ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವಾತಂತ್ರ್ಯಕ್ಕೆ ಬಿಜೆಪಿ ಕೊಡುಗೆ ಏನು: ಜಿ. ಪರಮೇಶ್ವರ ಪ್ರಶ್ನೆ

ಕೊರಟಗೆರೆಯಲ್ಲಿ ಶಾಸಕ ಡಾ.ಜಿ. ಪರಮೇಶ್ವರ ಪ್ರಶ್ನೆ
Last Updated 7 ಜನವರಿ 2021, 4:00 IST
ಅಕ್ಷರ ಗಾತ್ರ

ಕೊರಟಗೆರೆ: ‘ಸುಳ್ಳನ್ನೇ ಸತ್ಯ ಎಂದು ನಂಬಿಸುತ್ತಿರುವ ಕೇಂದ್ರ ಹಾಗೂ ರಾಜ್ಯ ಸರ್ಕಾರ ದೇಶದ ಸ್ವಾಂತತ್ರ್ಯಕ್ಕೆ ಕಾಂಗ್ರೆಸ್ ಕೊಡುಗೆ ಏನಿದೆ ಎನ್ನುವುದನ್ನು ತಿಳಿಯಲು ಇತಿಹಾಸ ಓದಬೇಕು’ ಎಂದು ಶಾಸಕ ಡಾ.ಜಿ. ಪರಮೇಶ್ವರ ಹೇಳಿದರು.

ಪಟ್ಟಣದಲ್ಲಿ ನಡೆದ ಗ್ರಾಮ ಪಂಚಾಯಿತಿಗೆ ಆಯ್ಕೆಯಾಗಿರುವ ಕಾಂಗ್ರೆಸ್ ಬೆಂಬಲಿತ ಸದಸ್ಯರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು.

ಸ್ವಾತಂತ್ರ್ಯ ಹೋರಾಟದಲ್ಲಿ ಅನೇಕ ಕಾಂಗ್ರೆಸಿಗರು ತ್ಯಾಗ, ಬಲಿದಾನವಿದೆ. ಆಗ ಬಿಜೆಪಿ ಎಲ್ಲಿತ್ತು. ಭಾರತಕ್ಕೆ ಸ್ವಾತಂತ್ರ ತಂದುಕೊಡುವಲ್ಲಿ ಬಿಜೆಪಿ ಪಾತ್ರ ಏನು ಎನ್ನುವುದನ್ನು ಪ್ರಧಾನಿ ಉತ್ತರಿಸಲಿ. ಬಡವರ, ರೈತರ, ಕಾರ್ಮಿಕರ ಪರ ಕಾನೂನುಗಳನ್ನು ರೂಪಿಸುತ್ತಾ, ಅವರ ಏಳಿಗೆಗೆ ಕಾಂಗ್ರೆಸ್ ಶ್ರಮಿಸುತ್ತಾ ಬಂದಿದೆ. ಆದರೆ ಬಿಜೆಪಿ ಕಾರ್ಪೊರೇಟ್ ಪರವಾಗಿ ನಿಂತಿದೆ ಎಂದರು.

ದೆಹಲಿಯಲ್ಲಿ ರೈತರು ತಿಂಗಳಿನಿಂದ ಪ್ರತಿಭಟನೆ ನಡೆಸುತ್ತಿದ್ದರೂ ಅವರಿಗೆ ನ್ಯಾಯ ಕೊಡುವಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದೆ. ಕೋವಿಡ್‌ ಹೆಸರಿನಲ್ಲಿ ದೇಶವನ್ನು ಕೊಳ್ಳೆ ಹೊಡೆಯುತ್ತಿದೆ ಎಂದರು.

ಕೊರಟಗೆರೆ ಕ್ಷೇತ್ರದ ಗ್ರಾಮ ಪಂಚಾಯಿತಿಯ 602 ಅಭ್ಯರ್ಥಿಗಳಲ್ಲಿ 360ರಿಂದ 370 ಕಾಂಗ್ರೆಸ್ ಬೆಂಬಲಿತ ಸದಸ್ಯರು ಆಯ್ಕೆಯಾಗಿದ್ದಾರೆ. ಗೆದ್ದವರು ಮಾರಾಟದ ವಸ್ತುಗಳಾಗಬೇಡಿ ಗ್ರಾಮದ ಅಭಿವೃದ್ಧಿಗೆ ಶ್ರಮಿಸಿ ಎಂದರು.

ಪಾವಗಡ ಶಾಸಕ ವೆಂಕಟರವಣಪ್ಪ, ಮಾಜಿ ಶಾಸಕ ಕೆ.ಷಡಾಕ್ಷರಿ, ಕುಣಿಗಲ್ ಶಾಸಕ ರಂಗನಾಥ್, ಮಾಜಿ ಶಾಸಕರಾದ ಟಿ.ಬಿ ಜಯಚಂದ್ರ, ರಫಿಕ್ ಅಹಮದ್ ಮಾತನಾಡಿದರು.

ನೂತನವಾಗಿ ಆಯ್ಕೆಯಾದ ಸುಮಾರು 360ಕ್ಕೂ ಹೆಚ್ಚು ಸದಸ್ಯರನ್ನು ಸನ್ಮಾನಿಸಲಾಯಿತು. ಕೆಪಿಸಿಸಿ ಕಾರ್ಯದರ್ಶಿ ವೇಣುಗೋಪಾಲ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ರಾಮಕೃಷ್ಣಪ್ಪ, ಮಾಜಿ ಶಾಸಕ ರಮೇಶ್ ಬಾಬು, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಟಿ.ಸಿ.ರಾಮಯ್ಯ, ಉಪಾಧ್ಯಕ್ಷ ವೆಂಕಟಪ್ಪ, ಪಟ್ಟಣ ಪಂಚಾಯಿತಿ ಸದಸ್ಯರಾದ ಕೆ.ಆರ್.ಒಬಳರಾಜು, ಎ.ಡಿ.ಬಲರಾಮಯ್ಯ, ನಾಗರಾಜು, ಡಿಸಿಸಿ ಬ್ಯಾಂಕ್ ನಿರ್ದೇಶಕ ಹನುಮಾನ್, ಕೆಎಂಎಫ್ ನಿರ್ದೇಶಕ ಈಶ್ವರಯ್ಯ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಅರಕೆರೆ ಶಂಕರ್, ಮೆಡಿಕಲ್ ಅಶ್ವತ್ಥ್ ಇದ್ದರು.

ಒಳ ಒಪ್ಪಂದ: ಆಣೆ ಮಾಡಲು ಎಚ್‌ಡಿಕೆಗೆ ಸವಾಲು
‘ಜೆಡಿಎಸ್ ಒಂದು ವ್ಯಾಪಾರಿ ಪಕ್ಷ. ಕಾಂಗ್ರೆಸ್ ಇದ್ದಿದ್ದರಿಂದಲೇ ದೇವೇಗೌಡರು ಪ್ರಧಾನಿಯಾದರು. ಎಲ್ಲೋ ಮಲಗಿದ್ದ ಎಚ್.ಡಿ.ಕುಮಾರಸ್ವಾಮಿಯನ್ನು ಕಾಂಗ್ರೆಸ್ ಮುಖ್ಯಮಂತ್ರಿ ಮಾಡಿತು. ಆದರೀಗ ಕಾಂಗ್ರೆಸ್ ಪಕ್ಷವನ್ನು ಮುಗಿಸುತ್ತೇವೆ ಎಂದು ಹೇಳಿಕೊಂಡು ಓಡಾಡುತ್ತಿದ್ದಾರೆ’ ಎಂದು ಮಾಜಿ ಶಾಸಕ ಕೆ.ಎನ್.ರಾಜಣ್ಣ ತರಾಟೆಗೆ ತೆಗೆದುಕೊಂಡರು.

‘ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲಿಸಲೇಬೇಕೆಂದು ಕುಮಾರಸ್ವಾಮಿ ಬಿಜೆಪಿ ಜತೆ ಒಳ ಒಪ್ಪಂದ ಮಾಡಿಕೊಂಡರು. ಅದನ್ನ ಸುಳ್ಳು ಎಂದು ವಾದ ಮಾಡುವುದಾದರೆ ಧರ್ಮಸ್ಥಳಕ್ಕೆ ಬಂದು ಪ್ರಮಾಣ ಮಾಡಲಿ’ ಎಂದು ಸವಾಲು ಹಾಕಿದರು.

‘ದೇವೇಗೌಡ ಅವರು ಸ್ವಂತ ತಮ್ಮನ ಕುಟುಂಬಕ್ಕೆ ಒಳ್ಳೆಯದನ್ನು ಮಾಡದವರು ಒಕ್ಕಲಿಗ ಸಮುದಾಯಕ್ಕೆ ಇನ್ನೇನು ಒಳ್ಳೆಯದನ್ನು ಮಾಡುತ್ತಾರೆ. ಅವರು ಜಾತಿವಾದಿಯಲ್ಲ. ಬದಲಾಗಿ ಕುಟುಂಬವಾದಿ. ಇಲ್ಲಿವರೆಗೆ ಎಷ್ಟು ಜನ ಒಕ್ಕಲಿಗರಿಗೆ ಒಳ್ಳೆದನ್ನು ಮಾಡಿದ್ದಾರೆ. ಅವಕಾಶವಾದಿಗಳನ್ನ ಹೇಗೆ ನಂಬೋದು. ಡಿ.ಕೆ.ಶಿವಕುಮಾರ್ ಅಧ್ಯಕ್ಷರಾಗಿ ಬಂದ ಮೇಲೆ ಕಾಂಗ್ರೆಸ್‌ಗೆ ಶಕ್ತಿ ಬಂದಿದೆ. ಒಕ್ಕಲಿಗ ಸಮುದಾಯ ಡಿ.ಕೆ.ಶಿವಕುಮಾರ್ ಬೆಂಬಲಕ್ಕೆ ನಿಂತಲ್ಲಿ ಹೆಚ್ಚಿನ ಅನುಕೂಲವಾಗಲಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT