ಟು ಹೆಚ್ಚುವರಿ ನೀರಿನ ಬೇಡಿಕೆ ಇದೆ. ಈ ನೀರು ಪೂರೈಸುವುದೇ ಅಧಿಕಾರಿಗಳಿಗೆ ಸವಾಲಾಗಿದೆ. 

ಕಳೆದ ವರ್ಷ ತಾಲ್ಲೂಕಿನಲ್ಲಿ ಉತ್ತಮ ಮಳೆ ಸುರಿಯಿತು. ಕೆರೆ–ಕಟ್ಟೆ
ಗಳಲ್ಲಿ ಹೇಮಾವತಿ ನೀರು ಸಂಗ್ರಹ
ವಾದ ಕಾರಣ ಈ ವರ್ಷದ ನೀರಿನ ಸಮಸ್ಯೆ ಕಳೆದ ವರ್ಷದಷ್ಟು ತಟ್ಟುತ್ತಿಲ್ಲ. ಅಂದಮಾತ್ರಕ್ಕೆ ನೀರಿನ ಸಮಸ್ಯೆಯೇ ಇಲ್ಲ ಎನ್ನುವ ಸ್ಥಿತಿಯೂ ಇಲ್ಲ.

ಕೊಂಡಜ್ಜಿ ಪಂಚಾಯಿತಿಯ ದೊಂಬರನಹಳ್ಳಿ ಗೊಲ್ಲರಹಟ್ಟಿ ಹಾಗೂ ಲೋಕಮ್ಮನಹಳ್ಳಿ ಪಂಚಾಯಿತಿಯ ಹರಿದಾಸನಹಳ್ಳಿಗಳಿಗೆ ಒಂದು ತಿಂಗಳಿನಿಂದ ಟ್ಯಾಂಕರ್ ಮೂಲಕ ನೀರು ಪೂರೈಸಲಾಗುತ್ತಿದೆ. ವಡವನಘಟ್ಟ ಪಂಚಾಯಿತಿಯ ನೇರಲಕಟ್ಟೆಗೊಲ್ಲರಹಟ್ಟಿ ಹಾಗೂ ಮುತ್ತಗದಹಳ್ಳಿ ಪಂಚಾಯಿತಿಯ ಯಡ್ಡನಘಟ್ಟ ಗ್ರಾಮಕ್ಕೆ ಖಾಸಗಿ ಕೊಳವೆ ಬಾವಿಗಳಿಂದ ಬಾಡಿಗೆ ಪಡೆದು ನೀರು ಪೂರೈಸಲಾಗುತ್ತಿದೆ. ಮಲ್ಲಾಘಟ್ಟ ಕೆರೆಯಲ್ಲಿ ಸಾಕಷ್ಟು ನೀರಿರುವುದರಿಂದ ತಿಂಗಳವರೆಗೆ ಪಟ್ಟಣಕ್ಕೆ ಕುಡಿಯುವ ನೀರಿನ ಸಮಸ್ಯೆಯಿಲ್ಲ.

 ವಡವನಘಟ್ಟ, ಮಣೆಚಂಡೂರು, ಶೆಟ್ಟಿಗೊಂಡನಹಳ್ಳಿ, ಕೊಂಡಜ್ಜಿ, ಮತ್ತು ಲೋಕಮ್ಮನಹಳ್ಳಿ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಪ್ರತಿ ವರ್ಷವೂ ಕಾಯಂ ಆಗಿರುವುದರಿಂದ ಶಾಶ್ವತ ಕುಡಿಯುವ ನೀರಿನ ಯೋಜನೆ ಅಗತ್ಯ ಎನ್ನುತ್ತಾರೆ ಕೊಂಡಜ್ಜಿ ವಿಶ್ವಾಸ್.

ಅಂರ್ತಜಲ ಕುಸಿದಿರುವುದರಿಂದ ತಾಲ್ಲೂಕಿನಲ್ಲಿ 30 ಕೊಳವೆ ಬಾವಿ ಬತ್ತಿವೆ. ವಿದ್ಯುತ್ ವ್ಯತ್ಯಯದಿಂದ ಪದೇ ಪದೆ ಕೊಳವೆ ಬಾವಿಗಳ ಮೋಟರ್ ಹಾಳಾಗುತ್ತದೆ. ಈ ಮೋಟರ್‌ಗಳ ದುರಸ್ತಿಗೆ ಕೆಲಸದ ಆಳುಗಳು ಸಿಗುತ್ತಿಲ್ಲ. ಜನರು ನೀರು ನೀಡುವಂತೆ ಒತ್ತಡ ಹಾಕಿದಾಗ ಟ್ಯಾಂಕರ್ ಮೂಲಕ ನೀರು ಪೂರೈಸುತ್ತೇವೆ ಎನ್ನುತ್ತಾರೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು.

ತಾಲ್ಲೂಕಿನಲ್ಲಿ ಒಟ್ಟು 78 ಶುದ್ಧ ಕುಡಿಯುವ ನೀರಿನ ಘಟಕಗಳಿವೆ. ಮಾಚೇನಹಳ್ಳಿ, ಕೊಟ್ರುಕೊಟ್ಟಿಗೆ ಹಾಗೂ ಮಾಯಸಂದ್ರದ ನೀರಿನ ಘಟಕಗಳು ಸರಿಯಾದ ನಿರ್ವಹಣೆ ಇಲ್ಲದೆ ದುರಸ್ತಿಗೆ ಬಂದಿವೆ.

ಕೆಲ ಪಂಚಾಯಿತಿಗಳಲ್ಲಿ ಕುಡಿಯುವ ನೀರಿನ ಸರಬರಾಜು ಮಾಡಲು ಒಂದು ಟ್ಯಾಂಕರ್‌ಗೆ ₹ 550ರಂತೆ ಟೆಂಡರ್ ಕರೆಯಲಾಗಿದೆ. ಕಡಿಮೆ ಹಣ ಎನ್ನುವ ಕಾರಣಕ್ಕೆ ಟ್ಯಾಂಕರ್ ಮಾಲೀಕರು ಹಿಂದೇಟು ಹಾಕುತ್ತಿದ್ದಾರೆ. ₹ 800 ಕೇಳುತ್ತಾರೆ ನಮಗೆ ಅಷ್ಟು ಹಣ ಕೊಡಲು ಅವಕಾಶವೇ ಇಲ್ಲ ಎನ್ನುತ್ತಾರೆ ಅಧಿಕಾರಿಗಳು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು