ಶುಕ್ರವಾರ, ಅಕ್ಟೋಬರ್ 2, 2020
21 °C
ದೊಡ್ಡಮದುರೆ ಕೆರೆಗೆ ನೀರು ಹರಿಸಲು ಆಗ್ರಹ; ಡಿ.ನಾಗರಾಜಯ್ಯ ನೇತೃತ್ವದಲ್ಲಿ ಉಪವಾಸ ಸತ್ಯಾಗ್ರಹ

ಹೋರಾಟ ಮಾಡಿಯೇ ನೀರು ಪಡೆಯಬೇಕು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕುಣಿಗಲ್: ‘ಸಂಪರ್ಕ ಕಾಲುವೆಯಿಂದ ಹೇಮಾವತಿ ನೀರು ಬರುವುದಿಲ್ಲ. ಎಕ್ಸ್‌ಪ್ರೆಸ್ ಚಾನಲ್ ನಿರ್ಮಾಣವಾಗದ ಹೊರತು ತಾಲ್ಲೂಕಿಗೆ ನೀರು ಸಕಾಲದಲ್ಲಿ ಹರಿಯಲು ಸಾಧ್ಯವಿಲ್ಲ. ಪಕ್ಷಾತೀತ ಹೋರಾಟವಿಲ್ಲದೆ ನೀರು ಹರಿಯುವುದಿಲ್ಲ’ ಎಂದು ಜೆಡಿಎಸ್‌ ಮುಖಂಡ ಡಿ.ನಾಗರಾಜಯ್ಯ ತಿಳಿಸಿದರು.

ಹೇಮಾವತಿ ನಾಲಾ ವಲಯದ ವಿತರಣಾ ನಾಲೆ ಡಿ.26ರ ಕೊನೆಭಾಗದ ತಾಲ್ಲೂಕಿನ ದೊಡ್ಡಮದುರೆ ಕೆರೆಗೆ ನೀರು ಹರಿಸುವಂತೆ ಆಗ್ರಹಿಸಿ ದೊಡ್ಡಮದುರೆ ಗ್ರಾಮದ ಕೆರೆ ಏರಿ ಮೇಲೆ ಹಮ್ಮಿಕೊಳ್ಳಲಾಗಿದ್ದ ಸಾಂಕೇತಿಕ ಉಪವಾಸ ಸತ್ಯಾಗ್ರಹದಲ್ಲಿ ಮಾತನಾಡಿದರು.

‘ಕುಣಿಗಲ್ ತಾಲ್ಲೂಕಿನಿಂದ ರಾಮನಗರ ಜಿಲ್ಲೆಗೆ ಹೇಮಾವತಿ ನೀರನ್ನು ತೆಗೆದುಕೊಂಡು ಹೋಗಲು ಡಿ.ಕೆ.ಶಿವಕುಮಾರ್ ಜಲಸಂಪನ್ಮೂಲ ಸಚಿವರಾಗಿದ್ದಾಗ ಸಂಚು
ಮಾಡಿದ್ದಾರೆ. ತಾಲ್ಲೂಕಿಗೆ 76 ಸಾವಿರ ಎಕರೆ ಅಚ್ಚುಕಟ್ಟು ಪ್ರದೇಶ ಘೋಷಣೆಯಾಗಿದ್ದು, ಅದರಲ್ಲಿ 30 ಸಾವಿರ ಎಕರೆ ಅಚ್ಚುಕಟ್ಟು ಪ್ರದೇಶವನ್ನು ಕಡಿತಗೊಳಿಸಿ ರಾಮನಗರ ಜಿಲ್ಲೆವ್ಯಾಪ್ತಿಯ 30 ಸಾವಿರ ಅಚ್ಚಕಟ್ಟು ಪ್ರದೇಶವನ್ನು ಸೇರಿಸಿ ತಾಲ್ಲೂಕಿನ ಪಾಲಿನ ನೀರನ್ನು ಹರಿಸಿಕೊಳ್ಳಲು ದಾಖಲೆಗಳನ್ನು ಸೃಷ್ಟಿಸಿದ್ದಾರೆ’ ಎಂದು ದೂರಿದರು.

ಜಿಲ್ಲೆಗೆ 24.5 ಟಿಎಂಸಿ ಅಡಿ ನೀರು ಹಂಚಿಕೆ ಮಾಡಲಾಗಿದೆ. ಇದರಲ್ಲಿ ಕುಡಿಯುವ ನೀರಿಗಾಗಿ ಸುಮಾರು 7 ಟಿಎಂಸಿ ಅಡಿ ನೀರು ಬಳಕೆಯಾಗುತ್ತಿದೆ. ಕುಡಿಯುವ ನೀರಿಗಾಗಿ ಹೆಚ್ಚುವರಿ ನೀರಿನ ಪ್ರಮಾಣ ಹಂಚಿಕೆ ಮಾಡಿಸಿಕೊಳ್ಳುವತ್ತ ಗಮನ ಹರಿಸಬೇಕಿದೆ. ಮೂಲ ಯೋಜನೆಯಂತೆ 240 ಕಿ.ಮೀ ಉದ್ದದ ಹೇಮಾವತಿ ಕಾಲುವೆ ನಿರ್ಮಾಣವಾಗಿದ್ದರೂ ಕುಣಿಗಲ್ ಭಾಗದಲ್ಲಿ ಎಂದಿಗೂ ನೀರು ಸಕಾಲದಲ್ಲಿ ಹರಿದಿಲ್ಲ ಎಂದು ಹೇಳಿದರು.

ಇದರ ಮಧ್ಯೆ ₹360 ಕೋಟಿ ವೆಚ್ಚದಲ್ಲಿ ಶ್ರೀರಂಗ ಏತನೀರಾವರಿ ಯೋಜನೆ ಚಾಲ್ತಿಯಲ್ಲಿದೆ. ಯಾವುದೇ ಕಾರಣಕ್ಕೂ ಹೇಮಾವತಿ ನೀರು ಈ ಭಾಗಕ್ಕೆ ಹರಿಯಲು ಸಾಧ್ಯವಿಲ್ಲ. ನೀರು ಸಕಾಲಕ್ಕೆ ಹರಿಯಬೇಕಾದರೆ ಕಾಲುವೆಯಲ್ಲಿ ನೀರು ಹರಿಯವ ಪ್ರಾರಂಭದ ದಿನದಿಂದಲೇ ಹೋರಾಟ ಮಾಡಬೇಕಿದೆ ಎಂದರು.

ತುರುವೇಕೆರೆ ಜೆಡಿಎಸ್‌ ಮುಖಂಡ ಎಂ.ಟಿ.ಕೃಷ್ಣಪ್ಪ, ಜಿಲ್ಲೆಯಲ್ಲಿ ಮೂಲ ಯೋಜನೆಯಂತೆ ನಾಲೆ ನಿರ್ಮಾಣವಾಗಿ 20 ವರ್ಷ ಕಳೆದಿದೆ. ಯೋಜನೆಯಲ್ಲಿಲ್ಲದ ಜಿಲ್ಲೆಯ ಇತರೆ ತಾಲ್ಲೂಕುಗಳಿಗೆ ನೀರು ಹರಿಯುತ್ತಿದೆ. ನಾಲೆಗಾಗಿ ಭೂಮಿ ನೀಡಿದ ರೈತರ ಜಮೀನಿಗೆ ಮಾತ್ರ ನೀರು ಹರಿಯುತ್ತಿಲ್ಲ. ನಾಲೆ ನಿರ್ಮಾಣದಿಂದಾಗಿ ಗುತ್ತಿಗೆದಾರರಿಗೆ ಲಾಭವಾಗಿದೆ. ವಿತರಣಾ ನಾಲೆ ‘ಡಿ.26’ ತುರುವೇಕೆರೆಯ ಶೆಟ್ಟಿಗೊಂಡನಹಳ್ಳಿ ಮತ್ತು ಮಣೆಚೆಂಡೂರು, ಕುಣಿಗಲ್ ತಾಲ್ಲೂಕಿನ ಎಡೆಯೂರು ಮತ್ತು ನಾಗಸಂದ್ರ ಪಂಚಾಯಿತಿ ವ್ಯಾಪ್ತಿಗೆ ಬರಲಿದೆ. ಆ ಭಾಗದ  ಜನರು ಹೋರಾಟ ಮಾಡಿ ನೀರನ್ನು ಪಡೆಯಬೇಕಿದೆ ಎಂದರು.

ವಿಧಾನ ಪರಿಷತ್ ಸದಸ್ಯ ಬೆಮಲ್ ಕಾಂತರಾಜು, ಬಿಜೆಪಿ ಮುಖಂಡ ಡಿ.ಕೃಷ್ಣಕುಮಾರ್, ಜೆಡಿಎಸ್ ಮುಖಂಡ ಬಿ.ಎನ್. ಜಗದೀಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಂಗಣ್ಣಗೌಡ ಮಾತನಾಡಿದರು.

ದೊಡ್ಡಮದುರೆ ಹೇಮಾವತಿ ನಾಲಾ ನೀರು ಹೋರಾಟ ಸಮಿತಿಯ ಪದಾಧಿಕಾರಿಗಳಾದ ರಮೇಶ್, ಲಕ್ಷ್ಮಣ, ಗಂಗಾಧರಯ್ಯ, ವೆಂಕಟೇಶ, ಚನ್ನೇಗೌಡ, ರವಿ, ಮಹೇಶ್ ಸೇರಿದಂತೆ ಗ್ರಾಮಸ್ಥರು ಮತ್ತು ಮಹಿಳೆಯರು ಖಾಲಿ ಬಿಂದಿಗೆಯೊಂದಿಗೆ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.