ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಡೂರು, ಕಾವ್ರಾಡಿಯಲ್ಲಿ ಶೇ 100 ಲಸಿಕೆ ಸಾಧನೆ

18 ವರ್ಷ ಮೇಲ್ಪಟ್ಟ ಎಲ್ಲರಿಗೂ ಕೋವಿಡ್‌ ಲಸಿಕೆ
Last Updated 2 ಸೆಪ್ಟೆಂಬರ್ 2021, 13:03 IST
ಅಕ್ಷರ ಗಾತ್ರ

ಉಡುಪಿ: ಕುಂದಾಪುರ ತಾಲ್ಲೂಕಿನ ಕಂಡ್ಲೂರು ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯ ಕಾವ್ರಾಡಿ ಹಾಗೂ ಬ್ರಹ್ಮಾವರ ತಾಲ್ಲೂಕಿನ ಮಂದಾರ್ತಿ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯ ನಡೂರು ಗ್ರಾಮಗಳು ಶೇ 100ರಷ್ಟು ಕೋವಿಡ್‌ ಲಸಿಕೆ ಗುರಿ ಸಾಧಿಸಿದ್ದು, ಮಾದರಿ ಗ್ರಾಮಗಳಾಗಿ ಗುರುತಿಸಿಕೊಂಡಿವೆ. ಎರಡೂ ಗ್ರಾಮಗಳಲ್ಲಿ 18 ವರ್ಷ ಮೇಲ್ಪಟ್ಟ ಎಲ್ಲರೂ ಕೋವಿಡ್ ಪ್ರಥಮ ಡೋಸ್ ಲಸಿಕೆ ಹಾಕಲಾಗಿದೆ. ಹೆಚ್ಚಿನವರು ಎರಡನೇ ಡೋಸ್ ಲಸಿಕೆಯನ್ನೂ ಪಡೆದಿದ್ದಾರೆ.

ಕಾಡೂರು ಗ್ರಾಮ ಪಂಚಾಯಿತಿಯ ನಡೂರು ಗ್ರಾಮದಲ್ಲಿ 18 ವರ್ಷ ಮೇಲ್ಪಟ್ಟ 1,888 ಗ್ರಾಮಸ್ಥರಿದ್ದು ಎಲ್ಲರೂ ಮೊದಲ ಡೋಸ್‌ ಲಸಿಕೆ ಹಾಕಿಸಿಕೊಂಡಿದ್ದಾರೆ. ಪಂಚಾಯಿತಿ ಸದಸ್ಯರು, ಪಿಡಿಒಗಳು ಹಾಗೂ ಮಂದಾರ್ತಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರು ಮತ್ತು ಸಿಬ್ಬಂದಿ ನಿರಂತರವಾಗಿ ಕೋವಿಡ್ ಲಸಿಕೆಯ ಬಗ್ಗೆ ಜನರಲ್ಲಿ ಅರಿವು ಮೂಡಿಸಿದ್ದು ಹಾಗೂ ಲಸಿಕೆ ಭೀತಿ ಹೋಗಲಾಡಿಸಿದ್ದು ಶೇ 100 ಲಸಿಕೆ ಗುರಿ ಮುಟ್ಟಲು ಸಾಧ್ಯ ಎನ್ನುತ್ತಾರೆ ಅಧಿಕಾರಿಗಳು.

ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು ಮನೆಮನೆಗೆ ಭೇಟಿ ನೀಡಿ ಲಸಿಕೆ ಪಡೆದ ಹಾಗೂ ಪಡೆಯದವರ ಮಾಹಿತಿ ಸಂಗ್ರಹ ಮಾಡಿದ್ದು, ಅಶಕ್ತರು ಹಾಗೂ ಲಸಿಕಾ ಕೇಂದ್ರಗಳಿಗೆ ಬರಲು ಸಾಧ್ಯವಾಗದವರ ಮನೆಗೆ ತೆರಳಿ ಲಸಿಕೆ ಹಾಕಿದ್ದು ಹಾಗೂ ನಿರಂತರ ಲಸಿಕಾ ಶಿಬಿರಗಳ ಆಯೋಜನೆಯ ಪರಿಣಾಮ ಅರ್ಹ ಎಲ್ಲರಿಗೂ ಲಸಿಕೆ ತಲುಪಿದೆ. ಗ್ರಾಮ ಮಟ್ಟದ ಕೋವಿಡ್ ಟಾಸ್ಕ್ ಪೋರ್ಸ್ ಕೂಡ ವ್ಯವಸ್ಥಿತವಾಗಿ ಕಾರ್ಯನಿರ್ವಹಿಸಿದ್ದು, ಕಾಡೂರು ಗ್ರಾಮದಲ್ಲಿ ಸೋಂಕು ಹೆಚ್ಚು ಕಾಣಿಸಿಕೊಂಡಿಲ್ಲ.

ಕಂಡ್ಲೂರು ಗ್ರಾಮ ಪಂಚಾಯಿತಿಯ ಕಾವ್ರಾಡಿ ಮತ್ತು ಹಳ್ನಾಡು ಗ್ರಾಮದಲ್ಲಿ 18 ವರ್ಷ ಮೇಲ್ಪಟ್ಟ 4,032 ಗ್ರಾಮಸ್ಥರಿದ್ದು ಎಲ್ಲರಿಗೂ ಮೊದಲ ಡೋಸ್ ಲಸಿಕೆ ಹಾಕಲಾಗಿದೆ. 45 ವರ್ಷ ಮೇಲ್ಪಟ್ಟ ಎಲ್ಲರಿಗೂ ಈ ಹಿಂದೆಯೇ ಲಸಿಕೆ ಹಾಕಲಾಗಿತ್ತು. ಗ್ರಾಮದಲ್ಲಿ ಲಸಿಕೆ ಪಡೆಯದವರನ್ನು ಗುರುತಿಸಿದ ವೈದ್ಯರ ತಂಡ ಮನೆ ಮನೆಗೆ ತೆರಳಿ ಲಸಿಕೆ ಹಾಕಿದ್ದರಿಂದ 8 ವರ್ಷ ಮೇಲ್ಪಟ್ಟ ಎಲ್ಲರಿಗೂ ಲಸಿಕೆ ತಲಪಿದೆ.

ಕಂಡ್ಲೂರು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರಾದ ಡಾ. ಲತಾ ನಾಯಕ್ ಹಾಗೂ ತಂಡ, ಗ್ರಾಮ ಪಂಚಾಯಿತಿ ಅಧ್ಯಕ್ಷರು, ಸದಸ್ಯರು, ಪಿಡಿಒ ಹಾಗೂ ಮಂದಾರ್ತಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯ ಡಾ.ಅನಿಲ್ ಹಾಗೂ ತಂಡ, ಗ್ರಾಮ ಪಂಚಾಯಿತಿ ಅಧ್ಯಕ್ಷರು, ಸದಸ್ಯರು ಪಿಡಿಒಗಳ ಶ್ರಮದಿಂದ ಈ ಸಾಧನೆ ಸಾಧ್ಯವಾಗಿದೆ ಎನ್ನುತ್ತಾರೆ ಅಧಿಕಾರಿಗಳು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT